ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ನಮ್ಮಲ್ಲಿ ಬಹುತೇಕ ಮಂದಿಗೆ ಸರಿಯಾಗಿ ನಿದ್ದೆ ಮಾಡಲಿಕ್ಕೆ ಬರೋಲ್ಲ. ಇದು ಜೋಕಲ್ಲ
ಸ್ವಾಮಿ. ನೂರಕ್ಕೆ ನೂರರಷ್ಟು ಸತ್ಯ. ಹ್ಯಾಗ್ಯಾಗೊ ಮಲಗಿ, ಒಟ್ಟಾರೆ ನಿದ್ದೆ ಮಾಡಿ
ಮುಗಿಸ್ತಾರೆ.
ನಿದ್ದೆ ದೇಹದ ಆರೋಗ್ಯಕ್ಕೆ ಅತ್ಯಗತ್ಯ. ಕೆಲಸ ಮಾಡಿ ಸುಸ್ತಾದ ದೇಹ ಹಾಗೂ ಮನಸ್ಸಿಗೆ,
ಉಲ್ಲಾಸ, ನವೋತ್ಸಾಹ ತುಂಬುತ್ತದೆ ನಿದ್ದೆ. ಸರಿಯಾದ ನಿದ್ದೆ ಇಲ್ಲದಿದ್ದರೆ ದೇಹದ
ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ದೇಹ ರೋಗಗಳ ವಿರುದ್ಧ
ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಂಡು ಬಿಡುತ್ತದೆ. ಶರೀರ ರೋಗಗಳ ಗೂಡಾಗಿ ಬಿಡುವ
ಸಾಧ್ಯತೆಯಿದೆ. ನಿದ್ರಾಹೀನತೆ ದೈಹಿಕ ಹಾಗೂ ಮಾನಸಿಕ ತೊಂದರೆಗೆ ಕಾರಣವಾಗುತ್ತದೆ.
ಮೆದುಳು ಸರಿಯಾಗಿ ಕೆಲಸ ಮಾಡಲಾರದು.ಮಾನಸಿಕ ಖಿನ್ನತೆ, ಹೃದಯದ ತೊಂದರೆ
ಕಾಣಿಸಿಕೊಳ್ಳಬಹುದು. ಇದು ರಕ್ತದ ಒತ್ತಡ, ಬೊಜ್ಜು ಶೇಖರಣೆಗೆ ಮೂಲವಾಗಬಹುದು.
ನಿದ್ದೆಯ ಗುಣಮಟ್ಟ ಹಾರ್ಮೋನುಗಳ ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಜೀರ್ಣಶಕ್ತಿಯ
ಮೇಲೂ ಪರಿಣಾಮ ಬೀರಬಲ್ಲುದು.
ಆರೋಗ್ಯವಂತ ವ್ಯಕ್ತಿಗೆ ದಿನವೊಂದಕ್ಕೆ ೬-೭ ತಾಸು ನಿದ್ದೆ ಬೇಕೇ, ಬೇಕು. ಹಾಗಾಗಿ
ಅನಾರೋಗ್ಯಕರವಾದ ಮಲಗುವ ಭಂಗಿ ದೇಹದ ಅನಾರೋಗ್ಯಕ್ಕೆ ಕಾರಣವಾಗಬಹುದು. ಗೊರಕೆ, ಬೆನ್ನು
ನೋವು, ಕುತ್ತಿಗೆ ನೋವುಗಳು ಬರುವುದು ಅನಾರೋಗ್ಯಕರ ಮಲಗುವ ಭಂಗಿಯಿಂದಾಗಿ ಎಂಬುದು
ನೆನಪಿರಲಿ.
ಆಧುನಿಕ ಜೀವನ ಶೈಲಿ ಹಲವು ಮಂದಿಯಲ್ಲಿ ನಿದ್ರಾಹೀನತೆಗೆ ಕಾರಣವಾಗುತ್ತಿದೆ.
ದೀರ್ಘಾವಯವರೆಗೆ ಕೆಲಸ ಮಾಡುವವರು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವವರು
ಉತ್ತಮ ನಿದ್ದೆಯಿಂದ ವಂಚಿತರಾಗುತ್ತಾರೆ ಎಂಬುದು ವೈದ್ಯರ ಅಭಿಮತ. ಮನುಷ್ಯನ ವಯಸ್ಸು
ಕೂಡ ನಿದ್ದೆ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಾದಂತೆ ನಿದ್ದೆ ಮಾಡುವುದು ಕಡಿಮೆ.
ಉತ್ತಮ ನಿದ್ದೆಗೆ ಕೆಲವು ಟಿಪ್ಸ್ ಇಲ್ಲಿದೆ.
* ಉತ್ತಮ, ಆರಾಮದಾಯಕವಾದ ಹಾಸಿಗೆ ಉಪಯೋಗಿಸಿ. ದುಬಾರಿ ಹಾಸಿಗೆಯೇ ಬೇಕೆಂದಿಲ್ಲ.
ಆದರೆ, ಮಲಗುವ ಹಾಸಿಗೆ ಸ್ವಚ್ಚವಾಗಿರಲಿ. ಶುಭ್ರವಾಗಿರಲಿ.
* ದಿಂಬು ಬಳಸುವ ಹವ್ಯಾಸವಿದ್ದರೆ ಉತ್ತಮ ದಿಂಬನ್ನು ಬಳಸಿ.
*ಮಲಗುವ ಕೋಣೆ ಸ್ವಚ್ಚವಾಗಿರಲಿ. ಆದಷ್ಟೂ ನಿಶ್ಯಬ್ಧವಾಗಿರುವಂತೆ ನೋಡಿಕೊಳ್ಳಿ.
ಪ್ರಶಾಂತ ವಾತಾವರಣ ಉತ್ತಮ ನಿದ್ದೆಗೆ ಅನುಕೂಲ.
*ಚಳಿ ಎನಿಸಿದರೆ ಹೆಚ್ಚು ಹೊದಿಕೆ ಬಳಸಿ, ಸೆಖೆ ಎನಿಸಿದರೆ ಕಡಿಮೆ ಹೊದಿಕೆ ಬಳಸಿ.
ಆರಾಮ ಎನಿಸುವಷ್ಟೇ ಹೊದಿಕೆ ಸಾಕು.
*ಮಲಗುವ ಕೋಣೆಯಲ್ಲಿ ಕಣ್ಣಿಗೆ ಹಿತ ನೀಡುವಷ್ಟೇ ಬೆಳಕಿರಲಿ. ಕತ್ತಲ ಕೋಣೆ ನಿದ್ದೆಗೆ
ಸಹಕಾರಿ. ಪ್ರಖರ ಬೆಳಕು ನಿದ್ದೆಗೆ ಒಳಿತಲ್ಲ.
*ಮಲಗುವುದಕ್ಕೂ ಸ್ವಲ್ಪ ಮೊದಲು ರಿಲ್ಯಾಕ್ಸ್ ಆಗಿ .
*ಬೇಕಿದ್ದರೆ ಬಿಸಿ ನೀರ ಸ್ನಾನ ಮಾಡಿ.
* ಬೆಚ್ಚನೆಯ ಹಾಲು ಕುಡಿಯಿರಿ. ಬೇಕಿದ್ದರೆ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ.
*ಹಲ್ಲುಜ್ಜಿ ಮಲಗಲು ಮರೆಯದಿರಿ.
* ಬಿಗಿಯಾದ ಬಟ್ಟೆ ಧರಿಸಿ ಮಲಗಬೇಡಿ. ಸಡಿಲ ಉಡುಪು ಧರಿಸಿ. ಹಿತವಾದ ಭಂಗಿಯಲ್ಲಿ ಮಲಗಿ.
* ಹಾಸಿಗೆ ಅನುಕೂಲಕರವಾಗಿಲ್ಲ ಎಂದಾದಾಗ ಹಾಗೆಯೇ ಮಲಗಬೇಡಿ. ಸರಿಪಡಿಸಿಕೊಂಡು ಮಲಗಿ.
* ನಿದ್ದೆ ಬರುತ್ತಿಲ್ಲ ಎಂದಾದರೆ, ಕೆಲ ಸಮಯ ದೀರ್ಘ ಉಸಿರಾಟ ನಡೆಸಿ.
* ದಿಂಬನ್ನು ಸ್ವಲ್ಪ ತಂಪಾಗಿಸಿ ಕೊಳ್ಳಿ. ಬೇಕಿದ್ದರೆ ಫ್ರಿಜ್ ಬಳಿ ಕೆಲ ಸಮಯ
ಹಿಡಿಯಿರಿ. ತಂಪನೆಯ ದಿಂಬು ತಲೆಗೆ ತಂಪನೆಯ ಅನುಭವ ನೀಡುತ್ತದೆ. ದೇಹದ ಉಳಿದ ಭಾಗ
ಇದನ್ನು ಅನುಸರಿಸುತ್ತದೆ.
* ಮಲಗಿ ೧೦-೧೫ ನಿಮಿಷವಾದರೂ ನಿದ್ದೆ ಬರಲಿಲ್ಲ ಎಂದಾದರೆ ಎದ್ದು ನಿಧಾನ ಓಡಾಡಿ. ಕೆಲ
ಸಮಯ ಒಳ್ಳೆಯ ಪುಸ್ತಕ ಓದಿ. ಇಲ್ಲ ಏನಾದರೂ ಬರೆಯಿರಿ. ಇಂಪಾದ ಸಂಗೀತ ಕೇಳಿ. ನಿದ್ದೆ
ಬರದಿದ್ದರೂ ಬಲವಂತವಾಗಿ ಹಾಗೆಯೇ ಮಲಗಿ ಹಾಸಿಗೆ ಮೇಲೆ ಹೊರಳಾಡಬೇಡಿ.
* ಇವೆಲ್ಲಕ್ಕಿಂತ ಮುಖ್ಯವಾಗಿ ದಿನವಿಡಿ ಚಟುವಟಿಕೆಯಿಂದ ಕೂಡಿದ್ದು,
ಕ್ರಿಯಾಶೀಲರಾಗಿರಿ. ಚಟುವಟಿಕೆಯಿಂದ ಇದ್ದರೆ ದೇಹದಲ್ಲಿ ಅವಶ್ಯಕ ಹಾರ್ಮೋನು
ಉತ್ಪತ್ತಿಯಾಗುತ್ತದೆ. ದೇಹದ ಶಕ್ತಿ ವ್ಯಯವಾಗುತ್ತದೆ. ದೇಹದಲ್ಲಿ ಜಢತ್ವ
ನೆಲೆಸಿದ್ದರೆ ಶಕ್ತಿ ವ್ಯಯವಾಗುವುದೇ ಇಲ್ಲ. ಪರಿಣಾಮ ದೇಹಕ್ಕೆ ನಿದ್ದೆಯ ಅವಶ್ಯಕತೆ
ಬೀಳುವುದಿಲ್ಲ.
* ಮಲಗುವುದಕ್ಕೂ ಮೊದಲು ಕೆಲ ಹೊತ್ತು ಧ್ಯಾನ/ಪ್ರಾರ್ಥನೆ ಮಾಡುವ, ಉತ್ತಮ
ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಇದರಿಂದಾಗಿ ಮಲಗುವ ಸಮಯದಲ್ಲಿ
ಮನಸ್ಸಿನಲ್ಲಿ ಬೇರೆ ಯೋಚನೆಗಳು ಬಂದು ಮನಸ್ಸು ಕಲುಷಿತಗೊಳ್ಳುವ ಸಂದರ್ಭ ಬರಲಾರದು.
ಬೇಕಿದ್ದರೆ ಇಂಪಾದ ಸಂಗೀತ ಕೇಳಿ. ಸ್ವಲ್ಪ ಹೊತ್ತು ಸಂಗೀತದ ವಾದ್ಯಗಳನ್ನು ನುಡಿಸಿ.
ಮನಸ್ಸು ಪ್ರಶಾಂತವಾಗಬಹುದು.
* ಮಲಗುವ ಮುಂಚೆ ಪಿಷ್ಠ ಅಕ ಇರುವ ವಸ್ತುಗಳ ಸೇವನೆ ಮಾಡಬೇಡಿ. ಹೊಟ್ಟೆ ಬಿರಿಯುವಷ್ಟು
ಆಹಾರ ಸೇವನೆ ಬೇಡ. ಹಿತ, ಮಿತ ಆಹಾರ ಸೇವಿಸಿ. ಪ್ರೋಟಿನ್, ತರಕಾರಿ, ಸ್ವಲ್ಪ ಪ್ರಮಾಣದ
ಕೊಬ್ಬು ಊಟದಲ್ಲಿರಲಿ. ಕುರುಕಲು ತಿಂಡಿ, ಮದ್ಯ ಸೇವನೆ, ಕೆಫಿನ್, ನಿಕೊಟಿನ್,
ಇನ್ನಿತರ ನಿದ್ದೆ ತಡೆಯುವ ಪಾನೀಯಗಳ ಸೇವನೆ ಬೇಡ.
* ಮಲಗುವುದಕ್ಕೂ ಕನಿಷ್ಠ ಮೂರು ಗಂಟೆಗಳ ಮೊದಲು ಊಟ ಮಾಡಿ.
* ಲಘು ಸಂಗೀತ ಕೇಳುತ್ತಾ ಮಲಗಿದಾಗ, ಮಿದುಳು ಸಂಗೀತಕ್ಕೆ ತಕ್ಕಂತೆ ನಿಧಾನವಾಗಿ
ತಲೆದೂಗುತ್ತದೆ. ಹಾಗೆಯೇ ನಿದ್ದೆ ಆವರಿಸುತ್ತದೆ.
* ದೇಹದ ಉಷ್ಣತೆ ಕೂಡ ನಿದ್ದೆ ಮೇಲೆ ಪರಿಣಾಮ ಬೀರುತ್ತದೆ. ಬೆಳಗ್ಗೆ ಎದ್ದಾಗ ದೇಹದ
ಉಷ್ಣತೆ ಕಡಿಮೆ ಇರುತ್ತದೆ. ರಾತ್ರಿ ವೇಳೆ ಮಲಗುವಾಗ ಹೆಚ್ಚಿರುತ್ತದೆ. ನಿದ್ದೆಗೆ
ಜಾರಿದಂತೆ ದೇಹದ ಉಷ್ನತೆ ಕಡಿಮೆಯಾಗುತ್ತಾ ಸಾಗುತ್ತದೆ. ಬಿಸಿ ನೀರ ಸ್ನಾನ ದೇಹದ
ಉಷ್ಣತೆಯನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ. ನಂತರ ವೇಗವಾಗಿ ಉಷ್ಣತೆ ತಗ್ಗಲು
ಕಾರಣವಾಗುತ್ತದೆ. ನಿದ್ದೆಯ ಮಂಪರಿಗೆ ನಮ್ಮನ್ನು ತಳ್ಳುತ್ತದೆ.
* ಇವೆಲ್ಲಾ ತಂತ್ರಗಳು ವಿಫಲವಾದಾಗ ನೈಸರ್ಗಿಕ ಔಷಧಗಳತ್ತ ಮುಖ ಮಾಡಬಹುದು.
ಮೆಲಾಟೊನಿನ್ ಇಂತಹ ಔಷಗಳಲ್ಲಿ ಒಂದು. ಹಾಗೇ ನೋಡಿದರೆ ಮೆಲಾಟೊನಿನ್ ನಮ್ಮ ದೇಹದಲ್ಲಿಯೇ
ಉತ್ಪಾದನೆಯಾಗುವ ಹಾರ್ಮೋನ್. ಇದು ರಾತ್ರಿ ವೇಳೆ ಉತ್ಪಾದನೆಯಾಗುವ ಹಾರ್ಮೊನ್. ಇದನ್ನು
’ನಿದ್ದೆಯ ಹಾರ್ಮೊನ್’ ಅಂತಲೂ ಕರೆಯಲಾಗುತ್ತದೆ. ಅಂಧರು, ಅತಿಯಾಗಿ ಬಿಸಿಲಿಗೆ
ಮೈಯೊಡ್ಡುವವರು ನಿದ್ದೆಯ ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚು. ಕಾರಣ ಇವರಲ್ಲಿ
ಮೆಲಾಟೊನಿನ್ ಉತ್ಪಾದನೆ ಕಡಿಮೆ ಎನ್ನುವುದು ಆರೋಗ್ಯ ತಜ್ಞರ ಅಭಿಮತ. ಕ್ಯಾಮೊಲಿನ್,
ಅತಿ ಹಳೆಯ ನೈಸರ್ಗಿಕ ಔಷಧ. ಇದು ಆಹ್ಲಾದಕರ ರುಚಿ ಹೊಂದಿದ್ದು, ಬಹುತೇಕ ವೇಳೆ ಚಹ ತರಹ
ಸೇವನೆ ಮಾಡಲಾಗುತ್ತದೆ. ಹೊಟ್ಟೆ ಉರಿಯ ಶಮನಕ್ಕೂ ಇದನ್ನು ಬಳಸಲಾಗುತ್ತದೆ.
ವ್ಯಾಲೆರಿಯನ್ ಬಳಕೆ ಕೂಡ ರೂಢಿಯಲ್ಲಿದೆ.

- ಮಹಾಬಲೇಶ್ವರ ಹೊನ್ನೆಮಡಿಕೆ

2 comments:

Anonymous said...

gud tips are given for gud sleep; thanks for your useful tips

Pradeep said...

Very Good Article.

Post a Comment