ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:34 PM

ಮುಗಿಯದ ರೀಲು

Posted by ekanasu

ಅಂಕಣ

ನಮ್ಮೆಜಮಾನರಿಗೆ ಇಲಾಖೆಯ ಕಾರ್ಯಕ್ರಮಕ್ಕೆ ಹೋಗುವುದೆಂದರೆ ಮತ್ತು ಅದರ ತಯಾರಿ ಅಂದರೆ ಏನೋ ಒಂದು ತರಹದ ಸಡಗರ. ಅದನ್ನು ಅವರಲ್ಲಿ ಇಂದಿಗೂ ಕಾಣುತ್ತಿದ್ದೇನೆ. 1999ರ ವರೆಗೂ ದಿನಾ ಮಂಗಳೂರಿನಿಂದ ಉಡುಪಿಗೆ ಕೊನೆಯ ಬಸ್ಸಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ರಾತ್ರಿ 11 ಗಂಟೆ ದಾಟುತ್ತಿತ್ತು. ಪುನಃ ಮರುದಿನ ಯಥಾಪ್ರಕಾರ ಬೆಳಿಗ್ಗೆ 8.45ರ ಬಸ್ಸಿನಲ್ಲಿ ಮಂಗಳೂರಿಗೆ. ಹೀಗೆ ಬಿಡುವಿಲ್ಲದ ಪ್ರಯಾಣ, ಬಿಡುವಿಲ್ಲದ ಕಾರ್ಯಕ್ರಮಗಳನ್ನೆಲ್ಲ ಗಮನಿಸಿ ನಾನು ಮತ್ತು ಅತ್ತೆ ಬಹಳಷ್ಟು ಸಲ `ಸಂಜೆ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಬೇಡಿ' ಎಂದು ಹೇಳಿದ್ದುಂಟು. ಆದರೆ `ಸರಕಾರ ಸಂಬಳ ಕೊಡುವುದೇ ಅದಕ್ಕಾಗಿ; ನಾವಿರುವುದೇ ಆ ಕೆಲಸಕ್ಕಾಗಿ' ಎಂಬ ಉತ್ತರ ಅವರಿಂದ ಬರುತ್ತಿತ್ತು. ಅಷ್ಟೇ ಅಲ್ಲ, ಉತ್ತಮ ಕೆಲಸ ಮಾಡುತ್ತಿರುವವರನ್ನು ಮಾದರಿಯಾಗಿ ಹೇಳುತ್ತಿದ್ದರು. ಅನಂತರದಲ್ಲಿ ನಾವು ಅವರ ಕೆಲಸದ ಬಗ್ಗೆ ಆಕ್ಷೇಪಣೆ ಮಾಡುತ್ತಿರಲಿಲ್ಲ. ನನಗೂ ಅವರ ನಿಲುವು ಸರಿ ಎಂದೆನಿಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ ರಜಾದಿನಗಳಲ್ಲಿ ಅವರು ನಮ್ಮೊಂದಿಗೆ ಕಾಲ ಕಳೆಯುತ್ತಿರುವುದು ಸ್ವಲ್ಪ ಸಮಾಧಾನದ ಸಂಗತಿ.

ಅವರು ಪ್ರವಾಸದಲ್ಲಿರುವಾಗ ಎಷ್ಟೋ ಸಲ ಮಕ್ಕಳು ಕಾಯಿಲೆ ಬಿದ್ದ ಸಂದರ್ಭದಲ್ಲಿ ಅವರನ್ನು ಸಂಪರ್ಕಿಸುವುದು ಕಷ್ಟವಾಗುತ್ತಿತ್ತು. ಈಗಿನ ದಿನಗಳಲ್ಲಿ ಮೊಬೈಲ್ ಫೋನಿನ ಮೂಲಕ ಸಂಪರ್ಕಿಸುವುದು ಸುಲಭ. ನಾವು ಮಂಗಳೂರಿಗೆ ಬಂದ ವರ್ಷ (2000ನೇ ಇಸವಿ) ನಮ್ಮ ಎರಡನೇ ಮಗನಿಗೆ ಅಪೆಂಡಿಸೈಟಿಸ್ನಿಂದಾಗಿ ತುರ್ತಾಗಿ ಆಪರೇಶನ್ ಮಾಡಬೇಕೆಂದು ವೈದ್ಯರು ತಿಳಿಸಿದರು. ಆಗ ಇವರು ಶಿವಮೊಗ್ಗ ಕಚೇರಿಯಲ್ಲಿ ಸೇವೆಯಲ್ಲಿದ್ದರು. ಅಲ್ಲಿಗೆ ಫೋನ್ ಮಾಡಿದರೆ, `ಅವರು ಕೊಪ್ಪ ತಾಲೂಕಿನಲ್ಲಿ ಪ್ರವಾಸದಲ್ಲಿದ್ದಾರೆ; ಅಲ್ಲಿಗೆ ಪ್ರಯತ್ನಮಾಡಿ ತಿಳಿಸುತ್ತೇವೆ' ಎಂದರು. ನಮಗೆ ಆತಂಕ. ಅವರು ಮಂಗಳೂರಿಗೆ ಬರುವಷ್ಟರಲ್ಲಿ ಆಪರೇಶನ್ ಆಗಿಬಿಟ್ಟಿತ್ತ್ತು!

ಇನ್ನೊಮ್ಮೆ, ಅತ್ತೆಯವರು ತೀರಿಕೊಂಡ ಸಂದರ್ಭ. ಇವರು ಸುಳ್ಯಕ್ಕೆ ಪ್ರವಾಸ ಹೋಗಿದ್ದರು. ಅತ್ತೆಯವರು ಆಸ್ಪತ್ರೆಯಲ್ಲಿದ್ದು ಅವರ ಆರೋಗ್ಯಸ್ಥಿತಿ ಬಹಳ ಹದಗೆಟ್ಟಿತ್ತು. ರಾತ್ರಿ ಇವರನ್ನು ಸಂಪರ್ಕಿಸಲು ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೆ ನಡುರಾತ್ರಿ 1 ಗಂಟೆ ಹೊತ್ತಿಗೆ ನನ್ನ ನಾದಿನಿಯ ಮಗ ಸುಧೀರ್ ಸುಳ್ಯ ಪೊಲೀಸ್ ಠಾಣೆಗೆ ಫೋನ್ ಮಾಡಿ, `ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಕ್ಷೇತ್ರ ಪ್ರಚಾರ ಇಲಾಖೆಯ ಶ್ರೀನಿವಾಸ್ ಎಂಬವರು ಇದ್ದಾರೆ; ಅವರ ತಾಯಿಗೆ ಸೀರಿಯಸ್, ಅವರು ಕೂಡಲೇ ಹೊರಟುಬರುವಂತೆ ಹೇಳಿ' ಎಂದು ತಿಳಿಸಿದ. ಪೊಲೀಸರು ಐಬಿಗೆ ಹೋಗಿ ಮಾಹಿತಿ ನೀಡಿದ ಬಳಿಕ ಇವರು ಸುಳ್ಯದಿಂದ ಹೊರಟು ಉಡುಪಿಗೆ ಬರುವಾಗ ಬೆಳಿಗ್ಗೆ 7 ಗಂಟೆ. ಅಷ್ಟರಲ್ಲಿ ಅತ್ತೆಯವರು ಕೊನೆಯುಸಿರೆಳೆದಿದ್ದರು.
ಅವರ ಕೆಲಸದ ರೀತಿ ನನಗೆ ಖುಷಿ ಕೊಡುತ್ತದೆಯಾದರೂ ಕೆಲವು ಸಂದರ್ಭಗಳಲ್ಲಿ ಕಿರಿಕಿರಿಯಾಗುತ್ತಿತ್ತು. ಯಾರಾದರೂ ರಜಾದಿನಗಳಲ್ಲಿ ಮನೆಗೆ ನೆಂಟರು ಬರುವ ವೇಳೆ ಅದೇ ದಿನ ಇವರಿಗೆ ಏನಾದರೂ ಕಾರ್ಯಕ್ರಮ ಇರುತ್ತಿತ್ತು. ಇನ್ನು ಊರಿನಲ್ಲಿ ನೆಂಟರಿಷ್ಟರ ಮನೆಗಳಲ್ಲಿ ಮದುವೆ ಅಥವಾ ವಿಶೇಷ ಕಾರ್ಯಕ್ರಮಗಳಿಗಾಗಿ ಹೋಗಬೇಕೆಂದು ತಯಾರಿ ಮಾಡುತ್ತಿದ್ದ ವೇಳೆ ಇವರಿಗೂ ಪ್ರವಾಸ ಅಥವಾ ಇಲಾಖೆಯ ಇನ್ನಿತರ ವಿಶೇಷ ಕಾರ್ಯಕ್ರಮಗಳ ಒತ್ತಡ ಇತ್ಯಾದಿ ತುರ್ತಾದ ಸಂದರ್ಭಗಳು ಎದುರಾಗಿ ನಮ್ಮ ತಯಾರಿಗೆ ತೆರೆಬೀಳುತ್ತಿತ್ತು. ಅವರನ್ನು ಬಿಟ್ಟು ಹೋದ ಸಂದರ್ಭಗಳೇ ಅಧಿಕ.

ಅವರ ಹೃದಯದ ಬೈಪಾಸ್ ಸರ್ಜರಿಯ ವೇಳೆ ವೈದ್ಯರು ಪೂರ್ಣ ಭರವಸೆ ನೀಡದಿದ್ದಾಗ ಬಂಧುಗಳು ನೆರೆಕರೆಯವರು, ಹಿತೈಷಿಗಳು ಜಾತಿಭೇದ ಮರೆತು ಅವರ ಆರೋಗ್ಯಕ್ಕಾಗಿ ತಂತಮ್ಮ ದೇವರಿಗೆ ಹರಕೆ ಪ್ರಾರ್ಥನೆ ಸಲ್ಲಿಸಿ ನಮಗೆ ಧೈರ್ಯತುಂಬಿ ಹಾರೈಸಿದ್ದರು. ಈ ಹಾರೈಕೆ ಅವರ ಸೇವಾಭಾವನೆ, ಪರಿಶ್ರಮ, ಕರ್ತವ್ಯನಿಷ್ಠೆ ಮತ್ತು ಜನರಿಂದ ಗಳಿಸಿದ ಪ್ರೀತಿಯ ಪ್ರತಿಫಲವೆನಿಸುತ್ತದೆ.

ಅವರ 30 ವರ್ಷಗಳ ಸರಕಾರಿ ಸೇವೆಯನ್ನು ಬಹಳ ಯಶಸ್ವಿಯಾಗಿ ಪೂರೈಸಲು ಸಹಕರಿಸಿದ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಎಲ್ಲಾ ಅಧಿಕಾರಿಗಳಿಗೆ ನಾನು ಚಿರಋಣಿ. ಅವರಲ್ಲಿರುವ ಹುಮ್ಮಸ್ಸು, ಆಸಕ್ತಿ ಮತ್ತು ಶ್ರದ್ಧೆ ನಮ್ಮ ಮಕ್ಕಳಲ್ಲೂ ಬಂದರೆ ನನಗಿಂತ ಪುಣ್ಯವಂತರು ಬೇರಾರೂ ಇರಲಿಕ್ಕಿಲ್ಲ.
ವಿಮಲ

0 comments:

Post a Comment