ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
5:26 PM

22/158: ಕರಾಳ ಶನಿವಾರ

Posted by ekanasu

ರಾಜ್ಯ - ರಾಷ್ಟ್ರ
ಅಲ್ಲಿ ಆಕ್ರಂದನ ಮಡುಗಟ್ಟಿತ್ತು...

ಮಗನ ಬರುವಿಕೆಗಾಗಿ ಕಾಯುತ್ತಿದ್ದ ಅಮ್ಮ... ತನ್ನ ಪತಿ ಇನ್ನೇನು ಕೆಲ ಕ್ಷಣದಲ್ಲೇ ಮನೆತಲುಪಲಿದ್ದಾರೆಂಬ ಕಾತರದಲ್ಲಿದ್ದ ಪತ್ನಿ... ಅಣ್ಣ ಬರುತ್ತಾನೆಂಬ ಸಂಭ್ರಮದಲ್ಲಿದ್ದ ಸಹೋದರ... ಕಳೆದ ಹಲವಾರು ಸಮಯಗಳಿಂದ ಕಾಣದ ಅಪ್ಪನ ಮುಖದ ಚಿತ್ರಣವನ್ನೇ ಮನದಲ್ಲಿ ಮೂಡಿಸುತ್ತಾ ನೂರಾರು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದ ಪುಟ್ಟ ಮಗು... ಇನ್ನೇನು ಇವರೆಲ್ಲರೂ ನೂರಾರು ಕನಸುಗಳನ್ನು ಕಟ್ಟುತ್ತಾ ಕಾಯುತ್ತಿರಬೇಕಾದರೆ ಅಪ್ಪಳಿಸಿತೊಂದು ಬರಸಿಡಿಲು...ಆದರೆ ವಿಧಿ ಲೀಲೆಯೇ ಬೇರೆಯಾಗಿತ್ತು. ಇಷ್ಟೆಲ್ಲಾ ಕನಸುಗಳು ಒಂದಿದೊಮ್ಮೆಯೇ ಛಿದ್ರಗೊಂಡಿತು. ಆಕ್ರಂದನ ಮುಗಿಲು ಮುಟ್ಟಿತು. ಅದೇ ಮಂಗಳೂರು ಸಮೀಪದ ಬಜ್ಪೆ ವಿಮಾನ ದುರಂತ. ಇಡೀ ದೇಶದಲ್ಲೇ ನಡೆದ 3 ಅತಿದೊಡ್ಡ ದುರಂತಗಳಲ್ಲಿ ಇದೂ ಒಂದು ಎಂಬ ದಾಖಲೆ ಮಾಡಿದೆ. ಆದರೆ 160ಮಂದಿಯ ಮನೆಯಲ್ಲಿ ತೀವ್ರ ವೇದನೆಯ ಮಡುಮಾಡಿದೆ. ನೂರಾರು ಕನಸುಗಳು ಒಮ್ಮೆಲೆ ಛಿದ್ರಗೊಂಡಿದೆ.
ಪ್ರಶಾಂತವಾಗಿದ್ದ ಆ ಪ್ರಕೃತಿಯ ಮಡಿಲಲ್ಲಿ ಬೆಳ್ಳಂಬೆಳಗ್ಗೇ ಬೆಂಕಿಯುಂಡೆಗಳು ಗೋಚರಿಸಿದವು. ಸುತ್ತೆಲ್ಲಾ ದಟ್ಟನೆಯ ಹೊಗೆ... ನರಳಾಟ ಚೀರಾಟದ ಧ್ವನಿ ಒಂದಷ್ಟು ಕಾಲ...ಮತ್ತೆಲ್ಲವೂ ಮೌನ...ಅಲ್ಲಿಲ್ಲೊಂದು ಮರುಕದ ದನಿಗಳನ್ನು ಬಿಟ್ಟರೆ. ಪ್ರಕೃತಿಯೂ ವಿಕಾರವಾಗಿ ಕಂಡುಬರುತ್ತಿತ್ತು. ಸಂಭ್ರಮದ ಕಳೆ ಇನ್ನೂ ಹಾಗೇ ಉಳಿದಿದ್ದ ಬಜ್ಪೆ ವಿಮಾನ ನಿಲ್ದಾಣದಲ್ಲಿ ಅದಾಗ ನೀರವ ಮೌನ. ಪ್ರತಿದಿನ ಕೇವಲ ವಿಮಾನಗಳ ಕರ್ಕಶ ದನಿಯಷ್ಟೇ ಇತ್ತು. ಆದರೆ ಇಂದು ಆ ಕರ್ಕಶ ದನಿ ವಿಕಾರವಾಗಿ ಪರಿಣಮಿಸಿತ್ತು.
ಗೆಳತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಕಾಲೇಜು ಹುಡುಗಿಯರು... ಅಲ್ಲಿ ಅದೋ ಶವಗಳ ರಾಶಿ ರಾಶಿಯನ್ನು ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಪ್ರಾಯದ ವ್ಯಕ್ತಿಯೊಬ್ಬರ ದೃಶ್ಯ ಕಣ್ಣಿಗೆ ಕಟ್ಟಿದಂತಿತ್ತು.
ಅಲ್ಲಿ ಆ ಕ್ಷಣದಲ್ಲಿ ಜಾತಿ - ಮತ - ಧರ್ಮ -ಮೇಲು - ಕೀಳೆಂಬ ಯಾವೊಂದು ಭಾವನೆಗಳೂ ಜನತೆಯ ಮನದಲ್ಲಿ ಕಂಡುಬಂದಿಲ್ಲ. ಎಲ್ಲರೂ ಒಂದಾಗಿ ದುಡಿದರು. ಇದ್ದವರನ್ನು ಹೇಗಾದರೂ ಬಚಾವ್ ಮಾಡೋಣ ಎಂಬ ಸಂಕಲ್ಪ ತೊಟ್ಟಂತೆ ಕೆಲಸಮಾಡಿದರು. ಊರವರ ಒಗ್ಗಟ್ಟಿನ ಸಹಕಾರದ ಮನೋಭಾವ ಶ್ಲಾಘನಾರ್ಹವಾಗಿತ್ತು. ಆದರೆ ಎಲ್ಲರ ಮನದಲ್ಲೂ ದುಃಖ...ಸ್ವಂತ ಸಂಬಂಧಿಕರು, ಬಂದು ವರ್ಗದವರು ಅಲ್ಲಿ ಹೆಣವಾಗಿಲ್ಲದಿದ್ದರೂ ಸೇರಿದ್ದ ನೂರಾರು ಮಂದಿ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಪುಟ್ಟ ಪುಟ್ಟ ಮಕ್ಕಳ ಕರಕಲು ಮೃತದೇಹಗಳು, ಅರೆಬೆಂದ ದೇಹಗಳು, ಬೋರಲಾಗಿ ಬಿದ್ದ ಕರಟಿದ ಮೃತದೇಹ...ಅಂಗಾಂಗ ವಿಕೃತಗೊಂಡಿರುವ ಮೃತದೇಹಗಳು ಭಯಾನಕ ರೀತಿಯಲ್ಲಿ ಕಂಡುಬರುತ್ತಿದ್ದವು. ಒಂದರ ಮೇಲೊಂದರಂತೆ ಇದ್ದ ಆ ಮೃತದೇಹಗಳ ಸಾಲು ಸಾಲು ನೋಡುತ್ತಿರಬೇಕಾದರೆ `ಛೆ...ಜೀವನವೆಂದರೆ ಕ್ಷಣಿಕ' ಎಂಬಂತನಿಸುತ್ತಿತ್ತು.
ಅತ್ಯಂತ ಆತ್ಮೀಯರನ್ನು , ಬಂಧುಗಳನ್ನು ಕಳೆದುಕೊಂಡ ದುಃಖ ಇಡೀ ಜಿಲ್ಲೆಯ ನಾಗರೀಕರಿಂದಿದ್ದಾರೆ. ಶೋಕಸಾರದಲ್ಲಿ ದೇಶವಿದೆ...

ಅದೃಷ್ಟ ಮಂದಿ...
ಅದೇ ನೋಡಿ ಪವಾಡ ಎಂದರೆ...ವಿಮಾನದಲ್ಲಿ ಟಿಕೆಟ್ ಸಿಗದೆ ಕೆಲವರು ಅಲ್ಲೇ ಬಾಕಿ ಉಳಿದರೆ ಇನ್ನು 9 ಮಂದಿ ಘೋರ ದುರಂತದಲ್ಲಿ ಜವರಾಯನ ಬಾಯಿಂದ ಪಾರಾಗಿ ಬಂದಿದ್ದಾರೆ. ಆದರೆ ಪುಟ್ಟಕಂದಮ್ಮಗಳು ಈ ಘೋರ ದುರಂತದಲ್ಲಿ ಸಾವನ್ನಪ್ಪಿವೆ. 158 ಮಂದಿ ಸಾವಿಗೆ ಶರಣಾಗಿದ್ದಾರೆ. ವಿಮಾನದ 6 ಮಂದಿ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಮೃತರಲ್ಲಿ 14ಮಂದಿ ಉಡುಪಿ ಜಿಲ್ಲೆಗೆ ಸೇರಿದವರಾಗಿದ್ದಾರೆ. ಉಳಿದಂತೆ 60ಮಂದಿ ಕೇರಳ ರಾಜ್ಯದವರು. ಉಳಿದವರು ಕರ್ನಾಟಕದವರು.

ಭೇಟಿ
ಘಟನಾ ಸ್ಥಳಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇರಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಪ್ರಫುಲ್ ಪಾಟೀಲ್ ,ಸೇರಿದಂತೆ ಅನೇಕ ಮಂದಿ ಗಣ್ಯರು ರಾಜಕೀಯ ಮುಖಂಡರು ಭೇಟಿನೀಡಿದ್ದಾರೆ.
ಒಟ್ಟಿನಲ್ಲಿ ಇಡೀ ದೇಶದಾದ್ಯಂತ ಈ ದುರಂತದ ನೋವು ಮಡುಗಟ್ಟಿದೆ. ಎಲ್ಲರೂ ಈ ದುರಂತದಿಂದ ಪರಿತಪಿಸುವಂತಾಗಿದ್ದಾರೆ.

0 comments:

Post a Comment