ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

“ ನಿಮ್ಮ ಮದುವೆಯ ಅಪೂರ್ಣ ಕ್ಷಣದ ಫೋಟೊಗಳನ್ನು ಕ್ಲಿಕ್ಕಿಸಲು ಅವಕಾಶ ಮಾಡಿಕೊಡಿ. ನಿಮಗೆ ೫೦ ಲಕ್ಷ ರೂ.ಗಳನ್ನು ನೀಡುತ್ತೇವೆ " ಹಸೆಮಣೆ ಏರಲು ಸಿದ್ಧಳಾಗುತ್ತಿದ್ದ ಖ್ಯಾತ ನಟಿ ಶಿಲ್ಪಾಶೆಟ್ಟಿಗೆ ‘ಹೆಲೊ’ ಮ್ಯಾಗಝೀನ್ ನೀಡಿದ ಆಹ್ವಾನವಿದು. ಬಾಳ ಸಂಗಾತಿಯನ್ನಾಗಿ ವರಿಸಲು ಮುಂದಾದ ಪಾಕಿಸ್ತಾನಿ ಕ್ರಿಕೆಟರ್ ಶೋಯೆಬ್ ಮಲ್ಲಿಕ್, ತನ್ನ ಪ್ರೇಯಸಿ ಸಾನಿಯಾ ಮಿರ್ಜಾಗೆ ನೀಡಿದ ‘ಮೆಹರ್’ (ಮದುವೆಗೂ ಮುಂಚೆ ವಧುವಿಗೆ ವರ ನೀಡುವ ಕಾಣಿಕೆ) ನ ಮೌಲ್ಯ ೬೧ ಲಕ್ಷ ರೂ.ಗಳು. ಅಭಿಷೇಕ್ ಬಚ್ಚನ್ ಅವರನ್ನು ಪತಿಯನ್ನಾಗಿ ಸ್ವೀಕರಿಸಿದ ಖ್ಯಾತ ಬಾಲಿವುಡ್ ನಟಿ ಐಶ್ವರ್ಯ ರೈ, ಹಸೆಮಣೆ ಏರುವಾಗ ಉಟ್ಟಿದ್ದ ಮಂಗಲ ಸೀರೆಯ ಬೆಲೆ ೨ ಲಕ್ಷ ರೂ.ಗೂ ಅಕ. ಮದುಮಗನಾಗಿ ಹಸೆಮಣೆಯಲ್ಲಿ ಕೂತಿದ್ದ ಅಭಿಷೇಕ್ ಬಚ್ಚನ್ ತೊಟ್ಟಿದ್ದ ಕುರ್ತಾದ ಬೆಲೆ ಸರಿಸುಮಾರು ೧೦,೦೦೦ ರೂ.ಗಳು.
ದಕ್ಷಿಣ ಭಾರತದ ಖ್ಯಾತ ನಟಿ ರಂಭಾಳ ಕೈ ಹಿಡಿದ ಕೆನಡಾ ಮೂಲದ ಉದ್ಯಮಿ ಇಂದ್ರನ್, ಮದುವೆಯ ನಿಶ್ಚಿತಾರ್ಥದ ದಿನ ತನ್ನ ಭಾವಿ ಪತ್ನಿಯ ಕೈ ಬೆರಳಿಗೆ ತೊಡಿಸಿದ ಎಂಗೇಜ್‌ಮೆಂಟ್ ಚಿನ್ನದ ಉಂಗುರದ ಮೌಲ್ಯ ೧ ಕೋಟಿ ರೂ. ಆಕೆ ಉಟ್ಟಿದ್ದ ಎಂಗೇಜ್‌ಮೆಂಟ್ ಸೀರೆಯ ಬೆಲೆ ೪.೫ ಲಕ್ಷ ರೂ.ಗಳು. ...ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಮದುವೆಯ ಖದರೂ ಬದಲಾಗಿದೆ. ಜೀವನದಲ್ಲಿ ಒಮ್ಮೆ ಮಾತ್ರ ಮದುವೆಯಾಗುತ್ತಿದ್ದ, ಮದುವೆಯಾದವರ ಜತೆಯೇ ಕೊನೆಯ ತನಕ ಬದುಕುತ್ತಿದ್ದ ಹಿಂದಿನವರಿಗೆ ಮದುವೆ ಜೀವನದ ಪ್ರಶ್ನೆಯಾಗಿತ್ತು. ಪ್ರೇಮಿಸಿ ಮದುವೆಯಾಗುವ, ರಿಯಾಲಿಟಿ ಷೋಗಳಲ್ಲಿ ಸ್ವಯಂವರ ಮಾದರಿಯಲ್ಲಿ ಬದುಕಿನ ಸಂಗಾತಿಯನ್ನು ಅರಸುವ, ಒಂದಷ್ಟು ದಿನ ಒಟ್ಟಿಗೆ ಬಾಳಿ ನಂತರ ಹಸೆ ಎಣೆ ಏರಲು ತವಕಿಸುವ ಇಂದಿನ ದಿನಗಳಲ್ಲಿ ಮದುವೆ ಪ್ರತಿಷ್ಠೆಯ ವಿಷಯವಾಗುತ್ತಿದೆ. ಪ್ರತಿಷ್ಠೆಗೆ ತಕ್ಕಂತೆ ಮದುವೆಗಳ ಖದರೂ ಬದಲಾಗುತ್ತಿದೆ. ಪ್ರತಿಷ್ಠಿತರ, ಪ್ರತಿಷ್ಠೆಗೆ ಸಾಕ್ಷಿಯಾಗಿ ನಡೆಯುತ್ತಿರುವ ಅದ್ದೂರಿಯ ಮದುವೆಗಳು ಜನಸಾಮಾನ್ಯರ ಕಣ್ಣು ಕುಕ್ಕಿಸುತ್ತಿವೆ.
ಹಾಗೆ ನೋಡಿದರೆ ಭಾರತದಲ್ಲಿ ಅದ್ದೂರಿಯ ಮದುವೆಯ ಸಾಲಿನಲ್ಲಿ ನಿಲ್ಲುವುದು ವಣಿಶಾ ಮಿಟ್ಟಲ್ ಮದುವೆ. ಸ್ಟೀಲ್ ಉದ್ಯಮಿ ಲಕ್ಷ್ಮೀ ಮಿಟ್ಟಲ್, ತಮ್ಮ ಪುತ್ರಿ ವಣಿಶಾ ಮಿಟ್ಟಲ್‌ಳ ಮದುವೆಗಾಗಿ ಮಾಡಿದ ಖರ್ಚು ಸರಾಸರಿ ೨೪೦ ಕೋಟಿ ರೂ.ಗಳು. ಭಾರತದ ಅತಿ ದುಬಾರಿಯ ಮದುವೆ ಎಂಬ ಖ್ಯಾತಿಗೆ ಇದು ಪಾತ್ರವಾಯಿತು.
ಮದುವೆಯ ಸತ್ಕಾರ ಕೂಟ ಸರಾಸರಿ ಐದು ದಿನಗಳ ಕಾಲ ನಡೆಯಿತು. ೧೦೦ಕ್ಕೂ ಹೆಚ್ಚು ವೈವಿಧ್ಯಮಯ ತಿಂಡಿ-ತಿನಿಸುಗಳು ಅತಿಥಿಗಳ ಮನ ತಣಿಸಿದವು. ದಂಪತಿಗಾಗಿಯೇ ಬರೆಯಲಾದ ವಿಶೇಷ ಬಾಲಿವುಡ್ ನಾಟಕವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಬೆಳ್ಳಿ ಪದರದ ಮದುವೆಯ ಕರೆಯೊಲೆ ೨೦ ಪುಟಗಳ ಸಂದೇಶವನ್ನು ಹೊತ್ತು ತಂದಿತ್ತು.
ಭಾರತದಲ್ಲಿ ಅದ್ದೂರಿ ಮದುವೆಯ ವಿಷಯ ಬಂದಾಗ ಲಖನೌದಲ್ಲಿ ನಡೆದ ಸುಬ್ರತೋ ರಾಯ್ ಅವರ ಪುತ್ರನ ಮದುವೆಯನ್ನು ಮರೆಯಲು ಸಾಧ್ಯವೇ ಇಲ್ಲ. ೧೦,೫೦೦ಕ್ಕೂ ಹೆಚ್ಚು ಮಂದಿ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದ ಮದುವೆ ಅದ್ದೂರಿತನಕ್ಕೆ ಸಾಕ್ಷಿಯಾಗಿತ್ತು. ಮದುವೆಯಲ್ಲಿ ಪಾಲ್ಗೊಂಡಿದ್ದ ಖ್ಯಾತ ಬಾಲಿವುಡ್ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ, “ಇಂತಹ ಅದ್ದೂರಿ ಮದುವೆಯನ್ನು ನಾನು ಈವರೆಗೆ ನೋಡಿಯೇ ಇರಲಿಲ್ಲ" ಎಂಬುದಾಗಿ ಉದ್ಘಾರ ತೆಗೆದರು.
ಮದುವೆಯ ಔತಣಕೂಟದಲ್ಲಿ ಸುಮಾರು ೧೦ ಸಾವಿರ ಮಂದಿ ಗಣ್ಯರು ಪಾಲ್ಗೊಂಡಿದ್ದರು. ಭಾರತ, ಇಟಲಿಯನ್, ಮ್ಯಾಂಗೋಲಿಯನ್, ಲೆಬನೀಸ್, ಅಮೆರಿಕನ್, ಚೈನಿಸ್ ಸೇರಿದಂತೆ ೧೧೦ ಕ್ಕೂ ಹೆಚ್ಚು ಬಗೆಯ ಖಾದ್ಯಗಳ ಸಿಹಿಯೂಟ ಭೋಜನದಲ್ಲಿತ್ತು. ಮದುವೆಯ ಅಂಗವಾಗಿ ದೇಶಾದ್ಯಂತದ ಸುಮಾರು ೪೦ ಸಾವಿರ ಭಿಕ್ಷುಕರಿಗೆ ಅನ್ನಾಹಾರ ವಿತರಿಸಲಾಯಿತು.
ಬಿಹಾರ್‌ನ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ತಮ್ಮ ಪುತ್ರಿ ಮಿಸಾಳನ್ನು ಸಾಫ್ಟ್‌ವೇರ್ ಇಂಜಿನಿಯರ್‌ಗೆ ಧಾರೆ ಎರೆದು ಕೊಟ್ಟಾಗ ಇಡೀ ಪಟನಾ ನವವಧುವಿನಂತೆ ಶೃಂಗಾರಗೊಂಡಿತ್ತು. ‘ನನ್ನ ಮಗಳ ಮದುವೆ ಎಂದರೆ ಅರಮನೆಯ ರಾಜಕುಮಾರಿ ಮದುವೆ ತರಹ ಇರಬೇಕು’ ಎಂಬ ಆಸೆ ವ್ಯಕ್ತಪಡಿಸಿದ್ದ ಲಾಲೂ, ಆ ವೈಭವಕ್ಕೆ ತಕ್ಕಂತೆ ಮಗಳನ್ನು ಧಾರೆ ಎರೆದುಕೊಟ್ಟರು.
ಹಾಗೆಯೇ, ಬಾಲಿವುಡ್, ಖಾಲಿವುಡ್, ಸ್ಯಾಂಡಲ್‌ವುಡ್‌ನ ಇನ್ನಿತರ ಖ್ಯಾತ ನಟ-ನಟಿಯರ, ಖ್ಯಾತನಾಮ ಕ್ರೀಡಾಪಟುಗಳ, ರಾಜಕಾರಣಿಗಳ, ಉದ್ಯಮಪತಿಗಳ ಮದುವೆಯ ವೈಭೋಗಕ್ಕೇನೂ ಕಡಿಮೆಯಿರಲಿಲ್ಲ. ಹಲವಾರು ಕಾರಣಗಳಿಗಾಗಿ ಈ ಮದುವೆಗಳ ಖರ್ಚು-ವೆಚ್ಚ ಬಹಿರಂಗವಾಗದಿದ್ದರೂ, ಅದ್ದೂರಿತನ ಕಣ್ಣು ಕುಕ್ಕುವಂತೆಯೇ ಇತ್ತು. ವೈಯಕ್ತಿಕ ವರ್ಚಸ್ಸಿನ ಮೆರಗನ್ನು ರ್ವಸಲು ಸಹಕಾರಿಯಾಯಿತು. ಅವರವರ ಪ್ರತಿಷ್ಠೆ, ವರ್ಚಸ್ಸು, ಅಭಿರುಚಿಗೆ ತಕ್ಕಂತೆ ನಡೆಯುತ್ತಿರುವ ಇಂತಹ ಮದುವೆಗಳು ಭವಿಷ್ಯದ ಅದ್ದೂರಿತನಕ್ಕೆ ಹೊಸ ಭಾಷ್ಯ ಬರೆಯುತ್ತಿವೆ ಎಂಬುದಂತೂ ಸುಳ್ಳಲ್ಲ.


ಭಾರತದ ಅದ್ದೂರಿ ಮದುವೆಯ ಕೆಲ ಸ್ಯಾಂಪಲ್‌ಗಳು
* ವಧು-ವರ: ಸೀಮಾಂತೊ ಮತ್ತು ಚಾಂದಿನಿ
ವರ್ಷ: ೨೦೦೪, ಫೆಬ್ರುವರಿ ೧೪
ಸ್ಥಳ: ಲಖನೌ, ಸಹರಾ ಇಂಡಿಯಾ
ವೆಚ್ಚ : ಸರಿ ಸುಮಾರು ೩೨೦ ಕೋಟಿ ರೂ.ಗಳು

* ವಧು-ವರ: ಸುಶಾಂತೋ ಮತ್ತು ರಿಚಾ
ವರ್ಷ: ಫೆಬ್ರುವರಿ ೧೪, ೨೦೦೪
ಸ್ಥಳ: ಲಖನೌ, ಸಹರಾ ಇಂಡಿಯಾ
ವೆಚ್ಚ : ಸರಿ ಸುಮಾರು ೩೨೦ ಕೋಟಿ ರೂ.ಗಳು

* ವಧು-ವರ: ಅಮಿತ್ ಭಾಟಿಯಾ ಮತ್ತು ವಣಿಶಾ ಮಿಟ್ಟಲ್
ವರ್ಷ: ನವೆಂಬರ್ ೧೮, ೨೦೦೬
ಸ್ಥಳ: ವೌಕ್ಸ್ ಲೆ ವಿಕೊಮ್ಟೆ, ೧೭ನೇ ಶತಮಾನದ ಫ್ರೆಂಚ್ ಗ್ರಾಮೀಣ ಮನೆ
ವೆಚ್ಚ : ಸರಿ ಸುಮಾರು ೩೦೦ ಕೋಟಿ ರೂ.ಗಳು


ವಿಶ್ವದ ಅತಿವೆಚ್ಚದ ಮದುವೆಗಳು
೧. ವಧು-ವರ: ಶೇಖ್ ಮಹಮದ್ ಬಿನ್ ರಷಿದ್ ಅಲ್ ಮ್ಯಾಕ್‌ಟೌಮ್ ಮತ್ತು ಶೇಖ್ ಹಿಂದ್ ಬಿಂಟ್ ಮ್ಯಾಕ್‌ಟೌಮ್
ವರ್ಷ: ೧೯೮೧
ಸ್ಥಳ: ದುಬೈ
ವೆಚ್ಚ : ೪ ಕೋಟಿ ೪೫ ಲಕ್ಷ ಅಮೆರಿಕನ್ ಡಾಲರ್

೨. ವಧು-ವರ: ಆಸ್ಕರ್ ಪ್ರಶಸ್ತಿ ವಿಜೇತೆ ನಟಿ, ಸಂಗೀತಗಾರ್ತಿ ಲಿಜಾ ಮಿನೆಲ್ಲಿ ಹಾಗೂ ಚಿತ್ರ ನಿರ್ಮಾಪಕ ಡ್ಯಾವಿಡ್ ಗೆಸ್ಟ್
ವರ್ಷ: ೨೦೦೨
ಸ್ಥಳ: ಮಾರ್ಬಲ್ ಕಾಲಿಜಿಯೆಟ್ ಚರ್ಚ್, ನ್ಯೂಯಾರ್ಕ್
ವೆಚ್ಚ : ೩೫ ಲಕ್ಷ ಅಮೆರಿಕನ್ ಡಾಲರ್
ಈಗ ಇವರಿಬ್ಬರೂ ವಿಚ್ಛೇದನ ಪಡೆದಿದ್ದಾರೆ.

೩. ವಧು-ವರ: ಹಾಲಿವುಡ್ ಚಿತ್ರ ನಿರ್ಮಾಟಕ, ಗೀತ ರಚನೆಗಾರ ಬೀಟಲ್ ಮೆಕ್ಕಾರ್ಟ್ನಿ ಹಾಗೂ ರೂಪದರ್ಶಿ ಮಿಲ್ಸ್
ವರ್ಷ: ೨೦೦೨
ಸ್ಥಳ: ಐರ್ಲ್ಯಾಂಡ್
ವೆಚ್ಚ : ೩೦ ಲಕ್ಷ ಅಮೆರಿಕನ್ ಡಾಲರ್

೪. ವಧು-ವರ: ಭಾರತೀಯ ಉದ್ಯಮಿ ಅರುಣ್ ನಾಯರ್ ಹಾಗೂ ರೂಪದರ್ಶಿ ಹರ್ಲೆ
ವರ್ಷ: ೨೦೦೭
ಸ್ಥಳ: ಗ್ಲೌಸೆಸ್ಟೆರ್‌ಶೈರ್, ಬ್ರಿಟನ್
ವೆಚ್ಚ : ೨೫ ಲಕ್ಷ ಅಮೆರಿಕನ್ ಡಾಲರ್
ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದುದು ವಿಶೇಷ.

೫. ವಧು-ವರ: ನಟ ಕ್ರೂಯಿಸ್ ಹಾಗೂ ನಟಿ ಹೊಮ್ಸ್
ವರ್ಷ: ೨೦೦೬
ಸ್ಥಳ: ಒಡೆಸ್ಕಾಲ್ಚಿ ಕ್ಯಾಸ್ಟಲ್, ಇಟಲಿ
ವೆಚ್ಚ : ೨೦ ಲಕ್ಷ ಅಮೆರಿಕನ್ ಡಾಲರ್

೬. ವಧು-ವರ: ಖ್ಯಾತ ನಟಿ ಟೇಲರ್ ಹಾಗೂ ಕಟ್ಟಡ ನಿರ್ಮಾಣ ಉದ್ಯಮಿ ಪಾರ್ಟೆನ್ಸ್ಕಿ
ವರ್ಷ: ೧೯೯೧
ಸ್ಥಳ: ಮೈಖೆಲ್ ಜಾಕ್ಸನ್ಸ್ ನೆವರ್‌ಲ್ಯಾಂಡ್ ರ್‍ಯಾಂಚ್
ವೆಚ್ಚ : ೨೦ ಲಕ್ಷ ಅಮೆರಿಕನ್ ಡಾಲರ್

೭. ವಧು-ವರ: ಪಾಪ್ ತಾರೆ ಅಗುಯಿಲೆರಾ ಹಾಗೂ ಆಕೆಯ ಕಾರ್ಯದರ್ಶಿ ಬ್ರಾಟ್‌ಮನ್
ವರ್ಷ: ೨೦೦೫
ಸ್ಥಳ: ನಾಪಾ ವ್ಯಾಲಿ, ಸಿಎ
ವೆಚ್ಚ : ೨೦ ಲಕ್ಷ ಅಮೆರಿಕನ್ ಡಾಲರ್

೮. ವಧು-ವರ: ಪಾಪ್ ತಾರೆ ಜಾನ್ ಹಾಗೂ ಆತನ ಸಹವರ್ತಿ, ಚಿತ್ರ ನಿರ್ಮಾಪಕಿ ಫರ್ನಿಶ್
ವರ್ಷ: ೨೦೦೫
ಸ್ಥಳ: ವಿಂಡ್ಸರ್‍ಸ್ ಗುಯಿಲ್ಡ್‌ಹಾಲ್, ಬ್ರಿಟನ್
ವೆಚ್ಚ : ೧೫ ಲಕ್ಷ ಅಮೆರಿಕನ್ ಡಾಲರ್

೯. ವಧು-ವರ: ಆಸ್ಕರ್ ಪ್ರಶಸ್ತಿ ವಿಜೇತ ನಟ ಡೌಗ್ಲಾಸ್ ಹಾಗೂ ನಟಿ ಝೆಟಾ-ಜೋನ್ಸ್
ವರ್ಷ: ೨೦೦೦
ಸ್ಥಳ: ಪ್ಲಾಜಾ ಹೋಟೆಲ್, ನ್ಯೂಯಾರ್ಕ್
ವೆಚ್ಚ : ೧೫ ಲಕ್ಷ ಅಮೆರಿಕನ್ ಡಾಲರ್

೧೦. ವಧು-ವರ: ಖ್ಯಾತ ಗಾಲ್ಪ್ ಆಟಗಾರ ಟೈಗರ್ ವುಡ್ಸ್ ಹಾಗೂ ನಾರ್ವೆಯ ರೂಪದರ್ಶಿ ನೊರ್ಡೆಗ್ರೆನ್
ವರ್ಷ: ೨೦೦೪
ಸ್ಥಳ: ಎಕ್ಸ್‌ಕ್ಲ್ಯೂಸಿವ್ ಸ್ಯಾಂಡಿ ಲೇನ್ ರೆಸಾರ್ಟ್, ಬಾರ್ಬಡೋಸ್
ವೆಚ್ಚ : ೧೫ ಲಕ್ಷ ಅಮೆರಿಕನ್ ಡಾಲರ್

- ಮಹಾಬಲೇಶ್ವರ ಹೊನ್ನೆಮಡಿಕೆ

0 comments:

Post a Comment