ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ದಿನಕ್ಕೆ ಐದಾರು ಬಾರಿ ಫೋನ್. ಕೇಳೊದೊಂದೇ ಊಟ ಆಯ್ತಾ, ತಿಂಡಿ ತಿಂದ್ಯಾ.... ಏನಿತ್ತು ಇವತ್ತು ಊಟಕ್ಕೆ ಇಷ್ಟೇ. ಏನಾದ್ರೂ ಬೇರೆ ಮಾತಾಡು ಎಂದು ಹೇಳಿ ಹೇಳಿ ನಂಗೇನೇ ಬೇಜಾರು ಬಂದುಬಿಡ್ತು. ಇದು ದೂರ ಇದ್ದಾಗಿನ ಮಾತು.
ಅದೇ ಮನೆಲಿದ್ದರೆ ಸಾಕು ಮಾತು ಮಾತಿಗೂ ಜಗಳ ಮುನಿಸು. ಮತ್ತೊಂದು ಐದು ನಿಮಿಷದ ಕೋಪ. ಬುತ್ತಿಗೆ ಹಾಕಲಿಲ್ಲ ಅನ್ನೋದರಿಂದ ಹಿಡಿದು ತಂಗಿಗೆ ಮಾತ್ರ ಮುತ್ತು ಕೊಟ್ಟೋಳು ಅಂತ ಜಗಳ ಆರಂಭ.
ಅಮ್ಮಂಗೂ, ಮುನಿಸಿಗೂ, ಜಗಳಕ್ಕೂ, ಕೋಪಕ್ಕೂ ಅದೇನೋ ನಂಟು. ಮನೇಲಿ ಅಮ್ಮ ಪ್ರತೀ ಮಾತು ಮಾತಿಗೂ ಮುತ್ತು ಕೊಡೋದೇ ಇಲ್ಲ. ಆದರೆ ಸಿನಿಮಾ, ಧಾರವಾಹಿಗಳಲ್ಲಿ ಆಕೆ ಸಿಟ್ಟಾಗುವುದೇ ಇಲ್ಲ.
ಸಮವಸ್ತ್ರ ಹಾಕಿದಾಗ ಬಾಚಣಿಗೆ ಹಿಡಿದುಕೊಂಡು ಚೋಟುದ್ದದ ಹೆರಳನ್ನು ಬೈದುಕೊಂಡೇ ಎರಡು ಜಡೆ ಕಟ್ಟುತ್ತಿದ್ದಳು. ಮನೆಯಲ್ಲೇ ಆದ ಯಾವುದಾದರೊಂದು ಹೂವನ್ನು ಮುಡಿಸಿ ಯಾರ ದೃಷ್ಟಿಯೂ ತಾಗದಿರಲಿ ಎಂದು ದೊಡ್ಡ ದೃಷ್ಟಿ ಬೊಟ್ಟನ್ನು ಇಟ್ಟು ಬೇಗ ಬಾ ಎಂದು ಬೈದೇ ಕಳಿಸುತ್ತಿದ್ದಳು. ಈಗಂತೂ ನನ್ನ ಮೊಬೈಲ್ ಬೆಳಕಾದರೆ ಸಾಕು ಆಕೆಗೆ ಪಿತ್ತದಂತಹ ಕೋಪ.... ನನಗೇಕೋ ಒಳಗೊಳಗೆ ಖುಷಿ.... ಇನ್ನೂ ಆಕೆ ತಂದಿಟ್ಟ ಕೆಂಪು ಬಳೆಗಳನ್ನು ಕೈಗಿಟ್ಟುಕೊಂಡು ಒಡೆದು ಹಾಕಿದಾಗ ಆಕೆಗೆ ಬರುತ್ತಿದ್ದ ಮುನಿಸಿದ್ಯಲ್ವಾ ಅದು ಇವತ್ತಿಗೂ ನಂಗಿಷ್ಟ.
ಅಮ್ಮ... ನೀ ಮೊದಲ ಬಾರಿ ಅಪ್ಪಂಗೆ ನನ್ನ ದೂರು ಕೊಟ್ಟಿದ್ದು ನಾ ಶಾಲೆಗೆ ಹೋಗೋದಿಲ್ಲ ಅಂತ ಹಠ ಹಿಡಿದಾಗಲ್ವಾ..... ನೀನೇ ತೆಗೆದಿಡು ಅಂತ ಕೊಟ್ಟ ಎರಡು ರೂಪಾಯಿಯಲ್ಲಿ ತಿಂದ ಚಾಕಲೇಟಿನ ಸಿಹಿಯೂ... ನಿನ್ನ ಪೆಟ್ಟಿನ ರುಚಿಯೂ ಈಗಲೂ ಗಾಯದಂತೆ ಹಾಗೇ ಉಳಿದುಕೊಂಡಿದೆ. ಆದರೆ ಅದರಿಂದ ಬದುಕ ಕಲಿತೆ..... ಪ್ರೀತಿಸುವುದ ಕಲಿತೆ.
ಅಮ್ಮಾ.... ಅದಕ್ಕೆ ನೀನೆಂದರೆ ನನಗೆ ಹುಣ್ಣಿಮೆಯ ಬೆಳದಿಂಗಳಿನಂಥ ಬಾಲ್ಯ ನೆನಪಾಗುತ್ತದೆ.... ಕಟ್ಟಿಕೊಟ್ಟ ಬುತ್ತಿ ನೆನಪಾಗುತ್ತೆ... ನನ್ನ ನಗುವಲ್ಲಿ ನಿನ್ನ ನೋವ ಮರೆತದ್ದು ನೆನಪಾಗುತ್ತೆ.... ಹಾಗಾಗಿ ನನಗೆ ಅಮ್ಮನೆಂದರೆ ಮುನಿಸು.... ಮುನಿಸೆಂದರೆ ಪ್ರೀತಿ.... ಪ್ರೀತಿಯೆಂದರೆ ಎಲ್ಲ ನೋವಿಗೂ ಮದ್ದು ಕೊಡುವ 'ಅಮ್ಮನ ಮಡಿಲು'.
ಇದನ್ನು ಓದಿ ನಿಮಗೆ ಅಮ್ಮನ ನೆನಪಾದರೆ, ಸುಮ್ಮನೆ ಅಮ್ಮಾ ಅಂದು ಬಿಡಿ.... ಆಕೆ ಎಲ್ಲಿದ್ದರೂ 'ಓ' ಅಂದುಬಿಡುತ್ತಾಳೆ. ಮತ್ತೆ ನನ್ನ ಜಂಗಮಗಂಟೆ 'ಅಮ್ಮಾ ನಿನ್ನ ಎದೆಯಾಳದಲ್ಲಿ ಎಂದು ಕೂಗಿಕೊಳ್ಳುತ್ತಿದೆ. ಬಹುಶಃ ಅಮ್ಮನೇ ಇರಬೇಕು..... ಹಾಗೆಯೇ
ನನ್ನ ಜಂಗಮವಾಣಿಯಲ್ಲಿರುವ ಅಮ್ಮನ ಬಗೆಗಿನ ನಾಲ್ಕು ಕವನದ ಸಾಲುಗಳು.... ಯಾರು ಬರೆದಿರುವುದೋ ತಿಳಿಯದು.... ಹೀಗೆ ಓದಿಕೊಳ್ಳಿ ನಿಮ್ಮ ಅಮ್ಮನ ನೆನಪಿನಲ್ಲಿ.
"ಹೆತ್ತವಳ ಮುದ್ದು ಮಾತು ನೆನಪಾಯಿತೇ ಕಂದಾ,
ತುತ್ತು ಅನ್ನ ತಿನ್ನುವ ಸವಿ ಹೊತ್ತಾಯಿತೇ ಕಂದಾ,
ಈ ತಾಯಿ ಹಾಡಿದ ಜೋಗುಳದ ಲಾಲಿಯು
ತೊಡೆ ಮೇಲೆ ಮಲಗಿದ ಆ ಸುಖದ ಗಳಿಗೆಯು
ಜನನೀ ದೈವ ಮರೆಯೋ ನೋವ
ಬಾಳಿನ ದಾರಿಗೆ ದೀಪವು ತಾಯಿ
ಜನ್ಮಕ್ಕೆ ಜೀವವು ಹೆತ್ತವಳು ತಾಯಿ
ಮಮತೆಗೆ ತಾಯಾಗಿ ಜೀವಕೆ ತಾಯಾಗಿ
ಕಣ್ಣಿಗೆ ಬೆಳಕಾಗಿ ದೈವಕೂ ಮಿಗಿಲಾಗಿ
ಮೊದಲು ಮೊದಲು ತಾಯಿ ದೇವರು.
ಜೋ.... ಲಾಲಿ ಲಾಲಿ ಜೋ ಜೋ ಕಂದಾ...."

ದೀಷ್ಮಾ ಡಿ.ಶೆಟ್ಟಿ

0 comments:

Post a Comment