ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:19 PM

ಇದೊಂದು ಅಚ್ಚರಿ....

Posted by ekanasu

ವಿಶೇಷ ವರದಿ

ಅದೇ ನೋಡಿ ಪ್ರಕೃತಿಯ ವಿಸ್ಮಯ. ನಮ್ಮ ಊಹೆಗೂ ನಿಲುಕದ ಅನೇಕಾನೇಕ ಸಂಗತಿಗಳು ನಿರಂತರ ಈ ಪ್ರಕೃತಿಯಲ್ಲಿ ನಡೆದೇ ನಡೆಯುತ್ತವೆ. ಇಲ್ಲೂ ಅಷ್ಟೇ ಇಲ್ಲಿ ಅದೆಷ್ಟೂ ವೃಕ್ಷಗಳಿವೆ. ಅವುಗಳನ್ನು ಯಾರೂ ನೆಟ್ಟು ಬೆಳೆಸಿದ್ದಲ್ಲ. ಪೋಷಿಸಿದ್ದೂ ಅಲ್ಲ. ಆದರೂ ಅವು ಬೃಹದಾಕಾರ ತಾಳಿ ತನ್ನಿಂದ ತಾನಾಗೇ ಬಾನೆತ್ತರಕ್ಕೆ ಬೆಳೆದು ನಿಂತಿವೆ.ಇದು ಈ ಪ್ರದೇಶದ ಕಥೆಯಷ್ಟೇ ಅಲ್ಲ. ಈ ಪ್ರದೇಶದ ಸುತ್ತೆಲ್ಲವೂ ಒಂದೊಮ್ಮೆ ಹೀಗೇ ಬೆಳೆದು ನಿಂತ ನೂರಾರು ಮರಗಳಿದ್ದವು. ಅದನ್ನೇ ಮಾರಿ ಹಣ ಮಾಡಿ ದೊಡ್ಡ ದೊಡ್ಡ ಬಂಗಲೆ ಕಟ್ಟಿಸಿದವರೂ, ಬ್ಯುಸಿನೆಸ್ ನಡೆಸಿದವರೂ ಇದ್ದಾರೆ. ಆದರೆ ಈ ಪ್ರದೇಶದ ಒಂದೇ ಒಂದು ಮರಗಳನ್ನೂ ಇವರಿಗ್ಯಾರಿಗೂ ಕಡಿಯಲು ಸಾಧ್ಯವಾಗಿಲ್ಲ. ಕಾರಣ ಏನು... ಅದೇ ನೋಡಿ ಈ ಬಾರಿಯ ನಮ್ಮ ಈ ಕನಸು ಸ್ಪೆಷಲ್ ಸ್ಟೋರಿ...

ಅದು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ವ್ಯಾಪ್ತಿಯ ಪ್ರದೇಶ. ಮೂರು ನದಿಗಳ ಸಂಗಮ ಕ್ಷೇತ್ರ. ಹೊಳೆಯ ಆ ದಡಕ್ಕೆ ತಲುಪಿದರೆ ಅದು ಆರಂಬೋಡಿ ಗ್ರಾಮ. ಅದೇನೋ ಗೊತ್ತಿಲ್ಲ. ಈ ಎರಡೂ ಗ್ರಾಮವಾಸಿಗಳಿಗೆ ನಿರಂತರ ಅನಿಷ್ಠಗಳು. ಜೀವನದಲ್ಲಿ ನಿರಂತರ ಏರುಪೇರುಗಳು. ಅಸೌಖ್ಯ , ಅಪಮೃತ್ಯ, ಭೀಬತ್ಸ ... ಏನೂ ಸಮಾಧಾನವೇ ಇಲ್ಲದ ಸ್ಥಿತಿ... ಏನೇ ಕಾರ್ಯಕ್ಕೆ ಕೈಯಿಕ್ಕಿದರೂ ಅದ್ಯಾವುದೋ ಕಾಣದ ಶಕ್ತಿಯೊಂದು ಅಡ್ಡಿ ಪಡಿಸುತ್ತಲೇ ಬರುತ್ತವೆ.... ನಿರಂತರ ಅಪಮೃತ್ಯುಗಳು, ಮಳೆಗಾಲದಲ್ಲಿ ಎಲ್ಲೋ ಸಿಡಿಲಿನಾರ್ಭಟ ಕೇಳಿದರೂ ಅದ್ಯಾವುದೋ ಒಂದು ಮನೆ ಸಿಡಿಲಿಗೆ ಆಹುತಿಯಾದಂತಹ ಸನ್ನಿವೇಶ. ಕಣ್ಣೆದುರೇ ನೀರಿನಲ್ಲಿ ಕೊಚ್ಚಿ ಹೋದ ಬಾಲಕ... ನೋಡ ನೋಡುತ್ತಿದ್ದಂತೆಯೇ ವಾಹನದ ಚಕ್ರದಡಿ ಸಿಲುಕಿ ಅಪಮೃತ್ಯು... ನಿರಂತರ ಕೃಷಿ ನಾಶ... ಹೀಗೆ ಅದೆಷ್ಟೋ ವರ್ಷದಿಂದ ಈ ಪ್ರದೇಶದ ಮಂದಿಗೆ ಭಯದ ವಾತಾವರಣ...


ಹೌದು ಇದು ಕೂಡಾ ನದೀ ತಟದಲ್ಲಿರುವ ಒಂದು ಸಣ್ಣ ಪ್ರದೇಶ... ಅದೇನೋ ಅಚ್ಚರಿ... ಎಲ್ಲಿನೋಡಿದರಲ್ಲಿ ಮರ ಕಳ್ಳರ ಹಾವಳಿಗೆ ತುತ್ತಾಗಿ ಅಳಿದುಳಿದ ಅವಶೇಷಗಳು ಮಾತ್ರ ಕಾಣಸಿಗುತ್ತದೆಯಾದರೂ ಈ ಭಾಗದಲ್ಲಿ ಮಾತ್ರ ಸೊಂಪಾಗಿ ಬಳೆದು ನಿಂತ ನೂರಾರು ವರ್ಷಗಳ ಇತಿಹಾಸವನ್ನೇ ಸಾರಿ ಹೇಳುತ್ತಿರುವ ವೃಕ್ಷಗಳು... ಇದೇ ನೋಡಿ ಎಲ್ಲಾ ಪ್ರಶ್ನೆಗಳಿಗೂ ಅಚ್ಚರಿ ಹುಟ್ಟಿಸುವಂತಹ ಉತ್ತರಕ್ಕೆ ನಾಂದಿ ಹೇಳಿದವು ಎಂದರೆ...
ಈ ಕುತೂಹಲ ಅಂಶವನ್ನೇ ಕೆದಕುತ್ತಾ ಸಾಗಿದ ನಮ್ಮ ತಂಡಕ್ಕೆ ಸಿಕ್ಕಿದ್ದು ಮಾತ್ರ ಅಚ್ಚರಿಗಳ ಮೇಲೊಂದು ಅಚ್ಚರಿಗಳು...
ಪ್ರತಿಯೊಂದು ಘಟನೆಗಳೂ ಕೂಡಾ ಎದೆ ಝಲ್ ಎನಿಸುವಂತಿದ್ದವು...

ಆತ ಈ ಭಾಗದ ಸ್ಥಳೀಯ (ಹೆಸರು ವಿನಂತಿ ಮೇರೆಗೆ ಪ್ರಕಟಿಸಿಲ್ಲ.) ಅದೊಂದು ದಿನ ರಾತ್ರಿ ಪಕ್ಕದಲ್ಲೇ ಹರಿಯುತ್ತಿರುವ ನದಿಯಲ್ಲಿ ಗಾಳ ಹಾಕಲು ಹೋಗಿದ್ದ. ಈ ಭಾಗದಲ್ಲಿ ರಾತ್ರಿ ಸಿಹಿನೀರಿನ ಬೃಹತ್ ಮೀನುಗಳು ಸಿಗುವುದರಿಂದಾಗಿ ರಾತ್ರಿ ಗಾಳ ಹಾಕುವುದು ರೂಢಿ. ಆದರೆ ಅಂದು ಭಯದ ಸದ್ದೊಂದು ಕೇಳಿತಂತೆ... ಅರ್ಧದಿಂದಲೇ ಗಾಳ ಬಿಟ್ಟು ತುಸು ಮೇಲೆ ಬಂದು ನೋಡಿದರೆ ನಾಲ್ಕಾರು ಮಂದಿ ಭಯ ಭೀತರಾಗಿ ಓಡುತ್ತಿದ್ದ ದೃಶ್ಯ.... ಅದಾದ ಕೆಲ ಕ್ಷಣದಲ್ಲೇ ತರಗೆಲೆಗಳ ಮೇಲೆ ಭೀರಕ ಸದ್ದು... ನಿಂತಲ್ಲೇ ಅದೇನೋ ಕಂಪನ... ನೋಡಿದರೆ ಕಣ್ಣುಗಳೇ ನಂಬದ ಸ್ಥಿತಿ...ಬೃಹದಾಕಾರದ ಹಾವೊಂದು ಅಲ್ಲಿ ಸಾಗಿತ್ತು... ! ಅದು ಶಂಖಪಾಲ ಸರ್ಪ...ಘಟಸರ್ಪ... ಆತ ನಂತರ ಅಲ್ಲಿ ನಿಂತಿಲ್ಲವಂತೆ...

ಶಂಖಪಾಲ ಸರ್ಪದ ಬಗೆಗೆ ನಮ್ಮ ತಂಡ ಜ್ಯೋತಿಷಿಗಳ ಬಳಿ ವಿಚಾರಿಸಿತು...ಶಂಖಪಾಲ ಸಾಮಾನ್ಯ ಸರ್ಪವಲ್ಲ. ಅದು ಅತ್ಯಂತ ಬೃಹದಾಕಾರದ್ದು. ಹಾಗೂ ಅದು ದೈವೀಸಾನಿಧ್ಯವಿದ್ದಲ್ಲಿ ಮಾತ್ರ ಕಂಡುಬರಲು ಸಾಧ್ಯ ಎಂಬ ಮಾತುಗಳು ಕೇಳಿಬಂದವು. ನಮ್ಮ ಕುತೂಹಲ ಮತ್ತಷ್ಟು ಕೆರಳಿತು...ನಾವು ಆ ಪ್ರದೇಶವನ್ನು ಮತ್ತಷ್ಟು ಕೂಲಂಕುಶವಾಗಿ ಅಧ್ಯಯನ ಮಾಡಲು ಹೊರಟೆವು...ಅದಾಗ ತೆರೆದುಕೊಂಡದ್ದೇ ಮತ್ತಷ್ಟು ಅಚ್ಚರಿಗಳು...ಭಯಾನಕ ಸಂಗತಿಗಳು....


ಹೆಸರು ಉದಯಕುಮಾರ್... ಊರು ಪೆರಿಂಜೆ ... ವೃತ್ತಿ ಹಾಲಿನ ಸೊಸೈಟಿಯಲ್ಲಿ ಸೆಕ್ರೆಟರಿ... ಇವರಿಗೂ ಈ ಪ್ರದೇಶಕ್ಕೂ ಏನಪ್ಪ ಸಂಬಂಧ ಎಂದೇ...ನಮಗೂ ಅದೇ ನೋಡಿ ವಿಸ್ಮಯ ಕಾಡಿದ್ದು ಕಂಡದ್ದು. ಇವರು ತಮ್ಮ ಜಮೀನನಲ್ಲಿ ಕೃಷಿಕಾರ್ಯ ನಡೆಸಿಕೊಂಡು ಬರುತ್ತಿದ್ದರು. ಕಳೆದ ಕೆಲವಾರು ವರುಷಗಳಿಂದ ನೀರಿನ ಅಡ್ಡಿ ಇವರಿಗಾಗಿಲ್ಲ. ಆದರೆ ಕಳೆ ಒಂದೆರಡು ವರ್ಷಗಳಿಂದ ತೀವ್ರ ನೀರಿನ ಅಭಾವ ಇವರಿಗಾಯಿತು. ಇದರಿಂದ ಕೃಷಿ ನಾಶವಾಗುವತ್ತ ಸಾಗಿತು... ಅದಾಗ ಇವರಿಗೆ ಅನಿಸಿದ್ದು ಜ್ಯೋತಿಷಿಗಳ ಮೊರೆಹೋಗುವ ಪ್ರಸಂಗ.

ಅವರ ಅಣತಿ ಪ್ರಕಾರ ನೀರು ನೋಡಲು ಜನಗೊತ್ತುಪಡಿಸಿದ್ದೂ ಆಯಿತು... ಆದರೆ... ಮತ್ತೆ ಮತ್ತದೇ ಸಮಸ್ಯೆ.... ನೀರು ಇದೆಯಾದರೂ ಅದಕ್ಕೊಂದು ಪ್ರಭಲ ಶಕ್ತಿ ಅಡ್ಡಕೊಡುತ್ತಿದೆ ಎಂಬ ಮಾತು ಅವರಿಂದ ಕೇಳಿಬಂತು... ಮತ್ತೆ ತಲೆಕೆರೆದುಕೊಳ್ಳುತ್ತಾ ಉದಯಕುಮಾರ್ ಹಾಗೂ ಅವರ ಮಿತ್ರರು ಹನುಮಾಜೆ ಜ್ಯೋತಿಷಿಗಳ ಬಳಿ ಪ್ರಶ್ನೆಯಿಡಲು ಸಾಗಿದರು... ಅದೇ ನೋಡಿ ಅಚ್ಚರಿಯೆಂದರೆ... ಹೌದು... ಅಲ್ಲೂ ಕಂಡದ್ದು ಅದೇ ವಿಸ್ಮಯ...!!!

ಮರಕಡಿಯಲೆತ್ನಿಸಿದವರ ಪಾಲಿಗೆ ಸಂಖಪಾಲ ಸರ್ಪ ಕಾಣಿಸಿದ್ದು, ಅಪಮೃತ್ಯು, ಪ್ರಾಣಹಾನಿ, ಅನೇಕಾನೇಕ ಪ್ರಸಂಗಗಳು ಕಂಡುಬಂದಿದ್ದು, ನೀರಿಗೆ ಆ ಶಕ್ತಿ ಅಡ್ಡಪಡಿಸಿದ್ದು... ಹೀಗೆ ಒಂದಕ್ಕೊಂದು ಪೂರಕವೇ ... ಊರ ಜನತೆಗೆ ಮತ್ತೆ ಭಯ... ಏನು ಆ ಶಕ್ತಿ... ನಮಗೂ ಅದೇ ಪ್ರಶ್ನೆ ಕಾಡಿತ್ತು... ಮತ್ತೆ ಕುತೂಹಲ ಭರಿತರಾದ ನಮ್ಮ ತಂಡ ಅದೇನೆಂದು ಶೋಧಿಸಲು ಸನ್ನದ್ಧವಾಯಿತು...

ಅದೊಂದು ನದೀ ಸಂಗಮ ಪ್ರದೇಶ ... ಹತ್ತಾರು ಬೃಹತ್ ಮರಗಳು ಬಾನೆತ್ತರಕ್ಕೆ ಬೆಳೆದು ನಿಂತ ಪ್ರದೇಶ. ಆ ಪ್ರದೇಶದಲ್ಲಿ ಮಾತ್ರ ಮರಗಳ್ಳರಿಗೆ ಮರ ಕಡಿಯಲು ಅಸಾಧ್ಯವಾಗಿದ್ದು ಎಂಬುದನ್ನು ನಾವು ಅರಿತೆವು. ಹಾಗಾಗಿ ಆ ಪ್ರದೇಶದಲ್ಲೇನಿದೆ ಎಂಬುದನ್ನು ನೋಡಹೊರಟೆವು. ಅಲ್ಲಿ ನಮಗೆ ಕಂಡಿತು ಒಂದು ಪುಟ್ಟ ಕುರುಹು... ಇಪ್ಪತ್ತರಷ್ಟು ಸಪೂರವಾದ ಮರಗಳು ಒಂದೆಡೆ ಕೂಡಿ ನಿಂತಂತಹ ಸ್ಥಳ... ಅದರ ತಳಭಾಗದಲ್ಲಿ ಕೆಂಪುಕಲ್ಲಿನ ಒಂದು ಚೌಕಾಕೃತಿಯ ಕಟ್ಟೆ... ಮೆಟ್ಟಿಲುಗಳ ಅವಶೇಷ.... ಅಲ್ಲೇ ಅನತಿ ದೂರದಲ್ಲಿ ಬೃಹದಾಕಾರದ ಕೆರೆಯಂತಹ ಪ್ರದೇಶ... ಪಕ್ಕದಲ್ಲೇ ಒಂದು ಬೃಹತ್ ಮರ...ಅದರ ಬುಡದಲ್ಲೂ ಅದೇನೋ ಒಂದು ಕಟ್ಟೆಯಂತಹ ಭಾಗ... ಇದನ್ನೆಲ್ಲ ನೋಡಿದಾಗ ನಮಗೆ ಅದೊಂದು ಪುರಾತನ ದೇಗುಲದ ಕುರುಹಾಗಿರಬಹುದೆಂಬುದು ಸ್ಪಷ್ಟವಾಯಿತು...

ಅದೇ ಕಾರಣಕ್ಕೆ ಆ ಭಾಗದ ಜನರನ್ನು ವಿಚಾರಿಸಿದೆವು. ಅವರೂ ಹೇಳಿದ್ದು ಅದೇ ಮಾತನ್ನು....
ನೀರಿಗಾಗಿ ಜ್ಯೋತಿಷಿಗಳನ್ನು ಭೇಟಿ ಮಾಡಿದ ಉದಯ ಕುಮಾರ್ ಅವರಿಗೆ ಜ್ಯೋತಿಷಿಗಳು ಹೇಳಿದ್ದೂ ಅದನ್ನೇ...! ಏನಚ್ಚರಿ! ಅಂತೂ ನಮ್ಮ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿತು. ಇದಕ್ಕೆಲ್ಲ ಕಾರಣ ಶಿಥಿಲವಾದ ಈ ದೇಗುಲವೆಂದು...ಏತನ್ಮಧ್ಯೆ ಊರುವರು ನೀಡಿದ ಒಂದು ಮಾಹಿತಿ ನಮಗೆ ಕುತೂಹಲವನ್ನು ತೊಂದೊಡ್ಡಿತು...ಅದೆಂದರೆ
ಆರಂಬೋಡಿ -ಪಡ್ಡ್ಯಾರಬೆಟ್ಟು ನಡುವೆ ಈ ಕ್ಷೇತ್ರದ ಸನಿಹ ಕಳೆದ ನೂರಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ 120ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆತದ್ದು ಈ ಕ್ಷೇತ್ರದಲ್ಲಿ 3 ಗಣಹೋಮ ನಡೆದಾಗಲೇ ಎಂದರೆ ಅಚ್ಚರಿಯಲ್ಲವೇ.
ಹೌದು ಇದು ಅಂತಿಂಥ ದೇಗುಲವಲ್ಲ. ಒಂದೊಮ್ಮೆ ಪಂಚಾತನಯ ಪೂಜೆಯಿಂದ ಕಂಗೊಳಿಸುತ್ತಿದ್ದ ಸೂರ್ಯನಾರಾಯಣ ದೇಗುಲವಾಗಿತ್ತಂತೆ. ಕಾಲಕ್ರಮೇಣ ಇದು ಜೀರ್ಣಾವಸ್ಥೆಗೆ ತಲುಪಿದೆ. ಇತ್ತೀಚೆಗೆ ಈ ಪ್ರದೇಶದ ಸಾನಿಧ್ಯದ ಕುರಿತಾಗಿ ಸ್ಥಳ ಪ್ರಶ್ನೆಯಿರಿಸಿದಾಗ ವಳಕ್ಕುಂಜ ವೆಂಕಟ್ರಮಣ ಭಟ್ಟರು ಹೇಳಿದ್ದೂ ಇದೇ ಮಾತನ್ನು.
``ಈ ಹಿಂದೆ ಈ ಸ್ಥಳದಲ್ಲಿ ಕಲಹ ವಿರೋಧಗಳಿಂದ ಈ ಸ್ಥಳದಲ್ಲಿ ಸಾನ್ನಿಧ್ಯ ನಾಶವಾದ ಲಕ್ಷಣ ಇರುವುದು. ಈ ಆರೂಢ ಸ್ಥಳವು ಹಿಂದೆ ರಾಜಾಧಿಕಾರದ ರಾಜ ವಂಶಸ್ಥರ ಆಢಳಿತಕ್ಕೊಳಪಟ್ಟಿದ್ದ ಲಕ್ಷಣ ಇರುವುದು. ಆ ರಾಜ ಕುಟುಂಬವು ಈ ಸ್ಥಳದ ಉತ್ತರ ಪೂರ್ವ ಆಶ್ರಯ ಭಾಗದಲ್ಲಿ ವಾಸವಿದ್ದು ಅಲ್ಲಿ ಅರಮನೆ ಇದ್ದು ನಾಶವಾದ ಲಕ್ಷಣ ಇರುವುದು . ಈ ರಾಜಕುಟುಂಬ ಹಾಗೂ ಬೇರೆ ರಾಜವಂಶಸ್ಥರಾಗಿ ಕಲಹ ಬಂದು ಈ ಆರೂಢದ ದೇವಸ್ಥಾನ ನಾಶವಾದ ಲಕ್ಷಣ ಇರುವುದು. ಈ ಸ್ಥಳದಲ್ಲಿ ರಾಜಾಶ್ರಯದಲ್ಲಿ ವೈಷ್ಣವ ಶೈವ ಶಾಕ್ತೇಯ ಸಾನಿಧ್ಯಗಳು ಇದ್ದಿರುವ ಲಕ್ಷಣ ಇರುವುದು. ಈ ಆರೂಢದ ಈಶಾನ್ಯ ಭಾಗದಲ್ಲಿ ಬಾವಿಯಿದ್ದ ಲಕ್ಷಣ ಇರುವುದು. ''

ಅನೇಕ ವರ್ಷಗಳ ಹಿಂದಿನ ಮಾತು ಈ ಭಾಗದಲ್ಲಿ ಆಗ ನೆಮ್ಮದಿಯಿತ್ತು. ಮನೆಮನಗಳಲ್ಲಿ ಸಂತಸವಿತ್ತು. ಕೃಷಿಯಾಗಲಿ ವ್ಯಾಪಾರ ವ್ಯವಹಾರವಾಗಲಿ ಎಲ್ಲವೂ ಲಾಭದಾಯಕವಾಗಿಯೇ ನಡೆದಿತ್ತು. ಆದರೆ ಕೆಲ ಕಾಲದ ನಂತರದಲ್ಲಿ ಅದೇನು ಅನಾಹುತ ಸಂಭವಿಸಿತೋ ಆ ಪ್ರದೇಶದ ಸುತ್ತಮುತ್ತ ಶಾಂತಿ ಹಂತಹಂತವಾಗಿ ಮರೆಯಾಗುತ್ತಿತ್ತು. ಅಲ್ಲಿದ್ದ ಶ್ರೀ ಸೂರ್ಯನಾರಾಯಣ ದೇವರ ಸನ್ನಿಧಿ, ಆತನ ಅನುಗ್ರಹಕ್ಕೆ ಪಾತ್ರರಾದ ಅಲ್ಲಿನ ಜನ ಆ ದೈವವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದರು. ಅನೇಕರು ಇಲ್ಲಿಗೆ ಬಂದು ನಾನಾ ರೀತಿಯ ಹರಕೆಗಳನ್ನು ತೀರಿಸುತ್ತುದ್ದರು. ಆ ಭಕ್ತರು ಕೇಳಿದ ವರಗಳನ್ನೂ ಕೊಟ್ಟಿದ್ದ ಶ್ರೀ ಸೂರ್ಯನಾರಾಯಣ ದೇವ...
ಸಂತಾನ ಹೀನರಿಗೆ ಈ ದೇವರು ಸಂತಾನ ಕರುಣಿಸುತ್ತಾರೆ. ಚರ್ಮರೋಗಕ್ಕೆ ಅಲ್ಲಿತ್ತು ಸೂಕ್ತ ಪರಿಹಾರ. ಕಳವು ಪ್ರಕರಣಗಳಿಗೆ ಆ ದೇವ ಸೂಕ್ತ ಶಿಕ್ಷೆ ನೀಡುತ್ತಿದ್ದ.


ದೇವರ ಸನ್ನಿಧಾನದಲ್ಲಿದ್ದ ಮರಗಳನ್ನು ಕದಿಯಲು ಹೋದವರಿಗೆ ಈ ಕಾರಣದಿಂದಾಗಿಯೇ ಸಂಖಪಾಲ ಸರ್ಪ ಎದುರಾಯಿತು. ನೀರಿಗೂ ಇದೇ ದೇವರ ಶಕ್ತಿಯೇ ಎದುರಾಯಿತು. ಕಾರಣ ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನಕ್ಕೆ ಜೀರ್ಣೋದ್ಧಾರದ ಭಾಗ್ಯ ಆಗಬೇಕಾಗಿತ್ತು. ಅದರಂತೆ ಪ್ರಶ್ನೆಯ ನಂತರ ಸೂರ್ಯನಾರಾಯಣನ ಆವರಣ ಮತ್ತೆ ಮೊದಲು ರೂಪ ಪಡೆಯುವತ್ತ ಹೆಜ್ಜೆಯಿರಿಸಿದೆ. ಸುತ್ತಮುತ್ತಲ ಜನತೆ ಈ ಅವಶೇಷದ ಬಳಿ ಜ್ಯೋತಿಷಿಗಳ ಸೂಚನೆಯಂತೆ ಪ್ರತಿ ಶನಿವಾರವೂ ಗಣಹೋಮ ಆಚರಿಸುತ್ತಿದ್ದಾರೆ. ಇಲ್ಲಿ ಕೇಳಿಕೊಂಡದ್ದು ಆಗುತ್ತಿರುವುದರಿಂದ ಸೂರ್ಯನಾರಾಯಣನಿಗೆ ದೇವಾಲಯ ನಿರ್ಮಿಸಲು ಜನತೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ ಈಗಾಗಲೆ ಈ ಮಹಿಮೆ ತಿಳಿದ ಅನೇಕರು ಇಲ್ಲಿಗೆ ಭೇಟಿ ನೀಡಿ ತಮ್ಮ ಕಷ್ಟಗಳನ್ನು ಇದೇ ಅವಶೇಷದ ಮುಂದೆ ನಿಂತು ಹೇಳಿಕೊಳ್ಳುತ್ತಿದ್ದು ಅದು ಈಡೇರಿರುವುದು ಸುಳ್ಳಲ್ಲ.

0 comments:

Post a Comment