ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಅದು ಹಿರಿಯರಿಂದ ಬಳುವಳಿಯಾಗಿ ಬಂದ ಆಸ್ತಿ. ಸುಮಾರು ನಾಲ್ಕು ಎಕರೆ ಭೂಮಿಯಲ್ಲಿ ಅಡಿಕೆ ತೋಟವಿದೆ. ಅಡಕೆ ಮರ ಹತ್ತಲು ಕೂಲಿ ಕಾರ್ಮಿಕರ ಕೊರತೆ. ದಿನದಿಂದ ದಿನಕ್ಕೆ ಏರುತ್ತಿರುವ ವಯಸ್ಸು ಯೌವನದ ಶಕ್ತಿಯನ್ನು ಕೇವಲ ನೆನಪಿಸುತ್ತಿದೆಯಷ್ಟೆ. ಊಟಕ್ಕೆ ಆಧಾರವಾಗಿರುವ ಆ ಕಾಯಕವನ್ನು ಮುಂದುವರೆಸುವುದಾದರೂ ಹೇಗೆ ಎಂದು ಪ್ರಮೋಧ್ ಭಿಡೆ ಚಿಂತೆಯಲ್ಲಿರುವಾಗ ಬೆಳಕಾಗಿ ಬಂದವನು ಅವರ ಮಗ ಮಿಲಿಂದ್ ಭಿಡೆ ತನ್ನ ಅಡಿಕೆ ಮರ ಹತ್ತುವ ರೋಬೋಟ್ ನೊಂದಿಗೆ.

ಇವರು ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸಮೀಪದ ಕೊಚ್ಚಿ ಎಂಬ ಮನೆಯವರು. ಪಿ.ಯು.ಸಿ ಯಲ್ಲಿ ಕಲೆಯನ್ನು ಓದಿದ್ದ ಮಿಲಿಂದನಿಗೆ ಯಾಕೋ ಸ್ವಲ್ಪನೂ ಸಮಾಧಾನವಿರಲಿಲ್ಲ. ನಂತರ ಪ್ರಸನ್ನ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ಅನ್ನು ಆರಿಸಿಕೊಂಡ. ಅಡಿಕೆ ಕೊಯ್ಲಿಗೆ, ಮದ್ದು ಸಿಂಪಡಣೆಗೆ ಕೂಲಿಗಳು ಸಿಗದೆ ತಂದೆಯೊಬ್ಬರೇ ಕಷ್ಟ ಪಡುತ್ತಿರುವುದನ್ನು ನೋಡಿ ತಾನೂ ಸಹಾಯ ಮಾಡಬೇಕೆಂದುಕೊಂಡ. ಓದು ಬಿಟ್ಟು ಕೃಷಿ ಕಾಯಕದಲ್ಲೇ ತೊಡಗಲೂ ಇಷ್ಟವಿಲ್ಲ. ಅದಕ್ಕೋಸ್ಕರ ತನ್ನಿಂದ ಏನು ಸಾಧ್ಯ ಎಂದು ಅರಿತುಕೊಂಡು ಅಡಿಕೆ ಮರವೇರುವ, ಮದ್ದು ಸಿಂಪಡಿಸುವ ಮೆಷೀನಿನ ಕನಸನ್ನು ಕಂಡ. ರಾತ್ರಿ ಎರಡು ಗಂಟೆಗೆ ಎದ್ದು ಕೆಲಸ ಮಾಡಿದ್ದೂ ಇದೆ. ಕನಸಿನಲ್ಲೂ ಅಪ್ಪ ನನಗೆ ಗೊತ್ತಾಯಿತು ಎಂದು ಕನವರಿಸಿದ್ದೂ ಇದೆ ಎನ್ನುತ್ತಾರೆ ಅವನ ತಾಯಿ ಪ್ರತಿಮಾ ಭಿಡೆ.

ರೋಬೋಟ್ ಹೀಗೆ ಕೆಲಸ ಮಾಡುತ್ತೆಅಡಿಕೆ ಮರದ ಬುಡದಲ್ಲಿಟ್ಟರೆ ಸಾಕು ಆ ರೋಬೋಟ್ ವ್ಯಕ್ತಿಯಂತೆ ಸಲೀಸಾಗಿ ಮರವನ್ನೇರಿ ಮದ್ದು ಸಿಂಪಡನೆ ಮಾಡುತ್ತೆ. ತನ್ನಲ್ಲಿರುವ ಕ್ಯಾಮರಾದ ಕಣ್ಣಿನ ಸಹಾಯದಿಂದ ದೃಷ್ಯವನ್ನು ಕೆಳಗಿರುವ ಎಲ್.ಸಿ.ಡಿಗೆ ನೇರ ಪ್ರಸಾರ ಮಾಡುತ್ತಿರುತ್ತದೆ. ಇದರಿಂದ ಕೆಳಗೆ ಕುಳಿತು ಸ್ವಿಚ್ಚುಗಳಿಂದ ನಿಯಂತ್ರಣ ಮಾಡುತ್ತಿರುವ ವ್ಯಕ್ತಿಗೆ ಮದ್ದು ಅಡಿಕೆ ಗೊನೆಗೆ ಸರಿಯಾಗಿ ಬೀಳುತ್ತಿದೆಯೋ ಇಲ್ಲವೋ ಎಂದು ಪರೀಕ್ಷಿಸಿ ಸರಿಯಾದ ನಿರ್ದೇಶನವನ್ನು ನೀಡಬಹುದು.


ಗಾಳಿಯ ಒತ್ತಡದ ಆಧಾರದಲ್ಲಿ ( ನ್ಯೂಮಾಟಿಕ್ಸ್ ಪದ್ದತಿ) ಮರವೇರುವ ಈ ಯಂತ್ರಕ್ಕೆ ಕಂಪ್ರೆಷರ್ ನ ಗಾಳಿ ಆಧಾರ. ವ್ಯಕ್ತಿಯೋರ್ವ ಮರವೇರುವಾಗ ಕೈಗಳಿಂದ ಹಿಡಿದು ಕಾಲನ್ನು ಮೇಲಕ್ಕೆತ್ತುವಂತೆ ಇದು ಗಾಳಿಯನ್ನು ಪಡೆದು ಅಳಿಲಿನಂತೆ ಮರವೇರುತ್ತದೆ. ಯಂತ್ರದ ಸಂಪೂರ್ಣ ನಿಯಂತ್ರಣ 3 ಸ್ವಿಚ್ಚುಗಳ ಮೂಲಕ ನಡೆಯುತ್ತದೆ. 12 ಓಲ್ಟ್ ನ ಮೂರು ಬ್ಯಾಟರಿಗಳ ಅಳವಡಿಕೆಯಿಂದ ರೋಬೋಟ್ ಕಾರ್ಯೋನ್ಮುಖವಾಗುತ್ತದೆ.

ಸುಮಾರು ಎಪ್ಪತ್ತು ಸಾವಿರ ರೂಪಾಯಿಗಳಲ್ಲಿ ಈ ಮೆಷೀನು ತಯಾರಾಗಿದೆ. ಹೆತ್ತವರ ಆರ್ಥಿಕ ನೆರವು ಹಾಗೂ ಸಂಪೂರ್ಣ ಪ್ರೋತ್ಸಾಹ, ಉಪನ್ಯಾಸಕಿ ಆಶಿತಾ ಅವರ ಮಾರ್ಗದರ್ಶನ ಹಾಗೂ ಸ್ನೇಹಿತರಾದ ಗುರುಪ್ರಸಾದ್, ಗಣೇಶ್, ಚೇತನ್ ಗುಡಿಗಾರ್, ಇಶಾಕ್ ಎಚ್.ಎಂ, ವನಿತ ಹಾಗೂ ದಿವ್ಯ ಅವರುಗಳ ಆರ್ಥಿಕ ಸಹಕಾರ ಹಾಗೂ ಬೆಂಬಲದೊಂದಿಗೆ ಈ ಸಾಧನೆಯನ್ನು ಮಾಡಿದ್ದಾನೆ.

ತನ್ನ ಮೊದಲ ಹಂತದ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಮಿಲಿಂದ ತನ್ನ ರೋಬೋಟನ್ನು ಇನ್ನಷ್ಟೂ ಅಭಿವೃದ್ದಿ ಪಡಿಸಿ ಕೇವಲ 25ಸಾವಿರದಿಂದ 30ಸಾವಿರ ರೂಪಾಯಿಯ ಒಳಗೆ ರೈತರಿಗೆ ದೊರಕುವಂತೆ ಮಾಡಬಹುದು ಎನ್ನುತ್ತಾನೆ . ಅಲ್ಲದೆ ಸುಮಾರು 25 ಕೆ.ಜಿ ತೂಗುವ ಈ ರೋಬೋಟ್ನ ತೋಕವನ್ನೂ, ಕಡಿಮೆ ವಿದ್ಯುತ್ ಬಳಕೆಯನ್ನೂ ಸಾಧಿಸಬಹುದು. ಹೈಡ್ರಾಲಿಕ್ ಪದ್ದತಿಯನ್ನೂ ಅಳವಡಿಸಬಹುದು. ಹಾಗೆಯೇ ಇದೇ ಮೆಷೀನಿನಲ್ಲಿಯೇ ಅಡಿಕೆ ಕೊಯ್ಲನ್ನೂ ಮಾಡಬಹುದು ಎನ್ನುತ್ತಾನೆ.

ಮಿಲಿಂದ ತನ್ನ ರೋಬೋಟಿನ ಮೇಲೆ ಹೊಸ ಹೊಸ ಆವಿಷ್ಕಾರವನ್ನು ಮಾಡುತ್ತಲೇ ಇದ್ದಾನೆ. ಮೊದಲು, ಹತ್ತಿದ ಒಂದು ಮರಕ್ಕೆ ಮಾತ್ರಾ ಮದ್ದು ಸಿಂಪಡಿಸುವ ತಂತ್ರಜ್ಞಾನವಿದ್ದರೆ ಇದೀಗ ಎರಡು ಮರಗಳಿಗೆ ಮದ್ದು ಸಿಂಪಡಿಸುವಂತೆ ಅಭಿವೃದ್ದಿಪಡಿಸಿದ್ದಾನೆ. ಮುಂದೆ ಮರದಿಂದ ಮರಕ್ಕೆ ಈ ರೋಬೋಟ್ ಹಾರಿ, ಮರಕ್ಕೆ ಸುತ್ತು ಬಂದು ಒಂದೇ ಭಾರಿ ಹಲವು ಮರಗಳಿಗೆ ಸಿಂಪಡಿಸುವಂತಹಾ ತಂತ್ರಜ್ಞಾನವನ್ನೂ ಸೃಷ್ಟಿಸುವ ಗುರಿಯನ್ನು ಇಟ್ಟುಕೊಂಡಿದ್ದಾನೆ. ಜೊತೆಗೆ ಸಿಂಪಡಿಸಿದ ಮದ್ದು ಪೋಲಾಗದೆ ಸರಿಯಾಗಿ ಅಡಿಕೆ ಗೊನೆಗೆ ಬೀಳುವಂತೆ ಮಾಡಬೇಕು ಎನ್ನುವುದು ಅವನ ಆಲೋಚನೆ.ಹೀಗೆ ಯೋಚನೆ ಮಾಡಿದಂತೆ ಅನೇಕ ಹೊಸ ಹೊಸ ಉಪಾಯಗಳು ಹೊಳೆಯುತ್ತವೆ. ಮತ್ತಷ್ಟೂ ಅಭಿವೃದ್ದಿ ಪಡಿಸುವ ಕನಸನ್ನು ಕಾಣುತ್ತೇನೆ. ಆದರೆ ಅದಕ್ಕೆ ಹಣವನ್ನು ಹೊಂದಿಸುವುದೇ ಕಷ್ಟ. ಆದರೆ ಈಗಾಗಲೇ ಕ್ಯಾಂಪ್ಕೋ ಹಾಗೂ ಎ.ಆರ್.ಡಿ.ಎಫ್ ನ ಅಧಿಕಾರಿಗಳು ಭೇಟಿನೀಡಿ, ಸಾಧನೆಯನ್ನು ಶ್ಲಾಘಿಸಿ ಸಹಾಯದ ಭರವಸೆಯನ್ನು ಬಿತ್ತಿದ್ದಾರೆ. ರಾಜ್ಯದ ನೂರಕ್ಕೂ ಹೆಚ್ಚು ರೈತರು ಕರೆ ಮಾಡಿ ಅಭಿನಂದಿಸಿದ್ದು ತುಂಬಾ ಖುಷಿ ಎಂದು ಹೇಳುತ್ತಾನೆ ಮಿಲಿಂದ್.

ಹೀಗೆ ಹಳ್ಳಿಯಲ್ಲಿದ್ದರೂ ಏನನ್ನಾದರೂ ಸಾಧಿಸಬಹುದೆಂಬುದಕ್ಕೆ ಇದೀಗ ಮಿಲಿಂದನೂ ಒಂದು ಉದಾಹರಣೆಯಾಗಿ ನಿಂತಿದ್ದಾನೆ. ಅಡಿಕೆ ಕೃಷಿಯ ನಿರ್ವಹಣೆ ಯಾರಿಗಪ್ಪಾ ಬೇಕು? ಎಂದು ಪಲಾಯನಗೈಯ್ಯುವ ಕೃಷಿಕರಿಗೆ ಈ ಅಪ್ಪ ಮಗ ಉತ್ತರವಾಗಿ ತೋರಬಹುದು.ಬೊರ್ಗಲ್ಗುಡ್ಡೆ ಮಂಜುನಾಥ್

ಪ್ರಥಮ ಪತ್ರಿಕೋಧ್ಯಮ ಸ್ನಾತಕೋತರ ವಿಭಾಗ

ಎಸ್.ಡಿ.ಎಮ್.ಕಾಲೇಜು, ಉಜಿರೆ.

2 comments:

Anonymous said...

ತುಂಬಾ ಚೆನ್ನಾಗಿದೆ. ಮಾಹಿತಿ ನೀಡಿದ ಈ ಕನಸು ತಂಡಕ್ಕೆ ವಂದನೆಗಳು.
ವೆಂಕಟರಮಣ, ಕಾಸರಗೋಡು

Anonymous said...

hey kamath nice to see u article in news papers man keep up of good work....wish u al d best for u future n God bless u....

Lloyd

Post a Comment