ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಭುಬನೇಶ್ವರ - ಕಪಿಲಾಶ - ಪುರಿ - ಕೊನಾರ್ಕ ಯಾತ್ರೆ

ಮೇ ೧ರಿಂದ ೧೦ ರ ವರೆಗೆ ನಾನು ಒರಿಸ್ಸಾ ಪರ್ಯಟನೆಗೆ ಹೋದೆ. ನನ್ನ ಪ್ರಯಾಣ ಆರಂಭವಾದದ್ದು ಕಾಸರಗೋಡಿಂದ. ಅಪರಾಹ್ನ ಚೆನ್ನೈ ಸ್ಪೆಷಲ್ ರೈಲಿನಲ್ಲಿ ಪ್ರಯಾಣ ಬೆಳೆಸಿದೆ.ಅಹಾರ ಕೈಯಲ್ಲಿ ತೆಗೆದುಕೊಂಡಿಲ್ಲವಾದ್ದರಿಂದ ಕಣ್ಣೂರಿನ ನಂತರ ಬಂದ ರಾತ್ರಿ ಭೋಜನವನ್ನು ಪಡಕೊಂಡು ತಿಂದೆ. ಮರುದಿನ ಬೆಳಗ್ಗೆ ೮:೩೦ ಕ್ಕೆ ಚೆನ್ನೈ ತಲುಪಬೇಕಿದ್ದ ರೈಲು ೮:೦೫ ಕ್ಕೇ ತಲುಪಿತು. ಬಹುಷಃ ಆ ರೈಲು ಪ್ರತೀ ಮುಖ್ಯ ಸ್ಟೇಷನ್ ಗೆ ಸಮಯಕ್ಕೆ ಮುಂಚಿತವಾಗಿಯೇ ತಲಪುತ್ತಿತ್ತು. ಸಹ ಪ್ರಯಾಣಿಕರೋರ್ವರು ಇದು ಸರ್ವೇ ಸಾಮಾನ್ಯ ಎಂದರು. ಆಶ್ಚರ್ಯವಲ್ಲವೇ. ಅದಕ್ಕೇ ಆ ರೈಲಿನ ಹೆಸರನ್ನು ಸ್ಪೆಷಲ್ ಎಂದು ಇರಿಸಿರಬೇಕು ಎಂದುಕೊಂಡೆ. ಈಗ ಮಂಗಳೂರಿಂದ ಚೆನ್ನೈಗೆ ನಾಲ್ಕೈದು ರೈಲುಗಳಿದ್ದರೂ ಶೀಘ್ರವಾಗಿ ತಲುಪುವ ರೈಲು ಇದುವೇ.

ಅಲ್ಲಿಂದ ನನ್ನ ಪ್ರಯಾಣ ವಿಮಾನದಲ್ಲಿ ಮುಂದುವರಿಯಬೇಕು. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇಳಿದು ಸಬ್ ವೇ ಯ ಮೂಲಕ ದಾಟಿದರೆ ಪಾರ್ಕ್ ಸ್ಟೇಷನ್ ಲೋಕಲ್ ಟ್ರೈನು ಸಿಗುತ್ತದೆ. ಮೆಟ್ರೋ ರೈಲಿನಂತಹುದು. ಅದರಲ್ಲಿ ತ್ರಿಶೂಲಂ ಸ್ಟೇಷನ್ ತಲುಪಲು ಅರ್ಧ ಘಂಟೆಯ ಪ್ರಯಾಣಕ್ಕೆ ೭ ರೂ. ಅಲ್ಲಿಂದ ತುಸು ನಡೆದರೆ ಮೀನಂಬಾಕಂ ವಿಮಾನ ನಿಲ್ದಾಣಕ್ಕೆ ಸೇರಬಹುದು. ಆದರೆ ಚೆನ್ನೈ ಸೆಂಟ್ರಲ್ ನಿಲ್ದಾಣಕ್ಕೆ ನನ್ನ ದೊಡ್ಡಮ್ಮನ ಮಗ ಪ್ರಸಾದಣ್ಣ ಬಂದಿದ್ದ. ಪ್ರಸಾದಣ್ಣ ಬ್ಲೂ ಡಾರ್ಟ್ ಕಾರ್ಗೋದಲ್ಲಿ ಎರ್ ಕ್ರಾಫ್ಟ್ ಮೈಂಟೆನೆನ್ಸ್ ಎಂಜಿನಿಯರ್. ಅವರ ಮನೆಗೆ ಹೋಗಿ ಬೆಳಗ್ಗಿನ ಉಪಹಾರ ಲಗುಬಗೆಯಿಂದ ತಿಂದು ಪ್ರಸಾದಣ್ಣನ ಕಾರಿನಲ್ಲಿ ಮೀನಂಬಾಕಂ ತಲುಪಿದೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್, ಸೆಕ್ಯೂರಿಟಿ ಚೆಕ್ ನಂತರ ವಿಮಾನ ಏರಲು ಸುಮಾರು ಅರ್ಧ ತಾಸು ಬೇಕು. ನನ್ನ ಪ್ರಯಾಣ ಇಂಡಿಯನ್ ಏರ್ ಲೈನ್ಸ್ ನಲ್ಲಿ ಚೆನ್ನೈಯಿಂದ ಭುಬನೇಶ್ವರಕ್ಕೆ ಇತ್ತು. ನಮ್ಮ ಸಾಮಾನ್ಯ ಚಾಳಿಯಂತೆ ನೀರ ಬಾಟ್ಲಿ ತೆಗೆದುಕೊಂಡಿದ್ದೆ, ಧಗೆ ಬೇರೆ, ಅಂತಹ ಹವಾಮಾನದಲ್ಲಿ ಆಗಾಗ ನೀರು ಕುಡಿಯುತ್ತಿರಬೇಕು. ಪ್ರಸಾದಣ್ಣ ಹೇಳಿದ, ನೀರು ವಿಮಾನದ ಒಳಗೊಯ್ಯುವಂತಿಲ್ಲ. ಬಾಟ್ಲಿ ಬೇಕೇಬೇಕಾದರೆ ನೀರು ಚೆಲ್ಲಿ ತೆಕ್ಕೊಳ್ಳಬೇಕು ಎಂದು. ಸರಿ ಎಂದು ನೀರು ಚೆಲ್ಲಿದೆ. ಕೈಚೀಲದಲ್ಲಿ ಚೂರಿ, ಬ್ಲೇಡು, ದ್ರವ, ಜೆಲ್, ಪಟಾಕಿ, ಆಯುಧಗಳನ್ನು ಒಯ್ಯುವಂತಿಲ್ಲ. ಪರವಾನಗಿ ಇರುವ ಅಥವಾ ಸಾಮಾನ್ಯ ಉಪಯೋಗದ ವಸ್ತುವಾದರೆ ಅದನ್ನು ಚೆಕ್ ಇನ್ ಮಾಡುವಲ್ಲಿ ಲಗೇಜ್ ಜೊತೆಗೆ ಹಾಕಬೇಕು. ಇಂಡಿಯನ್ ನಲ್ಲಿ ಇಂತಹ ಒಟ್ಟು ಲಗೇಜ್ ಪರಿಮಿತಿ ೩೦ ಕೆ.ಜಿ. ಜೆಟ್ ಲೈಟ್, ಕಿಂಗ್ ಫಿಷರ್ ರೆಡ್ ಮುಂತಾದವುಗಳಲ್ಲಿ ಲಗೇಜ್ ಪರಿಮಿತಿ ೨೦ ಕೆ.ಜಿ.


ವಿಮಾನದಲ್ಲಿ ನಾನು ಈ ಹಿಂದೆಯೂ ಪ್ರಯಾಣ ಮಾಡಿದ್ದೇನೆ. ಪ್ರಥಮ ಬಾರಿಗೆ ಮಂಗಳೂರು - ಬೆಂಗಳೂರು - ಹೈದರಾಬಾದ್ ಹಾಗೂ ವಾಪಸ್ ಅದೇ ದಾರಿಯಾಗಿ, ಎರಡನೇ ಬಾರಿಗೆ ಮನೆಯವರೊಂದಿಗೆ ಮಂಗಳೂರು - ಬೆಂಗಳೂರು - ಕೊಲ್ಕತ್ತಾ - ಬಾಗ್ಡೋಗ್ರಾ (ಗ್ಯಾಂಗ್ಟಾಕ್) ಹಾಗೂ ವಾಪಸ್ ಅದೇ ದಾರಿಯಾಗಿ. ಈಗ ಮೂರನೆ ಬಾರಿಗೆ ಚೆನ್ನೈ ಭುಬನೇಶ್ವರ ಹಾಗೂ ವಾಪಸ್ ಅದೇ ದಾರಿಯಾಗಿ. ಆದರೂ ನಿರಂತರ ವಾಯು ಯಾನದಲ್ಲಿ ಹೋಗದಿರುವುದರಿಂದ ನೀರಿನಂತಹ ವಸ್ತುಗಳ ವಿಚಾರ ಮರೆತು ಹೋಗುತ್ತದೆ. ಅದು ಸೆಕ್ಯೂರಿಟಿ ಚೆಕ್ ಸಮಯದಲ್ಲಿ ಕಸಿವಿಸಿ ಉಂಟುಮಾಡುವಂತಹದ್ದು ಕೂಡಾ.

ವಿಮಾನ ಚೆನ್ನೈಯಿಂದ ವಿಶಾಖಪಟ್ನ ಕರಾವಳಿಯಾಗಿ ಸಮುದ್ರದ ಮೇಲೆ ಸುಮಾರು ಹತ್ತು ಕಿಲೋಮೀಟರ್ ಎತ್ತರದಲ್ಲಿ ಹಾರಿ ಭುಬನೇಶ್ವರ ತಲುಪಲು ಒಂದು ಘಂಟೆ ೫೦ ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ವೇಗ ಸುಮಾರು ೯೦೦ ಕಿ.ಮೀ. ಪ್ರತೀ ಘಂಟೆಗೆ ಇರುತ್ತದೆ. ಹೊಸ ಫ್ಲೈಟ್, ಪ್ರತೀ ಸೀಟಿನ ಮುಂದೆ ಎಂಟರ್ಟೈನ್ ವಿಡಿಯೋ, ಸೀಟಿನಲ್ಲಿ ಇಯರ್ ಫೋನ್ ಆಡಿಯೋ ಇತ್ತು. ೧೧:೦೫ ಕ್ಕೆ ಹೊರಟ ವಿಮಾನದಲ್ಲಿ ಊಟ ಕೊಟ್ಟರು. ಪುಲಾವ್, ಸಲಾದ್, ರಸಗುಲ್ಲಾ, ಹಸಿ ತರಕಾರಿ, ನೀರು, ಕಾಫಿ ಮುಂತಾದವುಗಳಿದ್ದವು. ಪ್ರಯಾಣ ದರ ಸುಮಾರು ೫ ಸಾವಿರ ರೂ. ವಿಮಾನ ೧೨:೪೫ ಕ್ಕೆ ಭುಬನೇಶ್ವರ ತಲುಪಿತು. ಭುಬನೇಶ್ವರದಲ್ಲಿ ಇಳಿಯುವುದಕ್ಕೆ ಹತ್ತು ನಿಮಿಷ ಮೊದಲು ಚಿಲ್ಕಾ ಸರೋವರದ ವಿಹಂಗಮ ದೃಶ್ಯ ಕಾಣಬಹುದು. ಅದು ವಿಮಾನದ ಎಡಭಾಗದಲ್ಲಿ ಬರುತ್ತದೆ. ದುರದೃಷ್ಟ ವಶಾತ್ ನನಗೆ ಮಧ್ಯದ ಸೀಟು ಲಭಿಸಿ ಆ ಮನರಂಜನೆ ತಪ್ಪಿ ಹೋಯಿತು.
ಚೆನ್ನೈ ಯಿಂದ ಕೊಲ್ಕತ್ತಾಕ್ಕೆ ಹೋಗುವ ಹಲವಾರು ಟ್ರೈನುಗಳು ಭುಬನೇಶ್ವರಕ್ಕೆ ಹೋಗುತ್ತವೆ. ಸುಮಾರು ೨೦ ತಾಸುಗಳ ಪಯಣ. ಚೆನ್ನೈ - ಕೊಲ್ಕತ್ತಾ ರಾಷ್ಟ್ರೀಯ ಹೆದ್ದಾರಿ ನಂ. ೫ ವಾಜಪೇಯಿಯ ಸುವರ್ಣ ಚತುರ್ಭುಜದ ಪ್ರಥಮ ಭಾಗ ಉತ್ತಮ ರಸ್ತೆಯಾಗಿದೆ. ರಸ್ತೆಯ ದೂರ ಸುಮಾರು ೧೨೫೦ ಕಿ.ಮೀ.
ಭುಬನೇಶ್ವರ ಒರಿಸ್ಸಾದ ರಾಜಧಾನಿ. ನಮ್ಮ ಮಂಗಳೂರಿಗಿಂತ ಸ್ವಲ್ಪ ದೊಡ್ಡದಾಗಿದೆ, ಸುಮಾರು ಮೈಸೂರಿನಷ್ಟಾಗಬಹುದು. ಒರಿಸ್ಸಾ ರಾಜ್ಯದ ಹೆಸರು ಕೇಳಿದ ತಕ್ಷಣ ನೆನಪಿನಲ್ಲಿ ಬರುವುದು ಪುರಿ, ಕೊನಾರ್ಕ ದೇವಾಲಯಗಳು, ಚಿಲ್ಕಾ ಸರೋವರ, ಪೂರ್ವ ಸಮುದ್ರದ ದಂಡೆಗಳು, ಸಂಭಾಲ್ಪುರ ಕೈಮಗ್ಗದ ವಸ್ತ್ರ, ಖನಿಜದ ಅದಿರುಗಳು, ಉತ್ತಮ ಅಕ್ಕಿ-ಭತ್ತ, ಮಹಾನದಿ, ಇತ್ಯಾದಿ. ಇವೆಲ್ಲಾ ಇದ್ದರೂ ರಾಜ್ಯ ಹಿಂದುಳಿದ ರಾಜ್ಯ, ಜನರು ಶಾಂತಿ ಪ್ರಿಯರು ಮತ್ತು ಆಲಸಿಗಳು.


ಅಧಿಕಾಂಶ ಜನರು ಮೀನು ತಿನ್ನುವವರಾದರೂ ಅವರು ಇತರ ಮಾಂಸ ತಿನ್ನಲಾರರು. ಮದ್ಯವ್ಯಸನಿಗಳೂ ಕಡಿಮೆ. ಭತ್ತ, ತರಕಾರಿ, ಮಾವು, ಬಾಳೆ ಮುಂತದವು ರಾಜ್ಯದಲ್ಲಿ ಸಾಕಷ್ಟಿದೆ. ವಾಣಿಜ್ಯ ಕೃಷಿ ಬೆಳೆಗಳು, ಉದ್ದಿಮೆಗಳು ರಾಜ್ಯದಲ್ಲಿ ಕಡಿಮೆ.

ಭುಬನೇಶ್ವರದಲ್ಲಿ ಉದ್ಯಾನ ಸಸ್ಯಗಳ ಸಂಶೋಧನಾ ಸಂಸ್ಥೆ, ರತ್ನಗಳು ಮುಂತಾದವು ಲಭಿಸುತ್ತವೆ. ಭುಬನೇಶ್ವರದಲ್ಲಿ ಉಳಕೊಂಡರೆ ಒಂದು ದಿನ ಪುರಿ, ಕೊನಾರ್ಕ, ಎರಡನೆಯ ದಿನ ಚಿಲ್ಕಾ ಸರೋವರ, ಮೂರನೆಯ ದಿನ ಕಟಕ್, ಢೇಂಕನಾಲ್ - ಕಪಿಲಾಶ ಮುಂತಾದ ಪ್ರವಾಸೀ ತಾಣಗಳನ್ನೂ, ಒಂದು ದಿನ ಭುಬನೇಶ್ವರ ಪಟ್ಟಣವನ್ನೂ ಸುತ್ತಾಡಬಹುದು. ಭುಬನೇಶ್ವರದಿಂದ ಪುರಿಗೆ ಒಂದೂವರೆಯಿಂದ ಎರಡು ತಾಸು ದಾರಿ. ಸಾಕಷ್ಟು ಸೆಮಿ-ಡಿಲಕ್ಸ್ ಬಸ್ಸುಗಳು, ಮಿನಿ ಬಸ್ಸುಗಳಿವೆ. ಪುರಿ ಜಗನ್ನಾಥನ ದೇವಾಲಯ ಪುಣ್ಯ ಸ್ಥಳ ಹಾಗೂ ಐತಿಹಾಸಿಕ. ಬೆಳಗ್ಗೆ ಹಾಗೂ ಅಪರಾಹ್ನ ದೇವರ ಬಿಂಬದ ಅತೀ ಸಮೀಪಕ್ಕೆ ಹೋಗುವ ಅವಕಾಶವಿದೆ. ಪ್ರಸಾದಗಳೂ ಕ್ಷೇತ್ರದ ಅಂಗಣದಲ್ಲೇ ಸಿಗುತ್ತದೆ. ನೂರು ರುಪಾಯಿಗೆ ಎಲ್ಲಾ ಪ್ರಸಾದಗಳು ಲಭ್ಯ. ಪುರಿಯಿಂದ ಒಂದು ತಾಸು ದಾರಿ ಕೊನಾರ್ಕಕ್ಕೆ. ಕೊನಾರ್ಕದ ಸೂರ್ಯ ದೇವಾಲಯ ಜಗತ್ಪ್ರಸಿದ್ಧ ಪ್ರವಾಸೀ ಆಕರ್ಷಣೆಯ ದೇವಾಲಯ. ಪುರಿ, ಕೊನಾರ್ಕಗಳಲ್ಲಿ ಸಮುದ್ರ ತಟಗಳೂ ಆಕರ್ಷಕವಾಗಿದ್ದು ಬಹಳಷ್ಟು ಪ್ರವಾಸಿಗಳಿಗೆ ಮನರಂಜನೆಯನ್ನು ನೀಡುತ್ತದೆ. ಪೂರ್ವ ಸಮುದ್ರದ ತಟಗಳಲ್ಲಿ ಸೂರ್ಯೋದಯ ಅತ್ಯಂತ ರಮಣೀಯ ಆದರೂ ಸಂಜೆ ಸಮುದ್ರ ತಟದಿಂದ ತಂಪು ಗಾಳಿ ಬೀಸುತ್ತದೆ. ಸೂರ್ಯೋದಯ ಐದು ಘಂಟೆಯ ಆಸುಪಾಸಿನಲ್ಲೂ ಸೂರ್ಯಾಸ್ತ ಐದೂವರೆಯ ಆಸುಪಾಸಿನಲ್ಲೂ ಆಗುತ್ತದೆ.ಸಮುದ್ರದಿಂದ ಲಭಿಸುವ ಶಂಖ, ಚಿಪ್ಪು, ಸಾಲಿಗ್ರಾಮಗಳು ಪುರಿ, ಕೊನಾರ್ಕಗಳಲ್ಲಿ ಸಿಗುತ್ತವೆ. ಕಾಡು ಉತ್ಪನ್ನಗಳಾದ ರುದ್ರಾಕ್ಷಿ, ಭದ್ರಾಕ್ಷಿ, ಹೆಡಿಗೆ - ಬುಟ್ಟಿಗಳು, ಕರಕುಶಲ ವಸ್ತುಗಳು ಕಾಣಸಿಗುತ್ತವೆ. ಭುಬನೇಶ್ವರದಿಂದ ಪುರಿಯ ಮಧ್ಯೆ ಪಿಪಿಲಿ ಎಂಬ ಸ್ಥಳದಲ್ಲಿ ಬಟ್ಟೆಗಳನ್ನು ಸೇರಿಸಿ ಹೊಲಿವ ಪಿಪಿಲಿ ಕರಕೌಶಲ್ಯದ ಹಲವಾರು ತರಾವಳಿ ವಸ್ತುಗಳು ಲಭ್ಯ. ಟೇಬಲ್ ಕ್ಲಾತ್, ಬ್ಯಾಗ್, ಪರ್ಸ್, ಕೊಡೆ, ಮ್ಯಾಟ್, ಉಯ್ಯಾಲೆ, ವಾಲ್ ಹ್ಯಾಂಗಿಂಗ್, ಇತ್ಯಾದಿ.

ನನ್ನ ಲಕ್ಷ್ಯ ಢೇಂಕನಾಲ್ ಭಾರತೀಯ ಸಮೂಹ ಸಂವಹನ ಸಂಸ್ಥೆ (ಐ.ಐ.ಎಂ.ಸಿ.) ಆಗಿದ್ದು ನನಗೆ ಅಲ್ಲಿ ಮೇ ೩ ರಿಂದ ೮ ರ ತನಕ ಸಮೂಹ ಸಂವಹನ ತರಬೇತಿ ನಡೆದಿತ್ತು. ಭುಬನೇಶ್ವರದಿಂದ ಢೇಂಕನಾಲ್ ೯೦ ಕಿ.ಮೀ. ದೂರದಲ್ಲಿದೆ. ಭುಬನೇಶ್ವರದಿಂದ ಕಟಕ್ ದಾರಿಯಾಗಿ ಹೋಗಬೇಕು. ಭುಬನೇಶ್ವರ್ ಹಾಗೂ ಕಟಕ್ ನ ಮಧ್ಯೆ ಕಾಟ್ಜೋಡಿ ನದಿಗಿಂತ ಮೊದಲು ಪಹಾಳ್ ಎಂಬೊಂದು ಸ್ಥಳವಿದೆ. ಅದು ಸಿಹಿ ತಿಂಡಿಗಳ ಗೂಡಂಗಡಿಗಳ ಸಮೂಹ. ಅಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸುಮಾರು ನೂರರಷ್ಟು ಇಂತಹ ಅಂಗಡಿಗಳಿವೆ. ಪನೀರ್, ರಸಗುಲ್ಲಾ, ಗುಲಾಬ್ ಜಾಮೂನ್, ಕೋವಾ, ಪೇಡಾ ಮುಂತಾದ ಹಾಲಿನ ಸಿಹಿ ತಿಂಡಿಗಳೇ ಹೆಚ್ಚಾಗಿ ಇಲ್ಲಿ ತಯಾರಿಸಲ್ಪಡುತ್ತವೆ.

ಕಟಕ್ ಒರಿಸ್ಸಾದ ಹಳೇ ರಾಜಧಾನಿ. ಕಟಕ್ ನ ಸಮೀಪ ರಾಷ್ಟ್ರೀಯ ಭತ್ತದ ಸಂಶೋಧನಾ ಸಂಸ್ಥೆ ಇದೆ. ಇಲ್ಲಿ ದೇಶದ ವಿವಿಧೆಡೆಗಳಿಗೆ ಅನುಕೂಲಕರ ಭತ್ತದ ತಳಿಗಳನ್ನು ಸಂಶೋಧನೆಯ ಮೂಲಕ ಬಿಡುಗಡೆಗೊಳಿಸಲಾಗಿದೆ. ಇಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಕೃಷಿಕರಿಗೆ ೨೦ ಕಿಲೋದ ಬೀಜದ ಚೀಲಗಳನ್ನು ವಿತರಿಸಲಾಗುತ್ತದೆ.

ಭುಬನೇಶ್ವರದ ಬಳಿ ಸಿಹಿನೀರಿನ ಜಲಚರಗಳ ಸಂಶೋಧನಾ ಸಂಸ್ಥೆ ಕೌಶಲ್ಯಗಂಗಾ ಎಂಬಲ್ಲಿದೆ. ಕೆರೆಗಳಲ್ಲಿ ಮೀನು, ಸಿಗಡಿ, ಮುತ್ತು ಉತ್ಪಾದನೆಯ ಹಲವಾರು ತಂತ್ರಜ್ಞಾನಗಳನ್ನು ಈ ಸಂಶೋಧನಾ ಸಂಸ್ಥೆ ಆವಿಷ್ಕರಿಸಿದೆ.

ಢೇಂಕನಾಲ್ ಜಿಲ್ಲೆಯ ಕೇಂದ್ರ ಢೇಂಕನಾಲ್ ಮುನಿಸಿಪಾಲಿಟಿ ಪಟ್ಟಣ. ಪುತ್ತೂರು ಹಾಗೂ ಸುಳ್ಯವನ್ನು ಸೇರಿಸಿದಷ್ಟಾಗಬಹುದು. ವಾಣಿಜ್ಯವಾಗಿ ಮುಂದುವರಿದ ನಗರವಲ್ಲದಿದ್ದರೂ, ಎಲ್ಲಾ ವಿಧದ ಸೌಲಭ್ಯಗಳೂ ಲಭ್ಯ. ಇಲ್ಲಿ ಸಿನರ್ಜಿ ಎಂಬ ತಂತ್ರಜ್ಞಾನ ಮಹಾವಿದ್ಯಾಲಯ, ಢೇಂಕನಾಲ್ ಗವರ್ಮೆಂಟ್ ಕಾಲೇಜ್, ಭಾರತೀಯ ಸಮೂಹ ಸಂವಹನ ಸಂಸ್ಥೆ ಮುಂತಾದ ವಿದ್ಯಾ ಸಂಸ್ಥೆಗಳೂ, ಇದ್ದು ಅಧಿಕಾಂಶ ಬೋರ್ಡ್ ಗಳೂ ಒಡಿಯಾದಲ್ಲೇ ಇವೆ. ಇಲ್ಲಿನ ಜನರಿಗೆ ಇಂಗ್ಲಿಷ್, ಹಿಂದಿಗಳು ಅಷ್ಟಾಗಿ ಅರಗಿಸಿಕೊಳ್ಳಲಾಗುವುದಿಲ್ಲ ಹಾಗೂ ಅರ್ಥವಾದರೂ ತಿರುಗಿ ಉತ್ತರ ಹೇಳಲಾರರು. ಉಳಕೊಳ್ಳಲು ಎರಡು ಉತ್ತಮ ಹೋಟೆಲುಗಳಿವೆ. ಒಂದು ಸೂರ್ಯ, ಇನ್ನೊಂದು ದೇಬಕನ್ಯಾ. ನಾನು ಉಳಕೊಂಡದ್ದು ಸೂರ್ಯದಲ್ಲಿ. ಇಡೀ ಢೇಂಕನಾಲ್ ಪಟ್ಟಣಕ್ಕೇ ಎರಡೇ ಶುದ್ಧ ಸಸ್ಯಾಹಾರಿ ಭೋಜನಶಾಲೆಗಳಿರುವುದು. ಒಂದು ಠಾಕುರ್ ರೆಸ್ಟಾರೆಂಟ್, ಇನ್ನೊಂದು ಜಾಲೂಸ್ ಫುಡ್ ಕೋರ್ಟ್.

ಢೇಂಕನಾಲ್ ಜಿಲ್ಲೆಯಲ್ಲಿ ಕಪಿಲಾಶ ಶಿವ ಕ್ಷೇತ್ರ ಹಾಗೂ ಶಿರ್ಡಿ ಸಾಯಿ ಮಂದಿರಗಳು ಮುಖ್ಯ ದೇವಾಲಯಗಳು. ಕಪಿಲಾಶ ಬೆಟ್ಟದ ತುದಿಯ ದೇವಾಲಯ. ದೇವಾಲಯದ ಸಮೀಪಕ್ಕೆ ಜೀಪಿನಲ್ಲಿ ಹೋಗಬಹುದು. ನಂತರ ಹಲವಾರು ಮೆಟ್ಟಿಲುಗಳನ್ನು ಹತ್ತಿ ಇತರ ಉಪ ಮಂದಿರಗಳಾದ ನಾಗ ಮುಂತಾದವುಗಳನ್ನು ಸಂದರ್ಶಿಸಬಹುದು. ಬೆಟ್ಟ ಹತ್ತುವಾಗ ಸುತ್ತುಮುತ್ತಲಿನ ಪ್ರಕೃತಿ ರಮಣೀಯ ಬಯಲುಗಳನ್ನು ಆಸ್ವಾದಿಸಬಹುದು. ಕಪಿಲಾಶದ ತಪ್ಪಲಿನಲ್ಲಿ ವಿಜ್ಞಾನ ವಸ್ತು ಸಂಗ್ರಹಾಲಯವಿದೆ. ಇದು ವಿದ್ಯಾರ್ಥಿಗಳಿಗೆ ಉಪಯುಕ್ತ ಜಾಗವಾಗಿದೆ.

ಢೇಂಕನಾಲ್ ಮತ್ತು ಕಪಿಲಾಶದ ಮಧ್ಯೆ ಶಿರ್ಡಿ ಸಾಯಿ ಮಂದಿರ ಆಧುನಿಕ ಹಾಗೂ ಸ್ವಚ್ಚ ಮತ್ತು ಶಾಂತವಾದುದು. ಅಲ್ಲಿ ಆಲದಮರವೊಂದಿದೆ. ಅದಕ್ಕೆ ತುಂಬಾ ಕೆಂಪು ರಿಬ್ಬನ್ ಗಳನ್ನು ಕಟ್ಟಿರುವುದನ್ನು ಕಾಣಬಹುದು. ಇಷ್ಟಾರ್ಥ ಸಿದ್ಧಿಗೋಸ್ಕರ ಭಕ್ತರು ಈ ರೀತಿ ಮಾಡುತ್ತಾರೆ. ಇಲ್ಲಿ ಮಡಕೆಯಲ್ಲಿ ನೈವೇದ್ಯ ಮಾಡಲಾಗುತ್ತದೆ ಹಾಗೂ ಪ್ರತೀ ದಿನ ಬೇರೆ ಬೇರೆ ಮಡಕೆಗಳನ್ನು ಬಳಸಲಾಗುತ್ತದೆ.

ಬೇಸಿಗೆಯಲ್ಲಿ ಸೂರ್ಯಾಸ್ತದ ಸಮಯ ಢೇಂಕನಾಲ್ ನಲ್ಲಿ ಬಿರುಸಿನ ತಂಪುಗಾಳಿ ಬೀಸುತ್ತದೆ. ಮಧ್ಯಾಹ್ನ ಅತೀ ಉಷ್ಣ ಇರುವುದರಿಂದ ಇಲ್ಲಿನ ಕಚೇರಿಗಳು ಬೆಳಗ್ಗೆ ೭ ಘಂಟೆಗೇ ತೆರೆದು ಮಧ್ಯಾಹ್ನದ ತನಕವಷ್ಟೇ ಕಾರ್ಯಾಚರಿಸುತ್ತವೆ. ಅಂಗಡಿಗಳಲ್ಲೂ ಬೀದಿಗಳಲ್ಲೂ ಮಧ್ಯಾಹ್ನ ಜನರನ್ನು ಕಾಣುವುದಿಲ್ಲ. ಹಲವಾರು ಜನ ಮಧ್ಯಾಹ್ನ ನಿದ್ರಿಸುತ್ತಾರೆ. ಸಾಯಂಕಾಲದಿಂದ ರಾತ್ರಿಯ ವರೆಗೆ ಅಂಗಡಿಗಳಲ್ಲಿ ಜನಸಂದಣಿ ಕಾಣುತ್ತದೆ.

ಸಂಭಾಲ್ಪುರದ ಕೈಮಗ್ಗದ ವಸ್ತ್ರ ಮೆದು ಮತ್ತು ತೆಳುವಾದ ಅರಿವೆಯಾಗಿದ್ದು ದುಬಾರಿ ಕೂಡಾ ಆಗಿದೆ. ಸೀರೆಯ ಬೆಲೆ ೭೦೦ರಿಂದ ೭೦೦೦ರೂಗಳು. ಪಟ್ಟಣದ ಬೀದಿಗಳ ಬದಿಗಳಲ್ಲಿ ಅಣಬೆ, ಕಾಡುಮಾವುಗಳನ್ನು ಮಾರುವ ಹೆಂಗಸರನ್ನು ಕಾಣಬಹುದು. ಪಡುವಲ್ ಎಂಬ ಗಾತ್ರದಲ್ಲಿ ಮುಳ್ಳುಸೌತೆಗಿಂತ ಚಿಕ್ಕ ಹಾಗೂ ತೊಂಡೆಕಾಯಿಗಿಂತ ದೊಡ್ಡ ತರಕಾರಿ, ಚಿಕ್ಕ ಉರುಟು ಬದನೆಕಾಯಿ, ಹಲವಾರು ಗಡ್ಡೆಗೆಣಸುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಕಾಣಬಹುದು.
ಹಿಂತಿರುಗಿ ಬರುತ್ತಿದ್ದಂತೆಯೇ ಹಲವೆಡೆಗಳಲ್ಲಿ ಮೂರನೇ ಭತ್ತದ ಬೆಳೆ ಕಟಾವಾಗುತ್ತಿದ್ದುದನ್ನೂ, ಕಟಾವಾದೆಡೆಗಳಲ್ಲಿ ಆಕಳುಗಳ ಗುಂಪನ್ನು ಮೇಯಿಸುತ್ತಿರುವುದನ್ನೂ ಕಾಣಬಹುದಾಗಿತ್ತು. ಭುಬನೇಶ್ವರದಿಂದ ಚೆನ್ನೈಗೆ ವಿಮಾನದಲ್ಲು ಚೆನ್ನೈಯಿಂದ ಕಾಸರಗೋಡಿಗೆ ರೈಲಿನಲ್ಲೂ ಪ್ರಯಾಣಿಸಿ ಮನೆ ತಲಪಿದಾಗ ತರಬೇತಿಯ ಜೊತೆಗೆ ಸುಂದರವಾದ ಪ್ರವಾಸದ ಅನುಭವವೂ ನನ್ನದಾಗಿತ್ತು.
ಚಿತ್ರ - ಲೇಖನ : ಮುರಳೀ ಕೃಷ್ಣ ಹಳೆಮನೆ.

5 comments:

Anonymous said...

Hi Murali,

Wonderful aricle! We enjoyed reading it.

-Rathna

Anonymous said...

ಮುರಳಿಯವರೇ

ಅನುಭವಗಳನ್ನು ಸೊಗಸಾಗಿ ನೀವು ನಿರೂಪಿಸಿದ್ದೀರಾ. ಧನ್ಯವಾದಗಳು. ಈ ಕನಸಿಗೂ ವಂದನೆಗಳು.
ರಾಜೀವ್, ಬೆಂಗಳೂರು

shreekrishna said...

ಮಾಹಿತಿಯುಕ್ತ ಉತ್ತಮ ಲೇಖನ. ಫೋಟೋಗಳು ಲೇಖನಕ್ಕೆ ಪೂರಕವಾಗಿ ಉತ್ತಮ ಮೆರುಗನ್ನು ನೀಡಿದೆ. ಊರಿನ ಆಹಾರ, ಕಲೆ, ಸಂಸ್ಕೃತಿ ಬಗ್ಗೆ ಪರಿಚಯ ಕೊಟ್ಟಿರುವುದು ಲೇಖನಕ್ಕೆ ಇನ್ನೊಂದು ಶೋಭೆ.

Dr. Rajagopala S said...

Murali,
wonderful 'pravasa kathana', Doddamma & Prasadanna too came inbetween your writings, when you are going to come to my place and write about me and my present place?
Dr. Rajagopala S, Jamnagar, Gujarat

Anonymous said...

Hi....the article s too good......i felt like i also travelled and seen the places.

Post a Comment