ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:15 PM

ನರ್ಮದೆಯ ಅಳಲು...

Posted by ekanasu

ಸಿನೆಮಾ

ನೀವು ಈ ಸಾಕ್ಷ್ಯಚಿತ್ರವನ್ನು ನೋಡುವಷ್ಟರಲ್ಲಿ ತೆರೆಯ ಮೇಲೆ ಕಾಣುತ್ತಿರುವ ಹಳ್ಳಿ ಜಲನಮಾಧಿಯಾಗಿರುತ್ತದೆ. ಅವರು ಆಚರಿಸುತ್ತಿರುವ ಈ ಹೋಲಿ ಹಬ್ಬದ ಆಚರಣೆ ಬಹುಶಃ ಅವರ ಜೀವನದ ಕೊನೆಯ ಸಂತಸವಾಗಿರಬಹುದು...ಹಿನ್ನಲೆ ಧ್ವನಿಯನ್ನು ಕೇಳಿದ ವೀಕ್ಷಕನ ಮನದಲ್ಲಿ ಕುತೂಹಲ ಮನೆಮಾಡುತ್ತದೆ. ಅವರ ಕಥೆ ಮುಂದೇನಾಯಿತು? ಎಂಬ ಪ್ರಶ್ನೆ ಆತನನ್ನು ಕಾಡುತ್ತದೆ. ಸಾಕ್ಷ್ಯಚಿತ್ರ ಮುಂದುವರೆಯುತ್ತದೆ...ಆಕೆ ಮಾತನಾಡುತ್ತಾಳೆ...
ನಾವು ಸಂವಿಧಾನಾತ್ಮಕವಾಗಿ ಹೋರಾಡುತ್ತಿದ್ದೇವೆ.. ಈ ಆದಿವಾಸಿಗಳ ಬಳಿ ಹೋರಾಟಕ್ಕೆ ಯಾವುದೇ ಆಯುಧಗಳಿಲ್ಲ...ತಮ್ಮ ಪ್ರಾಣವನ್ನೇ ಆಯುಧವನ್ನಾಗಿಸಿ ಇವರು ಹೋರಾಡುತ್ತಿದ್ದಾರೆ...ಬದುಕುವ ಹಕ್ಕನ್ನು ಇವರಿಂದ ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಮುಗ್ಧ ಜನರ ದಾಹ ತಣಿಸುವ ನೀರನ್ನು ಸರಕಾರ ಕಿತ್ತುಕೊಂಡರೆ ಆ ನೀರು ನೀರಲ್ಲ ಬಡಜನರ ರಕ್ತವಾಗುತ್ತದೆ...ಮೇಧಾ ಪಾಟ್ಕರ್ ಪಬ್ಲಿಕ್ ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದಾರೆ. ಆಕೆಗರಿವಿಲ್ಲದಂತೆ ಆಕೆ ಕಂಠ ಗದ್ಗದಿತಗೊಳ್ಳುತ್ತಿದೆ...ಕಣ್ಣುಗಳು ಹನಿಗೂಡುತ್ತಿವೆ...ನಿಶಬ್ದವಾಗಿ ಕ್ಯಾಮರಾ ಇವೆಲ್ಲವನ್ನು ಸೆರೆ ಹಿಡಿಯುತ್ತಿದೆ.

ಹೌದು! ಇದು ಆನಂದ್ ಪಟವರ್ಧನ್ ನಿರ್ದೇಶನದ 'ನರ್ಮದಾ ಡೈರಿ' ಸಾಕ್ಷ್ಯಚಿತ್ರ. 1985ರಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಭಾರತ ಸರಕಾರ ಕೈಗೊಂಡಿದ್ದ ಬೃಹತ್ 'ಸರ್ದಾರ್ ಸರೋವರ್' ಯೋಜನೆ ಹಾಗೂ ಅದಕ್ಕೆ ವಿರುದ್ಧವಾಗಿ ರೂಪುಗೊಂಡ ನರ್ಮದಾ ಬಚಾವೋ ಆಂದೋಲನಗಳೇ ಈ ಚಿತ್ರದ ಕಥಾವಸ್ತು. ಐದು ವರುಷಗಳ ಕಾಲ ಸತತವಾಗಿ ನರ್ಮದೆಯ ತಪ್ಪಲಲ್ಲಿ ವಾಸಿಸುವ ಆದಿವಾಸಿಗಳ ಜೀವನ, ಸಮಸ್ಯೆಗಳು, ಆಂದೋಲನದ ಚಟುವಟಿಕೆಗಳು ಹಾಗೂ ಸರಕಾರದ ಪ್ರತಿಕ್ರಿಯೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಬಳಿಕ ಪಟವರ್ಧನ್ ಅದಕ್ಕೆ ಸಾಕ್ಷ್ಯಚಿತ್ರದ ರೂಪುಕೊಟ್ಟರು.

ಅಭಿವೃದ್ಧಿಯ ಹೆಸರಲ್ಲಿ ಬಡಜನರ ಜೀವಜಲವನ್ನು ಕಸಿದುಕೊಂಡು ಪಟ್ಟಣಗಳಿಗೆ ಬೆಳಕನ್ನು ಕೊಡುವ ಸರಕಾರದ ಬಹುಕೋಟಿ ಯೋಜನೆ ಈ ಸರ್ದಾರ್ ಸರೋವರ್. ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲ್ಪಡುವ ಈ ಡ್ಯಾಮ್ನಿಂದಾಗಿ ಆಸುಪಾಸಿನ ಸುಮಾರು 87 ಹಳ್ಳಿಗಳು ಮುಳುಗಡೆಗೊಂಡು ಅಲ್ಲಿನ ಸಾಂಪ್ರದಾಯಿಕ ಆದಿವಾಸಿ ಸಮುದಾಯ ನಶಿಸಿ ಹೋಗುವ ಭೀತಿಯಿತ್ತು... ಅದೆಷ್ಟೋ ಲಕ್ಷ ಜನರು ನಿರ್ವಸಿತರಾಗುವ ಭಯವಿತ್ತು...ನಾವಿರಾರು ಎಕರೆ ಕೃಷಿಭೂಮಿ ಕಣ್ಮರೆಯಾಗುವ ಸಾಧ್ಯತೆಯಿತ್ತು. ಕೃಷಿಯನ್ನೇ ನಂಬಿ, ಪ್ರಕೃತಿಗೆ ಆಪ್ತರಾಗಿ ಜೀವಿಸುತ್ತಿದ್ದ ಆದಿವಾಸಿಗಳು ಪಟ್ಟಣಕ್ಕೆ ಹೋಗಿ ನೆಲೆಸುವ ಕಲ್ಪನೆಯನ್ನೂ ಮಾಡದ ಸ್ಥಿತಿ ಎದುರಾಯಿತು. ಆಗ ಆದಿವಾಸಿಗಳ ಪರ ಹೋರಾಟದ ನೇತೃತ್ವವನ್ನು ವಹಿಸಿದವರು ಮೇಧಾ ಪಾಟ್ಕರ್. ಮಹಾರಾಷ್ಟ್ರದ ಮಣಿಬೇಲಿ ಎಂಬ ಪುಟ್ಟ ಹಳ್ಳಿಯೊಂದರಿಂದ ಪ್ರಾರಂಭವಾದ ನರ್ಮದಾ ಬಚಾವೋ ಆಂದೋಲನ ಮುಂದೆ ರಾಷ್ಟ್ರ ಮಟ್ಟದಲ್ಲಿ ಸಂಚಲನವನ್ನು ಮೂಡಿಸಿತು.

ನರ್ಮದಾ ನದಿ ಆ ಆದಿವಾಸಿಗಳ ಜೀವಾಳ...ಅವರ ನರನಾಡಿಗಳಲ್ಲಿ ಆಕೆ ಹರಿಯುತ್ತಿದ್ದಾಳೆ..ಆ ನದಿಯಿಂದಲೇ ಅವರ ಜೀವನದ ಆರಂಭ ಮತ್ತು ಅಂತ್ಯ. ಆಕೆಯನ್ನು ಕಳೆದುಕೊಳ್ಳುವುದೆಂದರೆ ಅವರಿಗೆ ತಾಯಿಯನ್ನು ಕಳೆದುಕೊಂಡಂತೆ...ದೊಡ್ಡ ಪಟ್ಟಣಗಳ ಸರಕಾರೀ ಕಛೇರಿಗಳಲ್ಲಿ ಕುಳಿತು ಅಧಿಕಾರ ಚಲಾಯಿಸುವವರಿಗೆ ಆ ಮುಗ್ಧ ಜನರ ಭಾವನೆಗಳು ಹಾಗೂ ಪ್ರಕೃತಿ ಜತೆಗಿನ ಅವರ ಬೆಸುಗೆ ಕಲ್ಪನೆಗೂ ನಿಲುಕದ್ದು.
ಒಂದೆಡೆ ಮೂಲಭೂತ ಸೌಕರ್ಯಗಳಿಂದ ವಂಚಿತ ಆದಿವಾಸಿಗಳು...ಮತ್ತೊಂದೆಡೆ ಶೋಕಿ ಜೀವನ ನಡೆಸುವ ಪಟ್ಟಣ ವಾಸಿಗಳು..ಇನ್ನೊಂದೆಡೆ ಕೃಷಿಯೇ ಬೆನ್ನೆಲುಬಾಗಿರುವ ಆದಿವಾಸಿಗಳಿಂದ ನೆಲೆಜಲವನ್ನು ಕಿತ್ತುಕೊಂಡು ಪಟ್ಟಣದ ಶೋಕೀ ಜೀವನಕ್ಕೆ ಇಲೆಕ್ಟ್ರಿಸಿಟಿ ಕೊಡುವ ಯೋಜನೆ ಹಮ್ಮಿಕೊಂಡಿರುವ ಬುದ್ಧಿಹೀನ ಸರಕಾರ...ಇವಿಷ್ಟರ ಸುತ್ತ ಗಿರಕಿ ಹೊಡೆಯುವ ನರ್ಮದಾ ಡೈರಿ ವಾಸ್ತವಿಕತೆಗೆ ಹಿಡಿದ ಕನ್ನಡಿ. ಇಲೆಕ್ಟ್ರಿಸಿಟಿ ಈಸ್ ದಿ ಪವರ್...ಇಲೆಕ್ಟ್ರಿಸಿಟಿ ಈಸ್ ದಿ ಲೈಟ್ ಇದು ಸರ್ದಾರ್ ಸರೋವರ್ ಯೋಜನೆಯ ಕುರಿತಾದ ಸರಕಾರದ ಉದ್ಘೋಷಣೆ. ಆದರೆ ಬಡ ಆದಿವಾಸಿಗಳ ದಾಹ ತಣಿಸುವ ನೀರನ್ನು ಕಿತ್ತುಕೊಂಡು ತಂದ ಈ ಬೆಳಕು ಬೆಳಕಲ್ಲ ಕತ್ತಲೆ ಎನ್ನುತ್ತದೆ ಸಾಕ್ಷ್ಯಚಿತ್ರ. ಸಾಕ್ಷ್ಯಚಿತ್ರದುದ್ದಕ್ಕೂ ಹೋರಾಟ, ಪ್ರತಿಭಟನೆ, ನೋವು, ಹತಾಶೆ, ಛಲಗಳಿವೆ. ಮೊದಮೊದಲು ಚಿತ್ರ ವೀಕ್ಷಕನನ್ನು ಬೋರ್ ಹೊಡೆಸಿದರೂ ವಿಷಯದ ಸಂಪೂರ್ಣ ಗ್ರಹಿಕೆಯಾದ ಬಳಿಕ ವೀಕ್ಷಕ ಅಲ್ಲಿನ ಪಾತ್ರಗಳ ಜತೆಗೆ ಬೆರೆತು ಬಿಡುತ್ತಾನೆ. ಚಿತ್ರ ನಿಧಾನವಾಗಿ ಸಮಾಜದ ವಾಸ್ತವತೆಗಳನ್ನು ಆತನಿಗೆ ಪರಿಚಯಿಸುತ್ತಾ ಹೋಗುತ್ತದೆ.

ಸಾಕ್ಷ್ಯಚಿತ್ರದುದ್ದಕ್ಕೂ ಸರಕಾರೀ ಅಧಿಕಾರಿಗಳು ಯೋಜನೆಯ ಕುರಿತಾಗಿ ಹೇಳುವ ಹೇಳಿಕೆಗಳು ಸರಕಾರದ ಬಗ್ಗೆ ಹೇಸಿಗೆ ಹುಟ್ಟಿಸುವಂತಿದೆ. ದೇಶ ಅಭಿವೃದ್ಧಿಯಾಗಬೇಕಿದ್ದರೆ ಆದಿವಾಸಿಗಳು ಸಣ್ಣ ತ್ಯಾಗವನ್ನು ಮಾಡಲೇಬೇಕು...ಅದು ಅವರ ಕರ್ತವ್ಯವೆಂದು ತನ್ನ ಬಹು ಅಂತಸ್ಸಿನ ಬಂಗಲೆಯಲ್ಲಿ ಕೂತು ಚಿಕ್ಕ ಅಂತರ್ಯದಿಂದ ಮಾತನಾಡುವ ಬರೋಡಾ ಕಾಂಗ್ರಸ್ ಆಗಿನ ಮುಖ್ಯಸ್ಥರಾ ಅಶ್ವಿನ್ ಶಾ ಅಧಿಕಾರಿಯಾಗಿ ಶೋಷಿತರನ್ನು ರಕ್ಷಿಸುವ ತನ್ನ ಕರ್ತವ್ಯವನ್ನು ಸಂಪೂರ್ಣವಾಗಿ ಮರೆಂತಂತಿದೆ....ಹೆಣ್ಮಗಳು ಮದುವೆಯಾಗಿ ಗಂಡನ ಮನೆ ಸೇರುವಾಗ ಹೆತ್ತವರು ಕಣ್ಣೀರು ಹಾಕುವಂತೆ ಆದಿವಾಸಿಗಳೂ ತಮ್ಮ ಮನೆಮಠ ಬಿಟ್ಟು ತೊಲಗಲು ದುಃಖಿಸುತ್ತಿದ್ದಾರೆ...ಇದು ಪ್ರಕೃತಿ ನಿಯಮ ... ಎಂದು ಪ್ರೋ ಡ್ಯಾಮ್ ಆಕ್ಟಿವಿಷ್ಟ್ ಚುನ್ನಿಬಾಲಾ ವೈಧ್ಯ ಹೇಳಿಕೆ ನೀಡುತ್ತಿದ್ದರೆ ಎಂತಹವರೂ ಅವರ ಸ್ವಾರ್ಥಪರ ಸಮರ್ಥನೆಗೆ ಅಸಹ್ಯ ಪಟ್ಟುಕೊಳ್ಳಬೇಕು.

ಅಂತೂ ಸರಕಾರ ತನ್ನ ಛಲವನ್ನು ತೀರಿಸಿಯೇ ಬಿಟ್ಟಿತು. ಆದಿವಾಸಿಗಳ ವಿರೋಧದ ನಡುವೆ ಸರ್ದಾರ್ ಸರೋವರ್ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಇತ್ತ ಆಂದೋಲನದ ಹೋರಾಟ ಮುಂದುವರೆಯಿತು...ಮೇಧಾ ತನ್ನ ಜೀವದ ಹಂಗನ್ನು ತೊರೆದು ಆದಿವಾಸಿಗಳ ಹಕ್ಕನ್ನು ದೊರಕಿಸುವಲ್ಲಿ ಸರಕಾರದೊಡನೆ ಹೋರಾಡಿದರು... ಯೋಜನೆಗೆ ವಲ್ಡ್ ಬ್ಯಾಂಕ್ ಆರ್ಥಿಕ ನೆರವು ದೊರಕಿತು. ಡ್ಯಾಮ್ ಕಾರ್ಯ ಇನ್ನೂ ಕ್ಷಿಪ್ರ ಗತಿಯಲ್ಲಿ ಸಾಗತೊಡಗಿತು. ಆದಿವಾಸಿಗಳು ಕಂಗಾಲಾದರು.. ಮೇಧಾ ಅವರಲ್ಲಿ ಧೈರ್ಯ ತುಂಬಿದರು. 1993ರಲ್ಲಿ ಡ್ಯಾಮ್ 61 ಅಡಿ ಎತ್ತರಕ್ಕೇರಿತು. ಹಲವಾರು ಹಳ್ಳಿಗಳು ಮುಳುಗಿದವು. ಆದಿವಾಸಿಗಳು ಸರಿಯಾದ ಪುರ್ನವಸತಿಯಿಲ್ಲದೆ ನಿರ್ಗತಿಕರಾದರು. ಇನ್ನು ಕೆಲವು ಕುಟುಂಬಗಳು ಬೀದಿಪಾಲಾಗುವುದಕ್ಕಿಂತ ನರ್ಮದೆಯ ಮಡಿಲಲ್ಲೇ ಕೊನೆಯುಸಿರೆಳೆಯುವುದು ಲೇಸೆಂದು ಮುಳುಗಡೆಯನ್ನು ಲೆಕ್ಕಿಸದೇ ಅಲ್ಲೇ ಉಳಿದವು.

ಇತ್ತ ನರ್ಮದಾ ಬಚಾವೋ ಆಂದೋಲನದ ಹೋರಾಟ ಗಂಭೀರವಾಯಿತು. ಅದೇ ಸಮಯಕ್ಕೆ ವಲ್ಡ್ ಬ್ಯಾಂಕ್ ಅಧಿಕಾರಿ ಪ್ರೆಟ್ಸನ್ ಭಾರತಕ್ಕೆ ಆಗಮಿಸಿದರು. ಯೋಜನೆಗೆ ಧನಸಹಾಯ ನೀಡಿ ಪ್ರೋತ್ಸಾಹಿಸುತ್ತಿರುವ ಆತನನ್ನು ತಡೆದರೆ ಡ್ಯಾಮ್ ನಿರ್ಮಾಣ ನಿಲ್ಲಬಹುದೆಂಬ ಆಸೆಯಲ್ಲಿ ಆದಿವಾಸಿಗಳು ಆತನನ್ನು ಭೇಟಿ ಮಾಡಲು ನಿರ್ಧರಿಸಿದರು. ಹಿ ಈಸ್ ಬ್ಯುಸಿ...ಹಿ ಹ್ಯಾಸ್ ನೋ ಟೈಮ್ ಟು ಮೀಟ್ ಯು ...ಇದು ಹಳ್ಳಿಯಿಂದ ನೂರಾರು ಮೈಲಿ ಕ್ರಮಿಸಿ ಆತನನ್ನು ಕಾಣಲು ಬಂದ ಆದಿವಾಸಿಗಳಿಗೆ ಹೋಟೇಲ್ ಅಧಿಕಾರಿಗಳಿಂದ ಸಿಕ್ಕ ಉತ್ತರ. ಬ್ಯಸಿ ಎಂದು ಹೇಳಿ ಕಳುಹಿಸಿದ್ದ ಪ್ರೆಟ್ಸನ್ ಹೋಟೇಲ್ ಒಳಗೆ ಫ್ಯಾಷéನ್ ಶೋ ವೊಂದರಲ್ಲಿ ತಲ್ಲೀನರಾಗಿದ್ದರು...ಹೊರಗೆ ಭೇಟಿ ಮಾಡಲು ಬಂದ ಆದಿವಾಸಿಗಳ ಮೇಲೆ ಪೋಲೀಸ್ ಲಾಟಿ ಚಾರ್ಜ್ ಮಾಡುತ್ತಿತ್ತು...ಕ್ಯಾಮರಾ ಇವೆಲ್ಲವನ್ನೂ ಸದ್ದಿಲ್ಲದೇ ಶೂಟ್ ಮಾಡುತ್ತಿತ್ತು.

ಸಾಕ್ಷ್ಯ ಚಿತ್ರ ಕೊನೆಮುಟ್ಟುತ್ತಿದ್ದಂತೇ ವೀಕ್ಷಕನಿಗೆ ವಾಸ್ತವದ ಸಂಪೂರ್ಣ ಅರಿವಾಗುತ್ತದೆ. ಸಮಾಜದ ಎರಡು ಮುಖಗಳ ದರ್ಶನವಾಗುತ್ತದೆ. ಒಂದು ಮಾನವೀಯತೆ ತುಂಬಿದ ಮುಗ್ಧ ಮುಖ...ಮತ್ತೊಂದು ಕ್ರೌರ್ಯ ತುಂಬಿದ ಸ್ವಾರ್ಥ ಮುಖ. ಮನೆ-ಮಠಗಳನ್ನು ಕಳೆದುಕೊಂಡು ನ್ಯಾಯಕ್ಕಾಗಿ ಬೀದಿಗಿಳಿದ ಆದಿವಾಸಿಗಳಿಗೆ ಸರಕಾರ ಶಾಂತಿ ಮಂತ್ರವನ್ನು ಬೋಧಿಸಲು ಪ್ರುಯತ್ನಿಸುತ್ತದೆ. ತಮ್ಮ ಮನೆಗೆ ಬೆಂಕಿ ಬಿದ್ದಾಗ ಇದೇ ಶಾಂತಿ ತಮ್ಮ ಮುಖದಲ್ಲಿರುತ್ತದೆಯೇ...? ಎಂಬ ಆದಿವಾಸಿಗಳ ಪ್ರಶ್ನೆಗೆ ಅಧಿಕಾರಿಗಳು ಮೂಕರಾಗುತ್ತಾರೆ.

ಡ್ಯಾಮ್ ಎತ್ತರಕ್ಕೇರುತ್ತಿದ್ದಂತೇ ಹಳ್ಳಿಗಳು ಮುಳುಗತೊಡಗಿದವು...ಮೇಧಾ ಉಪವಾಸ ಸತ್ಯಾಗೃಹಕ್ಕಿಳಿದರು...ಸರಕಾರ ಮಣಿಯಲಿಲ್ಲ. ಉಪವಾಸದ 13ನೇ ದಿನ ಮೇಧಾ ಆಸ್ಪತ್ರೆಗೆ ದಾಖಲಾದರು. ಮೇಧಾ ಸಾವಿನಿಂದ ಸರಕಾರಕ್ಕೆ ಎದುರಾಗಬಹುದಾದ ಅನಾಹುತವನ್ನು ಊಹಿಸಿ ಸರ್ದಾರ್ ಸರೋವರ್ ಯೋಜನೆಯ ಮರು ಪರಿಶೀಲನೆಗೆ ಆಶ್ವಾಸನೆ ನೀಡಲಾಯಿತು. ಈ ನಡುವೆ ವಲ್ಡ್ ಬ್ಯಾಂಕ್ ತನ್ನ ಧನಸಹಾಯವನ್ನು ಹಿಂತೆಗೆಯಿತು. ಆದಿವಾಸಿಗಳ ಹೋರಾಟಕ್ಕೆ ಮೊದಲ ಜಯ ಲಭಿಸಿತು.

ಬಿಜಲೀ ಕೊ ಖಾ ಪಿಯಾ ನಹೀ ಜಾಥಾ ...ಎಂಬ ಆಂದೋಲನದ ಹಾಡು ಸಾಕ್ಯಚಿತ್ರದಲ್ಲಿ ಅಲ್ಲಲ್ಲಿ ಕೇಳಿ ಬರುತ್ತದೆ.. ಆದಿವಾಸಿಗಳ ಜೀವನವನ್ನು ಬಿಂಬಿಸು ಜನಪದ ಹಾಡುಗಳ ಬಳಕೆ ಚಿತ್ರವನ್ನು ಪರಿಣಾಮಕಾರಿಯನ್ನಾಗಿಸಿದೆ . ಚಿತ್ರದುದ್ದಕ್ಕೂ ಆದಿವಾಸಿಗಳ ಜೀವನ ಶೈಲಿ, ಕಲೆ-ಸಂಸ್ಕೃತಿ ಹಾಗೂ ಆದುನಿಕತೆಯಿಂದ ಅದಕ್ಕಾದ ಪರಿಣಾಮವನ್ನು ಅರ್ಥಯುತವಾಗಿ ಚಿತ್ರಿಸಲಾಗಿದೆ. ನರ್ಮದೆಗಾಗಿ ಮಡಿದ ನನ್ನ ಮಗ ಯಾವತ್ತೂ ಅಮರ....ಹೋರಾಟದಲ್ಲಿ ಮಗನನ್ನು ಕಳೆದುಕೊಂಡ ತಂದೆಯ ಈ ಮಾತುಗಳನ್ನು ಕೇಳಿದಾಗ ಅಭಿವೃದ್ಧಿಗಾಗಿ ಸರಕಾರ ಇಷ್ಟೊಂದು ಅಮಾನವೀಯವಾಗಬೇಕೇ? ಎಂಬ ಪ್ರಶ್ನೆ ಎದುರಾಗುತ್ತದೆ.

ನರ್ಮದಾ ಬಚಾವೋ ಆಂದೋಲನದ ಸತತ ಹೋರಾಟದ ಫಲವಾಗಿ ಇಂದು ಡ್ಯಾಮ್ ನಿರ್ಮಾಣವನ್ನು 80 ಅಡಿಗೆ ತಂದು ನಿಲ್ಲಿಸಲಾಗಿದೆ. ಪುರ್ನ ಪರಿಶೀಲನೆಗಾಗಿ ರಿವ್ಯೂ ಪಾನೆಲ್ ನ್ನು ನೇಮಿಸಲಾಗಿದೆ. ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ... ಹೋರಾಟ ನಡೆಯುತ್ತಿದೆ...ಮುಂದೇನಾಗುತ್ತದೆ ಎಂಬ ಕಾತರ ಎಲ್ಲರಲ್ಲೂ ಇದೆ...ಸರಕಾರ ಡ್ಯಾಮನ್ನು ಏರಿಸಿದ್ದಲ್ಲಿ ಇನ್ನಷ್ಟು ಹಳ್ಳಿಗಳು ಮುಳುಗುತ್ತವೆ...ಇನ್ನಷ್ಟು ಮುಗ್ಧ ಜನರು ಬೀದಿ ಪಾಲಾಗುತ್ತಾರೆ.

1995ರಲ್ಲಿ ಬಿಡುಗಡೆಗೊಂಡ 57 ನಿಮಿಷಗಳ ನರ್ಮದಾ ಡೈರಿ ಪ್ರತಿಷ್ಟಿತ ಫಿಲಂ ಫೇರ್ ಪ್ರಶಸ್ತಿಯನ್ನು ತನ್ನದಾಗಿಸಿದೆ. ಆನಂದ್ ಪಟವರ್ಧನ್ರ ಇತರ ಸಾಕ್ಷ್ಯಚಿತ್ರಗಳಂತೆ ಇದೂ ಸಾಮಾಜಿಕ ಕಳಕಳಿಯುಳ್ಳ ಸಾಕ್ಷ್ಯಚಿತ್ರ. ಇಫೆಕ್ಟಿವ್ ಶಾಟ್ಗಳಿಂದ ವಿಷಯವನ್ನು ವೀಕ್ಷಕನ ಮನನಾಟುವಂತೆ ತಿಳಿಸುವ ಪಟವರ್ಧನ್ರ ಸಿನೆಮಾಟಿಕ್ ಶೈಲಿ ಇಲ್ಲೂ ಮುಂದುವರಿದಿದೆ. ನರ್ಮದಾ ಡೈರಿ ಕಥೆಯಲ್ಲ ವಾಸ್ತವ...ಗ್ಲಾಮರ್ ಚಿತ್ರಗಳ ನಡುವೆ ಇಂತಹ ಅಪರೂಪದ ವಾಸ್ತವಿಕ ಚಿತ್ರ ಹೆಚ್ಚಿನ ನೋಡುಗರನ್ನು ಆಕರ್ಷಿಸಲಾರದು. ಸಮಸ್ಯೆಗಳಿಂದಲೇ ತುಂಬಿ ತುಳುಕಾಡುತ್ತಿರುವ ಈ ಚಿತ್ರ ಮನರಂಜನೆಯನ್ನೂ ನೀಡಲಾರದು. ಆದರೆ ಇದು ನೀಡಿದ ವಾಸ್ತವ ಜಗತ್ತಿನ ನೈಜ ಅನುಭವ ಬೇರೆಲ್ಲೂ ಸಿಗಲಾರದು...ಇದು ನರ್ಮದೆಯ ಮಕ್ಕಳ ಹೋರಾಟಕ್ಕೆ ಸಂದ ನಿಜವಾದ ಗೌರವ.
ಅಕ್ಷತಾ ಭಟ್ ಸಿ.ಎಚ್.

2 comments:

BENAKA..ADKATHIMAR said...

ಬಹಳ ಒಳ್ಲೆ ಲೇಖನ ಆದಿವಾಸಿಗಳ ಜೀವನ ಹಸನಾಗಲಿ ಎಂದು ಹಾರೈಸುತ್ತೇನೆ..

Mahesha said...

i like very much your updation,

thanking u
by mahesh

Post a Comment