ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ಲೇಖನ

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಗುಲಬರ್ಗಾ ಜಿಲ್ಲೆಯಲ್ಲಿ 2001 ರ ಜನಗಣತಿಯ ಪ್ರಕಾರ 35382 ಪುರುಷರು ಮತ್ತು 25275 ಮಹಿಳೆಯರು ಸೇರಿದಂತೆ ಒಟ್ಟು 60557 ಅಂಗವಿಕಲರಿದ್ದಾರೆ. ವಿವಿಧ ಅಂಗವಿಕಲರ ವಿವರ ಇಂತಿದ್ದು, ಕಂಸಿನಲ್ಲಿ ಮಹಿಳಾ ಅಂಗವಿಕಲರ ಸಂಖ್ಯೆ ತೋರಿಸಲಾಗಿದೆ. ದೈಹಿಕ ಅಂಗವಿಕಲತೆ-12243 (7120), ಅಂಧರು-15926(12305), ಕಿವುಡರು ಮತ್ತು ಮೂಗರು-4563(3862), ಬುದ್ಧಿಮಾಂಧ್ಯರು-2650(1988). ಜಿಲ್ಲೆಯಲ್ಲಿ 2009-10ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳ ವಿವರವೇ ಈ ಲೇಖನ.ಶಿಷ್ಯವೇತನ:
ಎಲ್ಲ ತರಹದ ಅಂಗವಿಕಲತೆಯನ್ನು ಹೊಂದಿರುವ ಹಾಗೂ ವಿವಿಧ ಶಾಲಾ ಕಾಲೇಜುಗಳಲ್ಲಿ ಒಂದರಿಂದ ಹತ್ತನೇ ತರಗತಿ, ಸ್ನಾತಕೋತ್ತರ ತರಗತಿ, ವಿವಿಧ ವೃತ್ತಿಪರ ತರಬೇತಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಶೇ. 40 ರಷ್ಟು ಅಂಕ ಗಳಿಸಿದ ಅಂಗವಿಕಲ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಮಾಡಲಾಗುವುದು. ಗುಲಬರ್ಗಾ ಜಿಲ್ಲೆಯಲ್ಲಿ ಕಳೆದ ವರ್ಷ 369 ಅಂಗವಿಕಲ ವಿದ್ಯಾರ್ಥಿಗಳಿಗೆ 4.15 ಲಕ್ಷ ರೂ. ಶಿಷ್ಯವೇತನ ಮಂಜೂರು ಮಾಡಲಾಗಿದೆ. ಇವರಲ್ಲಿ 151 ಹೆಣ್ಣುಮಕ್ಕಳು ಹಾಗೂ 218 ಗಂಡುಮಕ್ಕಳಿದ್ದಾರೆ.
ಪ್ರೋತ್ಸಾಹಧನ:
ಅಂಗವಿಕಲ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಹಾಗೂ ಅವರ ಶಿಕ್ಷಣಕ್ಕೆ ಪ್ರೋತ್ಸಾಹಧನ ನೀಡಲಾಗುವುದು. ವಿವಿಧ ಪಬ್ಲಿಕ್ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಶೇ. 60 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳು ಅರ್ಹರಾಗಿರುವರು. ಜಿಲ್ಲೆಯಲ್ಲಿ ಹೋದ ವರ್ಷ 16 ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ 15200 ರೂ. ಪ್ರೋತ್ಸಾಹ ಧನ ನೀಡಲಾಗಿದೆ.

ಮೆಟಾಫೋನ್ ಸೌಲಭ್ಯ:
ಅಂಗವಿಕಲ ಫಲಾನುಭವಿಗಳ ನಿವಾಸದ ಬಳಿ ಅಥವಾ ಅವರ ಪರಿಚಯಸ್ಥರ ಅಂಗಡಿ ಬಳಿ ಅತೀ ಕಡಿಮೆ ಮೌಲ್ಯದ ಮೆಟಾಫೋನ್ಗಳ ಸೌಲಭ್ಯ ಕಲ್ಪಿಸಿ ಅವರ ಸ್ವಯಂ ಉದ್ಯೋಗಕ್ಕೆ ನೆರವಾಗುವುದು ಯೋಜನೆಯ ಉದ್ದೇಶವಾಗಿದೆ. ಈಗ ನೀಡುತ್ತಿರುವ ಟೆಲಿಫೋನ್ ಬೂತ್ಗಳ ಬದಲಾಗಿ ಮೆಟಾಪೋನ್ಗಳನ್ನು ಉಚಿತವಾಗಿ ನೀಡಲಾಗುವುದು. ಇದಕ್ಕಾಗಿ 2008-09ರಲ್ಲಿ ಜಿಲ್ಲೆಗೆ 1.12 ಲಕ್ಷ ರೂ. ಬಿಡುಗಡೆಯಾಗಿದ್ದು, 56 ಫಲಾನುಭವಿಗಳ ಪಟ್ಟಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ.

ಹಿರಿಯ ನಾಗರಿಕರ ಕಲ್ಯಾಣ:
ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಗುಲಬಗರ್ಾ ನಗರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಮಹಬೂಬ್ ಸುಬಾನಿ ಟ್ರಸ್ಟ್ ಮತ್ತು ಸಂಜೀವನಿ ಶಿಕ್ಷಣ ಸಂಸ್ಥೆ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಹಿರಿಯ ನಾಗರಿಕರ ಸ್ಥಾನಮಾನ ಕಾಪಾಡುವುದು, ಅವರಿಗೆ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸುವುದು, ಪೌಷ್ಟಿಕ ಆಹಾರ ಮತ್ತು ನೈರ್ಮಲ್ಯದ ಬಗ್ಗೆ ಸಲಹೆ ನೀಡುವುದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕಿತ್ತೂರು ರಾಣಿ ಚೆನ್ನಮ್ಮ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಕ್ಕೆ ಹೋದ ವರ್ಷ 4.13 ಲಕ್ಷ ರೂ. ಬಿಡುಗಡೆಯಾಗಿದೆ. ಗುಲಬರ್ಗಾ ಜಿಲ್ಲೆಯಲ್ಲಿ ಶಿವರುದ್ರ ಟ್ರಸ್ಟ್ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಹಳೆಯ ಎಸ್.ಪಿ. ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಶುಲ್ಕರಹಿತ ದೂರವಾಣಿ ಸಂಖ್ಯೆ 1090 ಇರುತ್ತದೆ. ಇದಕ್ಕಾಗಿ ಟ್ರಸ್ಟಿಗೆ ಕಳೆದ ವರ್ಷ 3.60 ಲಕ್ಷ ರೂ. ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 39800 ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಗಿದೆ.
ಆಧಾರ:
ರಾಜ್ಯ ಸರ್ಕಾರವು ವಿದ್ಯಾವಂತ ಅಂಗವಿಕಲರ ಸ್ವಾವಲಂಬನೆಗಾಗಿ ಆಧಾರ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ 16 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಅಂಗವಿಕಲತೆ ಪ್ರಮಾಣ ಶೇ.40 ರಷ್ಟು ಹೊಂದಿದ ನಿರುದ್ಯೋಗಿ ವಿದ್ಯಾವಂತ ಅಂಗವಿಕಲರು ವ್ಯಾಪಾರ ಮಾಡಲು 15000 ರೂ. ಮೌಲ್ಯದ ಲೋಹದ ಪೆಟ್ಟಿಗೆ ಹಾಗೂ ಗರಿಷ್ಠ 20000 ರೂ.ವರೆಗೆ ಬಂಡವಾಳ ಸಾಲ ನೀಡಲಾಗುವುದು. ಈ ಯೋಜನೆಯಡಿ ಹೋದವರ್ಷ ಜಿಲ್ಲೆಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ.

ಬಸ್ ಪಾಸ್ ಸೌಲಭ್ಯ:
ಇಲಾಖೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಕಾರದಿಂದ ರಿಯಾಯತಿ ಬಸ್ ಪಾಸ್ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಗುಲಬರ್ಗಾ ಜಿಲ್ಲೆಯಲ್ಲಿ ಈವರೆಗೆ 6000 ಅಂಗವಿಕಲರಿಗೆ ರಿಯಾಯಿತಿ ಬಸ್ ಪಾಸ್ ಸೌಲಭ್ಯ ಕಲ್ಪಿಸಲಾಗಿದೆ. ಇದಲ್ಲದೆ ಶೇ. 100 ರಷ್ಟು ಅಂಧತ್ವ ಹೊಂದಿದವರಿಗೆ ಉಚಿತ ಬಸ್ಪಾಸ್ಗಳನ್ನು ವಿತರಿಸಲಾಗುವುದು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 41540 ಅಂಗವಿಕಲರಿಗೆ ವೈದ್ಯಕೀಯ ಗುರುತಿನ ಚೀಟಿ ವಿತರಿಸಲಾಗಿದೆ. ಉದ್ಯೋಗಸ್ಥ ಅಂಗವಿಕಲ ಮಹಿಳೆ ಮತ್ತು ಅಂಗವಿಕಲ ವಿದ್ಯಾರ್ಥಿನಿಯರಿಗಾಗಿ ಗುಲಬರ್ಗಾದಲ್ಲಿ ಹೊಸ ವಸತಿ ನಿಲಯ ಪ್ರಾರಂಭಿಸಲಾಗಿದೆ. ಈ ವಸತಿ ನಿಲಯದಲ್ಲಿ 50 ಅಂಗವಿಕಲ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಪ್ರವೇಶ ಕಲ್ಪಿಸಿದ್ದು ಕಳೆದ ವರ್ಷ 6.49 ಲಕ್ಷ ರೂ. ಖರ್ಚು ಮಾಡಲಾಗಿದೆ. ಈ ನಿಲಯದಲ್ಲಿರುವವರಿಗೆ ಉಚಿತ ಊಟ, ವಸತಿ ಸೌಲಭ್ಯ ನೀಡಲಾಗುತ್ತಿದೆ.
ವಿಶೇಷ ಶಾಲೆಗಳು:
ಗುಲಬರ್ಗಾ ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದ ಎದುರು ಅಂಧಮಕ್ಕಳ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಅಂಧ ಮಕ್ಕಳಿಗೆ ಉಚಿತ ಶಿಕ್ಷಣ, ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಗುಲಬರ್ಗಾ ದೇವತಾ ಕಣ್ಣಿನ ಆಸ್ಪತ್ರೆಯ ವೈದ್ಯರು ಈ ಶಾಲೆಯ ಮೂವರು ಅಂಧಮಕ್ಕಳ ಕಣ್ಣಿನ ಕಾನರ್ಿಯಾ ಹಾಗೂ ಇಬ್ಬರು ಮಕ್ಕಳ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ಈ ಮಕ್ಕಳಿಗೆ ದೃಷ್ಟಿ ಬರುವಂತೆ ಮಾಡಿದ್ದಾರೆ. ಈ ಶಾಲೆಯಲ್ಲಿ ಒಟ್ಟು 44 ಅಂಧ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಈ ಶಾಲೆಯ 3 ವಿದ್ಯಾರ್ಥಿಗಳು ಶೇ.90ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಇದಲ್ಲದೆ ಆಳಂದ ಕಾಲೋನಿಯಲ್ಲಿ ಬಾಲಕರ ಕಿವುಡು ಮತ್ತು ಮೂಗರ ಸರ್ಕಾರಿ ವಸತಿ ಶಾಲೆಯಿದ್ದು, ಈ ಶಾಲೆಯ ಮಕ್ಕಳಿಗೂ ಉಚಿತ ಶಿಕ್ಷಣ, ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಳೆದ ವರ್ಷ ಗುಲಬರ್ಗಾ ಅಂಬುಬಾಯಿ ಅಂಧ ಬಾಲಕಿಯರ ವಸತಿ ಶಾಲೆಗೆ 4.77 ಲಕ್ಷ ರೂ. ಹಾಗೂ ಅಂಜನಾ ಬಾಲಕಿಯರ ಕಿವುಡು ಮತ್ತು ಮೂಗರ ವಸತಿ ಶಾಲೆಗೆ 5.19 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.
ಸ್ವ-ಸಹಾಯ ಗುಂಪು:
ರಾಜ್ಯ ಸರ್ಕರವು ಪ್ರಸ್ತುತ ವರ್ಷ ಅಂಗವಿಕಲರಿಗಾಗಿ ವಿಶೇಷ ಸ್ವ-ಸಹಾಯ ಗುಂಪುಗಳನ್ನು ರಚಿಸುವ ಸ್ಫೂರ್ತಿ ಸ್ವಸಹಾಯ ವಿನೂತನ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ 18 ರಿಂದ 45 ವರ್ಷದವರೆಗಿನ ಅಂಗವಿಕಲರಿಗೆ ಸ್ವಯಂ ಉದ್ಯೋಗ ನಿರತರನ್ನಾಗಿ ಮಾಡಿ ಸ್ವಾವಲಂಬಿ ಜೀವನ ನಿರ್ವಹಿಸಲು ಅನುಕೂಲ ಕಲ್ಪಿಸಲಾಗುವುದು. ಯೋಜನೆಯನ್ವಯ ರಚಿಸಲಾಗುವ ಪ್ರತಿ ಸ್ವ-ಸಹಾಯ ಗುಂಪಿಗೆ 30 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುವುದು. ಗುಲಬರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿಗೆ ಈ ಯೋಜನೆ ಮಂಜೂರಾಗಿದೆ.

ಸಮೂಹ ವಿಮಾ:
ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಹಾಗೂ ವಾರ್ಷಿಕ 12000ರೂ.ಗಿಂತ ಕಡಿಮೆ ವರಮಾನ ಹೊಂದಿದ ಬುದ್ಧಿಮಾಂದ್ಯ ವ್ಯಕ್ತಿಗಳ ತಂದೆ-ತಾಯಿ/ಪೋಷಕರಿಗೆ ಭಾರತೀಯ ಜೀವ ವಿಮಾ ನಿಗಮಕ್ಕೆ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ವಿಮಾ ಕಂತು ಪಾವತಿಸಿ ವಿಮಾ ಸೌಲಭ್ಯ ಒದಗಿಸಲಾಗುವುದು. ಬುದ್ಧಿಮಾಂದ್ಯ ವ್ಯಕ್ತಿಗಳ ತಂದೆ-ತಾಯಿ/ಪೋಷಕರ ನಿಧನದ ನಂತರ ಬುದ್ಧಿಮಾಂದ್ಯ ವ್ಯಕ್ತಿಗಳ ಪೋಷಣೆಗಾಗಿ ಜೀವ ವಿಮಾ ನಿಗಮದಿಂದ ಮಾಸಿಕ ವರಮಾನ ದೊರೆಯುತ್ತದೆ. ಕಳೆದ ವರ್ಷ 11 ಫಲಾನುಭವಿಗಳು ಜೀವವಿಮಾ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಅಂಗವಿಕಲರ ಪುನರ್ವಸತಿ ಯೋಜನೆ:
ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ರಾಜ್ಯ ಸರ್ಕಾರ ಅಂಗವಿಕಲರ ಗ್ರಾಮೀಣ ಹಾಗೂ ಸಮುದಾಯಾಧಾರಿತ ಪುನರ್ವಸತಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಅಂಗವಿಕಲರ ಅಗತ್ಯತೆಗಳ ಬಗ್ಗೆ ಅವರ ವಾಸ ಸ್ಥಳದಲ್ಲಿಯೇ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ಅಂಗವಿಕಲರೊಬ್ಬರನ್ನು ಗ್ರಾಮ ಪುನರ್ವಸತಿ ಕಾರ್ಯಕರ್ತರೆಂದು(ವಿಆರ್ಡಬ್ಲ್ಯೂ) ಹಾಗೂ ತಾಲೂಕು ಪಂಚಾಯಿತಿಯಲ್ಲಿ ಪದವಿ ಪಡೆದ ಅಂಗವಿಕಲರೊಬ್ಬರನ್ನು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರೆಂದು(ಎಂಆರ್ಡಬ್ಲ್ಯೂ) ನೇಮಿಸಲಾಗುವುದು. ಈ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಜಿಲ್ಲೆಯಲ್ಲಿ 337 ಗ್ರಾಮೀಣ ಹಾಗೂ 10 ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಕಳೆದ ವರ್ಷ ಕಾರ್ಯಕರ್ತರ ಗೌರವಧನಕ್ಕಾಗಿ 38.46 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದಲ್ಲದೆ ರಾಜ್ಯ ಸರ್ಕಾರ ಅಂಗವಿಕಲರ ಸರ್ವಾಂಗೀಣ ಅಭಿವೃದ್ಧಿಗಾಗಿ ಸಮುದಾಯಾಧಾರಿತ ಪುನರ್ವಸತಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯು ಜಿಲ್ಲೆಯ ಆಳಂದ ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗಿದೆ.
ವರದಿ: ಜಿ. ಚಂದ್ರಕಾಂತ

0 comments:

Post a Comment