ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್

ಮಳೆಹುಡುಗಾ, ಮತ್ತೆ ನಿನ್ನ ಕೆಣಕೋಣ ಅನ್ನಿಸ್ತಿದೆ. ಅದೇನೋ ಅಮ್ಮನ ಪ್ರೀತಿಯ ನಂತರ ಸಿಗೋ ಮಡಿಲು ಪ್ರೀತಿಸಿದ ಹುಡುಗ ಹುಡುಗಿಯರದ್ದು ಅಂದಿದೀಯಲ್ವಾ... ನಿನ್ನ ವಾದವನ್ನು ವಿಮರ್ಶಿಸೋಕೆ ಹೋಗೊಲ್ಲ. ಆದ್ರೆ ಒಪ್ಪಿಕೊಳ್ಳಲ್ಲಾ... ಹಾಗಾಗಿ ಮತ್ತೊಂದು ಕಥೆ ಹೇಳ್ತೀನಿ ಸುಮ್ಮನೆ ಕೇಳು... ನಿಜಾನಾ ಅಂತ ಮತ್ತೆ ಯೋಚಿಸು. ಈ ಕಥೆಯೊಳಗಿರುವ ಸಂಬಂಧಕ್ಕೆ ಯಾವುದೇ ಬಂಧನದ ಅಗತ್ಯವಿಲ್ಲ,ವಿಮರ್ಶೆಯ ಚೌಕಗಳಿಲ್ಲ, ಕಥೆಯ ಹಂಬಲವಿಲ್ಲ, ನಂಬಿಕೆಯ ಪ್ರಶ್ನೆಯಿಲ್ಲ... ಅದು ತಾನೇ ಎನ್ನುವ ಅಹಂ ಇಲ್ಲ. ಜಗದ ಅರಿವಿಲ್ಲ... ಆದರೆ ಸುಮ್ಮನೆ ಒಂದು ಗಂಟೆ ನನ್ನ ಕಣ್ಣೊಳಗೆ ಅವಿತು ಹೋಗುವ ಕಾದಂಬರಿಯ ಪುಟಗಳು ಹಾಗೇ ಕುಂತಿವೆ. ಯಾಕೆಂದರೆ ಅವರಿಬ್ಬರು ನನ್ನ ಎದುರಿಗಿದ್ದರು.
ಅವರಿಬ್ಬರು ಹುಡುಗ ಮತ್ತು ಹುಡುಗಿ. ಬಸ್ಸು ಹತ್ತಿದ್ದರು ಹುಡುಗನಿಗೆ, ಹುಡುಗಿ ಎಲ್ಲಿಯಾದಾರೂ ತಪ್ಪಿಹೋದಾಳು ಬಿದ್ದಾಳು ಎಂಬ ಭಯ. ಅದಕ್ಕೆ ಕೈಯ ಆಸರೆ ಮತ್ತೆ ಅದೇನೋ ಪಿಸುಮಾತು, ನಾವಿಬ್ಬರೇ ಅನ್ನೋವಂತಹ ಗೊಣಗಾಟ. ಚಕ್ರದ ಅಡಿಯಲ್ಲಿ ಕಳೆದುಹೋಗುವ ದಾರಿಯ ತೆರೆದುಕೊಳ್ಳುತ್ತಾ ಸಾಗುವ ಜಗತ್ತನ್ನು ಹುಡುಗಿಗೆ ತೆರೆದಿಡುವ ಹಂಬಲ... ಹುಮ್ಮಸ್ಸು ಅದಕ್ಕೆ ಹುಡುಗಿಯ ಪುಟ್ಟ ಮುಗುಳ್ನಗೆ ಅಷ್ಟೇ ಮತ್ತೆಲ್ಲೋ ಇಳಿದು ಹೋದರು.

ಗೊತ್ತು ಈಗಂತೂ ಇದು ಪ್ರೀತಿನೇ ಅಂತೀಯಂತಾ... ಹೌದು ಪ್ರೀತಿಯೇ... ಆದರೆ ನಿನ್ನ ಪ್ರೀತಿಯ ವ್ಯಾಖ್ಯಾನ ಅವರಿಗೆ ಬೇಕಾಗಿಲ್ಲ. ಆದರೆ ಆ ಸಂಬಂಧದಲ್ಲಿ ತಪ್ಪುಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಬೇಡ. ಆದರೆ ಅವರನ್ನು ಬಂಧಿಸೋಕೆ ಹೋಗಬೇಡ. ಅವರು ಯಾವ ಪರಿಧಿಯೊಳಗೂ ಬರಲ್ಲ.

ಅವರಿಗೆ ಇವತ್ತು ಮಾತಾಡಲೇಬೇಕೆಂಬ ಹಂಬಲವಿಲ್ಲ. ಅವರಿಬ್ಬರ ಮಧ್ಯೆ ಪ್ರೇಮಿಗಳ ಜಂಜಾಟವಿಲ್ಲ... ಜಗಳ ಮಾಡಿದರೆ ಸಾವಿರ ಬಾರಿ ಕ್ಷಮಿಸು ಎಂದು ಲೆಕ್ಕಹಾಕಬೇಕಿಲ್ಲ. ಆ ಹುಡುಗನ್ನು ತನ್ನ ಪ್ರೀತಿಯ ಹುಡುಗಿಯಷ್ಟೇ ಅವಳನ್ನು ಪ್ರೀತಿಸಬಲ್ಲ. ಆ ಹುಡುಗಿಯೂ ತನ್ನ ಪ್ರೀತಿಯ ಹುಡುಗನ ಜೊತೆ ಮಾತಾನಾಡುವಂತೆ ಮಾತನಾಡಬಲ್ಲಳು.

ತಲೆಕೆಟ್ಟು ಹೋಗುತ್ತಿದ್ದೆಯಾ... ಸರಿ ಸರಿ ಹೇಳ್ತೀನಿ ಕೇಳು ಮಳೆಹನಿ ಆಣೆಯೂ ಅವರಿಬ್ಬರು ಪ್ರೇಮಿಗಳಲ್ಲ... ಅವರಿಬ್ಬರು ಅಣ್ಣತಂಗಿಯರು. ಅವರಿಗಿನ್ನು ಪ್ರೀತಿ ಅಂದ್ರೆ ಏನಂತಾನೇ ಗೊತ್ತಿರಲಿಕ್ಕಿಲ್ಲ. ಮುಗ್ಧ ಮನಸ್ಸುಗಳು... ತುಡಿಯುವ ಹಂಬಲದ ಜಗತ್ತಿಗೆ ತೆರೆದುಕೊಳ್ಳಬೇಕಷ್ಟೇ... ಈಗಿನ್ನೂ ಅವರು ಅಮ್ಮನ ಸೆರಗಲ್ಲಿ ಬಚ್ಚಿಟ್ಟುಕೊಳ್ಳುವ ಮನಸ್ಸುಗಳು... ವಾಸ್ತವ ಎಷ್ಟು ಖುಷಿಕೊಡುತ್ತಲ್ವಾ...
ಧೀಷ್ಮಾ ಡಿ. ಶೆಟ್ಟಿ

0 comments:

Post a Comment