ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ


ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮನಸ್ಸನ್ನು ಕಲುಕಿಸಿದ ಮಂಗಳೂರು ವಿಮಾನ ದುರಂತದ ಬಗ್ಗೆ ಕತಾರ್ ಕನ್ನಡಿಗ ವಿಜಯ ಸುವರ್ಣ ಅವರು ಈ ಕನಸಿಗಾಗಿ ಲೇಖನವನ್ನು ಬರೆದು ಕಳುಹಿಸಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. - ಸಂ.
೨೦೧೦ ಮೇ ೨೧. ಮಂಗಳೂರು ಹಾಗೂ ಸನಿಹದ ಪ್ರದೇಶಗಳ ವಿದೇಶದಲ್ಲಿರುವ ನಾಗರಿಕರ ಹಾಗೂ ಅವರ ಮನೆಮಂದಿಯ ಜೀವನದಲ್ಲಿ ಮರೆಯಲಾರದ ಅತ್ಯಂತ ಕರಾಳ ದಿನ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನವೀನ ಟರ್ಮಿನಲ್ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಅದೇ ನಿಲ್ದಾಣ ಭಯಾನಕ ದುರಂತವೊಂದನ್ನು ತನ್ನ ಚರಿತ್ರೆಯಲ್ಲಿ ದಾಖಲಿಸಿಕೊಂಡಿತು.ದುರ್ಘಟನೆ ನಡೆದ ಪ್ರದೇಶದ ಅಕ್ಕಪಕ್ಕದ ಜನ ಬೆಳಿಗ್ಗೆ ನಿದ್ದೆಯಿಂದೆದ್ದು ಕಣ್ಣುಬಿಡುವ ಸಮಯದಲ್ಲೇ ಘೋರದುರಂತದ ದ್ರಶ್ಯ ಕಂಡು ದಿಗ್ಮೂಢರಾದರು. ದೇಶದ ಉದ್ದಗಲದಲ್ಲಿ ಮಾತ್ರವಲ್ಲ ವಿದೇಶದಲ್ಲಿವ ಪ್ರತಿಯೊಬ್ಬ ಜನತೆಯೂ ಮಂಗಳೂರಿನಲ್ಲಿ ಘಟಿಸಿದ ಘಟನೆಗೆ ತತ್ತರಿಸಿ ಕಣ್ಣೀರುಮಿಡಿಯಿತು. ವಿಕ್ರತಿ ಸಂವತ್ಸರವು ತನ್ನ ವಿಕ್ರತ ರೂಪವನ್ನು ಈ ಮೂಲಕ ತೋರಿಸಿಯೇ ಬಿಟ್ಟಿತು.

ಕೆಲವಷ್ಟು ಕಾಲ ತನ್ನ ಒಲುಮೆಯ ತಾಯ್ನಾಡನ್ನು ತೊರೆದು ದೂರದಲ್ಲಿದ್ದು ಹುಟ್ಟಿದನೆಲವನ್ನು ಎಂದು ಕಂಡೇನೋ ಎಂಬ ತವಕದಿಂದ ಬಂದು ತಾಯ್ನಾಡಿಗೆ ಕಾಲೂರುವ ನಮ್ಮ ಜನರ ಹಂಬಲ ಹಂಬಲದಲ್ಲೇ ಕಣ್ಮರೆಯಾಯಿತು. ವಿದೇಶದಿಂದ ಹಾರುತ್ತಾ ಬಂದು ಇನ್ನೇನು ತನ್ನ ತಾಯ್ನಾಡನ್ನು ಸ್ಪರ್ಶಿಸುತ್ತೇನೆ ಎಂಬ ಆ ನೆನಪೇ ಮೈಮನವನ್ನು ಪುಳಕಿಸುತ್ತದೆ. ವಿದೇಶದಲ್ಲಿ ನೆಲಸಿರುವ ನಮ್ಮಂತವರು ತಾಯ್ನಾಡಿಗೆ ತಲುಪಿ ವಿಮಾನದಿಂದ ಕೆಳಕ್ಕಿಳಿದು ಪವಿತ್ರ ಮಾತ್ರಭೂಮಿಯನ್ನು ಸ್ಪರ್ಶಿಸಿದ ತತ್‍ಕ್ಷಣ ಬಾಗಿ ಜನ್ಮಭೂಮಿಗೊಮ್ಮೆ ನಮಸ್ಕರಿಸಿದಾಗಲೇ ಮನಸ್ಸಿಗೆ ಹಿತವೆನಿಸುತ್ತದೆ.

*

*

ಮುನ್ನಾದಿನ ರಾತ್ರಿ ೧.೧೫ ಕ್ಕೆ ಹುಟ್ಟಿದ ನೆಲವನ್ನು ಸೇರುವ ಸಂತಸದಿಂದ ದುಬಾಯಿಯಲ್ಲಿ ವಿಮಾನವೇರಿಕುಳಿತ ನತದ್ರಷ್ಟ ಬಂಧುಗಳಿಗೆ ಬೆಳಗ್ಗಿನ ಜಾವದ ಘೋರ ದುರಂತದ ಬಗ್ಗೆ ಕಿಂಚಿತ್ತೂ ಮುನ್ಸೂಚನೆಯನ್ನೂ ನೀಡದೇ ಜವರಾಯ ಹಟಾತ್ತನೇ ಎದುರಿಗೆ ಬಂದು ನಿಂತಿದ್ದ... ನಿಜ, ವಿಧಿಯ ವಿಕಟ ಅಟ್ಟಹಾಸವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಬಹುಶಃ ಪೈಲೆಟ್‍ನ ಚಿಕ್ಕ ಪ್ರಮಾಧ ಅಥವಾ ಗಡಿಬಿಡಿಯ ತಪ್ಪುನಿರ್ಧಾರವೇ ಇಡೀ ದುರಂತಕ್ಕೆ ನಾಂದಿಯಾಯಿತು. ಈ "ಲ್ಯಾಪ್‍ಟಾಪ್ ನಿಲ್ದಾಣ" ನಿಲ್ದಾಣದ ಬಗ್ಗೆ ಪೂರ್ತಿ ಅರಿವಿದ್ದ ಪೈಲೆಟ್‍ಗಳಿಗೆ ಸ್ವಲ್ಪ ತಪ್ಪಿದರೂ ಗಂಡಾಂತರ ಕಟ್ಟಿಟ್ಟದ್ದು ಎಂಬ ವಿಚಾರ ಗೊತ್ತೇ ಇದ್ದರೂ ಹೀಗೇಕಾಯಿತು ಎಂಬ ಪ್ರಶ್ನೆಗೆ ಉತ್ತರ ಇನ್ನಷ್ಟೇ ಸಿಗಬೇಕು. ಬದುಕುಳಿದವರು ಅವಘಡವನ್ನು ಸೂಚಿಸುವ ಯಾ ಎಚ್ಚರಿಸುವ ಬಗ್ಗೆ ಯಾವುದೇ ಸೂಚನೆ ವಿಮಾನದಲ್ಲಿ ದೊರೆಯಲಿಲ್ಲ ಎಂದಿದ್ದರಾದರೂ ತಮ್ಮ ಅಂತ್ಯ ಖಂಡಿತ ಎಂಬುದು ಮನವರಿಕೆಯಾದಾಗ ಸೂಚನೆ ನೀಡುವ ಸಮಯಪ್ರಜ್ಞೆ ಮತ್ತು ಮನಃ ಸ್ಥೈರ್ಯ ಎಂತವರಿಗಾದರೂ ಎಲ್ಲಿಂದ ಬಂದೀತು...ನಾವು ಕೂಡ ರಜೆಯಲ್ಲಿ ಸ್ವದೇಶಕ್ಕೆ ಹೊರಡುವಾಗ ನಾವು ದುಡಿಯುತ್ತಿರುವ ಅನ್ನಧಾತನೆಲವನ್ನು ಬಿಟ್ಟು ನಮ್ಮ ಒಲುಮೆಯ ತಾಯ್ನಾಡನ್ನು ಅಪ್ಪಿಕೊಳ್ಳುವ ಆತುರ ಅದೆಷ್ಟಿರುತ್ತದೆಂಬುದನ್ನು ಚೆನ್ನಾಗಿ ಅರಿತವರು. ಅಲ್ಲಿ ನಮ್ಮ ಪ್ರೀತಿಪಾತ್ರರು ಬಂದಿಳಿಯುವ ನಮ್ಮನ್ನು ಎದುರುಗೊಳ್ಳಲು, ಕರೆದೊಯ್ಯಲು ದೂರದಿಂದ ಬಂದು ಕಾತರದಿಂದ ಕಾದುನಿಲ್ಲುವ, ನಮ್ಮ ಮುಖದರ್ಶನವಾದಾಗ ಅವರ ಮುಖದಲ್ಲಿ ಚಿಮ್ಮುವ ಸಂತಸದ ರೇಖೆಯನ್ನು ನೋಡಿ ಪ್ರತ್ಯಕ್ಷ ಅನುಭವಿಸುವವರು ನಾವು. ಅಂತಹದೇ ವರ್ಣಿಸಲಾಗದ ಭಾವನೆ ನಮ್ಮ ಹ್ರದಯದಲ್ಲಿಯೂ ಕೂಡ ಆ ಕ್ಷಣ ಹೆಪ್ಪುಗಟ್ಟಿರುತ್ತದೆ. ಅದೇ ರೀತಿ ಮೇ ೨೨ರ ೨೦೧೦ರ ಮುಂಜಾನೆ ತಮ್ಮವರನ್ನು ಕರೆದೊಯ್ಯಲು ಬಂದು ಕಾತರದಿಂದ ಕಾಯುತ್ತಾ ವಿಮಾನ ಬಂದು ಇಳಿಯುವುದನ್ನು ಕಂಡು ಸಂತಸ ಅನುಭವಿಸುತ್ತಿರುವ ಕ್ಷಣದಲ್ಲೇ ವಿಮಾನದ ಪತನ ನೋಡಿ ಅದೆಂತಹಾ ಮಾನಸಿಕ ಅಘಾತವಾಗಿರಬಹುದು ಎಂಬುದನ್ನು ಊಹಿಸಿದರೆ ಮನಮುದುಡುತ್ತದೆ. ವಿಮಾನದ ಒಳಗಿದ್ದ ಪ್ರಯಾಣಿಕರು ಅಪಘಾತದ ಅರಿವಾದಾಗ, ಸುತ್ತಲೂ ಬೆಂಕಿಹತ್ತಿಕೊಂಡಾಗ ತಾವಿನ್ನು ಬದುಕುವುದು ಸಾದ್ಯವೇ ಇಲ್ಲವೆಂದು ಮನವರಿಕೆಯಾದಾಗ, ತಮ್ಮೊಂದಿಗಿದ್ದ ಪುಟ್ಟ ಕಂದಮ್ಮಗಳನ್ನು ಅಪ್ಪಿಕೊಂಡು, ತಮ್ಮ ಪ್ರೀತಿಪಾತ್ರರನ್ನು ನೆನೆಯುತ್ತಾ ಅದೆಂತಹಾ ವೇಧನೆಯನ್ನು ಅವರು ಅನುಭವಿಸಿರಬಹುದು... ಊಹೆಗೂ ಸಿಲುಕದ್ದು. ವಿಧಿಯ ನಿರ್ಣಯವನ್ನು ಮೀರಲು ಯಾರಿಂದ ಸಾಧ್ಯ?
ಚಿತ್ರ ಸಹಕಾರ : ಸತೀಶ್ ಇರಾ.

1 comments:

Anonymous said...

Adu lap top alla........table top...........

Post a Comment