ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
( ಕ್ರಿಶ್ಚಿಯನ್ನರು ನಡೆಸುವ ಮತಾಂತರ ಕಾರ್ಯಕ್ಕೆ ಹಿಂದು ಸಂಘಟನೆಗಳಿಂದ ಪ್ರತಿಭಟನೆ ಉಂಟಾದ ಸಂದರ್ಭಗಳಲ್ಲೆಲ್ಲ ಕೆಲವರು ಹಿಂದು ಧರ್ಮದ ಬಗ್ಗೆ ಕಟು ಟೀಕೆಗಳನ್ನು ಮಾಡುವುದನ್ನು ನಾವು ಗಮನಿಸಿದ್ದೇವೆ. ಅಂಥ ಟೀಕೆಗಳಿಗೆ ಸ್ಥೂಲವಾಗಿ ಉತ್ತರ ಕೊಡುವ ಪ್ರಯತ್ನ ಈ ಲೇಖನ.)
ಹಿಂದು ಧರ್ಮದಲ್ಲಿ ಜಾತಿ ಪದ್ಧತಿ ಇದೆಯೆಂಬುದು ಹಾಗೂ ಅದು ಶೋಷಣೆಗೆ ಮೂಲವಾಗಿದೆಯೆಂಬುದು ಪ್ರಮುಖವಾಗಿ ಕೇಳಿಬರುತ್ತಿರುವ ಟೀಕೆ. ತಥ್ಯವೆಂದರೆ, ವೃತ್ತಿಗನುಗುಣವಾಗಿ ಚತುರ್ವರ್ಣಗಳ ವಿಂಗಡಣೆಯಾಗಿದೆ. ಕಾಲಾನುಕ್ರಮದಲ್ಲಿ ಅದನ್ನು ಜಾತಿ-ಉಪಜಾತಿ-ಒಳಜಾತಿಗಳನ್ನಾಗಿಸಿಕೊಂಡು ಮುಂದುವರಿದಿರುವವರು ಅಂದಂದಿನ ಸಾಮಾಜಿಕರೇ ಹೊರತು ಅದಕ್ಕೆ ಧರ್ಮ ಕಾರಣವಲ್ಲ. ಇಂಥ ವಿಂಗಡಣೆಯನ್ನು ನೀರೆರೆದು ಪೋಷಿಸಿ, ಭೇದಭಾವ ಹೆಚ್ಚಿಸಿ ತಮ್ಮ ಬೇಳೆ ಬೇಯಿಸಿಕೊಂಡವರು ಬ್ರಿಟಿಷರು; ಮತ್ತೀಗ ಬೇಳೆ ಬೇಯಿಸಿಕೊಳ್ಳುತ್ತಿರುವವರು ನಮ್ಮ ರಾಜಕಾರಣಿಗಳು. ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಕೇವಲ ಹಿಂದು ರಾಜಕಾರಣಿಗಳು ಮಾತ್ರವಲ್ಲ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಾಜಕಾರಣಿಗಳೂ ಆಡಳಿತದಲ್ಲಿ ಭಾಗಿಗಳಾಗಿದ್ದಾರೆಂಬುದನ್ನು ಈ ಸಂದರ್ಭದಲ್ಲಿ ನಾವು ಪರಿಗಣಿಸಬೇಕಾಗುತ್ತದೆ.ವೃತ್ತಿಗನುಗುಣವಾಗಿ ಕುಲ ವಿಂಗಡಣೆ ಅನ್ಯ ಧರ್ಮಗಳಲ್ಲೂ ಇದೆ. ಕ್ರಿಶ್ಚಿಯನ್ನರಲ್ಲಿ ಬೇಕರ್, ಷೆಪರ್ಡ್ , ಸ್ಮಿತ್, ಕಾರ್ಪೆಂಟರ್ , ಫ್ಯಾಬ್ರಿ, ಫೆರಾರಿ ಮೊದಲಾಗಿ ವೃತ್ತಿ ಸಂಬಂಧಿ ಉಪನಾಮಗಳಿವೆ. ಮುಸ್ಲಿಮರಲ್ಲೂ ಸ್ಥಳ, ವ್ಯವಹಾರ, ವೃತ್ತಿ ಇವುಗಳ ಸೂಚಕ ಉಪನಾಮಗಳ (ನಿಸ್ಬಾ) ಪದ್ಧತಿ ಜಾರಿಯಲ್ಲಿದೆ. ರಷ್ಯನ್ನರಲ್ಲಿ ಪೋಸ್ತ್ನೋಯ್ (ದರ್ಜಿ), ಪಶ್ತೂಖ್ (ಕುರುಬ), ಕುಜ್ ನೆಟ್ಸ್ (ಲೋಹಕರ್ಮಿ) ಮೊದಲಾದ ವೃತ್ತಿಸಂಬಂಧಿ ಉಪನಾಮಗಳಿವೆ. ಚೀನಾದಲ್ಲೂ ಮೊಝೆನ್ ಮೊದಲಾದ ವೃತ್ತಿಸೂಚಕ ಉಪನಾಮಗಳಿವೆ. ಜಾತಿ-ಉಪಜಾತಿ ಎಂದು ವಿಂಗಡಿಸುವ ಅಭ್ಯಾಸ ಹಿಂದುಗಳಿಗೆ ಮಾತ್ರ ಸೀಮಿತವೇನಲ್ಲ. ಜಗತ್ತಿನಾದ್ಯಂತ ಈ ಪದ್ಧತಿ ಇದೆ. ಇದು ಧರ್ಮದ ತಪ್ಪಲ್ಲ. ಈ ವಿಂಗಡಣೆ ಹುಟ್ಟುಹಾಕುವ ಅಸಮಾನತೆ ಹಿಂದುಗಳಲ್ಲಿ ದಿನೇದಿನೇ ಕಡಿಮೆಯಾಗುತ್ತಿದ್ದು, ಇತರ ದೇಶ ಹಾಗೂ ಧರ್ಮಗಳಂತೆ ನಮ್ಮಲ್ಲಿಯೂ ಆರ್ಥಿಕ ಅಸಮಾನತೆಯೇ ಹೆಚ್ಚು ಪ್ರಭಾವಶಾಲಿಯಾಗುತ್ತಿದೆ. ಅದೇ ವೇಳೆ, ಕ್ರಿಶ್ಚಿಯನ್ ಧರ್ಮದಲ್ಲಿ (1) ರೋಮನ್ ಕ್ಯಾಥೊಲಿಕ್ ಮತ್ತು ಪ್ರೊಟಿಸ್ಟೆಂಟ್ ಪಂಗಡಗಳ ನಡುವಿನ ಭೇದ, (2) ಮೂಲ ಮತ್ತು ಮತಾಂತರಿತ ವರ್ಗಗಳ ನಡುವಿನ ಭೇದಭಾವ ಮತ್ತು (3) ಬಿಳಿಯರ ಮತ್ತು ಕರಿಯರ ನಡುವಿನ ಭೇದಭಾವ ಇವು ತೀವ್ರವಾಗಿವೆ. ಮುಸ್ಲಿಮರಲ್ಲಂತೂ ಸುನ್ನಿ ಮತ್ತು ಷಿಯಾಗಳ ನಡುವಿನ ಕಾದಾಟ ಜಗಜ್ಜಾಹೀರು. ಇಂಥವರು ಹಿಂದು ಜಾತಿ ಪದ್ಧತಿಯನ್ನು ಟೀಕಿಸುವುದು ಎಷ್ಟು ಸರಿ?
ಸ್ತ್ರೀ ಸ್ವಾತಂತ್ರ್ಯ

ಹಿಂದು ಧರ್ಮದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯವಿಲ್ಲವೆನ್ನುವುದು ಅನ್ಯಧರ್ಮೀಯರು ಮಾಡುವ ಇನ್ನೊಂದು ಅರ್ಥರಹಿತ ಟೀಕೆ. 'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ' ಎಂಬ ಮನುಸ್ಮೃತಿಯ ಹೇಳಿಕೆಯೊಂದರ ಕೊನೆಯ ಸಾಲನ್ನು ಮತ್ರ ಹಿಡಿದುಕೊಂಡು ಈ ಟೀಕೆ ಮಾಡಲಾಗುತ್ತಿದೆ. ಆದರೆ ಆ ಹೇಳಿಕೆಯ ಪೂರ್ಣಪಾಠ ಇಂತಿದೆ:
'ಪಿತಾ ರಕ್ಷತಿ ಕೌಮಾರ್ಯೇ, ಭರ್ತಾ ರಕ್ಷತಿ ಯೌವನೇ,
ಪುತ್ರಾಸ್ತು ಸ್ಥವಿರೇ ತಸ್ಮಾತ್ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ'.
ಈ ಹೇಳಿಕೆಯನುಸಾರ, ಸ್ತ್ರೀಯ ರಕ್ಷಣೆಯ ಜವಾಬ್ದಾರಿಯನ್ನು ಆಕೆಯ ಬಾಲ್ಯದಲ್ಲಿ ಆಕೆಯ ತಂದೆಗೆ, ಯೌವನದಲ್ಲಿ ಪತಿಗೆ ಮತ್ತು ವೃದ್ಧಾಪ್ಯದಲ್ಲಿ ಪುತ್ರರಿಗೆ ವಹಿಸಲಾಗಿದೆ. ಈ ರಕ್ಷಣಾಕವಚವನ್ನು ಹೊಂದಿರುವ ಹಿಂದು ಸ್ತ್ರೀಯ ಸ್ವಾತಂತ್ರ್ಯಕ್ಕೇನೂ ಇಂದು ಧಕ್ಕೆಯೊದಗಿಲ್ಲ, ಮಾತ್ರವಲ್ಲ, ಆಕೆಯೇ ಇಂದು ದುಡಿದು ಖರ್ಚುಮಾಡುವ ಮತ್ತು ಅವಲಂಬಿತರನ್ನು ಸಾಕುವ ಮಟ್ಟಕ್ಕೂ ಏರಿದ್ದಾಳೆ.
'ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೇ ತತ್ರ ದೇವತಾಃ' ಎಂದು ಹೇಳಿರುವುದೂ ಇದೇ ಹಿಂದು ಧರ್ಮ. ಮುಸ್ಲಿಂ ಧರ್ಮದಂತೆ ಹಿಂದು ಧರ್ಮವು ಇಂದು ಹೆಂಗಸನ್ನು ಬುರ್ಖಾದೊಳಗೆ ಬಂಧಿಯಾಗಿಟ್ಟಿಲ್ಲ, ಕ್ರಿಶ್ಚಿಯನ್ನರಂತೆ ವಿಚ್ಛೇದನವೆಂಬುದನ್ನು ಒಂದು 'ಪದ್ಧತಿ'ಯನ್ನಾಗಿ ಪರಿವರ್ತಿಸಿಲ್ಲ.
ವಿಶಿಷ್ಟ ಸಂಸ್ಕೃತಿ

ಹಿಂದು ಧರ್ಮವೆನ್ನುವುದು ಒಂದು ವಿಶಿಷ್ಟ ಮತ್ತು ವಿಶಾಲ ಸಂಸ್ಕೃತಿ. ಇದರ ಮೂಲ ಆಧಾರಗಳಾದ ವೇದಗಳ ಋಕ್ಕುಗಳು ವಿಶೇಷವಾಗಿ ಅಧ್ಯಾತ್ಮ ತತ್ತ್ವಜ್ಞಾನವನ್ನು ನೀಡುತ್ತವೆ. ಋಗ್ವೇದದ ಸೂಕ್ತಗಳು ಇಂದ್ರ, ರುದ್ರ, ಮರುತ್ಗಳು, ವರುಣ, ಅಗ್ನಿ, ಆದಿತ್ಯರು, ದ್ಯಾವಾ ಪೃಥಿವೀ, ಚಂದ್ರ, ರಾತ್ರಿ, ಹೀಗೆ ಪ್ರಕೃತಿಯ ಸಾಮಥ್ರ್ಯವನ್ನು ತಿಳಿಸುತ್ತವೆ, ಶ್ಲಾಘಿಸುತ್ತವೆ. ವೇದಕರ್ಮಗಳ ಬಗೆಯನ್ನು ತಿಳಿಸುವ 'ಬ್ರಾಹ್ಮಣ'ಗಳಲ್ಲಿ (ಜಾತಿಯಲ್ಲ) ಸತ್ಯಶೋಧದ ಸಂಕಲ್ಪವಿದೆ, ಪತಿಪತ್ನಿಯರು ಒಂದೇ ಆತ್ಮವಿದ್ದಂತೆ ಎನ್ನುವ ಉತ್ಕೃಷ್ಟ ಚಿಂತನೆಯಿದೆ, ವಂಚನೆ, ಮೋಸ, ಮದ್ಯಪಾನ ಮೊದಲಾದವುಗಳ ನಿಷೇಧವಿದೆ, ಯೋಗಿಯ ಲಕ್ಷಣಗಳ ಉಲ್ಲೇಖವಿದೆ. ಉಪನಿಷತ್ತುಗಳಲ್ಲಂತೂ ವೇದಗಳ ಸಾರವೇ ಅಡಕವಾಗಿದೆ. ವೇದಾಂತಗಳೆಂದು ಕರೆಯಲ್ಪಡುವ ಇವು ವಿಜ್ಞಾನ-ಅಧ್ಯಾತ್ಮ-ನೀತಿ ಈ ಮೂರು ವಸ್ತುಗಳು ಹದಗೊಂಡ ಒಂದು ಉತ್ಕೃಷ್ಟ ಪರಿಪಾಕ. 'ಸತ್ಯಂ ವದ, ಧರ್ಮಂ ಚರ' (ಸತ್ಯವನ್ನು ಹೇಳು, ಧರ್ಮವನ್ನು ಆಚರಿಸು) ಎಂಬ ಸದ್ವಿಚಾರವನ್ನು ವೇದೋಪನಿಷತ್ತುಗಳು ಬೋಧಿಸುತ್ತವೆ. ಇನ್ನು ಭಗವದ್ಗೀತೆಯಂತೂ ಬಗೆದಷ್ಟೂ ರತ್ನಗಳು ದೊರಕುವ ಖನಿ.

'ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ, ವೀತರಾಗಭಯಕ್ರೋಧಃ ಸ್ಥಿತಧೀಃ...' ಎನ್ನುತ್ತದೆ ಭಗವದ್ಗೀತೆ. ದುಃಖದಲ್ಲಿ ಉದ್ವೇಗಕ್ಕೀಡಾಗದವನು, ಸುಖಾಭಿಲಾಷೆಗಳಿಗೆ ಅಡಿಯಾಳಾಗದವನು, ಮೋಹ, ಭಯ, ಕ್ರೋಧಗಳನ್ನು ಜಯಿಸಿದವನು, ಇವನೇ ಸ್ಥಿತಪ್ರಜ್ಞ ಎಂದು ಇದರ ಅರ್ಥ. ಇಂಥ ಉನ್ನತ ತತ್ತ್ವಗಳ ಭಂಡಾರವನ್ನೇ ಭಗವದ್ಗೀತೆಯು ಒಳಗೊಂಡಿದೆ
ವೇದಕರ್ಮಗಳ ಆಚರಣಾ ಕ್ರಮಗಳನ್ನು ತಿಳಿಸುವ ವೇದಾಂಗಗಳಾಗಲೀ ಜೀವನದೃಷ್ಟಿಯನ್ನು ವಿಷದಪಡಿಸುವ ರಾಮಾಯಣ, ಮಹಾಭಾರತಗಳಾಗಲೀ ಪುರಾಣಗಳಾಗಲೀ ಆಗಮಗಳಾಗಲೀ ತಂತ್ರಗಳಾಗಲೀ ಮಾನವನ ಬಾಳಿಗೆ ಇಂದಿಗೂ ದಾರಿದೀಪಗಳಾಗಿವೆ. ಭಕ್ತಿಮಾರ್ಗಕ್ಕೂ ಹಿಂದು ಧರ್ಮದ ಕೊಡುಗೆ ಅನನ್ಯವಾಗಿದೆ. ಇದಾವುದನ್ನೂ ಅರಿಯದವರು ಮಾತ್ರ ಹಿಂದು ಧರ್ಮವನ್ನು ಟೀಕಿಸುವ ದುಸ್ಸಾಹಸ ಮಾಡುತ್ತಾರೆ.
ನಮ್ಮ ಸುತ್ತಲಿರುವ ಪ್ರಕೃತಿ-ಪ್ರಾಣಿ-ಪಕ್ಷಿಗಳನ್ನು ಗೌರವಿಸುತ್ತದೆ ಹಿಂದು ಧರ್ಮ. ಇವುಗಳಿಂದ ಮಾನವಕುಲಕ್ಕೆ ಉಪಕಾರವಾಗುತ್ತಿರುವುದು ಸುಳ್ಳೆ? ಅಂದಮೇಲೆ ಗೌರವಿಸುವುದು ತಪ್ಪೆ?
'ನ ಹೀದೃಶಂ ಸಂವನನಂ ತ್ರಿಷು ಲೋಕೇಷು ವಿದ್ಯತೇ,
ದಯಾ ಮೈತ್ರೀ ಚ ಭೂತೇಷು ದಾನಂ ಚ ಮಧುರಾ ಚ ವಾಕ್'.
ಇದು ಮಹಾಭಾರತದ ನುಡಿ. ಇದರರ್ಥ, ಪ್ರಾಣಿದಯೆ, ಸ್ನೇಹ, ದಾನ, ಪ್ರಿಯವಾದ ಮಾತು ಇಂತಹ ಪ್ರೀತಿಜನಕ ಉತ್ತಮ ಗುಣ ಮೂರು ಲೋಕಗಳಲ್ಲಿ ಇನ್ನೊಂದಿಲ್ಲ.
ಇಂತಹ ಉತ್ತಮ ಗುಣದ ಕೊರತೆಯಿಂದಲೇ ಅಲ್ಲವೆ ಇಂದು ಮನುಷ್ಯನು ದುಃಖ ದುಮ್ಮಾನಗಳಿಗೆ ಬಲಿಯಾಗಿರುವುದು? ಹಿಂದು ಧರ್ಮದ ಪ್ರತಿಯೊಂದು ಗ್ರಂಥವೂ-ವಿಭಾಗವೂ ಇಂಥ ಉನ್ನತ ಆದರ್ಶಗಳನ್ನು ಸಾರುತ್ತದೆ.
ಮನುಸ್ಮೃತಿ

ಮಾತೆತ್ತಿದರೆ ಟೀಕಾಕಾರರು ಜರಿಯುವುದು ಮನುಸ್ಮೃತಿಯನ್ನು. ಮನುಸ್ಮೃತಿಯ ಒಂದನೇ ಅಧ್ಯಾಯದ ನೂರಾ ಎಂಟನೇ ಸೂಕ್ತಿ ಈ ಕೆಳಗಿನಂತಿದೆ:
'ಆಚಾರಃ ಪರಮೋ ಧರ್ಮಃ ಶ್ರುತ್ಯುಕ್ತಃ ಸ್ಮಾರ್ತ ಏವ ಚ,
ತಸ್ಮಾದಸ್ಮಿನ್ ಸದಾ ಯುಕ್ತಃ ನಿತ್ಯಂ ಸ್ಯಾದಾತ್ಮವಾನ್ನರಃ'.
ಅಂದರೆ, ವೇದಗಳಲ್ಲಿ-ಸ್ಮೃತಿಗಳಲ್ಲಿ ಹೇಳಿರುವ ಸದಾಚಾರವು ಶ್ರೇಷ್ಠವಾದ ಧರ್ಮ. ಆದ್ದರಿಂದ ಮನುಷ್ಯನು ಸದಾ ಅವುಗಳನ್ನು ಕಾಪಾಡಿಕೊಂಡು ಆತ್ಮಜ್ಞಾನವನ್ನು ಪಡೆಯಬೇಕು.
ಈ ರೀತಿ ಮನುಸ್ಮೃತಿಯು ಸದಾಚಾರವನ್ನು ಬೋಧಿಸಿದೆಯೇ ಹೊರತು ದುರಾಚಾರವನ್ನಲ್ಲ. ಆದರೆ ಅದೇ ವೇಳೆ, ಕುಲಭೇದವೆಣಿಸಿ ಅಂದು ಮನುಸ್ಮೃತಿಯಲ್ಲಿ ಹೇಳಲಾಗಿರುವ ಕೆಲ ಕಟ್ಟಳೆ, ಕಟ್ಟುಪಾಡುಗಳನ್ನು ಇಂದು ನಾವು ನಿರಾಕರಿಸಬೇಕಾಗಿದ್ದು ಹಿಂದು ಸಮಾಜವು ಈ ನಿಟ್ಟಿನಲ್ಲಿ ಪ್ರಯತ್ನಶೀಲವಾಗಿದೆ. ಅಂತೆಯೇ, ಹಿಂದು ಧರ್ಮದ ಕೆಲ ಸಮುದಾಯಗಳು ಆಚರಿಸುತ್ತಿರುವ - ವಿಶೇಷವಾಗಿ ಜಾತ್ರೆ-ಉತ್ಸವಗಳಂಥ ಸಂದರ್ಭಗಳಲ್ಲಿ ಜಾರಿಯಲ್ಲಿರುವ - ಕೆಲ ಮೂಢ ಆಚರಣೆಗಳು ಶಾಸ್ತ್ರೋಕ್ತವಲ್ಲವಾಗಿದ್ದು ಅಂಥ ಮೌಢ್ಯವನ್ನು ತೊಡೆದುಹಾಕುವ ಯತ್ನವೂ ಹಿಂದು ಸಮಾಜದಲ್ಲಿಂದು ನಡೆಯುತ್ತಿದೆ.
ಸುಧಾರಣೆಗೆ ತೆರೆದ ಮನ

ಧರ್ಮ ಎಂದಾಕ್ಷಣ ಅಂಧಾಭಿಮಾನ ಹಿಂದುಗಳಲ್ಲಿಲ್ಲ. ಸುಧಾರಣೆಗಳಿಗೆ ಹಿಂದುಗಳ ಮನಸ್ಸು ಸದಾ ತೆರೆದಿರುತ್ತದೆ. ಆದರೆ ಕ್ಯಾಥೊಲಿಕ್ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಇಂಥ ತೆರೆದ ಮನದ ಕೊರತೆಯಿರುವುದನ್ನು ನಾವು ಗಮನಿಸುತ್ತಿದ್ದೇವೆ.
ಹಿಂದು ಧರ್ಮವನ್ನು ನಿಂದಿಸುವ ಮೊದಲು ಅಂಥ ನಿಂದಕರು ಹಿಂದು ಧರ್ಮವನ್ನು ಅರಿಯಲು ಯತ್ನಿಸಬೇಕು. ಹಿಂದು ಧಾರ್ಮಿಕ ಗ್ರಂಥಗಳನ್ನು ನಿಂದಿಸುವವರು ಅವುಗಳನ್ನು ಸಂಪೂರ್ಣ ಓದಬೇಕು ಮತ್ತು ಮನನ ಮಾಡಿಕೊಳ್ಳಬೇಕು. ಆಗ ಅವರ ಅಭಿಪ್ರಾಯ ಬದಲಾದೀತು. ಆದರೆ, ಅನ್ಯೋದ್ದೇಶವಾಗಲೀ ಅಳಿಸಿಹಾಕಲು ಸಾಧ್ಯವೇ ಇಲ್ಲದಂಥ ಪೂರ್ವಗ್ರಹವಾಗಲೀ ಇದ್ದರೆ ಮಾತ್ರ ಅಂಥವರಲ್ಲಿ ಪರಿವರ್ತನೆ ಕಷ್ಟಸಾಧ್ಯ. ಅಂಥವರಿಂದಲೇ ಇಂದು ಹಿಂದು ಧರ್ಮದ ಬಗ್ಗೆ ತಪ್ಪು ಕಲ್ಪನೆಗಳು ಪ್ರಚುರಗೊಳ್ಳುತ್ತಿರುವುದು.
ಮತಧರ್ಮದ, ಅದರಲ್ಲೂ ಅನ್ಯ ಮತಧರ್ಮದ ಅವಹೇಳನ ಭಾರತದ ಸಂವಿಧಾನದ ಪ್ರಕಾರವೇ ಅಪರಾಧ. ಅಂಥ ಅವಹೇಳನವನ್ನು ಹಿಂದು ಧರ್ಮ ಕುರಿತು ಕ್ರಿಶ್ಚಿಯನ್ ಮತಪ್ರಚಾರಕರು ಮಾಡುತ್ತಿರುವಾಗ ನಮ್ಮ ಸಕರ್ಾರಗಳು ಕಣ್ಣು ಮುಚ್ಚಿಕೊಂಡು ಕುಳಿತಿವೆ. ಹಿಂದು ಧರ್ಮದ ಬಗ್ಗೆ, ಹಿಂದು ದೇವತೆಗಳ ಬಗ್ಗೆ ಮತ್ತು ಹಿಂದು ಪುರಾಣಪುರುಷರ ಬಗ್ಗೆ ಅಲ್ಲಸಲ್ಲದ ಅವಹೇಳನ ಮಾಡುವಂಥ ಪುಸ್ತಕಗಳು ಕ್ರಿಶ್ಚಿಯನ್ ಮತಪ್ರಚಾರಕರ ಅಡ್ಡೆಗಳಿಂದ ಹೊರಬಂದು ಅಮಾಯಕ ಹಿಂದುಗಳಿಗೆ ವಿತರಿಸಲ್ಪಡುತ್ತಿದ್ದರೂ ನಮ್ಮ ಸಕರ್ಾರಗಳು ಹಾಗೂ ಕ್ರಿಶ್ಚಿಯನ್ ಧರ್ಮಸಂಸ್ಥೆಗಳು ಏನೂ ಅರಿಯದವರಂತೆ ಸುಮ್ಮನಿವೆ. ಮುಸ್ಲಿಂ ಹುಡುಗರಲ್ಲಿ ಹಿಂದು ಧರ್ಮ ವಿರೋಧಿ ಮತ್ತು ಉಗ್ರಗಾಮಿ ಮನೋಭಾವ ಬಿತ್ತುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದರೂ ಮುಸ್ಲಿಂ ಧರ್ಮಗುರುಗಳು ಮೌನವಹಿಸಿದ್ದಾರೆ. ಅದೇವೇಳೆ, ಯಾವ ಹಿಂದು ಧರ್ಮಗುರುವೂ ಪರಧರ್ಮ ನಿಂದನೆಗೆ ಅವಕಾಶ ಮಾಡಿಕೊಟ್ಟಿಲ್ಲ, ಮಾಡಿಕೊಡುತ್ತಿಲ್ಲ. ಈ ವಾಸ್ತವವನ್ನು ನಾವು ಗಮನಿಸಬೇಕು.
ಹಿಂದು ಧರ್ಮದ ಬಗ್ಗೆ ಅರಿಯದೆಯೇ ಅಥವಾ ಉದ್ದೇಶಪೂರ್ವಕವಾಗಿ ಲಘುವಾಗಿ ಮಾತನಾಡುವುದು, ವಿನಾ ಕಾರಣ ಹಿಂದು ಧರ್ಮವನ್ನು ಮತ್ತು ಹಿಂದು ಧರ್ಮೀಯರನ್ನು ಟೀಕಿಸುವುದು ಇಂಥ ನಡೆಗಳು ಸರ್ವಥಾ ಖಂಡನಾರ್ಹ.


ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment