ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:40 PM

16ರ ಪೋರನ ಸಾಧನೆ. .

Posted by ekanasu

ವಿಶೇಷ ವರದಿ


ವಿಶೇಷ ವರದಿಚಿಕ್ಕಮಗಳೂರು : ಹೊಸ ನಮೂನೆ ವಾಹನ ರೆಡಿ! ಇದನ್ನು
ಯಾವ ಫೇಮಸ್ ಕಂಪನಿ ತಯಾರಿಸಿದ್ದಲ್ಲ. ನಾಲ್ಕು ಚಕ್ರ ಮತ್ತು ಸ್ಟೇರಿಂಗ್ ಇರೋದ್ರಿಂದ ಕಾರು ಎನ್ನಲಡ್ಡಿಯಿಲ್ಲ. ಇದೊಂತರ ಕಾರೂ ಹೌದು...ಬೈಕೂ ಹೌದು.. ಇದು ಹಳ್ಳಿ ಪೊರನ ಗಿಫ್ಟ್ !
ಸಾಧಿಸಿದರೆ ಸಬಳವನ್ನಾದರೂ ನುಂಗಬಹುದು ಎಂಬುದು ಗಾದೆ ಮಾತು! ದಡ ಸೇರುವ ಗುರಿ, ಸಾಧಿಸಬೇಕೆನ್ನುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದೆಂದು ಪಟ್ಟ ಹುಡುಗ ನಿರೂಪಿಸಿದ್ದಾನೆ. ಸ್ವಂತ ಪರಿಶ್ರಮದಲ್ಲಿ ತಯಾರಿಸಿದ ವಾಹನದಲ್ಲಿ ಸ್ನೇಹಿತರನ್ನು ಕೂರಿಸಿಕೊಂಡು ಚಿಕ್ಕಮಗಳೂರು ಪೇಟೆಯಲ್ಲಿ ಜುಮ್ ಅಂತ ಪೇರಿ ಹೊರಡುತ್ತಾನೆ. ತಂದೆ, ತಾಯಿಗಳನ್ನು ಕೂರಿಸಿಕೊಂಡು ವಾಹನದ ಮಜಾ ತೋರಿಸುತ್ತಾನೆ.
ಈ ವಿನೂತನ ಸಾಧನೆಗೆ ಬಾಲಕನಿಗೆ ವಯಸ್ಸು ಅಡ್ಡಿಯಾಗಿಲ್ಲ. ಮಹತ್ತರ ಸಾಧನೆ ಮಾಡಿದ ಬಾಲಕ ಚಿಕ್ಕಮಗಳೂರಿನ ವಂಡರ್ ಬಾಯ್. ಮೀಸೆ ಮೂಡದ ಹುಡುಗ ಹೊಸ ಅವಿಷ್ಕಾರದ ಮೂಲಕ ಅಚ್ಚರಿ ಹುಟ್ಟಿಸುವ ಜತೆಗೆ ವಿಶಿಷ್ಟ ಸಾಧನೆಯಿಂದ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾನೆ.
ಎಲ್ಲರಿಂದಲೂ ಶಹಬಾಸ್ ಗಿರಿಯ ಕೊಡುಗೆ ಸಿಗುತ್ತಿರುವ ಬಾಲಕನಿಗೆ ಮತ್ತೊಂದು ಹೊಸ ಸೃಷ್ಟಿಯ ಮಿಂಚು ಕಣ್ಣಲ್ಲಿ ಮಿನುಗುತ್ತಿದೆ.

ಯಾರೀತ ಪೋರ
ದಿನ ಬೆಳಗಾದರೆ ಒಂದಲ್ಲ ಒಂದು ಸಾಧನೆ ಮಾಡುವವರ ಸಂಖ್ಯೆಗೇನೂ ಬರ ಮತ್ತು ಕೊನೆಯೆಂಬುದೇ ಇಲ್ಲ. ಇಂತಹ ಸಾಧನೆ ಮಾಡಿದವರ
ಸಾಲಿಗೆ ಇನ್ನೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ರಾಂಪುರದ ಹದಿನಾರರ ಪೋರ ವೇದಾಂತ ವಿಶಿಷ್ಟ ಸಾಧನೆ ಮಾಡಿದವರ ಕಡತಕ್ಕೆ ಸೇರಿದ್ದಾನೆ. ರಾಂಪುರ ನಿವಾಸಿ ಪ್ರಭಾಕರ ಮತ್ತು ಭಾರತಿ ಪ್ರಭಾಕರ ದಂಪತಿಗಳ ಪುತ್ರ ವೇದಾಂತ ಗೋಣಿಕೊಪ್ಪಲಿನ
ಕೂರ್ಗ್ ಪಬ್ಲಿಕ್ ಸ್ಕೂಲಿನಲ್ಲಿ ಪ್ರಥಮ ಪಿಯುಸಿಗೆ ಮೊನ್ನೆ ಮೊನ್ನೆಯಷ್ಟೇ ಸೇರ್ಪಡೆಗೊಂಡಿದ್ದಾನೆ. ಇತರ ಹವ್ಯಾಸಗಳ ಜೊತೆಗೆ ಕಲಿಕೆಯಲ್ಲಿಯೂ ವೇದಾಂತ ಮುಂದಿದ್ದಾನೆ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.81 ಅಂಕ ಪಡೆದು ಮುಂದಿನ ಕಾಲೇಜು ಜೀವನಕ್ಕೆ ಜಿಗಿದಿದ್ದಾನೆ.
ವೇದಾಂತ ಮತ್ತೊಬ್ಬರ ಸಹಾಯವಿಲ್ಲದೇ ಕೇವಲ 40 ದಿನಗಳಲ್ಲಿ, 18,000ರೂ. ವೆಚ್ಚದಲ್ಲಿ ಪುಟ್ಟ ಎಟಿವಿ ವಾಹನ ನಿರ್ಮಿಸಿ
ಹೊಸ ಸಾಧನೆ ಮಾಡಿದ್ದಾನೆ. ಹೀಗೆ ಪುಟ್ಟ ವಾಹನ ಹೆಮ್ಮೆಯಿಂದ ಚಲಾಯಿಸಿಕೊಂಡು ವೇದಾಂತ ಠೀವಿಯಿಂದ ಸುತ್ತುತ್ತಾನೆ.

ಹಳತರಲ್ಲಿ ಹೊಸ ಮಾದರಿ
ಚಿಕ್ಕಂದಿನಿಂದಲೇ ಒಂದಲ್ಲ ಒಂದು ಸಾಧನೆ ಗೀಳು ವೇದಾಂತನ ಮೈಗೆ ಅಂಟಿಕೊಂಡಿತ್ತು. ಈ ಹುಚ್ಚೇ ಹೊಸ ಸಾಹಸಕ್ಕೆ ಪ್ರೇರಣೆ ಎಂದರೆ ತಪ್ಪಲ್ಲ. ವೇದಾಂತ ಹಳೆಯ ವಾಹನ ಬಳಸಿಕೊಂಡು ಪುಟ್ಟ ಎಟಿವಿ ಕಾರು ನಿರ್ಮಿಸಿದ್ದಾನೆ. ಈತ ಸ್ಟೇರಿಂಗ್ ಹೊಂದಿರುವ ಎಟಿವಿ ಕಾರನ್ನು 18 ಸಾವಿರ ರೂ. ವೆಚ್ಚದಲ್ಲಿ ಬರೋಬ್ಬರಿ 40 ದಿನದಲ್ಲಿ ಹೊರಕ್ಕೆ ತಂದಿದ್ದಾನೆ. ವಿನೂತನ ಕಾರು ನಿರ್ಮಾಣಕ್ಕೆ ವೇದಾಂತ ಹಿರೋ ಹೊಂಡಾ
ಸ್ಲೀಕ್ 100 ಸಿಸಿ ಯಂತ್ರ ಬಳಸಿಕೊಂಡಿದ್ದಾನೆ. ಕಾರಿನ ಗಾಲಿಗೆ ಕೆನೈಟಿಕ್ ಬೈಕ್ನ ಟೈಯರ್ ಅಳವಡಿಸಲಾಗಿದೆ. ಸಿಟಿ 100 ಮತ್ತು
ಯಮಹಾ ಬೈಕ್ನ ಶಾಕ್ ಅಬ್ಸರ್ವರ್ ಮತ್ತು ಮಾರುತಿ 800ನ ಸ್ಟೇರಿಂಗ್ ಬಳಕೆ ವೇದಾಂತನ ಕಾರಿನ ವೈಶಿಷ್ಟ್ಯತೆ. ಡಿಸ್ಕ್ ಬ್ರೇಕ್
ಹೊಂದಿರುವ ಈ ಬೈಕ್ ಕಂ ಕಾರು ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಒಂದು ಲೀಟರ್
ಇಂಧನದಲ್ಲಿ ಸರಾಗವಾಗಿ 60 ಕಿಲೋಮೀಟರ್ ಕ್ರಮಿಸಬಹುದು. ವಾಹನ ಡಿಸೈನ್ ನಿಂದ ಆರಂಭಗೊಂಡ ಅಂತ್ಯದವರೆಗಿನ
ಕೆಲಸವೆಲ್ಲವೂ ವೇದಾಂತ್ ಮೇಡ್.

ಜನ್ಮಕ್ಕಂಟಿದ ಹವ್ಯಾಸ
ಚಿಕ್ಕಂದಿನಿಂದಲೂ ವೇದಾಂತ ಸದಾ ಕ್ರೀಯಾಶೀಲ. ಎಳೆವೆಯಲ್ಲಿಯೇ ಕಾರುಗಳ ಕುರಿತು ವಿಶೇಷ ಆಸಕ್ತಿ ಹೊಂದಿದ್ದ. ಈ ಬಾರಿಯ ಬೇಸಿಗೆ ರಜೆ
ನಿಮಿತ್ತ ಮನೆಗೆ ಬಂದಿದ್ದ ವೇದಾಂತ ಎಟಿವಿ ವಾಹನ ನಿರ್ಮಿಸಿದ್ದಾನೆ. ಚಿಕ್ಕವನಿದ್ದಾಗ ವೇದಾಂತ ಆಟಿಕೆಯ ಕಾರು ಬಿಚ್ಚಿ ಜೋಡಿಸುವ
ಹವ್ಯಾಸಕ್ಕೆ ಬಿದ್ದಿದ್ದ. ಹಬ್ಬ, ಹರಿದಿನ ಜಾತ್ರೆಗೆ ಹೋದರೆ ಆಟದ ಕಾರು, ಬೈಕ್, ಲಾರಿ ರೈಲು ಕೊಡಿಸಲು ತಂದೆ, ತಾಯಿಗೆ
ದಂಬಾಲು ಬೀಳುತ್ತಿದ್ದ. ಇವನ ಹುಚ್ಚು ಬೇಡಿಕೆ ತಂದೆ, ತಾಯಿಗಳಿಗೆ ಚಿಂತೆಯ ಸಂಗತಿಯಾಗಿತ್ತು. ನಿನಗ್ಯಾಕೆ ಈ ಪಾಟಿ ವಾಹನ ಹುಚ್ಚು . ಮುಂದೆ ಗ್ಯಾರೇಜ್ ಇಡುತ್ತೀಯ ಅಂತ ತಂದೆ ತಾಯಿ ಮಗನನ್ನು ಗೇಲಿ ಮಾಡುತ್ತಿದ್ದರು. ವೇದಾಂತ 12ನೇ ವಯಸ್ಸಿಗೆ ವಾಹನ ಚಲಾಯಿಸುವುದು ಕಲಿತ. ಪ್ರಸಕ್ತ ಕಾಲಘಟ್ಟದಲ್ಲಿ ವಾಹನ ಓಡಿಸುವುದೆಂದರೆ ಇವನಿಗೆ ನೀರು ಕುಡಿದಷ್ಟು ಸಲೀಸು.

ಪೋಷಕರ ಪ್ರೋತ್ಸಾಹ
ವೇದಾಂತನ ಸಾಧನೆ ಹಿಂದೆ ಪೋಷಕರು ನಿಂತಿದ್ದಾರೆ. ಮಗನ ಸಾಧನೆ ಬಗ್ಗೆ ತಂದೆ,ತಾಯಿಗಳಿಗೆ ವಿಪರೀತ ಹೆಮ್ಮಯಿದೆ. ಮಗನ ಉತ್ಸಾಹಕ್ಕೆ
ತಂದೆ ಪ್ರಭಾಕರ ಆಗಲಿ, ತಾಯಿ ಭಾರತಿ ಅವರಾಗಲಿ ತಣ್ಣೀರು ಎರಚಲಿಲ್ಲ. ಮಗ ಕೇಳಿದ್ದನ್ನು ಪೋಷಕರು ದೂಸರಾ ಮಾತನಾಡದೆ ಒದಗಿಸಿದ್ದಾರೆ. ತಂದೆ, ತಾಯಿಯರ ಪ್ರೋತ್ಸಾಹವಿಲ್ಲದೆ ಎಂಥಹದೊಂದು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ವೇದಾಂತ ವಿನಂಬ್ರವಾಗಿ
ಹೇಳುತ್ತಾನೆ.ಮುಂದೆ ಮೆಕ್ಯಾನಿಕಲ್ ಇಂಜಿನಿಯರ್ ಆಗುವ ಬಯಕೆ ವೇದಾಂತ ಇಟ್ಟು ಕೊಂಡಿದ್ದಾನೆ. ಈ ಪುಟ್ಟ ಪೋರನಿಂದ ಮುಂದಿನ ದಿನಗಳಲ್ಲಿ
ಇನ್ನಷ್ಟು ನವ, ನವೀನ ವಾಹನ ಹೊರಬರಲಿ. ಅದು ಜನ ಸಾಮಾನ್ಯರ ಕೈಗೆಟಕುವಂತಿರಲಿ ಎಂಬುದು ಜನರ ಆಶಯ. ಬೆಸ್ಟ್ ಆಫ್ ಲಕ್ ವೇದಾಂತ್.

ಶ್ರೀಪತಿ ಹೆಗಡೆ ಹಕ್ಲಾಡಿ
(ಶ್ರೀಪತಿ ಹೆಗಡೆ ಹಕ್ಲಾಡಿ ಓರ್ವ ಆತ್ಮೀಯ ವ್ಯಕ್ತಿ. ಉಷಾಕಿರಣ ಪತ್ರಿಕೆಯಲ್ಲಿ ಮಂಗಳೂರು ಆವೃತ್ತಿಯಲ್ಲಿ ವರದಿಗಾರರಾಗಿ ಕೆಲಸ ಮಾಡಿದಂದಿನಿಂದ ಗೆಳೆತನ. ದಿನಾ ಒಂದಿಲ್ಲೊಂದು ವರದಿಗಳ ಬೆನ್ನು ಹತ್ತಿ ಸುದ್ದಿಮಾಡುವ ಉತ್ಸಾಹಿ ವ್ಯಕ್ತಿ. ತುಂಬು ಪ್ರೀತಿ. ಅಷ್ಟೇ ಕಾಳಜಿ. ಎಲ್ಲಕ್ಕಿಂತ ಹೆಚ್ಚು ಮೃದು ಮನಸ್ಸು. ಜೀವನದಲ್ಲಿ ಸಾಕಷ್ಟು ನೋವುಂಡವರು. ಆ ಕಾರಣಕ್ಕಾಗಿಯೇ ಇತರರ ನೋವನ್ನು ಅರ್ಥೈಸಿಕೊಳ್ಳುತ್ತಿದ್ದಾರೆ. ಸ್ನೇಹಜೀವಿ, ಇತರರಿಗೆ ತನ್ನ ಕೈಲಾದ ಸಹಾಯ ಮಾಡುವ ವ್ಯಕ್ತಿತ್ವ. ಹೊಸತನದ ವರದಿಗಳನ್ನು ನೀಡುವುದು ಹಕ್ಲಾಡಿ ಅವರ ವೈಶಿಷ್ಠ್ಯ. ಇದೀಗ ಹೊಸದಿಗಂತದ ವರದಿಗಾರರು.ಈ ಕನಸು.ಕಾಂ ಮೇಲಣ ಪ್ರೀತಿ, ವಿಶ್ವಾಸದಿಂದ ವಿಶೇಷ ವರದಿ, ನುಡಿಚಿತ್ರಗಳನ್ನು ನೀಡುತ್ತಿದ್ದಾರೆ. )

0 comments:

Post a Comment