ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಚಿತ್ರ - ವರದಿ: ಹರೀಶ್ ಕೆ.ಆದೂರು
``ನಿರಂತರ ಅನೈತಿಕ ಚಟುವಟಿಕೆಗಳು, ಪೋಲಿ ಹುಡುಗರ ಕೈಯಲ್ಲಿ ನಲುಗುವ ಕೋಟೆಯ ಪ್ರಸಕ್ತ ಸ್ಥಿತಿ ನೋಡುವಾಗ ಮನಕಲುಕುವಂತಾಗುತ್ತದೆ. ಒಂದೊಮ್ಮೆ ವೈಭವದಿಂದ ಮೆರೆಯುತ್ತಿದ್ದ ಕೋಟೆ ಇಂದು ಅನಾಥವಾಗಿದೆ. ರಕ್ಷಣೆಯಿಲ್ಲದೆ ಕಾಲಗರ್ಭದೊಳು ಹುದುಗಹೊರಟಿದೆ. ಕೋಟೆಯ ಪಗಾರಗಳು ಇಂದೋ ನಾಳೆಯೋ ಎಂಬ ಕ್ಷಣಗಣನೆಯಲ್ಲಿ ತೊಡಗಿವೆ.ಭೀಕರ ಬಿರುಕು ಕಾಣಿಸಿಕೊಳ್ಳುತ್ತಿವೆ.
`ರಕ್ಷಿತ ಸ್ಮಾರಕ' ಎಂಬ ಫಲಕ ನೆಟ್ಟಿರುವುದಕ್ಕಾದರೂ ಒಂದು `ಮರ್ಯಾದೆ' ಪ್ರಾಪ್ತವಾಗಲು ಸಂಬಂಧಪಟ್ಟ ಇಲಾಖೆ ಏನಾದರೊಂದು ಕ್ರಮ ಕೈಗೊಳ್ಳಬೇಕಾಗಿತ್ತು.


`` ಸಂರಕ್ಷಿತ ಸ್ಮಾರಕ.. ಪ್ರಾಚೀನ ಸ್ಮಾರಕ, ಪುರಾತತ್ವೀಯ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ , 1958(1958ರ 24)ರ ಪ್ರಕಾರ ಈ ಸ್ಮಾರಕವನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ. ಯಾರಾದರೂ ಇದನ್ನು ನಾಶಮಾಡಿದರೆ, ಸ್ಥಳಾಂತರಿಸಿದರೆ, ಹಾನಿಯುಂಟುಮಾಡಿದರೆ, ಬದಲಿಸಿದರೆ, ವಿಕೃತಗೊಳಿಸಿದರೆ, ಗಂಡಾಂತರಗೊಳಿಸಿದರೆ ಅಥವಾ ದುರುಪಯೋಗಪಡಿಸಿದರೆ ಅಂಥವರನ್ನು ಮೂರು ತಿಂಗಳವರೆಗೆ ಹೆಚ್ಚಿಸಬಹುದಾದ ಕಾರಾಗೃಹವಾಸಕ್ಕೆ ಒಳಪಡಿಸಲಾಗುವುದು ಅಥವಾ 5,000 ರುಪಾಯಿಗಳ ವರೆಗೆ ಹೆಚ್ಚಿಸಬಹುದಾದ ದಂಡ ಅಥವಾ ಎರಡೂ ರೀತಿಯ ಶಿಕ್ಷೆಗೆ ಒಳಪಡಿಸಲಾಗುವುದು''. ಈ ಫಲಕವನ್ನು ಓದಿದಾಗ ನಿಜಕ್ಕೂ ನಗುಬರುತ್ತದೆ. ಈ ಫಲಕ ನೆಟ್ಟವರಿಗೆ, ಆ ಇಲಾಖೆಗೆ ಇದರ ನೂರುಪಟ್ಟು ದಂಡ ಹಾಕಬೇಕೆಂಬಂತಾಗುವುದು ಸಹಜ. ಕಾರಣ ಇಷ್ಟೇ. ಸಕಲೇಶಪುರ ಸನಿಹದ ಮಂಜರಾಬಾದ್ ಕೋಟೆಯ ಪ್ರವೇಶ ಪ್ರದೇಶದಲ್ಲಿ ಈ ಫಲಕ ನಡೆಲಾಗಿದೆ. `ಫಲಕದಿಂದ ಕೋಟೆಯ ರಕ್ಷಣೆ ಸಾಧ್ಯವೇ'? ಎಂಬ ಪ್ರಶ್ನೆ ಈ ಕೋಟೆಯನ್ನು ಪ್ರವೇಶಿಸಿದರೆ ಉಂಟಾಗುವುದು ಸಹಜ.

ಎಲ್ಲಿದೆ...ಹೇಗಿದೆ:ಬೆಂಗಳೂರಿನಿಂದ ಮಂಗಳೂರಿಗೆ ಬರುವ ಹಾದಿ ಮಧ್ಯೆ ಸಕಲೇಶಪುರದಿಂದ 5 ಕಿಲೋಮೀಟರ್ ಮುಂದಕ್ಕೆ ಗುಡ್ಡದ ಮೇಲ್ಭಾಗದಲ್ಲಿ `ಮಂಜರಾಬಾದ್ ಕೋಟೆ'ಯ ಪಳೆಯುಳಿಕೆ ಕಾಣಸಿಗುತ್ತದೆ. ಸುಮಾರು ಐದು ಎಕ್ಕರೆ ಪ್ರದೇಶದಲ್ಲಿ ನಕ್ಷತ್ರಾಕಾರದಲ್ಲಿ ರಚಿಸಲ್ಪಟ್ಟ ಈ ಕೋಟೆ ಅತ್ಯಂತ ರಮಣೀಯವಾದ ನಿಸರ್ಗ ಸೌಂದರ್ಯದೊಂದಿಗೆ ಇಸ್ಮಾಮಿಕ್ ವಾಸ್ತು ಶೈಲಿಯಲ್ಲಿ ಕಂಡುಬರುತ್ತಿದೆ. ಸಮುದ್ರ ಮಟ್ಟದಿಂದ 3240 ಅಡಿ ಎತ್ತರದಲ್ಲಿ ಕೋಟೆ ತಲೆಯೆತ್ತಿದೆ. ಕೋಟೆಯ ಅಷ್ಟ ಭುಜಾಕೃತಿಯ ನಕ್ಷತ್ರಾಕಾರದ ಪಾಗಾರದಲ್ಲಿ ಪ್ರತೀ ಮೂಲೆಯಲ್ಲಿಯೂ ಕಾವಲು ಗೋಪುರವಿದೆ.ಕೋಟೆಯಲ್ಲಿ ಕಾವಲುಗಾರರು ನಿಲ್ಲುತ್ತಿದ್ದ ಕೋಣೆ, ಪ್ರವೇಶ ಧ್ವಾರದ ಎರಡೂ ಬದಿಗಳಲ್ಲಿ ಕಾವಲುಗಾರರ ಕೋಣೆ, ದೀಪ ಇಡುತ್ತಿದ್ದ ಕಿಟಿಕಿಗಳು, ಧ್ವಾರದ ಗೋಡೆಯ ಮೇಲ್ಭಾಗದಲ್ಲಿ ಇಸ್ಲಾಮಿಕ್ ಶೈಲಿಯ ವಾಸ್ತುರಚನೆ ಇಂದಿಗೂ ಗೋಚರಿಸುತ್ತದೆ. ಕೋಟೆಯ ಒಳಭಾಗದಲ್ಲಿ ಸುಮಾರು ಒಂದು ಎಕ್ಕರೆಗಳಷ್ಟು ವಿಶಾಲವಾದ ಸ್ಥಳವಿದ್ದು ಸುತ್ತಲೂ ಎತ್ತರವಾದ ಪಗಾರಗಳಿವೆ. ಮಧ್ಯಭಾಗದಲ್ಲಿ ಚತುಷ್ಕೋನಾಕೃತಿಯ ಪುಷ್ಕರಣಿ. ಕೆಳಭಾಗದಲ್ಲಿ ಸೈನಿಕರ ಕೋಣೆಗಳು. ಇಲ್ಲೇ ಸನಿಹದಲ್ಲಿ ನೆಲ ಅಂತಸ್ತಿನ ಶೇಖರಣಾ ಕೊಠಡಿಗಳು ಕಂಡುಬರುತ್ತವೆ.

ಇಂದು ಹೀಗಿದೆ...


ಮೈಸೂರ ಹುಲಿ ಎಂದೇ ಖ್ಯಾತಿ ಪಡೆದಿದ್ದ ಟೀಪು ಸುಲ್ತಾನ್ ಈ ಕೋಟೆ ನಿಮರ್ಿಸಿದನೆಂದು ಹೇಳಲಾಗುತ್ತಿದೆ. 1971ರಲ್ಲಿ ಪ್ರಕಟಗೊಂಡ ಹಾಸನ ಜಿಲ್ಲಾ ಗಜೇಟೀಯರ್ ನಲ್ಲೂ ಇದೇ ರೀತಿಯ ಮಾಹಿತಿ ಲಭ್ಯವಾಗುತ್ತದೆ.
ದುರಂತದ ಸಂಗತಿಯೆಂದರೆ ಈ ಕೋಟೆ ಇಂದು ಕಾಲಗರ್ಭಕ್ಕೆ ಸೇರುವ ಹಂತದಲ್ಲಿದೆ. ಕೋಟೆಯ ಪಗಾರದಲ್ಲಿ ತೀವ್ರ ಬಿರುಕು ಕಾಣಿಸಿಕೊಂಡು ಮಳೆಗಾಲದಲ್ಲಿ ಕುಸಿಯುವ ಭೀತಿಯನ್ನೆದುರಿಸುತ್ತಿದೆ. ಕೋಟೆಯ ಪಾಗಾರದ ಮೇಲ್ಭಾಗದಲ್ಲಿರುವ ಇಟ್ಟಿಗೆಗಳು ಈ ಪ್ರದೇಶದ ಪೋಲಿಹುಡುಗರ ಕೈಗೆ ತುತ್ತಾಗುತ್ತಿದೆ. ಕೋಟೆಯ ಒಳಭಾಗ ಇಂದು ಕ್ರಿಕೆಟ್ ಆಟದ ಮೈದಾನವಾಗಿ ಮಾರ್ಪಟ್ಟಿದೆ. ಸೈನಿಕರ ಕೊಠಡಿ, ದಾಸ್ತಾನು ಕೊಠಡಿಗಳು ಇಂದು `ಅನೈತಿಕ'ಕಾರ್ಯಗಳಿಗೆ ವೇದಿಕೆಯಾಗುತ್ತಿದೆ. ಕೋಟೆಯ ಸುತ್ತಲೂ ಕಳೆಗಿಡಗಳು ಬೆಳೆದು ನಿಂತಿವೆ. ಕೋಟೆಯ ಮುಖ್ಯಧ್ವಾರದಲ್ಲಿರುವ ಬಾಗಿಲು `ಈಗಲೋ -ಮತ್ತೆಯೋ' ಎಂಬಂತೆ ಬೀಳಲಣಿಯಾಗಿದೆ. ಇದು ಮಂಜರಾಬಾದ್ ಕೋಟೆಯ ಪ್ರಸಕ್ತ ಸ್ಥಿತಿ- ಗತಿ.

ಕೇರಳ ಮಾದರಿಯಲ್ಲಾಗಲಿ...
ಕೇರಳ ರಾಜ್ಯದ ಕಾಸರಗೋಡು ಸಮೀಪದ ಬೇಕಲದಲ್ಲಿ ಟೀಪುಸುಲ್ತಾನ್ ಕಾಲದ ಸಮುದ್ರದಂಚಿನ ಕೋಟೆಯೊಂದಿದೆ. ಬೇಕಲ ಕೋಟೆ ಎಂದೇ ಖ್ಯಾತಿ ಪಡೆದಿದ್ದ ಆ ಕೋಟೆ ಹಿಂದೆ ಜೀರ್ಣಾವಸ್ಥೆಯಲ್ಲಿತ್ತು. ಆದರೆ ಕೇರಳ ರಾಜ್ಯದ ಪ್ರವಾಸೋದ್ಯಮ ಇಲಾಖೆ ಆ ಕೋಟೆಯನ್ನು ಪುನಶ್ಚೇತನಗೊಳಿಸಿ `ಗತವೈಭವ' ಮತ್ತೆ ಮೆರೆಯುವಂತೆ ಮಾಡಿತು. ಕೋಟೆಯ ವಾಸ್ತು ವಿನ್ಯಾಸಕ್ಕೆ ಕೊಂಚವೂ ಚ್ಯುತಿಬರದಂತೆ ಈ ಹಿಂದಿನ ಮಾದರಿಯಲ್ಲೇ ಕೋಟೆಯ ಪುನರ್ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡು ಅದನ್ನೊಂದು ಪ್ರವಾಸೀ ತಾಣವನ್ನಾಗಿ ಪರಿವರ್ತಿಸಿತು. ಕೇರಳ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಕಾರ್ಯವೈಖರಿಯ ರೀತಿಯಲ್ಲಿಯೇ ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯೂ ಕಾರ್ಯ ನಿರ್ವಹಿಸಬೇಕಾಗಿದೆ. ಮಂಜರಾಬಾದ್ ಕೋಟೆಯನ್ನು ತಕ್ಷಣವೇ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಕೈಯಿಕ್ಕಬೇಕಾಗಿದೆ.

1 comments:

ಮಿಥುನ said...

ಸರಿ, ಕೇರಳ ಮಾದರಿಯ ರಕ್ಷಣೆ ಅಗತ್ಯವಿದೆ. ಮುಲ್ಕಿಯಲ್ಲಿ ನಾಲ್ಕು ಬಸದಿಗಳು ಪೂರ್ತಿ ಬಿದ್ದಿವೆ. ಹೇಳೋರು ಕೇಳೋರು ಇಲ್ಲ ಅಂತಾಗಿದೆ

Post a Comment