ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು: ಅಭೂತಪೂರ್ವ ಯಶಸ್ಸು ಸಾಧಿಸಿ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಯಲ್ಲಿ ಹೊಸ ಆಯಾಮವನ್ನು ಸೃಷ್ಠಿಸಿರುವ ಈ ಐತಿಹಾಸಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 5,000ಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಬಂಡವಾಳ ಹೂಡಿಕೆದಾರರಿಗೆ ಕರ್ನಾಟಕವು ಅತ್ಯಂತ ಪ್ರಶಸ್ತ ರಾಜ್ಯವೆಂದು ಈ ಸಮಾವೇಶದಿಂದ ಸ್ಪಷ್ಠವಾಗಿ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅಮೇರಿಕಾ, ಇಂಗ್ಲೇಂಡ್, ಕೆನಡಾ, ಜರ್ಮನಿ, ಚೈನಾ, ಜಪಾನ್, ಸೌದಿ ಅರೇಬಿಯಾ, ಸಿಂಗಪೂರ್, ಮಲೇಶಿಯಾ, ಯುಎಇ, ಪ್ರಾನ್ಸ್ ಹಾಗೂ ಇತರೆ ರಾಷ್ಟ್ರಗಳ ಬಂಡವಾಳ ಹೂಡಿಕೆದಾರರು ಈ ಸಮಾವೇಶದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ್ದಾರೆ. ದೇಶದ ಹಾಗೂ ಜಾಗತಿಕ ಮಟ್ಟದ ಹಲವಾರು ಉದ್ಯಮಗಳ ದಿಗ್ಗಜರೊಂದಿಗೆ ನಾನು ಮುಖಾಮುಖಿ ಚರ್ಚೆ ಮಾಡಿದ್ದೇನೆ. ಆ ಚರ್ಚೆಗಳು ಫಲಪ್ರದವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರ್ಸೆಲಾರ್ ಮಿತ್ತಲ್ ಸಂಸ್ಥೆಯ ಲಕ್ಷ್ಮೀ ಮಿತ್ತಲ್, ಆದಿತ್ಯ ಬಿರ್ಲಾ ಸಮೂಹದ ಕುಮಾರಮಂಗಳಂ ಬಿರ್ಲಾ, ಕೊರಿಯಾದ ಬೃಹತ್ ಉಕ್ಕು ಘಟಕವಾದ ಪಾಸ್ಕೋ ಸಂಸ್ಥೆಯ ಬ್ಯಾಂಗ್ ಹಾಗೂ ಇತರೆ ಹಿರಿಯ ಅಧಿಕಾರಿಗಳು,ಎಸ್ಸಾರ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶಶಿ ರೂಯ, ಭೂಷಣ್ ಸ್ಟೀಲ್ಸ್ನ ನಾಗರಾಜ್ ಸಿಂಘಲ್ ಇವರೆಲ್ಲರೂ ರಾಜ್ಯದಲ್ಲಿ ಉಕ್ಕು ಯೋಜನೆಗಳನ್ನು ಸ್ಥಾಪಿಸಲು ತೀವ್ರ ಆಸಕ್ತಿ ತೋರಿಸಿದ್ದಾರೆ. ರಾಜ್ಯ ಸರಕಾರದ ವತಿಯಿಂದ ಅವರಿಗೆ ಎಲ್ಲಾ ರೀತಿಯ ನೆರವಿನ ಭರವಸೆ ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಓಎನ್ಜಿಸಿ ಸಂಸ್ಥೆಯ ಮುಖ್ಯಸ್ಥರಾದ ಆರ್.ಎಸ್. ಶರ್ಮರವರೊಂದಿಗೂ ನಾನು ವಿವರವಾಗಿ ಚರ್ಚಿಸಿದ್ದೇನೆ. ನೆಸ್ಲೆ ಕಂಪನಿಯ ಕ್ರಿಶ್ಚಿಯನ್ ಸ್ಕಿಮಿಡಿಟ್ರವರೊಂದಿಗೂ ಚರ್ಚೆ ನಡೆಸಿದ್ದು ಇನ್ನೊಂದು ವರ್ಷದಲ್ಲಿ ಕರ್ನಾಟಕದಲ್ಲಿ ನೆಸ್ಲೆ ಸಂಸ್ಥೆ ವತಿಯಿಂದ ಉತ್ಪಾದನೆ ಪ್ರಾರಂಭಿಸುವ ಬಯಕೆ ಅವರಿಗಿದೆ ಎಂದು ತಿಳಿಸಿದರು.
ಪ್ರಾನ್ಸ್ ದೇಶದ ಸೈಂಟ್ ಗೋಬೈನ್ನ ವಿಶೇಷ ಯೋಜನೆಗಳ ನಿರ್ದೇಶಕರಾದ ಕ್ರಿಶ್ಚಿಯನ್ ಬೆಸೆ ಅವರು ನನ್ನೊಡನೆ ಚರ್ಚಿಸಿದ್ದು, ಡಕ್ಕೈಲ್ ಕಬ್ಬಿಣ ಮತ್ತು ಉಕ್ಕು ಪೈಪ್ಗಳ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಅವರು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಯುನೈಟೆಡ್ ಅರಬ್ ಯಮರೈಟ್ಸ್ನಿಂದ ಒಂದು ಬೃಹತ್ ನಿಯೋಗ ಸಮಾವೇಶದಲ್ಲಿ ಭಾಗವಹಿಸಿತ್ತು. ಅಬುದಾಬಿಯ ಮೀಡಿಯನ್ ಸಂಸ್ಥೆಯ ಅಧ್ಯಕ್ಷರಾದ ಕುಮಾರ್ ಎಸ್. ಅಲ್-ದಹೇರಿ, ನ್ಯೂ ಮೆಡಿಕಲ್ ಗ್ರೂಪಿನ ಡಾ. ಬಿ.ಆರ್. ಶೆಟ್ಟಿ ಹಾಗೂ ದುಬೈನ ಇಲಿಸ್ ಮತ್ತು ಮುಸ್ತಾಫಾ ಗಲದಾರಿ ಸಮೂಹದ ನಿರ್ವಾಹಕ ನಿರ್ದೇಶಕರಾದ ಸೈಯದ್ ಖಲೀಲ್ ರವರನ್ನು ನಾನು ಭೇಟಿಯಾಗಿದ್ದೇನೆ ಎಂದರು. ನಗರಾಭಿವೃದ್ಧಿ, ಇಂಧನ, ಮೂಲಭೂತ ಸೌಕರ್ಯಗಳು ಬಂದರುಗಳ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಅವರು ಆಸಕ್ತಿ ತೋರಿಸಿದ್ದಾರೆ. ಈ ಪ್ರಸ್ತಾವನೆಗಳನ್ನು ಶೀಘ್ರದಲ್ಲಿಯೇ ಪರಿಗಣಿಸಲಾಗುವುದು.

ಮಹೀಂದ್ರ ಲೈಫ್ ಸ್ಪೇಸಸ್ನ ಮುಖ್ಯಸ್ಥೆಯಾದ ಅನಿತಾ ಅರ್ಜುನ್ ದಾಸ್ ಅವರು ವೈಮಾನಿಕ ಹಾಗೂ ಆಟೋಮೋಟೀವ್ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿದ್ದಾರೆ. ಎನ್ಕಾರ್ನ್ ಗ್ರೂಪ್ನ ನಿರ್ದೇಶಕ ಅಜಯ್ ಮೆಹ್ರಾ, ಅವರು ರಾಜ್ಯದಲ್ಲಿ ಪವನ ಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆಗೆ ಇನ್ನಷ್ಟು ಕೊಡುಗೆ ನೀಡುವ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಫಾಲ್ಕನ್ ಗ್ರೂಪ್ನ ಅಧ್ಯಕ್ಷ ಪವನ್ ಕುಮಾರ್ ರೂಯಾ ಅವರು ಆಟೋಮೋಟೀವ್ ಟೈಯರ್ ಗಳ ಉತ್ಪಾದನಾ ಘಟಕವನ್ನು ವಿಸ್ತರಿಸುವ ಬಗ್ಗೆ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಎಂಎಆರ್ಐಬಿ ಇನ್ಫ್ರಾಸ್ಟ್ರಕ್ಚರ್ ಇಂಡಸ್ಟ್ರೀಸಿನ ಮುಖ್ಯ ಕಾರ್ಯನಿರ್ವಾಹಕ ಸಂಜಯ್ ಛುನ್ಕೇರ್ ಅವರು ರಾಜ್ಯದ ಮೂಲಭೂತ ಸೌರ್ಕರ್ಯಗಳ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿರುವ ಎಲ್ಲಾ ಕಂಪನಿಗಳೊಂದಿಗೆ ನಮ್ಮ ಅಧಿಕಾರಿಗಳ ತಂಡ ನಿರಂತರವಾಗಿ ಸಂಪರ್ಕವನ್ನು ಹೊಂದಿದ್ದು, ಎಲ್ಲಾ ಉದ್ದೇಶಿತ ಯೋಜನೆಗಳಿಗೆ ತ್ವರಿತ ಅನುಷ್ಠನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಬಂಡವಾಳ ಹೂಡಿಕೆದಾರರು ನಮ್ಮ ರಾಜ್ಯದ ಮೇಲೆ ಇಟ್ಟಿರುವ ಆಸಕ್ತಿ ಹಾಗೂ ನಂಬಿಕೆಯನ್ನು ಈ ಸಮಾವೇಶ ದೃಢಪಡಿಸಿದೆ. ಇದಕ್ಕಾಗಿ ನಾನು, ಸಂತೋಷ ಪಡುತ್ತೇನೆ ಎಂದ ಮುಖ್ಯಮಂತ್ರಿಗಳು ಜಾಗತಿಕ ಆರ್ಥಿಕ ಹಿಂಜರಿತದ ಕರಿನೆರಳು ವಿಶ್ವದ ಬಹುತೇಕ ಕಡೆ ಇನ್ನೂ ಆವರಿಸಿರುವ ಈ ದಿನಗಳಲ್ಲಿ ಕರ್ನಾಟಕ ರಾಜ್ಯವು ನಿರೀಕ್ಷೆಗೂ ಮೀರಿದ ಬಂಡವಾಳವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ, ಆ ಮೂಲಕ ಭಾರತದಲ್ಲೇ ಒಂದು ಹೊಸ ಆಯಾಮ ಸೃಷ್ಟಿಸಿದೆ ಎಂದವರು ಹೇಳಿದರು.

ನಿನ್ನೆ ದಿನದ ಅಂತ್ಯಕ್ಕೆ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು 3.5 ಲಕ್ಷ ಕೋಟಿ ರೂ. ಮೊತ್ತದ 400ಕ್ಕೂ ಹೆಚ್ಚಿನ ಯೋಜನೆಗಳ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. ಈ ಸಮಾವೇಶದಲ್ಲಿ ಅನುಮೋದನೆಯಾದ ಯೋಜನೆಗಳಿಗೆ ಆರ್ಥಿಕ ನೆರವು ಭಾರತದ ಬ್ಯಾಂಕಿಂಗ್ ವಲಯ ಸಕ್ರಿಯವಾಗಿ ಮುಂದೆಬಂದಿರುವುದು ಈ ಸಮಾವೇಶದ ಇನ್ನೊಂದು ಹೆಗ್ಗಳಿಕೆ ಎಂಬ ಹರ್ಷ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಯೋಜನೆಗಳಿಗೆ ಆರ್ಥಿಕ ನೆರವು ಹಾಗೂ ಬ್ಯಾಂಕಿಂಗ್ ಸೇವೆ ನೀಡುವ ಬಗ್ಗೆ ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳೊಂದಿಗೆ ಕರ್ನಾಟಕ ಸರ್ಕಾರವು ಒಡಂಬಂಡಿಕೆ ಮಾಡಿಕೊಳ್ಳುತ್ತಿದೆ ಎಂಬ ಅಂಶವನ್ನು ತಿಳಿಸಲು ಸಂತೋಷ ಪಡುತ್ತೇನೆ ಎಂದ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿ ಪ್ರಕ್ರಿಯೆಗೆ ವಿಶೇಷ ಕೊಡುಗೆ ನೀಡುತ್ತಿರುವ ಆರ್ಥಿಕ ಸಂಸ್ಥೆಗಳ ಎಲ್ಲಾ ಅಧ್ಯಕ್ಷರು/ಎಂಡಿಗಳು/ಸಿಇಒಗಳಿಗೆ ಈ ಸಂದರ್ಭದಲ್ಲಿ ನಾನು, ವಂದನೆಗಳನ್ನು ಅರ್ಪಿಸುವುದಾಗಿ ತಿಳಿಸಿದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವು ಎಷ್ಟು ಆಸಕ್ತಿಯನ್ನು ಮೂಡಿಸಿದೆ ಎಂದರೆ, ಕಳೆದ ಒಂದು ವಾರದ ಅವಧಿಯಲ್ಲಿ 78,395 ಕೋಟಿ ರೂಪಾಯಿ ಮೌಲ್ಯದ 56 ಹೊಸ ಯೋಜನೆಗಳನ್ನು ನಾವು ಸ್ವೀಕರಿಸಿದ್ದೇವೆ ಎಂದರು. 2010ರ ಜೂನ್ ತಿಂಗಳ ಉನ್ನತ ಮಟ್ಟದ ಸಮಿತಿಯಲ್ಲಿ ಈ ನೂತನ 56 ಯೋಜನೆಗಳಿಗೆ ಅನುಮೋದನೆ ನೀಡಲಾಗುವುದು. ಸಂಬಂಧ ಪಟ್ಟ ಸಂಸ್ಥೆಗಳು ನೀಡಿರುವ ಪ್ರಕಾರವೇ ಈ ಎಲ್ಲಾ ಯೋಜನೆಗಳು ಶೀಘ್ರವಾಗಿ ಅನುಷ್ಠಾನಗೊಳ್ಳುತ್ತವೆ ಎಂಬ ಖಾತ್ರಿ ನನಗಿದೆ ಎಂದರು.

ಈ ಎಲ್ಲಾ ಯೋಜನೆಗಳ ಪೂರ್ಣ ಅನುಷ್ಠಾನಕ್ಕೆ ನಾವು ಸಂಪೂರ್ಣ ಸನ್ನದ್ಧರಾಗಿದ್ದೇವೆ. ನನ್ನ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಸಚಿವ ಸಂಪುಟದ ಉಪ ಸಮಿತಿಯು ಪ್ರತಿ ಯೋಜನೆಗೂ ಅದರ ಬಂಡವಾಳ ಹೂಡಿಕೆ ಪ್ರಮಾಣದ ಆಧಾರದ ಮೇಲೆ ವಿಶೇಷ ಉತ್ತೇಜಕಗಳನ್ನು ನೀಡುವ ಬಗ್ಗೆ ಪರಿಗಣಿಸಲಾಗುವುದು ಎಂದರು.

ಸಹಿ ಮಾಡಿರುವ ಎಲ್ಲಾ ಒಂಡಂಬಡಿಕೆಗಳನ್ನು ನಿಗದಿ ಕಾಲಮಿತಿಯೊಳಗೇ ಅನುಷ್ಠಾನಗೊಳ್ಳಲು ಅಗತ್ಯವಿರುವ ಅಂಶಗಳ ಸ್ಪಷ್ಟ ಚಿತ್ರಣ ನಮಗಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು. ಪ್ರತಿ ತಿಂಗಳೂ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಗುವುದು. ಹಾಗೆಯೇ, ಪ್ರತಿ 3 ತಿಂಗಳಿಗೆ ಒಮ್ಮೆ ಖುದ್ದಾಗಿ ಈ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

0 comments:

Post a Comment