ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಅದು ಜೂನ್ 3ರ ಮಧ್ಯಾಹ್ನ 11.50. ಮಳೆಗಾಲದಲ್ಲಿ ಅಬ್ಬರದ ಮಳೆ ಬೀಳಬೇಕಾದ ಸಮಯವಾಗಿದ್ದರೂ... ಉಷ್ಣಅತಿಯಾಗಿತ್ತು. ಮನುಷ್ಯನ ನಿರಂತರ ಪ್ರಕೃತಿಯ ಮೇಲಿನ ಸವಾರಿಯಿಂದಾಗಿ ಕಾಲಕಾಲಕ್ಕೆ ಮಳೆಯಾಗುವುದಿಲ್ಲ , ಪರಿಸರದಲ್ಲಿ ಏರುಪೇರು ಸರ್ವೇಸಾಮಾನ್ಯ ಎಂಬಂತೆ. ಬಿಸಿಲ ಬೇಗೆಗೆ ಬೆವರಿಳಿದ ಜನರಿಗೆ ಮತ್ತಷ್ಟು ಬೆವರುವಂತಾಯಿತು.. ಅದೇ ಭೂಕಂಪ...!.ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಭೂಮಿ ಕಂಪನವಾಗಿದೆ. ಕಂಪನದ ಅನುಭವ ಎಲ್ಲರ ಮನದಲ್ಲೂ ಇದೀಗ ಕಂಪನ ಸೃಷ್ಠಿಸಿದೆ. ನಿರಂತರವಾಗಿ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ, ಜಲವಿದ್ಯುತ್ ಯೋಜನೆ, ಅವ್ಯಾಹತವಾಗಿ ಕಾಡುನಾಶ ನಿರಂತರ ಪರಿಸರನಾಶದ ಫಲ ಇದೀಗ ಕಂಪನ ರೂಪದಲ್ಲಿ ಗೋಚರಿಸಿದೆ.ರಾಜ್ಯದ 258 ಕಿರು ಜಲವಿದ್ಯುತ್ ಯೋಜನೆಗಳ ಪೈಕಿ 61ಪಶ್ಚಿಮ ಘಟ್ಟದ ಒಡಲಲ್ಲಿ ಹರಿಯುವ ನದಿಗಳಲ್ಲಿ ಕಾರ್ಯಾರಂಭ ಮಾಡಲಿದೆ.ಕರ್ನಾಟಕ ರಿನ್ಯೂವೇಬಲ್ ಡೆವಲಪ್ಮೆಂಟ್ ಅಥಾರಿಟಿ ಈ ಯೋಜನೆಗಳ ಅನುಷ್ಠಾನ ಕಾರ್ಯವನ್ನು ಖಾಸಗೀ ಕಂಪೆನಿಗಳಿಗೆ ವಹಿಸಿಕೊಟ್ಟಿದೆ. ಯೋಜನಾನುಷ್ಠಾನಕ್ಕಾಗಿ ಪಶ್ಚಿಮ ಘಟ್ಟದಲ್ಲಿ ಹರಿಯುವ ನದಿಗಳಿಗೆ ಅಣೆಕಟ್ಟು ನಿರ್ಮಾಣವಾಗಲಿವೆ. ಇವು ಅನುಷ್ಠಾನ ಗೊಂಡದ್ದೇ ಆದಲ್ಲಿ ಇಂತಹ ಅನಾಹುತಗಳು ಇನ್ನೂ ಅನೇಕ ಸಂಭವಿಸುವುದರಲ್ಲಿ ಸಂದೇಹವೇ ಇಲ್ಲ. ಭೂಮಿಯ ಮೇಲಿನ ಅತ್ಯಾಚಾರಕ್ಕೆ ಭೂಮಿ ನಲುಗುವುದರಲ್ಲಿ ಸಂದೇಹವಿಲ್ಲ.


ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ. ಮಹಾರಾಷ್ಟ್ರ-ಗುಜರಾತ್‌ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಕನ್ಯಾಕುಮಾರಿಯವರೆಗೆ ಇರುವುದು. ಒಟ್ಟು ಸುಮಾರು ೧೬೦೦ ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ನಾಟಕದಲ್ಲಿಯೇ ಇದೆ. ಪಶ್ಚಿಮ ಘಟ್ಟಗಳು ಒಟ್ಟು ೬೦೦೦೦ ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ. ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ಶೇ.40 ಭಾಗವನ್ನು ಆವರಿಸಿವೆ. ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು ೧೨೦೦ ಮೀಟರ್. ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು ೫೦೦೦ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, ೧೩೯ ಬಗೆಯ ಸಸ್ತನಿಗಳು, ೫೦೮ ಪ್ರಭೇದದ ಪಕ್ಷಿಗಳು ಮತ್ತು ೧೭೯ ಪ್ರಕಾರದ ದ್ವಿಚರಿಗಳಿಗೆ ನೆಲೆಯಾಗಿವೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ ೩೨೫ ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.

( ಈ ಕನಸು. ಕಾಂ. ಅಂದೇ ಈ ಬಗ್ಗೆ ಎಚ್ಚರಿಕೆ ನೀಡಿತ್ತು... )
ಪಶ್ಚಿಮ ಘಟ್ಟದಲ್ಲಿ ಕಿರು ವಿದ್ಯುತ್ ಯೋಜನೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸರಿಯಾಗಿ ಒಂದು ವರ್ಷದ ಹಿಂದೆ ಭಾರೀ ಸುದ್ದಿಯಾಗಿತ್ತು. ನಂತರ ಅದು ಸದ್ದಿಲ್ಲದೆ ಹೋಗಿದೆ. ಆದರೂ ಒಳಗೊಳಗೇ ವಿದ್ಯುತ್ ಯೋಜನೆ ಘಟಕ ಸ್ಥಾಪಿಸುವ ಬಗ್ಗೆ ಗುಪ್ತವಾಗಿ ಕೆಲಸ ಕಾರ್ಯಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಇಂಧನ ಸಚಿವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೂಚ್ಯವಾಗಿ ಕಿರುವಿದ್ಯುತ್ ಯೋಜನೆಗೆ ಅವಕಾಶ ಕಲ್ಪಿಸಲಾಗುವುದು ಎಂಬ ಮಾತು ಹೇಳಿದ್ದರು. ಪಶ್ಚಿಮ ಘಟ್ಟದಲ್ಲಿ ವಿದ್ಯುತ್ ಘಟಕ ಸ್ಥಾಪಿಸಿದ್ದೇ ಆದಲ್ಲಿ ಆಗಬಹುದಾದ ಅನಾಹುತಗಳ ಬಗೆಗೆ `ಈ ಕನಸು ತಂಡ' ನಡೆಸಿದ ಎಕ್ಸ್ಲೂಸಿವ್ ಸ್ಟೋರಿ ಇಲ್ಲಿದೆ.


ಪಶ್ಚಿಮ ಘಟ್ಟದಲ್ಲಿ ಕಿರು ಜಲವಿದ್ಯುತ್ ಯೋಜನೆ ಬಂದದ್ದೇ ಆದಲ್ಲಿ ಅಪರೂಪದ ಪ್ರಾಣಿ ಪ್ರಬೇಧ, ಪಕ್ಷಿ ಸಂಕುಲ, ಜಲಚರ, ಸಸ್ಯರಾಶಿ ನಾಶವಾಗುವುದರಲ್ಲಿ ಸಂದೇಹವೇ ಇಲ್ಲ. ಇದು ತಜ್ಞರ ಅಭಿಮತ.
ಕ್ರಿಮ್ನೋಕೋನ್ಕಸ್ ಸೇರಿದಂತೆ ಪ್ರಸ್ತುತ ಪಶ್ಚಿಮ ಘಟ್ಟದಲ್ಲಿರುವ ಅತ್ಯಂತ ಅಪರೂಪದ ಮೂರು ಪ್ರಬೇಧಗಳ ಮೃದ್ವಂಗಿ, ಕಪ್ಪೆಬಾಯಿಹಕ್ಕಿ ಯೂ ಸೇರಿದಂತೆ ಅತ್ಯಂತ ವಿರಳ ಪ್ರಬೇಧಗಳ ಹಕ್ಕಿಗಳು, ಅಪರೂಪದ ಔಷಧೀಯ ಸಸ್ಯವಾದ ಸರ್ಪಗಂಧೀ ಮೊದಲಾದವುಗಳ ನಾಶ ಖಂಡಿತ ಎಂಬುದನ್ನು ಪರಿಸರ ತಜ್ಞರು ಹೇಳುತ್ತಾರೆ.

ದಟ್ಟಡವಿಯೊಳಿರುವ ಜೀವಸಂಕುಲಗಳಿಗೆ ಹಾನಿಯಾಗುವುದಕ್ಕಿಂತ ಅಧಿಕ ಹಾನಿ ನದೀ ದಡಗಳಲ್ಲಿ, ನದೀ ಸಮೀಪದಲ್ಲಿರುವ ಸಸ್ಯ, ಪ್ರಾಣಿ ಪ್ರಬೇಧಗಳಿಗಾಗುತ್ತದೆ ಎಂದು ಹಿರಿಯ ಸಂಶೋಧಕ, ತಜ್ಞ ಡಾ.ಎನ್.ಎ. ಮಧ್ಯಸ್ಥ ಅವರದ್ದಾಗಿದೆ.
ಹರಿಯುವ ನೀರಿನಲ್ಲಿ ವಾಸಿಸುವ ಅದೆಷ್ಟೋ, ಸೂಷ್ಮ, ಅಪರೂಪದ ಜಲಚರಗಳಿಗೆ ನೀರಿಗೆ ತಡೆಯೊಡ್ಡುವುದರಿಂದ ತೊಂದರೆಯುಂಟಾಗಲಿದೆ. ಅವುಗಳ ಸಂತತಿ ಅಳಿಯುವ ಭೀತಿಯೂ ಇದೆ. ಇಂತಹ ಯೋಜನೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಮೊದಲು ವೈಜ್ಞಾನಿಕ ರೀತಿಯಲ್ಲಿ ಆಳವಾದ ಪರಿಸರ ಅಧ್ಯಯನ ಆಗಬೇಕಾಗಿದೆ ಎಂದವರು `ಈ ಕನಸು' ತಂಡಕ್ಕೆ ತಿಳಿಸಿದ್ದಾರೆ.


ಮೊದಲು ಎಲ್ಲವೂ ಕಿರು ಕಿರು ಎಂದೇ ಹೇಳಲ್ಪಡುತ್ತದೆ. ಇವುಗಳಿಂದ ಪರಿಸರಕ್ಕೆ ತೀವ್ರ ತೊಂದರೆಯಿದೆ. ಅಪರೂಪದ ಪಕ್ಷಿ ಪ್ರಬೇಧಗಳು ನಾಶವಾಗುವ ಸಾಧ್ಯತೆಗಳಿವೆ. ಯೋಜನೆಯ ಕಾರ್ಯಾನುಷ್ಠಾನಕ್ಕಾಗಿ ನಿರಂತರ ಸಂಚಾರ, ಯಂತ್ರಗಳ ಕರ್ಕಶ ಧ್ವನಿ ಇವೆಲ್ಲವೂ ಜೀವಸಂಕುಲಗಳಿಗೆ ತೊಂದರೆಯುಂಟುಮಾಡುತ್ತದೆ ಎಂಬ ಅಭಿಮತ ಪಕ್ಷಿತಜ್ಞ ಡಾ.ಎಸ್.ಎ ಹುಸೇನ್ ಅವರದ್ದು.


ಪಶ್ಚಿಮ ಘಟ್ಟದಲ್ಲಿ ಅಪರೂಪದ ಕಪ್ಪೆ ಪ್ರಬೇಧಗಳಿವೆ, ಒಳನೀರ ಅಪರೂಪದ ಮೀನುಗಳೂ ಇವೆ. ಇವೆಲ್ಲವುಗಳಿಗೆ ಹರಿಯುವ ನೀರಿನ ಅವಶ್ಯಕತೆ ಇದೆ. ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸಿದ್ದೇ ಆದಲ್ಲಿ ಅವೆಲ್ಲ ನಾಶವಾಗುವ ಭೀತಿಯಿದೆ ಎಂದವರು ಹೇಳುತ್ತಾರೆ.
ಕಿರು ಜಲವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ತೊಂದರೆಯಿಲ್ಲ ಎಂಬವಾದ ಸರಿಯಲ್ಲ ಎನ್ನುವ ಅವರು, ಸಾಕಷ್ಟು ತೊಂದರೆಗಳು ಇಂತಹ ಯೋಜನೆಗಳಲ್ಲಿರುತ್ತವೆ.

ಇಂತಹ ಯೋಜನೆಗಳ ಹೆಸರಿನಲ್ಲಿ ಅರಣ್ಯನಾಶಮಾಡುವ ಕಾರ್ಯ ಸರಿಯಲ್ಲ ಎನ್ನುತ್ತಾರೆ.
ಮಾಲಿನ್ಯ ಕಡಿಮೆಮಾಡುವ ಸಾಕಷ್ಟು ತಂತ್ರಜ್ಞಾನಗಳ ಅಭಿವೃದ್ಧಿಯಾಗಿದೆ. ಅವೆಲ್ಲವನ್ನು ಬಳಸಿ ಇತೆರೆ ರೀತಿಯಲ್ಲಿ ವಿದ್ಯುತ್ ಉತ್ಪಾದನೆಗೆ ಸರಕಾರ ಮುಂದಾಗಬೇಕಾಗಿದೆ ಎಂದವರು ಸಲಹೆ ನೀಡುತ್ತಾರೆ.


ಕಿರು ಜಲವಿದ್ಯುತ್ ಯೋಜನೆಗಳಿಂದಲೂ ಪರಿಸರಕ್ಕೆ ಸಾಕಷ್ಟು ತೊಂದರೆಗಳಿವೆ. ವಿದ್ಯುತ್ ಉತ್ಪಾದನೆ, ಅದಕ್ಕೆಮೊದಲ ಕಾಮಗಾರಿಗಳ ಸಂದರ್ಭದಲ್ಲುಂಟಾಗುವ ಶಬ್ಧಮಾಲಿನ್ಯಗಳು ಪರಿಸರದ, ಅಲ್ಲಿರುವ ಅಪರೂಪದ ಜೀವ ವೈವಿಧ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಇನ್ನೋರ್ವ ತಜ್ಞರ ಅಭಿಪ್ರಾಯ.


ತೊಂದರೆಯಾಗುವ ಯಾವುದೇ ಯೋಜನೆಗೆ ವಿರೋಧ: ಪರಿಸರಕ್ಕೆ ತೊಂದರೆಯಾಗುವ ಯಾವುದೇ ಯೋಜನೆಗಳನ್ನು ನಾವು ಸಹಿಸುವುದಿಲ್ಲ. ಅವುಗಳನ್ನು ವಿರೋಧಿಸುವುದಾಗಿ ಗುರುವಾಯನಕೆರೆ ನಾಗರಿಕ ಸೇವಾಟ್ರಸ್ಟ್ ನಿರ್ದೇಶಕ ಸೋಮನಾಥ ನಾಯಕ್ ಹೇಳುತ್ತಾರೆ.ದಡ ಮೀರದ ಅಣೆಕಟ್ಟು ಗಳಿಗೆ ವಿರೋಧ ವಿಲ್ಲ. ಇದು ನಮ್ಮ ನಿಲುವು ಎಂದವರು ಸ್ಪಷ್ಟಪಡಿಸಿದ್ದಾರೆ.
ಅಂತೂ ಪಶ್ಚಿಮ ಘಟ್ಟದಲ್ಲಿ ಜಲವಿದ್ಯುತ್ ಯೋಜನೆ ರೂಪಿಸುವುದಕ್ಕೆ ವಿರೊಧವೇ ಅಧಿಕ. ಸರಕಾರ ಈ ದಿಕ್ಕಿನಲ್ಲಿ ಚಿಂತನೆ ಹರಿಸುವ ಅನಿವಾರ್ಯತೆಯೂ ಇದೆ.


ವೈವಿಧ್ಯಮಯ ಸಸ್ಯ ಸಂಪತ್ತು, ಅಪರೂಪದ ಪ್ರಾಣಿ ಪ್ರಬೇಧಗಳನ್ನೊಳಗೊಂಡ ಪಶ್ಚಿಮ ಘಟ್ಟ ಹೀಗೇ ಉಳಿಯುತ್ತದೆಯೇ ಎಂಬ ಸಂಶಯ ಇದೀಗ ಬಲವಾಗತೊಡಗಿದೆ. ಪಶ್ಚಿಮ ಘಟ್ಟಕ್ಕೆ ಮತ್ತೊಮ್ಮೆ ಕೊಡಲಿಯೇಟು ಬೀಳಲಿದೆಯೇ...ಇದರ ಒಡಲಾಳವನ್ನು ಕೆದಕುವ ಕಾರ್ಯ ಆಗಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.ಈ ಹಿಂದೆ ಕುದುರೆಮುಖ ಗಣಿಗಾರಿಕೆಯಿಂದ ತತ್ತರಿಸಿ ಹೋಗಿದ್ದ ಪಶ್ಚಿಮಘಟ್ಟ ಮುಂದೆ ಜಲವಿದ್ಯುತ್ ಯೊಜನೆಗೆ ಬಲಿಯಾಗಲಿದೆ.

ರಾಜ್ಯದ 258 ಕಿರು ಜಲವಿದ್ಯುತ್ ಯೋಜನೆಗಳ ಪೈಕಿ 61ಪಶ್ಚಿಮ ಘಟ್ಟದ ಒಡಲಲ್ಲಿ ಹರಿಯುವ ನದಿಗಳಲ್ಲಿ ಕಾರ್ಯಾರಂಭ ಮಾಡಲಿದೆ.ಕರ್ನಾಟಕ ರಿನ್ಯೂವೇಬಲ್ ಡೆವಲಪ್ಮೆಂಟ್ ಅಥಾರಿಟಿ ಈ ಯೋಜನೆಗಳ ಅನುಷ್ಠಾನ ಕಾರ್ಯವನ್ನು ಖಾಸಗೀ ಕಂಪೆನಿಗಳಿಗೆ ವಹಿಸಿಕೊಟ್ಟಿದೆ. ಯೋಜನಾನುಷ್ಠಾನಕ್ಕಾಗಿ ಪಶ್ಚಿಮ ಘಟ್ಟದಲ್ಲಿ ಹರಿಯುವ ನದಿಗಳಿಗೆ ಅಣೆಕಟ್ಟು ನಿರ್ಮಾಣವಾಗಲಿವೆ.


ಘಟ್ಟಗಳ ಭೂರಚನೆ

ಪಶ್ಚಿಮ ಘಟ್ಟಗಳು ನೈಜ ಅರ್ಥದಲ್ಲಿ ಪರ್ವತ ಶ್ರೇಣಿಯಲ್ಲ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನರೂಪದಲ್ಲಿ ಇವು ಹಬ್ಬಿವೆ. ಸುಮಾರು ೧೫೦ ಮಿಲಿಯನ್ ವರ್ಷಗಳ ಹಿಂದೆ ಗೊಂಡ್ವಾನಾ ಮಹಾಭೂಖಂಡವು ಛಿದ್ರಗೊಂಡಾಗ ಪಶ್ಚಿಮ ಘಟ್ಟಗಳ ರಚನೆ ಆಯಿತೆಂದು ನಂಬಲಾಗಿದೆ. ಈ ಘಟ್ಟಗಳಲ್ಲಿ ಕಾಣುವ ಅತ್ಯಂತ ಸಾಮಾನ್ಯ ಶಿಲೆಯೆಂದರೆ ಬಸಾಲ್ಟ್. ಇದರ ಪದರವು ಭೂಮಿಯೊಳಗೆ ೩ ಕಿ.ಮೀ.ವರಗೆ ಚಾಚಿರುವುದುಂಟು. ಉಳಿದಂತೆ ಗ್ರಾನೈಟ್, ಖೊಂಡಾಲೈಟ್, ಲೆಪ್ಟಿನೈಟ್, ಚಾರ್ನೋಕೈಟ್ ಮುಂತಾದ ಶಿಲಾಪ್ರಕಾರಗಳು ಸಹ ಇವೆ.


ಉತ್ತರದಲ್ಲಿ ಸಾತ್ಪುರ ಶ್ರೇಣಿಯಿಂದ ಆರಂಭವಾಗಿ ದಕ್ಷಿಣಕ್ಕೆ ಹಬ್ಬಿರುವ ಪಶ್ಚಿಮ ಘಟ್ಟಗಳ ಮುಖ್ಯ ಶ್ರೇಣಿಗಳು ಸಹ್ಯಾದ್ರಿ, ಬಿಳಿಗಿರಂಗನ ಬೆಟ್ಟಸಾಲು, ಸರ್ವರಾಯನ್ ಶ್ರೇಣಿ, ಮತ್ತು ನೀಲಗಿರಿ ಬೆಟ್ಟ ಸರಣಿ. ಬಿಳಿಗಿರಂಗನ ಬೆಟ್ಟಸಾಲು ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳ ಸಂಧಿಸ್ಥಾನದಲ್ಲಿದೆ. ಪಶ್ಚಿಮ ಘಟ್ಟಗಳ ಮುಖ್ಯ ಶಿಖರಗಳು : ಸಾಲ್ಹೇರ್, ಕಾಲ್ಸೂಬಾಯಿ, ಮಹಾಬಲೇಶ್ವರ, ಸೋನ್‌ಸಾಗರ್, ಮುಳ್ಳಯ್ಯನಗಿರಿ(೧೯೫೦ ಮೀ.), ಕೆಮ್ಮಣ್ಣುಗುಂಡಿ, ಕೊಡಚಾದ್ರಿ, ಕುದ್ರೆಮುಖ, ಚೆಂಬ್ರ(೨೧೦೦ ಮೀ.), ವೆಲ್ಲರಿಮಲ(೨೨೦೦ ಮೀ.), ಬಾಣಾಸುರ(೨೦೭೩ ಮೀ.), ದೊಡ್ಡಬೆಟ್ಟ(೨೬೨೩ ಮೀ.), ಆನೈ ಮುಡಿ(೨೬೯೫ ಮೀ.) ಮತ್ತು ಮಹೇಂದ್ರಗಿರಿ. ಹಿಮಾಲಯದ ದಕ್ಷಿಣದಲ್ಲಿ ಭಾರತದ ಅತ್ಯಂತ ಎತ್ತರ ಶಿಖರ ತಮಿಳುನಾಡಿನ ಆನೈ ಮುಡಿ. ಪಶ್ಚಿಮ ಘಟ್ಟಗಳ ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ಕಿರಿದಾದ ಕರಾವಳಿಯ ಉತ್ತರ ಭಾಗವು ಕೊಂಕಣ ಪ್ರದೇಶವೆಂದು ಹೆಸರಾಗಿದ್ದರೆ ಮಧ್ಯ ಭಾಗವು ಕೆನರಾ ಮತ್ತು ದಕ್ಷಿಣ ಭಾಗವು ಮಲಬಾರ್ ಪ್ರಾಂತವೆಂದು ಕರೆಯಲ್ಪಡುವುವು. ಪಶ್ಚಿಮ ಘಟ್ಟಗಳು ಮಳೆಯುಂಟುಮಾಡುವ ಪಶ್ಚಿಮದ ಮಾರುತಗಳನ್ನು ತಡೆಯುವುದರಿಂದಾಗಿ ಈ ಪ್ರದೇಶವು ಸಹಜವಾಗಿಯೇ ಹೆಚ್ಚು ಮಳೆ ಪಡೆಯುವ ಭಾಗವಾಗಿದೆ. ಘಟ್ಟಗಳು ಮತ್ತು ಅವುಗಳ ಪಶ್ಚಿಮ ಅಂಚಿನ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತದೆ. ಈ ಪ್ರಕ್ರಿಯೆಗೆ ಪಶ್ಚಿಮ ಘಟ್ಟಗಳ ದಟ್ಟ ಸದಾಹಸಿರು ಕಾಡು ಸಹ ಸಹಕಾರಿಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಊಟಿ, ಕೋಡೈಕಾನಲ್ ಮತ್ತು ಬೆರಿಜಮ್ ಮುಂತಾದ ದೊಡ್ಡ ಸರೋವರಗಳಿವೆ.

ನದಿಗಳು ಮತ್ತು ಜಲಪಾತಗಳು

ಭಾರತ ಜಂಬೂದ್ವೀಪದ ಹಲವು ಸಾರ್ವಕಾಲಿಕ ನದಿಗಳಿಗೆ ಪಶ್ಚಿಮ ಘಟ್ಟಗಳು ಮೂಲ. ತಾಮ್ರಪರ್ಣಿ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ಮುಖ್ಯವಾದ ದೊಡ್ಡ ನದಿಗಳು. ಈ ನದಿಗಳು ಪೂರ್ವಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತವೆ. ಪಶ್ಚಿಮಕ್ಕೆ ಹರಿಯುವ ನದಿಗಳು ಉದ್ದದಲ್ಲಿ ಕಡಿಮೆಯಿದ್ದು ರಭಸವಾಗಿ ಹರಿಯುತ್ತವೆ. ಮಾಂಡವಿ, ಜುವಾರಿ, ಶರಾವತಿ ಮತ್ತು ನೇತ್ರಾವತಿ ಇವುಗಳಲ್ಲಿ ಮುಖ್ಯವಾದವು. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿನ ರಭಸವಾಗಿ ಹರಿಯುವ ನದಿಗಳು ಅನೇಕ ಜಲವಿದ್ಯುತ್ ಯೋಜನೆಗಳಿಗೆ ನೆಲೆಯಾಗಿವೆ. ಇದಕ್ಕೋಸ್ಕರ ನಿರ್ಮಿಸಲಾದ ಆಣೆಕಟ್ಟುಗಳ ಪೈಕಿ ಖೊಪೋಲಿ, ಕೊಯ್ನಾ, ಲಿಂಗನಮಕ್ಕಿ ಮತ್ತು ಪರಂಬಿಕುಲಮ್ ಪ್ರಮುಖವಾದವುಗಳು. ಪಶ್ಚಿಮ ಘಟ್ಟಗಳಲ್ಲಿ ಸುರಿಯುವ ಭಾರೀ ಮಳೆಯು ಅನೇಕ ಜಲಪಾತಗಳನ್ನು ಸೃಷ್ಟಿಸುತ್ತದೆ. ಇವುಗಳಲ್ಲಿ ಜೋಗ, ಉಂಚಳ್ಳಿ, ಕುಂಚಿಕಲ್, ಮೇನ್‌ಮುಟ್ಟಿ ಮತ್ತು ಶಿವನಸಮುದ್ರ ಜಲಪಾತಗಳು ಹೆಸರಾದವು.


ಪಶ್ಚಿಮ ಘಟ್ಟಗಳಲ್ಲಿ ವಾರ್ಷಿಕ ಮಳೆಯ ಪ್ರಮಾಣ.

ಪಶ್ಚಿಮ ಘಟ್ಟಗಳಲ್ಲಿ ಉಷ್ಣವಲಯದ ವಾತಾವರಣವಿದ್ದು ಅತಿ ಎತ್ತರದ ಪ್ರದೇಶಗಳಲ್ಲಿ ಮಾತ್ರ ಸಮಶೀತೋಷ್ಣವಲಯದ ಹವಾಮಾನವಿರುತ್ತದೆ. ಘಟ್ಟ ಪ್ರದೇಶಗಳಲ್ಲಿ ಸರಾಸರಿ ತಾಪಮಾನ ಉತ್ತರದಲ್ಲಿ ೨೪ ಡಿ. ಸೆಲ್ಸಿಯಸ್ ಮತ್ತು ದಕ್ಷಿಣದಲ್ಲಿ ೨೮ ಡಿ. ಕೆಲಭಾಗಗಳಲ್ಲಿ ಚಳಿಗಾಲದ ರಾತ್ರಿಯ ತಾಪಮಾನ ಶೂನ್ಯವನ್ನು ತಲುಪುವುದು. ಜೂನ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗಿನ ಮಳೆಗಾಲದಲ್ಲಿ ಇಲ್ಲಿ ಬೀಳುವ ಸರಾಸರಿ ಮಳೆ ವಾರ್ಷಿಕ ೩೦೦೦ ದಿಂದ ೪೦೦೦ ಮಿಲಿಮೀಟರ್. ಕರ್ನಾಟಕದ ಕೆಲ ಭಾಗಗಳಲ್ಲಿ ೯೦೦೦ ಮಿ.ಮೀ. ವರೆಗೆ ಸಹ ಮಳೆ ಬೀಳುತ್ತದೆ. ಕರ್ನಾಟಕದ ಆಗುಂಬೆ ಭಾರತದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಒಂದಾಗಿದೆ.

ಜೀವವೈವಿಧ್ಯದ ನೆಲೆಗಳು

ಪಶ್ಚಿಮ ಘಟ್ಟಗಳು ನಾಲ್ಕು ಬಗೆಯ ಅರಣ್ಯ ವಲಯಗಳನ್ನು ಹೊಂದಿವೆ. ಉತ್ತರ ಪಶ್ಚಿಮ ಘಟ್ಟಗಳ ಎಲೆ ಉದುರಿಸುವ ಕಾಡುಗಳು, ಉತ್ತರ ಪಶ್ಚಿಮ ಘಟ್ಟಗಳ ಮಳೆಕಾಡುಗಳು, ದಕ್ಷಿಣ ಪಶ್ಚಿಮ ಘಟ್ಟಗಳ ಎಲೆ ಉದುರಿಸುವ ಕಾಡುಗಳು ಮತ್ತು ದಕ್ಷಿಣ ಪಶ್ಚಿಮ ಘಟ್ಟಗಳ ಮಳೆಕಾಡುಗಳು. ಪಶ್ಚಿಮ ಘಟ್ಟಗಳ ಉತ್ತರ ಭಾಗವು ಸಾಮಾನ್ಯವಾಗಿ ದಕ್ಷಿಣಭಾಗಕ್ಕಿಂತ ಕಡಿಮೆ ಮಳೆ ಕಂಡು ಹೆಚ್ಚು ಶುಷ್ಕವಾಗಿರುತ್ತದೆ. ೧೦೦೦ ಮೀ. ಗಿಂತ ಕಡಿಮೆ ಎತ್ತರದಲ್ಲಿನ ಇಲ್ಲಿನ ಎಲೆ ಉದುರಿಸುವ ಕಾಡುಗಳು ಹೆಚ್ಚಾಗಿ ಸಾಗವಾನಿ ಮರಗಳಿಂದ ಕೂಡಿರುತ್ತದೆ. ಇನ್ನೂ ಹೆಚ್ಚಿನ ಎತ್ತರದಲ್ಲಿನ ಭಾಗದಲ್ಲಿ ಸದಾಹಸಿರಿನ ಕಾಡುಗಳಿದ್ದು ಇಲ್ಲಿ ಲಾರೇಸೀ ಕುಟುಂಬಕ್ಕೆ ಸೇರಿದ ಮರಗಳು ಹೆಚ್ಚಾಗಿ ಕಾಣಬರುತ್ತವೆ. ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದ ಪ್ರದೇಶಗಳು ಹೆಚ್ಚು ಮಳೆ ಪಡೆಯುವ ಪ್ರದೇಶ. ಹೀಗಾಗಿ ಇಲ್ಲಿನ ಕಾಡುಗಳಲ್ಲಿ ಸಸ್ಯ ವೈವಿಧ್ಯ ಹೆಚ್ಚು. ಈ ಭಾಗದ ತೇವಭರಿತ ಎಲೆ ಉದುರಿಸುವ ಕಾಡುಗಳಲ್ಲಿ ಕುಲ್ಲೇನಿಯಾ ವಂಶದ ವೃಕ್ಷಗಳು ಹೆಚ್ಚಾಗಿದ್ದು ಜೊತೆಗೆ ಸಾಗವಾನಿ, ಡಿಪ್ಟೆರೋಕಾರ್ಪ್ಸ್ ಮುಂತಾದ ಇತರ ಜಾತಿಯ ಮರಗಳು ಸಹ ಇರುತ್ತವೆ. ಎತ್ತರದ ಪ್ರದೇಶಗಳಲ್ಲಿ ಸದಾಹಸಿರಿನ ಮಳೆಕಾಡುಗಳಿದ್ದು ಅತೀವ ಸಸ್ಯ ವೈವಿಧ್ಯವನ್ನು ಹೊಂದಿವೆ.

0 comments:

Post a Comment