ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:25 PM

ಕಥೆ

Posted by ekanasu

ಸಾಹಿತ್ಯ
ನನಗೆ ಅವನ ಪರಿಚಯವಾಗಿದ್ದೇ ಮರೀನಾ ಬೀಚಿನ ಮರಳು ಹಾಸಿನಲ್ಲಿ. ಸಂಜೆ ಹೊತ್ತು. ಸೂರ್ಯ ಮುಳುಗಿದ್ದರಿಂದ ಕಾರಿರುಳು ಮುಸುಕು ಹಾಕಿ ಮಲಗಲು ತಯಾರಿ ನಡೆಸುತ್ತಿತ್ತು. ದೂರದಲ್ಲಿ ಕಾಣುತ್ತಿದ್ದ ಎಂಜಿಆರ್ ಸ್ಮಾರಕದ ಬಳಿ ಎತ್ತರದ ಕಮಾನುಗಳ ಸುತ್ತ ಮುತ್ತ ಉರಿಯುತ್ತಿದ್ದ ದೀಪದ ಮಂದ ಬೆಳಕು ಪಸರಿಸಿತ್ತು. ಅಲ್ಲಲ್ಲಿ ಡೇರೆ ಹಾಕಿಕೊಂಡಿದ್ದ ಬೀದಿ ವ್ಯಾಪಾರಿಗಳ ಕೂಗಾಟ ಜೋರಾಗಿತ್ತು. ಇಂತಹದ್ದೇ ಒಂದು ದಿನ ಅವನನ್ನು ನಾನು ಮೊದಲ ಬಾರಿಗೆ ಇಲ್ಲಿ ಭೇಟಿಯಾಗಿದ್ದು.

ಮರಳಿನಲ್ಲಿ ನಡೆಯಲಾಗದೆ ಚಪ್ಪಲಿ ಕೈಗೆತ್ತಿಕೊಂಡು ನಡೆಯುತ್ತಿದ್ದೆ. ಒಂದೊಂದು ಹೆಜ್ಜೆ ಇಡುವಾಗಲೂ ಎದೆಯಲ್ಲಿ ಏನೋ ಕಳೆದುಕೊಂಡ ಭಾವ ಜಾಸ್ತಿಯಾಗುತ್ತಿತ್ತು. ಕಡಲತಡಿಯಲ್ಲಿ ಕುಳಿತು ಭವಿಷ್ಯ ಹೇಳುತ್ತಿದ್ದವ ಕೈ ಎಳೆದು `ಅಣ್ಣಾ ವಾಂಗೋ' ಎಂದು ಕರೆದ. ಥತ್! ನೆಮ್ಮದಿಯಾಗಿ ಸ್ವಲ್ಪ ಹೊತ್ತು ಇಲ್ಲಿ ಕಳೆಯೋಣವೆಂದರೆ ಇವರ ಕಾಟ ಎಂದು ಕೈ ಕೊಡವಿಕೊಂಡು ಮುಂದೆ ನಡೆದೆ. ಆ ಭವಿಷ್ಯದವ ನನ್ನ ಒಂಥರಾ ನೋಡಿದ.
ಎತ್ತರದ ಮರಳ ದಿಬ್ಬ ಇಳಿದು ಕಡಲ ನೀರು ಕಾಲಿಗೆ ಸೋಕುವವರೆಗೂ ಮುಂದೆ ಸಾಗಿದ್ದೆ. ನಾನು ಬಂಡೆಯಂತೆ ನಿಂತಿದ್ದೆ. ನನ್ನ ಜೊತೆಗೆ ಯಾರೂ ಇರಲಿಲ್ಲ. ಸಮುದ್ರದ ಅಲೆಗಳ ಜೊತೆ ಸೆಣಸಾಡುವವರನ್ನು ನೋಡುವುದರಲ್ಲೇ ಸ್ವಲ್ಪ ಹೊತ್ತು ಕಳೆದೆ. ಆಗಾಗ ಬರುವ ದೊಡ್ಡ ಅಲೆಗಳಿಂದ ಜೋಕಾಲಿ ಆಡುವ ಹಾಗಾಯ್ತು. ಆದ್ರೂ ಲೆಕ್ಕಿಸಲಿಲ್ಲ. ಹುಂ.. ಈ ತೀರ ನನಗೆ ಹೊಸದಲ್ಲ. ಹಿಂದೆಯೂ ಬಂದಿದ್ದೆ. ಆಗ ಅವನೂ ನನ್ನ ಜೊತೆಗಿರುತ್ತಿದ್ದ. ಹೊತ್ತು ಗೊತ್ತಿನ ಪರಿವೆ ನಮಗಿರುತ್ತಿರಲಿಲ್ಲ. ಅಲೆಗಳ ಎದುರು ನಿಂತು ಅವುಗಳಿಗೇ ಸವಾಲು ಹಾಕುವ ಹುಚ್ಚು ಸಾಹಸದಲ್ಲಿ ಖುಷಿಯಿತ್ತು. ಇಂದು ನಾನೊಬ್ಬನೇ ಅಲೆಗಳನ್ನು ಎದುರಿಸುತ್ತಿದ್ದೆ.

ಯೋಚಿಸುತ್ತಿದ್ದಂತೆ ದೊಡ್ಡದೊಂದು ಅಲೆ ಬಂದಿದ್ದು ನನಗೆ ಗೊತ್ತೇ ಆಗಲಿಲ್ಲ. ಜಾರಿ ಬೀಳಲಿದ್ದವನು ಹೇಗೋ ಸಾವರಿಸಿಕೊಂಡೆ. ನನ್ನ ಸುತ್ತಮುತ್ತಲಿದ್ದ ಕೆಲವರು ಬಿದ್ದು ಮೇಲೇಳುತ್ತಿದ್ದರು. ಪಕ್ಕನೆ ಕಿವಿಯಲ್ಲಿ `ನಮ್ಮ ಜೀವನವೂ ಈ ಅಲೆಗಳಂತೆ ಚಿರು... ಒಮ್ಮೊಮ್ಮೆ ಜೋರಾಗಿ ಅಪ್ಪಳಿಸುತ್ತವೆ. ಇನ್ನು ಕೆಲವೊಮ್ಮೆ ಶಾಂತವಾಗಿರುತ್ತವೆ...' ಎಂದು ಯಾರೋ ಹೇಳಿದಂತಾಗಿ ಅಕ್ಕ ಪಕ್ಕ ನೋಡಿಕೊಂಡೆ. ಹುಂ.. ಯಾರೂ ಇಲ್ಲ ಎಲ್ಲಾ ನನ್ನ ಭ್ರಮೆ. ಆದರೆ ಈ ಮಾತು ಭ್ರಮೆ ಅಲ್ಲ ಎನ್ನುವುದು ಆ ಕಡಲಿನಷ್ಟೇ ಸತ್ಯ ಎನ್ನುವುದು ನನಗೆ ಮಾತ್ರ ಗೊತ್ತು.
ನೀರಿಗಿಳಿದು ತುಂಬಾ ಹೊತ್ತಾಗಿತ್ತು.

ನಿಂತಲ್ಲೇ ನಿಂತಿದ್ದರಿಂದ ಕಾಲಿಗೆ ಅಲೆಗಳು ತಂದಿತ್ತ ಕಸ-ಕಡ್ಡಿಗಳು ಮುತ್ತಿಕ್ಕಿಕೊಂಡಿತ್ತು. ಹೆಬ್ಬೆರಳ ನಡುವೆ ಸಿಲುಕಿದ್ದ ಚಿಂದಿ ಬಟ್ಟೆಯನ್ನು ಬಿಡಿಸಿಕೊಳ್ಳಲು ಬಗ್ಗಿದಾಗ ಕಣ್ಣಿನಿಂದ ಉದುರಿದ ಎರಡು ಹನಿ ನೀರು ಸಾಗರ ಸೇರಿತ್ತು. ಕಸ ಬಿಡಿಸಿಕೊಂಡು ಹಿಂದಿರುಗಿ ನಡೆದೆ. ಕಡಲ ತೀರದಿಂದ ಅಷ್ಟು ಬೇಗ ಮರಳಲು ನನಗೆ ಮನಸ್ಸಾಗಲಿಲ್ಲ. ಮರಳ ದಿಬ್ಬದ ಮೇಲೆ ಕುಳಿತೆ. ಹೊಟ್ಟೆ ಚುರ್ ಎನ್ನುತ್ತಿತ್ತು. ಆಗಲೇ ನೆನಪಾಗಿದ್ದು ಮಧ್ಯಾಹ್ನದಿಂದ ಹೊಟ್ಟೆಗೆ ಏನೂ ಬಿದ್ದಿಲ್ಲ ಎಂದು. ಕಚೇರಿ ಬಿಟ್ಟು ಟಿ ನಗರ್ ಕಡೆಗೆ ಹೋಗಿ ನನ್ನ ಫೇವರಿಟ್ ಹೋಟೆಲ್ನಲ್ಲಿ ಏನಾದರೂ ತಿನ್ನೋಣವೆಂದುಕೊಂಡಿದ್ದೆ. ಆದರೆ ಯಾಕೋ ಮನಸ್ಸಾಗದೇ ಸೀದಾ ಇಲ್ಲಿಗೆ ಬಂದಿದ್ದೆ.

ಸುತ್ತಮುತ್ತ ನೋಡಿದಾಗ ಹಣ್ಣು ಮುದುಕ ಹಸಿ ಹಸಿ ಜೋಳ ಕೆಂಡದಲ್ಲಿ ಸುಡುತ್ತಿದ್ದುದು ಕಂಡು ಅಲ್ಲಿಗೆ ಕಾಲೆಳೆಯುತ್ತಾ ಸಾಗಿದೆ. ವ್ಯಾಪಾರಿ ಜೋಳ ಸುಡುತ್ತಿದ್ದರೆ ಮತ್ತೆ ನನಗೆ ಅವನು ನೆನಪಾದ. ಮರೀನಾ ಬೀಚ್ಗೆ ಬಂದರೆ ಸುಟ್ಟ ಜೋಳ ತಿನ್ನದೆ ವಾಪಸಾಗುತ್ತಿರಲಿಲ್ಲ ನಾವು. ನನಗೆ ಜೋಳ ಇಷ್ಟ ಎಂಬ ಕಾರಣಕ್ಕೆ ಅವನೇ ಎರಡೆರಡು ಹಿಡಿದು ತರುತ್ತಿದ್ದ. ನಾನು ಒಂದು ತಿಂದು ಮುಗಿಸುವವರೆಗೂ ಕೈಯಲ್ಲೇ ಹಿಡಿದು ನಂತರ ಇನ್ನೊಂದನ್ನು ನನ್ನ ಕೈಯಲ್ಲಿಡುತ್ತಿದ್ದ. ಅವನು ಉತ್ತರ ಕರ್ನಾಟಕದ ಯಾವುದೋ ಹಳ್ಳಿಯವನು. ಅವನ ಊರಲ್ಲಿ ಸಾಕಷ್ಟು ಜೋಳ ಬೆಳೀತಾರಂತೆ. ಹೀಗಾಗಿ ಅವನಿಗೆ ಅದರ ವ್ಯಾಮೋಹ ಇರಲಿಲ್ಲ.

ಯಾಕೋ ಈಗ ಜೋಳ ತಿನ್ನಲಾಗಲಿಲ್ಲ ನನಗೆ. ಪಕ್ಕಕ್ಕೆಸೆದೆ. ನನಗೆ ಗೊತ್ತು ಈಗೀಗ ನನಗೆ ಜೋಳ ತಿನ್ನುವಾಗ ಅವನದೇ ನೆನಪು ಒತ್ತರಿಸಿ ಬಂದು ತಿನ್ನಲಾಗುವುದಿಲ್ಲ ಎಂದು. ಆದರೂ, ಕೈಯಲ್ಲಿ ಹಿಡಿದುಕೊಳ್ಳುತ್ತೇನೆ. ಸ್ವಲ್ಪ ಹೊತ್ತು ಅವನ ನೆನಪು ಮಾಡಿಕೊಳ್ಳುತ್ತೇನೆ. ಮತ್ತೆ ನೆಲಕ್ಕೆ ಹಾಕುವಾಗ ಅದರ ಮೇಲೆ ಕಣ್ಣೀರಿನ ತರ್ಪಣ ಬಿಡುತ್ತೇನೆ.

ಅವನು ಜೊತೆಗಿದ್ದಾಗಲೂ ಅಷ್ಟೇ ನಾವು ಹೆಚ್ಚೇನೂ ಮಾತನಾಡುತ್ತಿರಲಿಲ್ಲ. ಸುಮ್ಮನೆ ಮರಳ ಮೇಲೆ ಪೇಪರ್ ಹಾಸಿ ಕೂರುತ್ತಾ ಕಡಲ ನೋಡುತ್ತಿದ್ದೆವು. ಅವನೂ ನನ್ನ ಹಾಗೇ ಮೌನ ಪ್ರೇಮಿ. ಬೀಚಿನಲ್ಲಿ ಪರಿಚಯವಾದವ ಮತ್ತೆ ನಾನು ಕೆಲಸ ಮಾಡುತ್ತಿದ್ದ ಕಂಪನಿಗೇ ಸೇರಿಕೊಂಡಿದ್ದೆ. ಒಂದೇ ರೂಂ ಹಂಚಿಕೊಂಡಿದ್ದೆವು. ಬೀಚ್ ಪಕ್ಕದಲ್ಲೇ ಮನೆ. ಹೀಗಾಗಿ ಪ್ರತಿ ದಿನ ಬೆಳಗ್ಗೆ ಇಲ್ಲಿ ಬಂದು ಅಲೆಗಳನ್ನು ಕಾಲಡಿಗೆ ತಳ್ಳಿ ಓಡಾಡುವುದೆಂದರೆ ನಮಗೆ ಪ್ರಪಂಚವನ್ನೇ ಗೆದ್ದಷ್ಟು ಖುಷಿಯಿರುತ್ತಿತ್ತು.

ಅಂದು ಡಿಸೆಂಬರ್ 26. ಎಂದಿನಂತೇ ದಿನ ಬೆಳಗಾಗಿತ್ತು. ಆದರೆ ನನಗೆ ಯಾಕೋ ಏಳಲಾಗಲಿಲ್ಲ. ಹಿಂದಿನ ರಾತ್ರಿ ಐಸ್ಕ್ರೀಂ ಸವಿದಿದ್ದು ಜಾಸ್ತಿಯಾಗಿ ಮೈ ಕೆಂಡದಂತೆ ಸುಡುತ್ತಿತ್ತು. ಆದರೂ ಬೀಚ್ ಸುತ್ತಾಟಕ್ಕೆ ಹೊರಟವನನ್ನು ಅವನು ತಡೆದಿದ್ದ. `ಇಂದು ಬರಬೇಡ. ನೀನು ಬರಲ್ಲ ಅಂತ ಬೀಚ್ಗೆ ನಾನೇ ಹೇಳ್ತೀನಿ' ಎಂದು ತಮಾಷೆಯಾಗಿ ಹೇಳಿ ಷೂ ಕಟ್ಟಿಕೊಂಡು, ಬಾಯ್ ಹೇಳಿ ಹೊರಟಿದ್ದ. ನನ್ನ ಬಿಟ್ಟು ಹೋಗಿದ್ದಕ್ಕೆ ಅವನ ಮೇಲೆ ಅಸಾಧ್ಯ ಸಿಟ್ಟು ಬಂದಿತ್ತು. ಆದರೆ ಏನೂ ಮಾಡುವಂತಿರಲಿಲ್ಲ. ಬೆನ್ನಿಗೆ ಗುದ್ದಿ ಸಿಟ್ಟು ತೀರಿಸಿಕೊಳ್ಳೋಣವೆಂದರೆ ಅವನು ಮಾರು ದೂರ ಸಾಗಿದ್ದ.

ಬೀಚಿಗೆ ನಾನು ಬರಲ್ಲ ಎಂದು ಹೇಳಲು ಹೋದವನು ಮತ್ತೆ ಬರಲೇ ಇಲ್ಲ. ಅವನು ಸುನಾಮಿಯ ರಕ್ಕಸ ಅಲೆಗಳಿಗೆ ಸಿಕ್ಕಿ ಮರಳು ಸೇರಿದ್ದ. ಪ್ರಪಂಚವನ್ನೇ ಕಳೆದುಕೊಂಡಷ್ಟು ಬರಿದಾಗಿದ್ದೆ ನಾನು. ಅಂತಿಮವಾಗಿ ಅವನ ಕಳೇಬರದ ದರ್ಶನವೂ ಆಗಲಿಲ್ಲ. ನಾವು ತುಳಿಯುತ್ತಿದ್ದ ಅಲೆಯೊಂದಿಗೆ ಕಡಲ ಒಡಲು ಸೇರಿಕೊಂಡಿದ್ದ. ನನ್ನ ತುಂಬಾ ಖಾಲಿ.... ಖಾಲಿ ಅವನಿಲ್ಲದೇ....

ಇದು ಕಳೆದು ಇಂದಿಗೆ ವರ್ಷಗಳೇ ಉರುಳಿ ಹೋಗಿವೆ. ಇಂದಿಗೂ ನಾನು ಅದೇ ಕಡಲ ತೀರಕ್ಕೆ ಬರುತ್ತೇನೆ. ಮರಳ ಮೇಲೆ ಕಾಲಿಡುವಾಗ ಅವನ ಕಳೇಬರ ಇಲ್ಲೆಲ್ಲೋ ಇರಬಹುದೇನೋ ಎಂಬ ಭಾವನೆ ಬಂದು ಹೆಜ್ಜೆಗಳು ಕ್ಷಣ ಕಾಲ ಹೂತು ಹೋಗುತ್ತವೆ. ಅಪ್ಪಳಿಸಿ ಬರುವ ಅಲೆಗಳು ಅದೇನೇನೋ ಚಿಂದಿ ಆಯ್ದು ತರುತ್ತವೆ. ಅವನನ್ನೂ ಹೊತ್ತು ತಂದಿದ್ದರೆ ಎಂದು ಅಂದುಕೊಳ್ಳುತ್ತೇನೆ. ಎದೆ ಭಾರವಾಗುತ್ತದೆ ಅವನ ನೆನಪಿನಲ್ಲಿ...

- ಕೆ.ವೀ
sharvarikrishna@gmail.com

3 comments:

ಪ್ರವೀಣ ಚಂದ್ರ said...

superb

Anonymous said...

naija ghataneyanthe ide.

Priya said...

ಸೂಪರ್... ಕತೆ ಅನ್ನಿಸಲಿಲ್ಲ. ಯಾರೋ ಎದುರು ಕಿಲಿತ ಜೀವದೊಂದು ದನಿ ನುಡಿಯುತ್ತಿರುವಂತೆ.... ಬದುಕಿನ ಚಿತ್ರಗಳು ಬದಲಾಗಲು ಕ್ಷಣ ಮಾತ್ರ ಸಾಕು....

Post a Comment