ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿಅಂದು ಮೇ ೨೩ರ ಮುಂಜಾನೆ ೬.೩೦ರ ಸಮಯ. ರಾತ್ರಿಯೆಲ್ಲಾ ಆಗಸದಲ್ಲಿ ನಸುನಗುತ್ತಿದ್ದ
ಚಂದಮಾಮ ಪಡುವಣದ ಅಂಚಿನಲ್ಲಿ ಜಾರಿದ್ದ. ಇತ್ತ ಮೂಡಣದಲ್ಲಿ ಉದಯಿಸುತ್ತಿದ್ದ ರವಿ,
ತನ್ನ ಕರ್ತವ್ಯ ನಿರ್ವಹಣೆಗೆ ಅಣಿಯಾಗುತ್ತಿದ್ದ. ಅತ್ತ ದೂರದ ದೇಶ ದುಬೈಯಿಂದ
ಬರುತ್ತಿದ್ದ ವಿಮಾನವೊಂದು ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ
ಕೆಳಗಿಳಿಯುತ್ತಿತ್ತು. ವರ್ಷಗಳ ನಂತರ ತವರಿಗೆ ಮರಳುತ್ತಿದ್ದ ಪ್ರಯಾಣಿಕರ ಮನಗಳು
ತಮ್ಮವರ ದರ್ಶನಕ್ಕಾಗಿ ಹಾತೊರೆಯುತ್ತಿದ್ದವು. ಇನ್ನೇನು, ವಿಮಾನದಿಂದ ಇಳಿದೇ
ಬಿಟ್ಟೆವು ಅಂದುಕೊಳ್ಳುತ್ತಿದ್ದ ಪ್ರಯಾಣಿಕರಿಗೆ ಆಘಾತ ಕಾದಿತ್ತು. ರನ್‌ವೇಯಿಂದ
ಜಾರಿದ ವಿಮಾನ ಹೊತ್ತಿ ಉರಿಯತೊಡಗಿತು. ನೋಡ, ನೋಡುತ್ತಿದ್ದಂತೆ ೧೫೮ ಮಂದಿ ಇಹಲೋಕದ
ಯಾತ್ರೆ ಮುಗಿಸಿದರು. ಅಪಘಾತ ರಾಷ್ಟ್ರೀಯ ದುರಂತವಾಗಿ ಬಿಟ್ಟಿತು.
ವಿಮಾನ ದುರಂತ ಇದೇ ಮೊದಲಲ್ಲ, ಬಹುಶ: ಇದೇ ಕೊನೆಯೂ ಆಗಲಾರದು. ವಿಮಾನಗಳು ಅಪ್ಪಳಿಸುವ,
ತಾಂತ್ರಿಕ ದೋಷದಿಂದ ಕೆಳಗಿಳಿಯುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ.
ಪ್ರಯಾಣಿಕರ ಎದೆ ಬಡಿತವನ್ನು ಹೆಚ್ಚಿಸುತ್ತವೆ. ವಿಮಾನಯಾನ ಸುರಕ್ಷಿತ ಎನ್ನುವವರ
ಅಭಿಪ್ರಾಯಕ್ಕೆ ಸವಾಲೊಡ್ಡುತ್ತಲೇ ಇರುತ್ತವೆ.
ಅಂಕಿ-ಅಂಶಗಳು ಹೇಳುವಂತೆ ಕಳೆದ ೫ ವರ್ಷಗಳ ಅವಯಲ್ಲಿ ವಿಮಾನಯಾನ ಪ್ರಮಾಣ ಎರಡು ಪಟ್ಟು
ಹೆಚ್ಚಿದೆ. ಆದರೆ, ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿಲ್ಲ.
ಬಹುತೇಕ ವಿಮಾನಯಾನ ಸಂಸ್ಥೆಗಳು ಸಿಬ್ಬಂದಿಗಳ ಕೊರತೆ ಎದುರಿಸುತ್ತಿವೆ.
ಸಿಬ್ಬಂದಿಗಳಿಗೆ ಉತ್ತಮ ತರಬೇತಿಯ ಕೊರತೆಯಿದೆ. ಜತೆಗೆ ಇರುವ ಸಿಬ್ಬಂದಿಯೇ ಹೆಚ್ಚುವರಿ
ಸಮಯದಲ್ಲಿ ಕೆಲಸ ನಿರ್ವಹಿಸಬೇಕಾದ ಒತ್ತಡವಿದೆ. ಇವೆಲ್ಲವೂ ವಿಮಾನ ದುರಂತಗಳಿಗೆ
ಆಹ್ವಾನವೀಯುತ್ತಿವೆ. ಅಲ್ಲದೆ, ಸಿಬ್ಬಂದಿಗಳ ನಡುವಿನ ಸಂವಹನ ಕೊರತೆ, ಅಸಮರ್ಪಕ
ನಿರ್ವಹಣೆ, ಆಧುನಿಕ ತಂತ್ರಜ್ಞಾನದ ಕೊರತೆಗಳು ಅವಘಡಗಳಿಗೆ ತಮ್ಮದೇ ಆದ ಪಾಲನ್ನು
ಸಲ್ಲಿಸುತ್ತಿವೆ.
ಬಹುತೇಕ ಸಂದರ್ಭಗಳಲ್ಲಿ ಸಿಬ್ಬಂದಿಗಳ ತಪ್ಪುಗಳಿಂದಾಗಿಯೇ ಅಪಘಾತಗಳು ಸಂಭವಿಸುತ್ತವೆ.
ಶೇ. ೭೮ರಷ್ಟು ಅಪಘಾತಗಳು ಸಂಭವಿಸುವುದು ಸಿಬ್ಬಂದಿಗಳ ತಪ್ಪುಗಳಿಂದ. ದುರಂತಕ್ಕೆ
ತಾಂತ್ರಿಕ ದೋಷದ ಪಾಲು ಶೇ. ೨೨ರಷ್ಟು ಮಾತ್ರ ಎನ್ನುವುದು ಪರಿಣಿತರ ಅಳಲು.
ದೇಶದಲ್ಲಿ ಸರಿ ಸುಮಾರು ೧೦ ಕಮರ್ಷಿಯಲ್ ಏರ್‌ಲೈನ್ಸ್‌ಗಳಿದ್ದು, ೬೦೦ ವಿಮಾನಗಳು
ಹಾರಾಟ ನಡೆಸುತ್ತವೆ. ಆದರೆ, ಇಡೀ ದೇಶದ ವಾಯುನೆಲೆ ವೀಕ್ಷಣೆಗೆ ಇರುವ ರೆಡಾರ್‌ಗಳ
ಸಂಖ್ಯೆ ಕೇವಲ ೭. ಇನ್ಸ್‌ಪೆಕ್ಟರ್‌ಗಳು ಇರುವುದು ಕೇವಲ ಮೂರು. ಕಡಿಮೆ ವಿಸಿಬಿಲಿಟಿ
ವೇಳೆಯೂ ಲ್ಯಾಂಡಿಂಗ್ ಮಾಡಲು ಅವಕಾಶವೀಯುವ ಅತ್ಯಾಧುನಿಕ ಮಾದರಿಯ ತಂತ್ರಜ್ಞಾನ
ಇರುವುದು ಕೇವಲ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಎನ್ನುತ್ತಾರೆ ವಿಮಾನಯಾನ
ಪ್ರಾಕಾರದ ಹಿರಿಯ ಅಕಾರಿಗಳು.
ಕಳೆದ ೧೦ ತಿಂಗಳ ಅವಯಲ್ಲಿ ದೇಶದಲ್ಲಿ ೧೮ ವಿಮಾನ ದುರಂತಗಳು ಸ್ವಲ್ಪದರಲ್ಲಿ ತಪ್ಪಿವೆ.
ಇಂತಹ ಅಚಾನಕ್ ಘಟನೆಗಳ ಪೈಕಿ ಬಹುತೇಕ ಘಟನೆಗಳು ಸಂಭವಿಸಿದುದು ಮುಂಬಯಿ ವಿಮಾನ
ನಿಲ್ದಾಣ ವ್ಯಾಪ್ತಿಯ ಸಮೀಪ ಎಂಬುದು ಆಘಾತಕಾರಿ ಅಂಶ. ಈ ದಿಸೆಯಲ್ಲಿ ನಂತರದ ಸ್ಥಾನ
ದಿಲ್ಲಿಯದು.

ಭಾರತದ ಈವರೆಗಿನ ೧೦ ಅತಿ ಘೋರ ವಿಮಾನಯಾನ ದುರಂತಗಳು
೧. ಜನವರಿ ೧, ೧೯೭೮.
ಮುಂಬಯಿಯಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ೮೫೫ ವಿಮಾನ ಟೇಕ್‌ಆಫ್ ಆದ ಕೆಲವೇ
ಕ್ಷಣಗಳಲ್ಲಿ ಮುಂಬಯಿಯ ಬಾಂದ್ರಾ ಕರಾವಳಿ ತೀರದಾಚೆ ಅಪಘಾತಕ್ಕೀಡಾಯಿತು. ತಾಂತ್ರಿಕ
ದೋಷ ಅಪಘಾತಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೨೧೩

೨. ಮೇ ೨೩, ೨೦೧೦
ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಐಎಕ್ಸ್ ೮೧೨ ವಿಮಾನ ಮಂಗಳೂರಿನ
ಬಜಪೆ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದ ವೇಳೆ ದುರಂತಕ್ಕೀಡಾಯಿತು.
ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೧೫೮

೩. ಅಕ್ಟೋಬರ್ ೧೯, ೧೯೮೮
ಮುಂಬಯಿಯಿಂದ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ೧೧೩ ವಿಮಾನ ಅಹಮದಾಬಾದ್ ವಿಮಾನ
ನಿಲ್ದಾಣ ಸಮೀಪ ಮರಕ್ಕೆ ಡಿಕ್ಕಿ ಹೊಡೆದು ಗದ್ದೆಗೆ ಉರುಳಿ ಬೆಂಕಿ ಹೊತ್ತಿಕೊಂಡಿತು.
ಮಂಜು ಮುಸುಕಿದ ವಾತಾವರಣ ದುರಂತಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೧೩೦

೪. ಜನವರಿ ೨೪, ೧೯೬೬
ಭಾರತದಿಂದ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ ೭೦೭-೪೩೭ ವಿಮಾನ ಫ್ರಾನ್ಸ್ ಹಾಗೂ ಇಟಲಿ
ಗಡಿಯಲ್ಲಿ ಮೌಂಟ್ ಬ್ಲಾಂಕ್ ಪರ್ವತಕ್ಕೆ ಅಪ್ಪಳಿಸಿತು. ಮೃತರಲ್ಲಿ ಖ್ಯಾತ ವಿಜ್ಞಾನಿ
ಹೋಮಿ ಜಹಾಂಗೀರ್ ಭಾಭಾ ಸೇರಿದ್ದಾರೆ.
ಮೃತ ಪ್ರಯಾಣಿಕರ ಸಂಖ್ಯೆ: ೧೧೭

೫. ಫೆಬ್ರವರಿ ೧೪, ೧೯೯೦
ಮುಂಬಯಿಯಿಂದ ಬರುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ೬೦೫ ವಿಮಾನ ತಾಂತ್ರಿಕ
ದೋಷದಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಅಪಘಾತಕ್ಕೀಡಾಯಿತು. ಖ್ಯಾತ ಉದ್ಯಮಿ
ಅಶೋಕ್ ವರ್ಧನ್ ಬಿರ್‍ಲಾ, ಪತ್ನಿ ಹಾಗೂ ಪುತ್ರಿ ಸುಜಾತಾ ಮೃತರಲ್ಲಿ ಸೇರಿದ್ದಾರೆ.
ಮೃತ ಪ್ರಯಾಣಿಕರ ಸಂಖ್ಯೆ: ೯೨

೬. ಆಗಸ್ಟ್ ೧೬, ೧೯೯೧
ಕೋಲ್ಕತಾದಿಂದ ಇಂಫಾಲ್‌ಗೆ ತೆರಳುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ೨೫೭ ವಿಮಾನ
ಥಾಂಗ್‌ಜಿಂಗ್ ಬೆಟ್ಟಕ್ಕೆ ಅಪ್ಪಳಿಸಿತು.
ಮೃತ ಪ್ರಯಾಣಿಕರ ಸಂಖ್ಯೆ: ೬೯

೭. ಜುಲೈ ೧೭, ೨೦೦೦.
ಬೋಯಿಂಗ್ ೭೩೭ ಪ್ರಯಾಣಿಕ ವಿಮಾನ, ಪಟನಾ ವಿಮಾನ ನಿಲ್ದಾಣ ಸಮೀಪ ವಾಣಿಜ್ಯ
ಸಂಕೀರ್ಣಕ್ಕೆ ಡಿಕ್ಕಿ ಹೊಡೆಯಿತು. ವಿಮಾನ ಸುಮಾರು ೨೦ ವರ್ಷಗಳಷ್ಟು
ಹಳೆಯದಾಗಿದ್ದು, ವರ್ಷದ ಅಂತ್ಯದ ವೇಳೆಗೆ ಸೇವೆಯಿಂದ ಇದನ್ನು ವಾಪಸ್ ಪಡೆಯಲು
ಅಕಾರಿಗಳು ನಿರ್ಧರಿಸಿದ್ದರು.
ಮೃತ ಪ್ರಯಾಣಿಕರ ಸಂಖ್ಯೆ: ೫೮

೮. ಏಪ್ರಿಲ್ ೨೬, ೧೯೯೩.
ದಿಲ್ಲಿಯಿಂದ ಮುಂಬಯಿಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ೪೯೧ವಿಮಾನ ಮಾರ್ಗಮಧ್ಯೆ
ಔರಂಗಾಬಾದ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಅಪಘಾತಕ್ಕೀಡಾಯಿತು. ಪೈಲಟ್‌ನ ಅಚಾತುರ್ಯ
ಅಪಘಾತಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೫೫. ಗಾಯಗೊಂಡವರ ಸಂಖ್ಯೆ: ೬೩

೯. ನವೆಂಬರ್ ೩, ೧೯೫೦
ಮುಂಬಯಿ-ಕೈರೋ-ಜಿನೀವಾ-ಲಂಡನ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏರ್ ಇಂಡಿಯಾ ೨೪೫
ವಿಮಾನ ಮೌಂಟ್ ಬ್ಲಾಂಕ್ ಪರ್ವತಕ್ಕೆ ಅಪ್ಪಳಿಸಿತು.
ಮೃತ ಪ್ರಯಾಣಿಕರ ಸಂಖ್ಯೆ: ೪೮.


೧೦. ಜೂನ್ ೨೧, ೧೯೮೨
ಕೌಲಾಲಂಪುರದಿಂದ ಆಗಮಿಸಿದ ಬೋಯಿಂಗ್ ೭೦೭-೪೨೦ ವಿಮಾನ ಮುಂಬಯಿಯ ಸಹರಾ ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ದುರಂತಕ್ಕೀಡಾಯಿತು. ಭಾರಿ ಮಳೆಯಿಂದ
ಕೂಡಿದ ಹವಾಮಾನ ವೈಪರೀತ್ಯ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಮೃತ ಪ್ರಯಾಣಿಕರ ಸಂಖ್ಯೆ: ೧೭.


ಪೈಲಟ್‌ಗಳಿಗೆ ಮದ್ಯಪಾನ ನಿಷೇಧ
ಕರ್ತವ್ಯ ನಿರ್ವಹಣೆ ವೇಳೆ ಪೈಲಟ್‌ಗಳಿಗೆ ಮದ್ಯಪಾನ ನಿಷೇಸಲಾಗಿದೆ. ವಿಮಾನ ಹಾರಾಟಕ್ಕೆ
ಮುನ್ನ ಮತ್ತು ನಂತರ ದಿಢೀರ್ ದಾಳಿ ಮೂಲಕ ಪೈಲಟ್‌ಗಳು ಮದ್ಯಪಾನ ಮಾಡಿದ್ದಾರೆಯೇ,
ಇಲ್ಲವೇ ಎಂಬುದನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ದ ಅಕಾರಿಗಳು
ಪತ್ತೆ ಹಚ್ಚುತ್ತಾರೆ. ಆದರೂ, ಪೈಲಟ್‌ಗಳು ಮದ್ಯಪಾನ ಮಾಡಿ ಚಾಲನೆ ಮಾಡಿದ ಬಗ್ಗೆ
ದೂರುಗಳು ಬರುತ್ತಿರುತ್ತವೆ. ಡಿಜಿಸಿಎ ಕಳೆದ ವರ್ಷ ೮ ಕುಡುಕ ಪೈಲಟ್‌ಗಳನ್ನು
ವಜಾಗೊಳಿಸಿದೆ. ಮದ್ಯಪಾನ ಮಾಡಿದ ಪೈಲಟ್‌ಗಳಿಗೆ ಸಂಬಂಸಿದಂತೆ ೪೨ ಪ್ರಕರಣಗಳು
ದಾಖಲಾಗಿವೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿಯೇ ೨೧ ಪ್ರಕರಣಗಳು ಪತ್ತೆಯಾಗಿವೆ. ಇತರ
೧೧ ಪ್ರಕರಣಗಳು ಮುಂಬಯಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿವೆ.


ವಿಶ್ವದ ಈವರೆಗಿನ ೧೦ ಘೋರ ವಿಮಾನಯಾನ ದುರಂತಗಳು
೧. ಮಾರ್ಚ್ ೨೭, ೧೯೭೭
ಮಂಜು ಮುಸುಕಿದ ವಾತಾವರಣದಿಂದಾಗಿ ಸ್ಪೇನ್‌ನ ಕೆನರಿ ದ್ವೀಪದ ತೆನೆರಿಫೆಯ
ರನ್‌ವೇನಲ್ಲಿ ಬೋಯಿಂಗ್ ೭೪೭ನ ಎರಡು ವಿಮಾನಗಳ ನಡುವೆ ಡಿಕ್ಕಿ. ಸಂವಹನ ಕೊರತೆಯಲ್ಲಾದ
ಗೊಂದಲ ಅಪಘಾತಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೫೮೩

೨. ಆಗಸ್ಟ್ ೧೨, ೧೯೮೫
ಟೊಕಿಯೋದಿಂದ ಹೊರಟ ಜಪಾನ್ ಏರ್‌ಲೈನ್ಸ್‌ನ ವಿಮಾನ ೭೪೭ ತಾಂತ್ರಿಕ ದೋಷದಿಂದಾಗಿ ಮೌಂಟ್
ಫ್ಯೂಜಿ ಸಮೀಪ ಪತನ.
ಮೃತ ಪ್ರಯಾಣಿಕರ ಸಂಖ್ಯೆ: ೫೨೦


೩. ನವೆಂಬರ್ ೧೨, ೧೯೯೬
ಖಜಕಿಸ್ತಾನದಿಂದ ಹೊರಟ ಇಲಿಯುಷಿನ್ ಐಎಲ್-೭೬ ಸರಕು ಸಾಗಣೆ ವಿಮಾನ ಹಾಗೂ ಸೌದಿಯ ೭೪೭
ವಿಮಾನಗಳ ನಡುವೆ ದಿಲ್ಲಿ ಸಮೀಪ ಆಗಸದಲ್ಲಿ ಡಿಕ್ಕಿ. ದಿಲ್ಲಿ ವಿಮಾನ ನಿಲ್ದಾಣದ
ಅಕಾರಿಗಳು ನೀಡಿದ ನಿರ್ದೇಶನವನ್ನು ಖಜಕಿಸ್ತಾನ ವಿಮಾನದ ಚಾಲಕ ಉಲ್ಲಂಘಿಸಿದುದೇ
ಅವಘಡಕ್ಕೆ ಕಾರಣ. ಅಲ್ಲದೆ, ಸಂಭಾವ್ಯ ಡಿಕ್ಕಿ ತಪ್ಪಿಸಲು ಮುನ್ಸೂಚನೆ ನೀಡುವ
ತಂತ್ರಜ್ಞಾನದ ಅಳವಡಿಕೆ ಎರಡೂ ವಿಮಾನಗಳಲ್ಲಿಯೂ ಇರಲಿಲ್ಲ.
ಮೃತ ಪ್ರಯಾಣಿಕರ ಸಂಖ್ಯೆ: ೩೪೯


೪. ಮಾರ್ಚ್ ೩, ೧೯೭೪
ತಾಂತ್ರಿಕ ದೋಷದಿಂದಾಗಿ ಓರ್‍ಲಿ ವಿಮಾನ ನಿಲ್ದಾಣದ ಸಮೀಪ ತುರ್ಕಿಯ ಡಿಸಿ-೧೦ ವಿಮಾನ ಪತನ.
ಮೃತ ಪ್ರಯಾಣಿಕರ ಸಂಖ್ಯೆ: ೩೪೬೫. ಜೂನ್ ೨೩, ೧೯೮೫
ಟೊರೆಂಟೊದಿಂದ ಮುಂಬಯಿಗೆ ಬರುತ್ತಿದ್ದ ಏರ್ ಇಂಡಿಯಾ ೭೪೭ ವಿಮಾನದಲ್ಲಿ ಸಿಖ್
ಉಗ್ರಗಾಮಿ ಇಟ್ಟ ಬಾಂಬ್ ಸಿಡಿದು ಸೋಟ. ಐರ್‌ಲ್ಯಾಂಡ್ ಪೂರ್ವಕ್ಕಿರುವ ಸಾಗರದಲ್ಲಿ
ಪತನ.
ಮೃತ ಪ್ರಯಾಣಿಕರ ಸಂಖ್ಯೆ: ೩೨೯.


೬. ಆಗಸ್ಟ್ ೧೯, ೧೯೮೦
ಕರಾಚಿಯಿಂದ ರಿಯಾದ್‌ಗೆ ಬರುತ್ತಿದ್ದ ಸೌದಿಯ ಎಲ್-೧೦೧೧ ವಿಮಾನದಲ್ಲಿ ಬೆಂಕಿ
ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ವಿಮಾನ ಹೊತ್ತಿ ಉರಿಯಿತು.
ಮೃತ ಪ್ರಯಾಣಿಕರ ಸಂಖ್ಯೆ: ೩೦೧.


೭. ಜುಲೈ ೩, ೧೯೮೮.
ಶತ್ರು ರಾಷ್ಟ್ರದ ಯುದ್ಧ ವಿಮಾನ ಎಂಬುದಾಗಿ ತಪ್ಪಾಗಿ ಭಾವಿಸಿದ ಅಮೆರಿಕದ ನೌಕಾಪಡೆ
ಇರಾನ್ ಏರ್‌ಲೈನ್ಸ್‌ನ ಏರ್‌ಬಸ್ ಎ೩೦೦ ಪ್ರಯಾಣಿಕ ವಿಮಾನವನ್ನು ಹೊಡೆದುರುಳಿಸಿತು.
ಮೃತ ಪ್ರಯಾಣಿಕರ ಸಂಖ್ಯೆ: ೨೯೦

೮. ಮೇ ೨೫, ೧೯೭೯
ತಾಂತ್ರಿಕ ದೋಷದಿಂದಾಗಿ ಚಿಕಾಗೊ ವಿಮಾನ ನಿಲ್ದಾಣದ ರನ್‌ವೇಯಿಂದ ಮೇಲಕ್ಕೇರಿದ ಕೆಲವೇ
ಕ್ಷಣಗಳಲ್ಲಿ ಅಮೆರಿಕದ ಡಿಸಿ-೧೦ ವಿಮಾನ ಪತನ. (ಅಮೆರಿಕ ನೆಲದಲ್ಲಿ ಸಂಭವಿಸಿದ
ಈವರೆಗಿನ ಅತಿ ಘೋರ ವಿಮಾನ ದುರಂತ ಎಂಬುದು ಇದರ ಕಪ್ಪು ಚುಕ್ಕೆ).
ಮೃತ ಪ್ರಯಾಣಿಕರ ಸಂಖ್ಯೆ: ೨೭೩.

೯. ಡಿಸೆಂಬರ್ ೨೧, ೧೯೮೮
ಲಿಬಿಯಾದ ಇಬ್ಬರು ಉಗ್ರಗಾಮಿಗಳು ಇಟ್ಟ ಬಾಂಬ್ ಸಿಡಿದು ಸ್ಕಾಟ್‌ಲ್ಯಾಂಡ್‌ನ
ಲಾಕೆರ್‌ಬೈನ್ ಆಗಸದಲ್ಲಿ ಪಾನ್ ಅಮೆರಿಕನ್ ವಿಮಾನ ೧೦೩ ಸಿಡಿಯಿತು.
ಮೃತ ಪ್ರಯಾಣಿಕರ ಸಂಖ್ಯೆ: ೨೭೦.


೧೦. ಸೆಪ್ಟಂಬರ್ ೧, ೧೯೮೩.
ನ್ಯೂಯಾರ್ಕ್‌ನಿಂದ ಸಿಯೋಲ್‌ಗೆ ತೆರಳುತ್ತಿದ್ದ ಕೊರಿಯಾ ಏರ್‌ಲೈನ್ಸ್ ಕೆಎಲ್
೦೦೭ವಿಮಾನವನ್ನು ಸೋವಿಯತ್ ರಷ್ಯಾದ ಸೈನಿಕರು ಹೊಡೆದುರುಳಿಸಿದರು. ವಿಮಾನದ ಸಿಬ್ಬಂದಿ
ಸರಿಯಾದ ಮಾಹಿತಿ ನೀಡದೇ ಸೋವಿಯತ್ ಪ್ರದೇಶಕ್ಕೆ ನುಗ್ಗಿದ್ದೇ ಅವಾಂತರಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೨೬೯.

ವಿಮಾನ ದುರಂತ ಕುರಿತ ಕುತೂಹಲಕಾರಿ ಅಂಶಗಳು
* ಈವರೆಗಿನ ವಿಶ್ವದ ೧೦ ಘೋರ ವಿಮಾನಯಾನ ದುರಂತಗಳ ಪೈಕಿ ೭ರಲ್ಲಿ ಬೋಯಿಂಗ್ ೭೪೭ ವಿಮಾನ
ಒಳಗೊಂಡಿದೆ.
* ಭಯೋತ್ಪಾದಕರ ಸಂಚಿನಿಂದ ಇಲ್ಲವೇ ಶತ್ರು ರಾಷ್ಟ್ರದ ಯುದ್ಧವಿಮಾನ ಎಂಬುದಾಗಿ
ತಪ್ಪಾಗಿ ಅರ್ಥೈಸಿ ಹೊಡೆದುರುಳಿಸುವ ಮೂಲಕ ಸಂಭವಿಸಿದ ವಿಮಾನ ದುರಂತಗಳ ಸಂಖ್ಯೆ ೪.
* ಪೈಲಟ್‌ನ ತಪ್ಪಿನಿಂದಾಗಿ ಸಂಭವಿಸಿದ ದುರಂತಗಳ ಸಂಖ್ಯೆ ೩.
* ತಾಂತ್ರಿಕ ದೋಷದಿಂದಾಗಿ ಸಂಭವಿಸಿದ ದುರಂತಗಳ ಸಂಖ್ಯೆ ೩.


ವಿಶ್ವದ ಅಪಾಯಕಾರಿ ವಿಮಾನ ನಿಲ್ದಾಣಗಳು
ಕಡಿದಾದ ಪರ್ವತ ಪ್ರದೇಶ ಹಾಗೂ ನದಿ, ಸಾಗರ, ಇಲ್ಲವೇ ಸಮುದ್ರಗಳ ಪಕ್ಕವೇ ಇರುವ ವಿಮಾನ
ನಿಲ್ದಾಣಗಳನ್ನು ಸಾಧಾರಣವಾಗಿ ಸುರಕ್ಷತೆ ದೃಷ್ಟಿಯಿಂದ ‘ವಿಶೇಷ’ ಎಂಬುದಾಗಿ
ಗುರುತಿಸಲಾಗುತ್ತದೆ. ಹಾಗೆ ನೋಡಿದರೆ,
* ಡೊಮಿನಿಕಾದ ಕೇನ್ ಫೀಲ್ಡ್ ವಿಮಾನ ನಿಲ್ದಾಣ ಅತಿ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ
ಒಂದು. ಪರ್ವತ ಪ್ರದೇಶಗಳ ಇಳಿಜಾರು ಜಾರುತ್ತಿದ್ದಂತೆ ಆರಂಭವಾಗುವ ಸಮುದ್ರದ ತೀರದಲ್ಲಿ
ನಿರ್ಮಿಸಲಾದ ರನ್‌ವೇ ದುರಂತಕ್ಕೆ ಆಹ್ವಾನ ನೀಡುವಂತಿದೆ.
* ಶ್ರೀಮಂತರ ಆಟದ ಮೈದಾನ ಎಂದೇ ಖ್ಯಾತವಾದ, ಸುಂದರ ಪ್ರೇಕ್ಷಣೀಯ ಸ್ಥಳ ಕೆರೆಬಿಯನ್
ದ್ವೀಪದ ಸೇಂಟ್ ಬಾರ್ಥೆಲೆಮಿಯ ವಿಮಾನ ನಿಲ್ದಾಣ ಕೂಡ ಅಪಾಯಕಾರಿ ಎಂಬುದು ತಜ್ಞರ
ಅಭಿಮತ. ಕಡಿದಾದ ಪರ್ವತದ ತಳದಲ್ಲಿ ಆರಂಭವಾಗಿ ಸೇಂಟ್ ಜೀನ್ಸ್ ಕರಾವಳಿ ತಟದಲ್ಲಿ
ಕೊನೆಗೊಳ್ಳುವ ರನ್‌ವೇ ಜನರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚು. ಸುಂದರ
ಬೀಚ್‌ನಲ್ಲಿ ಸೂರ್ಯ ಸ್ನಾನ ಮಾಡುತ್ತಾ ಮೈಮರೆಯುವ ಪ್ರವಾಸಿಗರು ರನ್‌ವೇ ಪಕ್ಕದಲ್ಲೇ
ಮೈ ಮರೆತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿರುತ್ತದೆ.
* ನೇಪಾಳದ ಲುಕ್ಲಾದ ತೇನ್‌ಸಿಂಗ್-ಹಿಲರಿ ಏರ್‌ಪೋರ್ಟ್ ಕೂಡ ಅಪಾಯಕಾರಿ ಎಂಬುದು
ಜನಸಾಮಾನ್ಯರ ಅಭಿಮತ. ೫೨೭ ಮೀಟರ್ ಉದ್ದ ಹಾಗೂ ೨೦ ಮೀಟರ್ ಅಗಲ ಇರುವ ನಿಲ್ದಾಣದ
ರನ್‌ವೇ ಸುರಕ್ಷತೆಗೆ ಸವಾಲೊಡ್ಡುವ ಸ್ಥಿತಿಯಲ್ಲಿದೆ. ಅಲ್ಲದೆ, ಪರ್ವತ ಶ್ರೇಣಿಗಳ
ತಪ್ಪಲ ಮಧ್ಯೆ ಹಾಸುಹೊಕ್ಕಾಗಿ ನಿಂತಿರುವ ಕಠ್ಮಂಡು ವಿಮಾನ ನಿಲ್ದಾಣವೂ ಸ್ವಲ್ಪ
ಮಟ್ಟಿಗೆ ಅಪಾಯಕಾರಿಯೇ.
* ಸಮುದ್ರ ಮಟ್ಟದಿಂದ ೩,೩೦೦ ಅಡಿ ಎತ್ತರದಲ್ಲಿ, ಸುತ್ತ ಪರ್ವತಗಳಿಂದ ಕೂಡಿದ ಕಡಿದಾದ
ಕಣಿವೆಯಲ್ಲಿ ನಿರ್ಮಿಸಲಾದ, ಸಣ್ಣ ರನ್‌ವೇ ಹೊಂದಿರುವ ಹಾಂಡುರಾಸ್‌ನ ಟೊಂಕೊಂಟಿನ್
ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವುದು ಪೈಲಟ್‌ಗಳಿಗೆ ಒಂದು ಸವಾಲೇ
ಸರಿ.
* ಕೆರೆಬಿಯನ್ ದ್ವೀಪ ಸಮೂಹದ ಸಾಬಾದ ಜೂಯಾಂಕೊ ಇ.ಯ್ರಾಸ್‌ಕ್ವಿನ್ ವಿಮಾನ ನಿಲ್ದಾಣ.
ಪ್ರಸ್ತುತ ಇಲ್ಲಿ ಪ್ರಯಾಣಿಕ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡುತ್ತಿಲ್ಲವಾದರೂ,
ಅಕಾರಿಗಳ ವಿಶೇಷ ಅನುಮತಿ ಪಡೆದು ವಿಮಾನ ಇಳಿಸಲಾಗುತ್ತಿದೆ. ಈವರೆಗೆ ಯಾವುದೇ ದುರಂತ
ಸಂಭವಿಸದೇ ಇದ್ದರೂ ಕೂಡ ಇಲ್ಲಿಯ ವಿಮಾನ ನಿಲ್ದಾಣ ಅಪಾಯಕಾರಿ ಎಂಬುದು ತಜ್ಞರ ಅಭಿಮತ.
ಒಂದು ಕಡೆ ಕಡಿದಾದ ಬೆಟ್ಟಗಳ ಇಳಿಜಾರು, ಇನ್ನೊಂದೆಡೆ ಸಮುದ್ರ. ಜತೆಗೆ ಸಣ್ಣ ರನ್‌ವೇ.
ಲ್ಯಾಂಡಿಂಗ್ ಹಾಗೂ ಟೇಕ್‌ಆಫ್ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ
ಬುತ್ತಿ.
* ಫ್ರಾನ್ಸ್‌ನ ಆಲ್ಸ್ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಕೌರ್‍ಚೆವೆಲ್, ಅಪಾಯಕಾರಿ
ವಿಮಾನ ನಿಲ್ದಾಣಗಳ ಪೈಕಿ ಒಂದು. ೫೨೫ಮೀಟರ್ ಉದ್ದದ ಇಲ್ಲಿನ ರನ್‌ವೇ, ವಿಶ್ವದ ಅತಿ
ಚಿಕ್ಕ ರನ್‌ವೇಗಳಲ್ಲಿ ಒಂದು. ಕಡಿದಾದ ಕಣಿವೆಗಳ ಮಧ್ಯೆಯೇ ಬರಬೇಕಾದ ವಿಮಾನಗಳನ್ನು
ಸುರಕ್ಷಿತವಾಗಿ ಲ್ಯಾಂಡ್ ಮಾಡುವುದು ತಜ್ಞ ಪೈಲಟ್‌ಗಳಿಂದ ಮಾತ್ರ ಸಾಧ್ಯ.
* ಪೋರ್ಚುಗಲ್‌ನ ಮಡೈರಾ ವಿಮಾನ ನಿಲ್ದಾಣ ನುರಿತ ಪೈಲಟ್‌ಗಳಿಗೂ ಸವಾಲೊಡ್ಡುವಂತಿದೆ.
ರನ್‌ವೇ ಸಣ್ಣದಾಗಿದ್ದು, ನಿಲ್ದಾಣ ಒಂದೆಡೆ ಪರ್ವತ ಶ್ರೇಣಿ ಹಾಗೂ ಇನ್ನೊಂದೆಡೆ
ಸಾಗರದಿಂದ ಆವೃತವಾಗಿದೆ.
* ಗಿಬ್ರಾಲ್ಟರ್ ವಿಮಾನ ನಿಲ್ದಾಣ ವಿಶ್ವದ ಕೆಲವೇ ‘ಎ’ ದರ್ಜೆಯ ವಿಮಾನ
ನಿಲ್ದಾಣಗಳಲ್ಲಿ ಒಂದು. ಆದರೆ, ನಗರದಿಂದ ಸ್ಪೇನ್‌ಗೆ ತೆರಳುವ ಹೆದ್ದಾರಿ, ರನ್ ವೇ
ಮಧ್ಯದಲ್ಲಿಯೇ ಹಾದು ಹೋಗುತ್ತದೆ. ಇದರಿಂದಾಗಿ ಪ್ರತಿ ಸಲ ವಿಮಾನ ಇಳಿಯುವಾಗ ಮತ್ತು
ಟೇಕ್ ಆಫ್ ಆಗುವಾಗ ಹೆದ್ದಾರಿಯನ್ನು ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಸಬೇಕಾದ
ಅನಿವಾರ್‍ಯತೆ ಎದುರಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ದುರಂತ ಎದುರಾಗುತ್ತದೆ.

ಭಾರತದಲ್ಲಿ
ಕಡಿದಾದ ಪರ್ವತಗಳ ಮಧ್ಯೆ ಸಮುದ್ರ ಮಟ್ಟದಿಂದ ಸರಿ ಸುಮಾರು ೫,೦೭೨ ಅಡಿ ಎತ್ತರದಲ್ಲಿ
ನಿರ್ಮಿಸಲಾದ ಹಿಮಾಚಲ ಪ್ರದೇಶದ ಶಿಮ್ಲಾ ವಿಮಾನ ನಿಲ್ದಾಣ ಅಪಾಯಕಾರಿ.
ಅಲ್ಲದೆ, ಮಂಗಳೂರು, ಶ್ರೀನಗರ, ಲೆಹ್, ಪೋರ್ಟ್ ಬ್ಲೇರ್, ಕಾಲಿಕಟ್ ಹಾಗೂ ಲಕ್ಷದ್ವೀಪದ
ಅಗಟ್ಟಿ ವಿಮಾನ ನಿಲ್ದಾಣಗಳು ಸ್ವಲ್ಪ ಮಟ್ಟಿಗೆ ಅಪಾಯಕಾರಿಯೇ.
ಮಂಗಳೂರಿನ ಬಜಪೆ ವಿಮಾನ ನಿಲ್ದಾಣ ವೀಕ್ಷಿಸಿದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂ,
‘ವಿಮಾನ ನಿಲ್ದಾಣ ನೋಡಲು ಬಲು ಸುಂದರ. ಆದರೆ, ಅಪಾಯಕಾರಿ’ ಎಂಬುದಾಗಿ ಹಿಂದೊಮ್ಮೆ
ಉದ್ಘಾರ ತೆಗೆದಿದ್ದರಂತೆ. ಬೆಟ್ಟದ ಮೇಲಿರುವ ನಿಲ್ದಾಣದ ರನ್‌ವೇಯ ಎರಡೂ ಕಡೆ ಕಡಿದಾದ
ಪರ್ವತ ಪ್ರದೇಶವಿದೆ. ಹಾಗಾಗಿ, ವಿಮಾನ ರನ್‌ವೇಯಿಂದ ಸ್ವಲ್ಪ ಜಾರಿದರೂ ಅಪಾಯ
ಕಟ್ಟಿಟ್ಟ ಬುತ್ತಿ.
ಲೇಹ್ ಹಾಗೂ ಪೋರ್ಟ್ ಬ್ಲೇರ್‌ನ ರನ್‌ವೇಗಳು ಏಕಮುಖ ಸಂಚಾರ ವ್ಯವಸ್ಥೆ ಹೊಂದಿವೆ.
ಹಾಗಾಗಿ, ಇಲ್ಲಿ ವಿಮಾನಗಳು ಇಳಿಯುವುದು ಹಾಗೂ ಏರುವುದು ಒಂದೇ ದಿಕ್ಕಿನಿಂದ. ಕಾರಣ,
ರನ್‌ವೇಯ ಇನ್ನೊಂದು ಬದಿ ಪರ್ವತ ಶ್ರೇಣಿಗಳ ಸಾಲನ್ನು ಹೊಂದಿದ್ದು, ಟೇಕ್ ಆಫ್ ಅಥವಾ
ಲ್ಯಾಂಡಿಂಗ್‌ಗೆ ಸಾಧುವಲ್ಲ.
ಸುತ್ತಲ ಪರ್ವತ ಶ್ರೇಣಿ ಹಾಗೂ ಅತಿವೇಗದಿಂದ ಬೀಸುವ ಗಾಳಿ ಶ್ರೀನಗರ ವಿಮಾನ
ನಿಲ್ದಾಣವನ್ನು ಅಪಾಯದ ಪಟ್ಟಿಗೆ ಸೇರಿಸಿದೆ. ಕಾಲಿಕಟ್ ವಿಮಾನ ನಿಲ್ದಾಣದಲ್ಲಿ ವಿಮಾನದ
ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ವೇಳೆ ಪಕ್ಕದಲ್ಲಿ ಹಾಸುಹೊಕ್ಕಾದ ಪರ್ವತ ಶ್ರೇಣಿಗಳ
ಬಗ್ಗೆ ಪೈಲಟ್ ತೀವ್ರ ನಿಗಾ ವಹಿಸಲೇಬೇಕು. ಅಗಟ್ಟಿಯಲ್ಲಿ ರನ್ ವೇ ಚಿಕ್ಕದಾಗಿದೆ.
ಜತೆಗೆ ನಿಲ್ದಾಣದ ಒಂದು ಕಡೆ ಎತ್ತರವಾಗಿ ಬೆಳೆದು ನಿಂತ ಮರಗಳು ಅಪಾಯದ ಮುನ್ಸೂಚನೆ
ನೀಡುತ್ತಿರುತ್ತವೆ.
ಇಂತಹ ಸ್ಥಳಗಳಿಗೆ ಕರ್ತವ್ಯಕ್ಕೆ ತೆರಳುವ ಪೈಲಟ್‌ಗಳಿಗೆ ಸಾಧಾರಣವಾಗಿ ವಿಶೇಷ ತರಬೇತಿ
ನೀಡಲಾಗುತ್ತದೆ. ಪರಿಣಿತ ಪೈಲಟ್, ಸಹ ಪೈಲಟ್‌ಗಳನ್ನು ಕರ್ತವ್ಯಕ್ಕೆ
ನಿಯೋಜಿಸಲಾಗುತ್ತದೆ. ಇಲ್ಲಿನ ಹವಾಮಾನ ವೈಪರೀತ್ಯ, ಭೂಭಾಗಗಳ ಬಗ್ಗೆ ವಿಶೇಷ ಮಾಹಿತಿ
ನೀಡಲಾಗಿರುತ್ತದೆ. ಅಲ್ಲದೆ, ಆಗಾಗ ಪೈಲಟ್‌ಗಳ ಸಾಮರ್ಥ್ಯದ ಬಗ್ಗೆ ಪರಿಶೀಲನೆಯೂ
ನಡೆಯುತ್ತದೆ. ಇಷ್ಟಾಗಿಯೂ ದುರಾದೃಷ್ಟವಶಾತ್ ಕೆಲವು ಸಲ ದುರಂತಗಳು ಸಂಭವಿಸುತ್ತವೆ.

- ಮಹಾಬಲೇಶ್ವರ ಹೊನ್ನೆಮಡಿಕೆ

1 comments:

vgb said...

I Appriciate your effort. Really good article.

Post a Comment