ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:59 PM

ನ್ಯಾಯ ದುರಂತ!

Posted by ekanasu

ವಿಚಾರ

ಭೋಪಾಲ್ ದುರಂತದ ನಂತರ ಈ ದೇಶದಲ್ಲಿ ಘಟಿಸಿರುವ ಅತಿದೊಡ್ಡ ದುರಂತ ಇದು. ಈ ದುರಂತದಿಂದಾಗಿ ಸಹಸ್ರಾರು ಆತ್ಮಗಳು ಪರಿತಪಿಸತೊಡಗಿವೆ. ಲಕ್ಷಾಂತರ ಮಂದಿ ಘೋರ ಹತಾಶೆಯ ಮಡುವಿಗೆ ಬಿದ್ದಿದ್ದಾರೆ. ಕೋಟ್ಯಂತರ ಜನರು ಈ ದೇಶದ ತನಿಖಾ ವ್ಯವಸ್ಥೆ ಮತ್ತು ನ್ಯಾಯದಾನ ವ್ಯವಸ್ಥೆಗಳಮೇಲೆ ನಂಬಿಕೆ ಕಳೆದುಕೊಂಡು ದಿಗ್ಭ್ರಾಂತರಾಗಿದ್ದಾರೆ.

ಇದು ಘನಘೋರ 'ನ್ಯಾಯ ದುರಂತ'.

ಹದಿನಾರು ಸಾವಿರ ಅಮಾಯಕರ ಸಾವಿಗೆ, ಆರು ಲಕ್ಷ ಜನರ ಶಾಶ್ವತ ಅಂಗವೈಕಲ್ಯಕ್ಕೆ ಮತ್ತು ಲಕ್ಷಾಂತರ ಕುಟುಂಬಗಳ ಭವಿಷ್ಯನಾಶಕ್ಕೆ ಕಾರಣರಾದವರಿಗೆ ಕೇವಲ ಎರಡು ವರ್ಷಗಳ ಶಿಕ್ಷೆ! ಈ ದೇಶದ ನ್ಯಾಯವ್ಯವಸ್ಥೆಯ ಅಣಕವಿದು. ತನಿಖಾ ವ್ಯವಸ್ಥೆಯ ಸಮಾಧಿ ಇದು. ಈ ಎರಡೂ ವ್ಯವಸ್ಥೆಗಳಮೇಲೆ ಜನರಿಗೆ ಈಗ ಎಳ್ಳಷ್ಟೂ ನಂಬಿಕೆ ಉಳಿದಿಲ್ಲ.
ಪ್ರಜೆಗಳ ಬಾಳುವ ಭರವಸೆಯನ್ನೇ ಕಸಿದ ತೀರ್ಪು ಇದು. ಇಂಥ ತನಿಖೆ ಮತ್ತು ಇಂಥ ತೀರ್ಪು ದೇಶವನ್ನು ಗಂಡಾಂತರದತ್ತ ಕೊಂಡೊಯ್ಯುವ ಸಾಧನ.

ಭಾರತಾಂಬೆಯ ಗರ್ಭಗುಡಿಗೇ ಬಾಂಬ್ ಹಾಕಿದವನನ್ನು ಗಲ್ಲಿಗೇರಿಸಲು ಮೀನಮೇಷ ಎಣಿಸುತ್ತಿರುವುದು, ನೂರಾರು ಜನರ ಹತ್ಯೆಗೈದವನನ್ನು ಜತನದಿಂದ ಸಾಕುತ್ತಿರುವುದು ಮತ್ತು ಇದೀಗ, ಸಾವಿರಾರು ಜನರ ಪ್ರಾಣಹರಣ, ಲಕ್ಷಾಂತರ ಜನರ ಅಂಗಾಂಗಹರಣ ಹಾಗೂ ಲಕ್ಷೊಪಲಕ್ಷ ಕುಟುಂಬಗಳ ಭವಿಷ್ಯನಾಶ ಮಾಡಿದವರನ್ನು ನೆಪಮಾತ್ರದ ಶಿಕ್ಷೆ ನೀಡಿ ಕೈಬಿಡುತ್ತಿರುವುದು ಇದು ಈ ದೇಶದ ಆಡಳಿತ ವ್ಯವಸ್ಥೆಯು ತನ್ನ ಪ್ರಜೆಗಳಿಗೆ ತೋರುತ್ತಿರುವ ಅಭದ್ರತೆಯ ಮಾರ್ಗ. ಮುಂದಿನ ಗಂಡಾಂತರಗಳಿಗೆ ಇದು ರಹದಾರಿ.

ಈ ಅನ್ಯಾಯಯುತ ಬೆಳವಣಿಗೆಯಿಂದಾಗಿ ಮುಂದೆ ಸಂಭವಿಸಬಹುದಾದ ಊಹಿಸಲೂ ಅಸಾಧ್ಯವಾದ ಗಂಡಾಂತರಗಳಿಗೆ ತಡೆಯೊಡ್ಡಬೇಕೆಂದರೆ, ಮತ್ತು, ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗಷ್ಟೇ ಅಲ್ಲ, ಈ ದೇಶದ ನೂರಹದಿನಾರು ಕೋಟಿ ಪ್ರಜೆಗಳಿಗೂ ನ್ಯಾಯ ಸಿಗಬೇಕೆಂದರೆ ಅನಿಲ ದುರಂತದ ಅಪರಾಧಿಗಳು ತಾವು ಸಾಯುವವರೆಗೂ ಜೈಲಿನಲ್ಲಿ ಅತ್ಯಂತ ಕಠಿಣ ಶಿಕ್ಷೆ ಅನುಭವಿಸುತ್ತ ಕೊಳೆಯಬೇಕು. ಸಕರ್ಾರ, ತನಿಖಾ ಇಲಾಖೆಗಳು ಮತ್ತು ನ್ಯಾಯಾಲಯ ಈ ದಿಸೆಯಲ್ಲಿ ತಮ್ಮ ಪರಮಕರ್ತವ್ಯವನ್ನು ಲೋಪರಹಿತವಾಗಿ ಮಾಡಿ ತೋರಿಸಬೇಕು. ಇಲ್ಲವಾದಲ್ಲಿ, ಈ ಮೂರೂ ವಿಭಾಗಗಳೂ ಅನಿಲ ದುರಂತದ ಅಪರಾಧಿಗಳಷ್ಟೇ ಘೋರ ಅಪರಾಧಿಗಳೆನಿಸಿಕೊಳ್ಳುತ್ತವೆ.


ಎಚ್. ಆನಂದರಾಮ ಶಾಸ್ತ್ರೀ

1 comments:

ಎಚ್. ಆನಂದರಾಮ ಶಾಸ್ತ್ರೀ said...

ನನ್ನ ಈ ಕಿರುಬರಹ ಓದಿ ಪರಿಸರವಾದಿ, ಪತ್ರಕರ್ತ ಮತ್ತು ನನ್ನ ಹಿರಿಯ ಸನ್ಮಿತ್ರ ನಾಗೇಶ ಹೆಗಡೆ ಅವರು ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ:
"ನಿಮ್ಮ ಕಳಕಳಿ ಚೆನ್ನಾಗಿ ಮೂಡಿ ಬಂದಿದೆ. ನಾವು ಅವಾಗ್ಲೇ ೧೯೮೬ ರಲ್ಲೇ badakondevu - union carbide ಕಂಪನಿಗೆ ನಾವೇ ಶಿಕ್ಷೆ ಕೊಡೋಕೆ ಸಾಧ್ಯ ಇದೆ , ಎಲ್ಲರೂ ಎವೆರೆಡಿ ಬ್ಯಾಟರಿ ಮತ್ತು ಸೆಲ್ ಖರೀದಿ ನಿಲ್ಲಿಸೋಣ ಅಂತ. ನಾವು ಕೆಲವೇ ಕೆಲವು ಜನ ಈಗಲೂ ಅದನ್ನು ಖರೀದ ಮಾಡೋದಿಲ್ಲ. ಬಳಕೆ ದಾರರಾಗಿ ನಮ್ಮ ಕೈಲಿ ತುಂಬಾ ಪವರ್ ಇದೆ."
ಅವರ ಈ ಪ್ರತಿಕ್ರಿಯೆಗೆ ನಾನು ಈ ಕೆಳಗಿನಂತೆ ಉತ್ತರಿಸಿದ್ದೇನೆ:
"ಸರಿಯಾದ ಮಾತು ಹೇಳಿದಿರಿ. ದುರಂತದ ದಿನದಿಂದ ನಾನು ಎವರೆಡಿ ಖರೀದಿ ನಿಲ್ಲಿಸಿದ್ದೇನೆ, ಮಾತ್ರವಲ್ಲ, ಖರೀದಿಸುವವರನ್ನು ಕಂಡಾಗಲೆಲ್ಲ ಭಾಷಣ ಬಿಗಿದಿದ್ದೇನೆ. ನನ್ನ ಬಹುಪಾಲು ಭಾಷಣಗಳು ನೀರಿನಲ್ಲಿ ಮಾಡಿದ ಹೋಮಗಳಾಗಿವೆಯೆನ್ನುವುದು - ನಿದರ್ಶನರೂಪದಲ್ಲಿ ಕಂಡಾಗ - ಅನಿಲ ದುರಂತಕ್ಕಿಂತಲೂ ದೊಡ್ಡ ದುರಂತ."

Post a Comment