ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಅವರದು ಏಕಾಂಗಿ ಬದುಕು. ಮನೆ ಸುಡುಗಾಡು. ಹಗಲು ರಾತ್ರಿಗಳ ಭೇದವಿಲ್ಲ. ದೆವ್ವ ಭೂತಗಳ ಹೆದರಿಕೆಯಿಲ್ಲ. ರಾತ್ರಿಯಾದರೂ ಸರಿ, ಸಂಬಂಧಿ ಸತ್ತ ದುಃಖದಲ್ಲಿರುವ ಜನರಿಗೆ ಹೆಣ ಸುಡಲು ಸಹಾಯ ಮಾಡುತ್ತಾರೆ. ಜನರು ಕೊಟ್ಟದನ್ನು ಸ್ವೀಕರಿಸಿ ಸಂತೋಷದಿಂದ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ. ಅವರೇ ಮಸಣದ ಯೋಗಿ ರಮೇಶಣ್ಣ. ರಮೇಶಣ್ಣ ಮೂಲತಃ ಉಡುಪಿ ಅಂಬಲ್ಪಾಡಿಯವರು. ಆರಂಭದಲ್ಲಿ ಪ್ರಿಂಟಿಂಗ್ ಪ್ರೆಸ್, ಗ್ಯಾರೇಜು, ನಂತರ ಶಟರ್ ಗೆ ಗ್ರೀಸ್ ಹಾಕುವ ಕಾಯಕದಲ್ಲಿ ತೊಡಗಿದ್ದರು. ಉಡುಪಿ ಕುಂದಾಪುರದಲ್ಲಿ ತಮ್ಮ ವೃತ್ತಿಯನ್ನು ನಡೆಸುತ್ತಿದ್ದರು. ಆಗ ನೀವು ಪುತ್ತೂರು, ಬೆಳ್ತಂಗಡಿಯಾಚೆಗೂ ಹೋಗ ಬಾರದೇಕೆ? ಎಂದು ಗಿರಾಕಿಯೊಬ್ಬರು ಸಲಹೆಯನ್ನಿತ್ತರು. ಹಾಗೆ ಬೆಳ್ತಂಗಡಿಗೆ ಬಂದೆ ಎನ್ನುತ್ತಾರೆ ಅವರು.
ಬೆಳ್ತಂಗಡಿಗೆ ಬಂದ ಮೊದಲು ಕೆಲಸಕ್ಕಾಗಿ ಅಂಗಡಿ, ಮನೆ- ಮನೆ ಸುತ್ತಾಡಿದರು. ರಾತ್ರಿ ಸಮಯದಲ್ಲಿ ಅಂಗಡಿಯ ಹೊರಗೆ ಅಥವಾ ಬಸ್ ಸ್ಟ್ಯಾಂಡಿನಲ್ಲಿ ಕಾಲ ಕಳೆಯುತ್ತಿದ್ದರು. ಎಷ್ಟು ದಿನ ಅಂತ ಬೀದಿಯಲ್ಲಿ ಮಲಗುವುದು. ತನಗೂ ಬೆಚ್ಚನೆಯ ಸೂರೊಂದು ಬೇಕು ಅನ್ನಿಸ ತೊಡಗಿತು. ಆದರೆ ಸರಿಯಾದ ಕಾಯಕವಿಲ್ಲ, ಕೈಯಲ್ಲಿ ಹಣವಿಲ್ಲ. ಹೀಗೆ ಚಿಂತೆಯಲ್ಲಿ ಮುಳುಗಿದ್ದ ಒಂಟಿ ಜೀವಕ್ಕೆ ತೆರೆದಿದ್ದ ಮಸಣದ ಬಾಗಿಲು ಕಂಡಿತು. ಸಿಕ್ಕ ಸೂರು ಸುಡುಗಾಡಾದರೂ ಸ್ವರ್ಗವೆಂದು ಭಾವಿಸಿದರು. ಹೀಗೆ ಹಲವು ವರ್ಷದಿಂದ ಬೆಳ್ತಂಗಡಿಯ ಸ್ಮಶಾನದಲ್ಲಿ ವಾಸವಾಗಿದ್ದಾರೆ


ಇವರೇನು ಅಶಿಕ್ಷಿತರಲ್ಲ. ಎಂಟನೇ ತರಗತಿಯವರೆಗೆ ಓದಿದ್ದಾರೆ. ಇಂಗ್ಲೀಷನ್ನೂ ಓದಬಲ್ಲರು. ಭವಿಷ್ಯದ ಬಗ್ಗೆ ಉತ್ತಮ ಕನಸನ್ನು ಹೊತ್ತಿದ್ದರು. ಆದರೆ ದುರ್ದೈವ, ಕುಟುಂಬ ಕಲಹದಿಂದ ಒಂಟಿಯಾದೆ ಎನ್ನುವ ಬೇಸರದ ಮಾತು ಅವರದ್ದು. ಅಲ್ಲಿಗೆ ಬಂದ ಮೊದ ಮೊದಲು ರಾತ್ರಿಯಲ್ಲಿ ದೆವ್ವಗಳು ಮಾತಾಡುತ್ತಿರುವಂತೆ ಶಬ್ಧಗಳು ಕೇಳಿ ಭಯವಾಗ್ತಾ ಇತ್ತಂತೆ. ಆದರೆ ಈಶ್ವರ ದೇವರ ಫೋಟೋವೊಂದನ್ನು ಮಲಗುವ ಕೋಣೆಯಲ್ಲಿಟ್ಟ ನಂತರ ಭಯವೆಲ್ಲಾ ಮಾಯ.ಈತನ ಸ್ಮಶಾನ ವಾಸ್ತವ್ಯದ ನಂತರ ಸ್ಮಶಾನವು ಸ್ವಚ್ಚವಾಗಿ ಕಾಣುತ್ತಿದೆ. ಸ್ಮಶಾನವೆಂದರೆ ಹೆದರುತ್ತಿದ್ದವರು ರಮೇಶಣ್ಣನನ್ನು ಕಂಡು ಧೈರ್ಯ ಬಂದಿದೆ ಎನ್ನುತ್ತಾರೆ ಊರಿನ ಜನ. ಇವರು ಹೊಟ್ಟೆಪಾಡಿಗಾಗಿ ಯಾರಿಗೂ ಹೊರೆಯಾಗಿಲ್ಲ. ತಮಗೆ ಬೇಕಾದ ಆಹಾರವನ್ನೂ ಸ್ಮಶಾನದಲ್ಲೇ ಬೇಯಿಸಿ ತಿನ್ನುತ್ತಾರೆ. ಗಾರೆ ಕೆಲಸ, ಸೋಫಾ ರಿಪೇರಿ, ಶಟರ್ ಗೆ ಗ್ರೀಸ್ ಹಾಕಿ ಕೊಡುವುದು ಹೀಗೆ ಯಾವುದಾದರೂ ಕೆಲಸವನ್ನು ಮಾಡುತ್ತಾ ಇರುತ್ತಾರೆ.
ತನಗೂ ಸಂಸಾರ ಬೇಕೆನಿಸುತ್ತದೆ. ಸ್ಮಶಾನ ಬಿಟ್ಟು ಬಂದರೆ ಹೆಣ್ಣು ಕೊಡ್ತೇವೆ ಅಂದವರೂ ಇದ್ದಾರಂತೆ. ಆದರೆ ಕೈಯಲ್ಲಿ ಹಣ ಬಲವಿಲ್ಲದಿದ್ದರೆ ಮದುವೆಯಾಗಿಯಾದರೂ ಏನು ಪ್ರಯೋಜನವೆಂದುಕೊಂಡು ದಿನ ಮುಂದೂಡುತ್ತಿದ್ದಾರೆ ಮಸಣದ ಯೋಗಿ ರಮೇಶಣ್ಣ.

ಬೋರ್ಗಲ್ ಗುಡ್ಡೆ ಮಂಜುನಾಥ್

0 comments:

Post a Comment