ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ: ಹರೀಶ್ ಕೆ.ಆದೂರು

ಸುತ್ತಲೂ ಬಾನೆತ್ತರದ ಮರಗಳು... ತಿರುವು ಮುರುವಾದ ರಸ್ತೆಗಳು... ದೂರದಲ್ಲಿ ಹಸಿರಿನಿಂದಾವೃತಗೊಂಡ ಬೃಹತ್ ಬೆಟ್ಟ... ಅಲ್ಲೆಲ್ಲೋ ಜುಳು ಜುಳು ಹರಿಯುವ ನೀರಧಾರೆ....ಜೀರುಂಡೆಗಳ ಸುದ್ದು...ಹಕ್ಕಿಗಳ ಇಂಚರ ನಿನಾದ...ಹೀಗೆ ...ಹೀಗೆ ಚಾರ್ಮುಡಿ ಘಾಟಿ ಪಯಣ ರಮ್ಯ ಅಷ್ಟೇ ರೋಚಕ... ಚಾರ್ಮುಡಿ ತಿರುವುಗಳು ಭಯಾನಕವಾದವು... ಒಂದರ ಮೇಲೊಂದರಂತೆ ಸವಾಲೆಸೆವ ತಿರುವುಗಳು...ಹಸಿರ ಗರ್ಭ ಸೀಳಿ ಸಾಗುವ ಕರ್ರನೆಯ ಮಾರ್ಗ...ಅಲ್ಲೇ ನಿಸರ್ಗ ಸೌಂದರ್ಯ ಸವಿಯುತ್ತ ಪಯಣಿಸುವುದು ಅದೇನೋ ಸಂತಸ..ಚಾರ್ಮುಡಿ ಘಾಟಿಯಲ್ಲಿ ಸಿಗುವ ಚಿಕ್ಕಮಗಳೂರು ಅರಣ್ಯ ವಿಭಾಗಕ್ಕೊಳಪಟ್ಟ ಮೂಡುಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಅರಣ್ಯ ಇಲಾಖೆ ನಿರ್ಮಿಸಿದ ಮಲಯ ಮಾರುತ ವಿಶ್ರಾಂತಿಗೃಹ ಅತ್ಯಂತ ಸುಂದರವಾದುದು.
1993ರ ಏಪ್ರಿಲ್ 29ರಂದು ಅಂದಿನ ಅರಣ್ಯ ಇಲಾಖೆಯ ಸಚಿವ ಎಂ.ಪಿ.ಕೇಶವ ಮೂರ್ತಿ ಈ ಅರಣ್ಯ ವಿಶ್ರಾಂತಿ ಧಾಮ ಉದ್ಘಾಟಿಸಿದ್ದರು. ಸುತ್ತಲೂ ಹಚ್ಚ ಹಸಿರು... ರಸ್ತೆಯ ಅನತಿ ದೂರದಲ್ಲೇ ಎತ್ತರದ ದಿಣ್ಣೆಯ ಮೇಲೆ ಎರಡಂತಸ್ತಿನ ಸುಂದರ ವಾಸ್ತುಶೈಲಿಯ ವಿಶ್ರಾಂತಿಗೃಹ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಭಾ.ಅ.ಸೇ.ಯ ಆರ್.ಕೆ.ತೊರವಿ ಅವರ ಕಲ್ಪನೆ ಈ ಮಲಯ ಮಾರುತ ನಿಸರ್ಗಧಾಮ. ಜಿ.ಎನ್.ಶ್ರೀಕಂಠಯ್ಯ ಇದನ್ನು ಕಾರ್ಯರೂಪಕ್ಕೆ ತಂದರು. ನಿರ್ಮಾಣ ನಿರ್ವಹಣೆಯ ಹೊಣೆ ಹೊತ್ತವರು ವೆಸ್ಲಿ ಪಿಂಟೋ... ಉದ್ಘಾಟನೆ ಗೊಂಡು ಹಲವಾರು ಜನತೆಯ ದಣಿವಾರಿಸಿದೆ ಈ `ಮಲಯ ಮಾರುತ' ವಿಶ್ರಾಂತಿ ಗೃಹ. ಇದು ಕೇವಲ ವಿಶ್ರಾಂತಿಗೃಹವಾಗಿರಲಿಲ್ಲ. ಬದಲಾಗಿ ಇದೊಂದು ನಿಸರ್ಗಧಾಮವೆಂದೇ ಖ್ಯಾತಿಪಡೆದಿತ್ತು. ಸುತ್ತಲಿನ ಹಸಿರ ಸೌಂದರ್ಯದ ವೀಕ್ಷಣೆಗೆ ಮೇಲಂತಸ್ಥಿನಲ್ಲಿ ವ್ಯವಸ್ಥೆಯಿದೆ. ರಸ್ತೆಯಂಚಿನಲ್ಲಿ ಹರಿವ ನೀರ ಜಲಧಾರೆ...ದೂರದ ನಿಸರ್ಗಸೌಂದರ್ಯ... ಹೊಂದಷ್ಟು ಹೊತ್ತು ಗಾಳಿಸೇವನೆಗೆ ಅವಕಾಶ... ಹೀಗೆ ಅತ್ಯಂತ ವ್ಯವಸ್ಥಿತರೀತಿಯಲ್ಲಿ ಈ ಮಲಯಮಾರುತ ವಿಶ್ರಾಂತಿ ಧಾಮ ನಿರ್ಮಾಣಗೊಂಡಿತು...

ಆದರೆ ಅದು ದುರಂತ ನೋಡಿ...

ಆದರೆ ಆ ವಿಶ್ರಾಂತಿ ಧಾಮ ಇಂದು ಹೊರನೋಟಕ್ಕಷ್ಟೇ ಸುಂದರ ಎಂಬಂತಾಗಿದೆ...ವಿಶ್ರಾಂತಿ ಧಾಮದ ಒಳಹೊಕ್ಕರೆ ಗಬ್ಬೆಂಬ ನಾಥ ಮೂಗಿಗಡರುತ್ತದೆ. ವಿಶ್ರಾಂತಿ ಧಾಮದ ಯಾವೊಂದು ಕೊಠಡಿಯೂ ಸುಸ್ತಿತಿಯಲ್ಲಿಲ್ಲ... ನೆಲದ ಮರದ ಹಾಸುಗಳು ಕಿತ್ತುಹೋಗಿವೆ. ಗೋಡೆಗಳಲ್ಲಿದ್ದ ಸುಂದರ ದರ್ಪಣಗಳು ನೆಲಕ್ಕಚ್ಚಿವೆ. ವೃತ್ತಾಕಾರದ ಮೇಜು, ಕುರ್ಚಿಗಳು ತಳಹಿಡಿದುಹೋಗಿವೆ. ಛಾವಣಿಯ ಹಂಚುಗಳು ನೆಲಸೇರಿವೆ. ಬಾಗಿಲುಗಳು ಸುಸ್ಥಿತಿಯಲ್ಲಿಲ್ಲ. ಒಟ್ಟಿನಲ್ಲಿ ನಿರ್ವಹಣೆ ವಂಚಿತವಾಗಿ ಈ ವಿಶ್ರಾಂತಿಧಾಮ ಹಾಳುಬಿದ್ದಿದೆ...


ಇಷ್ಟೇ ಅಲ್ಲ...


ವಿಶ್ರಾಂತಿಧಾಮದಲ್ಲಿ ಸೂಕ್ತ ಭದ್ರತೆ ಇದ್ದಂತಿಲ್ಲ. ಧಾಮಕ್ಕೆ ಒಳಪ್ರವೇಶಿಸಲು ಒಂದು ಕಬ್ಬಿಣದ ಗೇಟು ಅಳವಡಿಸಲಾಗಿದೆಯಾದರೂ ಜನ ಪ್ರವೇಶಕ್ಕೆ ಅದರ ಪಕ್ಕದಲ್ಲೇ ಸಾಕಷ್ಟು ಅವಕಾಶವಿದೆ. ವಿಶ್ರಾಂತಿಧಾಮದ ಹೊರಭಾಗದಲ್ಲಿರುವ ಕೊಠಡಿಯಲ್ಲಿ ಮದ್ಯದ ಬಾಟಲುಗಳು ರಾರಾಜಿಸುತ್ತಿವೆ. ವಿಶ್ರಾಂತಿ ಧಾಮದ ಪ್ರಸಕ್ತ ಸ್ಥಿತಿಯನ್ನು ಈ ಖಾಲಿಬಾಟಲುಗಳು ಅರುಹುತ್ತವೆ. ನಾಯಿಗಳು ಇಂದು ವಿಶ್ರಾಂತಿಧಾಮದಲ್ಲಿ ವಿಹರಿಸುತ್ತಿವೆ. ಹೇಗಿದ್ದ ವಿಶ್ರಾಂತಿಧಾಮ ಹೇಗಾಯಿತು ನೋಡಿ...ಕಾರ್ಯಪ್ರವೃತ್ತವಾಗಬೇಕಾಗಿದೆ

ಘಾಟಿರಸ್ತೆಯಂಚಿನಲ್ಲೇ ಆಕರ್ಷಿಸುತ್ತಿದ್ದ ಮಲಯಮಾರುತಕ್ಕೆ ಕಾಯಕಲ್ಪ ಆಗಬೇಕಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಸಂಪೂರ್ಣ ಹದಗೆಡುವ ಮೊದಲೇ ಸರ್ಕಾರ, ಅರಣ್ಯ ಇಲಾಖೆ ಎಚ್ಚೆತ್ತು ಇದರ ದುರಸ್ಥಿಕಾರ್ಯ ನಿರ್ವಹಿಸಬೇಕಾಗಿದೆ. ಹಿಂದಿನ `ಮಲಯಮಾರುತ'ದ ವೈಭವ ಮತ್ತೆ ಮೈತಳೆಯುವಂತೆ ಮಾಡಬೇಕಾಗಿದೆ.

1 comments:

Anonymous said...

ಈ ಮಲಯಮಾರುತದಲ್ಲಿ ನಾವೂ ಇಳಿದುಕೊಂಡಿದ್ದೆವು. ಅಲ್ಲಿನ ಪ್ರಕೃತಿ ಸೌಂದರ್ಯ, ಶಾಂತ ವಾತಾವರಣ ನೆನಪಿಗೆ ಬಂದರೆ ತಂಗಾಳಿಗೆ ಮೈ ಒಡ್ಡಿದಂತಾಗುತ್ತದೆ. ಅದನ್ನು ಇನ್ನು ಮುಂದೆ ಯಾರೂ ಅನುಭವಿಸಲಾಗದು ಎಂದರೆ ಎಷ್ಟು ವಿಷಾದನೀಯ.
ನಮ್ಮವರಿಗೆ (?) ಮೊದಲಿಂದಲೂ ಯಾವುದೇ ವಸ್ತುವಿನ ಬೆಲೆಯ ಅರಿವಿಲ್ಲ. ಒಳ್ಳೆಯ ಕಟ್ಟಡಗಳನ್ನ ಹಾಳುಮಾಡ್ತಾರೆ, ಒಳ್ಳೆಯ ವಾಹನಗಳನ್ನ ಹಾಳುಮಾಡ್ತಾರೆ, ಒಳ್ಳೆ ಐತಿಹಾಸಿಕ ಸ್ಮಾರಕಗಳನ್ನ ಹಾಳುಮಾಡ್ತಾರೆ, ಒಳ್ಳೆ ದೇವಸ್ಥಾನಗಳನ್ನ ಹಾಳು ಮಾಡ್ತಾರೆ, ಒಳ್ಳೆ ಪರಿಸರವನ್ನ ಹಾಳು ಮಾಡ್ತಾರೆ, ಒಳ್ಳೆ ಪದ್ಧತಿಯನ್ನ ಕೆಡಿಸ್ತಾರೆ, ಒಳ್ಳೆ ಕಾಡನ್ನ ಕದೀತಾರೆ, ಒಳ್ಳೆ ಬೆಟ್ಟಗಳನ್ನ ಒಡೆದು ಹಾಕ್ತಾರೆ, ಎಲ್ಲಾ ಕಳೆದುಕೊಂಡು ಆಮೇಲೆ ಏನು ಮಾಡ್ತಾರೆ?
ಹೀಗಾದರೆ ಭಾರತದ ಗತಿ ಏನು? ಯಾರು ತಿದ್ದಬೇಕು ಇವರನ್ನು?

Post a Comment