ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ- ಅವಲೋಕನ

ಕ್ರಿಕೆಟ್ ಪಂದ್ಯಗಳ ವೇಳೆ ಆಸ್ಟ್ರೇಲಿಯಾ ಮಾಡುವ ಕಿರಿಕಿರಿ ನಮಗೆಲ್ಲ ಗೊತ್ತು. ಕ್ಯಾತೆ ತೆಗೆಯುವುದು, ಎದುರಾಳಿಯನ್ನು ನಿಂದಿಸುವುದು, ಕೆಟ್ಟದಾಗಿ ಗುರಾಯಿಸುವುದು, ದುರಹಂಕಾರ ಪ್ರದರ್ಶಿಸುವುದು ಇವೆಲ್ಲ ಆಸ್ಟ್ರೇಲಿಯಾ ಕ್ರಿಕೆಟಿಗರ ಮಾಮೂಲು ಕುಬುದ್ಧಿ ಮತ್ತು ಕುತಂತ್ರ. ಭಾರತೀಯರೆಂದರೆ ಅವರ ಹೊಟ್ಟೆಯಲ್ಲಿ ಇನ್ನಷ್ಟು ಕಿಚ್ಚು. ತಮ್ಮ ದೇಶದಲ್ಲಿ ಅವರು ಭಾರತೀಯ ವಿದ್ಯಾರ್ಥಿಗಳಿಗೆ ಆಗಾಗ ನೀಡುವ ಹಿಂಸೆಯ ಸಂಗತಿ ಇಡೀ ವಿಶ್ವಕ್ಕೇ ಗೊತ್ತು. ತಮ್ಮ ಈ ಹಿಂಸಾ ಮನೋಭಾವವನ್ನು ಆಸ್ಟ್ರೇಲಿಯನ್ನರು ಫುಟ್ಬಾಲ್ ಅಂಗಳದಲ್ಲೂ ಪ್ರದರ್ಶಿಸಿದ್ದನ್ನು ಇಂದು ಬೆಳಗಿನ ಜಾವ ಇಡೀ ವಿಶ್ವವೇ ನೋಡಿತು. ನಿನ್ನೆ ರಾತ್ರಿ 12 ಗಂಟೆಯಿಂದ ನಡೆದ ಜರ್ಮನಿಯೆದುರಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ತೋರಿದ ದುರ್ವರ್ತನೆಯ ಕೆಲ ಸ್ಯಾಂಪಲ್ಗಳು ಇಲ್ಲಿವೆ:* ಜರ್ಮನಿಗೆ ನ್ಯಾಯಬದ್ಧವಾಗಿ ದೊರೆತ ಫ್ರೀ ಕಿಕ್ಕನ್ನು ಆಸ್ಟ್ರೇಲಿಯಾ ಆಟಗಾರನೊಬ್ಬ ಪ್ರಬಲವಾಗಿ ವಿರೋಧಿಸಿದ. ಪರಿಣಾಮವಾಗಿ ಹಳದಿ ಕಾರ್ಡ್ ಪಡೆದ!
* ಇನ್ನೊಬ್ಬ ಕಾಂಗರೂ ಆಟಗಾರ ಎದುರಾಳಿಯನ್ನು ಮೊಣಕೈಯಿಂದ ತಿವಿದನಾದರೂ ಅದೃಷ್ಟವಶಾತ್ ರೆಫ್ರಿಯ ದೃಷ್ಟಿಯಿಂದ ಪಾರಾದ! ಬೇಕೆಂದೇ ಜರ್ಮನಿಯವನ ಪಾದ ತುಳಿದ ಇನ್ನೊಬ್ಬ ಕಾಂಗರೂ ಕೂಡ ರೆಫ್ರಿಯ ದೃಷ್ಟಿಯಿಂದ ಪಾರಾದ!
* ಎದುರಾಳಿಗೆ ಢಿಕ್ಕಿಹೊಡೆದು ಅಥವಾ ಕಾಲು ಅಡ್ಡಕೊಟ್ಟು ಎದುರಾಳಿಯನ್ನು ಬೀಳಿಸುವ ಕುತಂತ್ರವಂತೂ ಆಸ್ಟ್ರೇಲಿಯಾ ಆಟಗಾರರಿಂದ ಅವ್ಯಾಹತ ನಡೆದೇ ಇತ್ತು. ಇದಕ್ಕಾಗಿ ಅವರು ಅನೇಕ ಬಾರಿ ರೆಫ್ರಿಯಿಂದ ಎಚ್ಚರಿಕೆ ಪಡೆದರಲ್ಲದೆ ಹಳದಿ ಕಾರ್ಡ್ ಗಳಿಗೂ ಪಾತ್ರರಾದರು.
* ಇಂಥ ಒಂದು ಸಂದರ್ಭದಲ್ಲಿ - ದ್ವಿತೀಯಾರ್ಧ ಆರಂಭವಾದ ಮೊದಲನೇ ನಿಮಿಷದಲ್ಲೇ - ಆಸ್ಟ್ರೇಲಿಯಾ ಆಟಗಾರನೊಬ್ಬ ಜರ್ಮನಿ ಆಟಗಾರನ ಕುತ್ತಿಗೆಗೆ ತನ್ನ ತಲೆಯಿಂದ ಬಲವಾಗಿ ಗುದ್ದಿ ಹಳದಿ ಕಾರ್ಡ್ ಪಡೆದುಕೊಂಡ.
* ಕಾಂಗರೂ ಪಡೆಯ ಈ ಹಿಂಸಾವಿನೋದವು ಪರಾಕಾಷ್ಠೆ ತಲುಪಿದ್ದು 56ನೆಯ ನಿಮಿಷದಲ್ಲಿ. ಆಸ್ಟ್ರೇಲಿಯಾದ ಟಿಮ್ ಕ್ಯಾಹಿಲ್ ಇಬ್ಬರು ಎದುರಾಳಿಗಳ ಮಧ್ಯೆ ನುಗ್ಗಿ ಇಬ್ಬರನ್ನೂ ಹಿಂಸಾತ್ಮಕವಾಗಿ ಕೆಡೆದುರುಳಿಸುವ ಯತ್ನ ಮಾಡಿದ್ದನ್ನು ಕಂಡು ರೆಫ್ರಿಯ ಸಹನೆಯ ಕಟ್ಟೆ ಒಡೆಯಿತು. ಕ್ಯಾಹಿಲ್ಗೆ ಕೂಡಲೇ ಕೆಂಪು ಕಾರ್ಡ್ ತೋರಿಸಿ ಮೈದಾನದಿಂದ ಹೊರಕ್ಕಟ್ಟಲಾಯಿತು.
* ಜರ್ಮನಿಯ ಕಾರ್ನರ್ ಷಾಟ್ ಒಂದನ್ನು ಎದುರಿಸುವ ಸಂದರ್ಭದಲ್ಲಿ ಗೋಲ್ ಆವರಣದ ಬಳಿ ಆಸ್ಟ್ರೇಲಿಯಾ ಆಟಗಾರನೊಬ್ಬ ಜರ್ಮನಿಯ ಆಟಗಾರನನ್ನು ಅನಾಮತ್ತಾಗಿ ಕೆಡವಿದ್ದರಿಂದಾಗಿ, ರೆಫ್ರಿಯು, ಅಷ್ಟರಲ್ಲಾಗಲೇ ತೂರಿಬಂದ ಚೆಂಡನ್ನು ಅಸಿಂಧುವೆಂದು ಘೋಷಿಸಿ ಮತ್ತೊಮ್ಮೆ ಕಾರ್ನರ್ ಷಾಟ್ ಹೊಡೆಯಲು ಜರ್ಮನಿಗೆ ಅವಕಾಶ ನೀಡಿದ ಘಟನೆಯೂ ನಡೆಯಿತು.
ಈ ರೀತಿ ಆಟದುದ್ದಕ್ಕೂ ಗೂಂಡಾಗಿರಿ ಪ್ರದರ್ಶಿಸಿದ ಕಾಂಗರೂಗಳು, 'ಮಾಡಿದ್ದುಣ್ಣೋ ಮಹರಾಯ' ಎಂಬಂತೆ, ಪಂದ್ಯವನ್ನು 4-0 ಗೋಲುಗಳಿಂದ ಹೀನಾಯವಾಗಿ ಸೋತರು.
ಲ್ಯೂಕಾಸ್ ಪೊಡೊಲ್ಸ್ಕಿಯ ಶಕ್ತಿಯುತ ಒದೆತದಿಂದ ಜರ್ಮನಿಗೆ ಮೊದಲ ಗೋಲ್ ದೊರೆತರೆ ಮಿರೊಸ್ಲಾವ್ ಕ್ಲೋಸ್ ಮಾಡಿದ ಅದ್ಭುತ ಹೆಡರ್ (ತಲೆಗುದ್ದು) ಎರಡನೆಯ ಗೋಲ್ ತಂದುಕೊಟ್ಟಿತು. ಆಸ್ಟ್ರೇಲಿಯಾದ ಟಿಮ್ ಕ್ಯಾಹಿಲ್ ಕೆಂಪು ಕಾರ್ಡ್ ಪಡೆದು ಕೆಂಪು ಮೂತಿ ಮಾಡಿಕೊಂಡು ಹೊರನಡೆದ ನಂತರ ಅದರ ಲಾಭವನ್ನು ಜರ್ಮನಿ ಚೆನ್ನಾಗಿಯೇ ಪಡೆಯಿತು. ಪೆನಾಲ್ಟಿ ಆವರಣದ ರಕ್ಷಣಾ ವ್ಯೂಹವನ್ನು ಸಮರ್ಥವಾಗಿ ಭೇದಿಸಿ ಮುನ್ನುಗ್ಗಿದ ಮ್ಯುಲ್ಲರ್ ಜರ್ಮನಿಗೆ ಮೂರನೇ ಗೋಲು ತಂದಿತ್ತ. ಪೆನಾಲ್ಟಿ ಆವರಣದಲ್ಲಿ ಉತ್ತಮವಾಗಿ ಪಾಸ್ ಪಡೆದ ಕಕಾವ್ ಜರ್ಮನಿಗೆ ನಾಲ್ಕನೇ ಗೋಲಿನ ಉಡುಗೊರೆ ನೀಡಿದ.
ಉತ್ತಮ ಹೊಂದಾಣಿಕೆಯ ಆಟ, ನಿಖರ ಲೆಕ್ಕಾಚಾರದ ಪಾಸ್ಗಳು ಮತ್ತು ಪೆನಾಲ್ಟಿ ಆವರಣದಲ್ಲಿ ಮಿಂಚಿನ ನಡೆ ಈ ಗುಣಗಳಿಂದಾಗಿ ಜರ್ಮನಿಯ ಆಟ ನಯನಮನೋಹರವಾಗಿತ್ತು. ಅದೇ, ಆಸ್ಟ್ರೇಲಿಯಾದ ಆಟ,.........'ಎದ್ದುಹೋಗಿ ಅವರಿಗೆ ಎರಡು ಬಾರಿಸೋಣ' ಎಂಬಂತಿತ್ತು!


ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment