ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:24 PM

ಜಲಲ ಜಲಧಾರೆ...

Posted by ekanasu

ವಿಶೇಷ ವರದಿ


ಮಳೆಗಾಲ ಬಂತೆಂದರೆ ಸಾಕು... ಇಷ್ಟೂ ದಿನ ಮೌನವಾಗಿದ್ದ ಜಲಪಾತಗಳೆಲ್ಲವೂ ಭೋರ್ಘರೆವ ಸದ್ದಿನೊಂದಿಗೆ ಆರ್ಭಟಿಸತೊಡಗುತ್ತವೆ. ಎದೆಗಾರಿಕೆ ಇದ್ದವರು, ಪ್ರಕೃತಿ ಸವಿಯಲಿಚ್ಛಿಸುವವರು ಇಂತಹ ಸೌಂದರ್ಯ ವೀಕ್ಷಿಸಲು ಎಷ್ಟೇ ಕಷ್ಟವಾದರೂ ಸೈ ಎಂದು ಹೊರಟೇ ಬಿಡುತ್ತಾರೆ. ಈ ಕನಸು.ಕಾಂ. ಕೆಲವೊಂದು ಜಲಲ ಜಲಧಾರೆಯ ಕುರಿತು ನಮ್ಮ ಓದುಗರಿಗೆ ತಿಳಿಯಪಡಿಸುತ್ತಿದೆ. ನೀವು ನಿಮ್ಮ ಅನುಭವ ಹಂಚಿಕೊಳ್ಳಬಹುದು.
`ಇಳಿದು ಬಾ ತಾಯೆ ಇಳಿದು ಬಾ...
ಬಂಡೆಯ ಮೇಲಿಂದ ಧುಮುಕುತಾ..
ಬೆಳ್ನೊರೆಗಳ ಸೂಸುತ್ತಾ... ಕುಣಿದು ಬಾ ತಾಯೆ ಕುಣಿದು ಬಾ..

ಹೀಗೆ ಜಲರಾಶಿಯ ವರ್ಣನೆಯನ್ನು ಕವಿಗಳು ಹುಚ್ಚೆದ್ದು ವರ್ಣಿಸಿದ್ದಾರೆ... ಕಾವ್ಯ ಕಟ್ಟಿ ಹಾಡಿದ್ದಾರೆ. ಸಾಹಿತಿಗಳು ಸಾಹಿತ್ಯ ರಚನೆಗಳ ಮೂಲಕ ಭವ್ಯವಾಗಿ ಚಿತ್ರಿಸಿದ್ದಾರೆ.
ಹರಿಯುವ ನೀರನ್ನು ತೋರಿಸಿದರೆ ಎಂಥಹವರೂ ಒಂದು ಕ್ಷಣ ಕಾಲ ಮೌನರಾಗುತ್ತಾರೆ. ಅದರ ಸೌಂದರ್ಯಕ್ಕೆ ಮಾರುಹೋಗುತ್ತಾರೆ. ಜಲಲ ಜಲರಾಶಿಗೆ ಮನ ಸೋಲದವರು ಬಹು ಕಡಿಮೆಯೆಂದೇ ಹೇಳಬಹುದಾಗಿದೆ.
ನೀರಿಗೆ ಅಂತಹ ಒಂದು ಅದ್ಭುತ ಶಕ್ತಿಯಿದೆ.
ಸೂರ್ಯ ನೆತ್ತಿಗೆ ಬಂದರೂ ಸೂರ್ಯ ರಶ್ಮಿ ಇನ್ನೂ ನೆಲತಲುಪದಷ್ಟು ದಟ್ಟವಾದ ಕಾಡಿನಲ್ಲಿ ಜುಳು ಜುಳು ಸದ್ದುಮಾಡುತ್ತಾ ಹರಿಯುವ ನೀರನ್ನು ಮೋಡಿ ಮಾಡುವ ಜಲರಾಶಿಯನ್ನು ನೋಡುವುದೇ ಒಂದು ಅಂದ.
ಎಲ್ಲೋ ಬೆಟ್ಟದಲ್ಲಿ ಹನಿ ಹನಿಯಾಗಿ ಜಿನುಗಿ ತದನಂತರ ನೀರ ಹನಿಗಳು ಒಂದೊಂದು ಸೇರಿ ಝರಿಯಾಗಿ ಅದು ಜುಳು ಜುಳು ಸದ್ದುಮಾಡುತ್ತಾ ನೆತ್ತಿಯ ಮೇಲಿಂದ ಧುಮುಕಿ ಮತ್ತೆ ವಯ್ಯಾರದಿಂದ ಮೈ ಬಳುಕಿಸಿ ಇಬ್ಬದಿಯ ತೋಯಿಸಿ ಝರಿಗಿಡಗಳ ಮೇಲೆಲ್ಲಾ ಸಣ್ಣ ಸಣ್ಣ ಹನಿಗಳ `ಸಿಂಚನ'ಮಾಡಿ ಹಿಗ್ಗುತ್ತಾ ಸಾಗುವುದನ್ನು ನೋಡುವುದೇ ಒಂದು ಚೆಂದ.
ಸ್ಪಟಿಕ ಶುದ್ಧ ಈ ನೀರು ತಣ್ಣನೆಯ ಅನುಭವ ನೀಡುವಾಗ ಭಾವಪುಳಕಿತರಾಗುವುದರಲ್ಲಿ ಯಾವೊಂದು ಸಂದೇಹವೂ ಇಲ್ಲ. ಈ ಪರಿಯಾಗಿ ಜಲರಾಶಿ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ತನ್ನತ್ತ ಸೆಳೆಯುತ್ತದೆ.
ಮಳೆಗಾಲದಲ್ಲಿ ಇವೆಲ್ಲಾ ಮೈದುಂಬಿ ಹರಿಯಲಾರಂಭಿಸುತ್ತವೆ. ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಾ ಅಂದ ಚೆಂದವನ್ನು ಹೆಚ್ಚಿಸುತ್ತಾ ವಯ್ಯಾರದಿಂದ ಸಾಗುತ್ತವೆ.
ಒಂದೊಮ್ಮೆ ಸೌಮ್ಯವಾಗಿ ಮತ್ತೆ ರೌದ್ರವಾಗಿ ನರ್ತಿಸಲಾರಂಭಿಸುತ್ತವೆ. ರುದ್ರ ರಮಣೀಯ ದೃಶ್ಯಗಳನ್ನು ನಿರ್ಮಾಣ ಮಾಡುತ್ತಾ ಕಣ್ಣಿಗೆ ಹಬ್ಬ ಉಣಬಡಿಸುತ್ತವೆ. ಹೀಗೆ ಸಾಗುವ ಈ ಜಲಲ ಜಲಧಾರೆ ಕೊನೆಗೆ ಸಾಗರ ಸೇರುತ್ತದೆ. ಈ ನಡುವೆ ಹಲವು ಸಂದರ್ಭಗಳಲ್ಲಿ ಇವು ತನ್ನ ಅಬ್ಬರಗಳನ್ನು ಏರಿಸಿ, ಸೌಮ್ಯ ಭಾವವನ್ನು ಪ್ರದರ್ಶಿಸಿ ಸಾಗುತ್ತಿರುತ್ತವೆ.

ಜಲಪಾತ ವೀಕ್ಷಣೆ ಒಂದು ರೋಚಕ ಅನುಭವ. ಆದರೆ ಇಂತಹ ಸೌಂದರ್ಯ ರಾಶಿಯನ್ನು ನೋಡುವ ಹೆಸರಿನಲ್ಲಿ `ಮೋಜಿನ ಮಂದ ಬೆಳಕಿನಲ್ಲಿ ಜಲಪಾತಗಳ ಐಸಿರಿ' ಎಂಬಂತಾಗುತ್ತಿದೆ. ಇದು ಆತಂಕದ ವಿಚಾರ.ಜಲಪಾತಗಳ ವೀಕ್ಷಣೆಗೆ ತೆರಳುವವರು ಪ್ರಕೃತಿ ಸೌಂದರ್ಯಕ್ಕೆ ಮಾರಕವಾಗುತ್ತಿದ್ದಾರೆ. ಕುಡಿತ ಕುಣಿತಗಳ ಸದ್ದು ಸುಂದರ ಪ್ರಕೃತಿಯನ್ನು ಬೆಚ್ಚಿ ಬೀಳಿಸುವಂತಾಗುತ್ತಿದೆ. ಇಷ್ಟೇ ಅಲ್ಲದೆ ವಾಣಿಜ್ಯೋದ್ಯಮಿಗಳ ದೃಷ್ಠಿ ಇದೀಗ ಈ ಜಲಧಾರೆಗಳತ್ತ ಹೊರಳತೊಡಗಿದೆ. ಕಿರು ಜಲ ವಿದ್ಯುತ್ ಯೋಜನೆ ಸ್ಥಾಪನೆಯ ಭಯ ಈ ಜಲ ಧಾರೆಗಳಿಗೆ ತಟ್ಟಲಾರಂಭಿಸಿದೆ. ಹಲವೆಡೆಗಳಲ್ಲಿ ಕಿರು ಜಲವಿದ್ಯುತ್ ಸ್ಥಾವರಗಳ ಸ್ಥಾಪನೆಗಳಿಗಾಗಿ ಪ್ರಕೃತಿಯ ಗರ್ಭ ಬಗೆಯತೊಡಗಿದೆ. ಇವುಗಳಿಂದಾಗಿ ಸುಂದರ ಪ್ರಕೃತಿ ಇಂದು ತನ್ನ ಸೌಂದರ್ಯ ಕಳಕೊಳ್ಳುವ ಭೀತಿಯನ್ನೆದುರಿಸುತ್ತಿದೆ.ಜಲಪಾತ
ಇದೊಂದು ಸುಂದರ ದೃಶ್ಯ ಕಾವ್ಯ
ಜಲಪಾತದ ನಿಜ ಸವಿ ಸವಿ ಸವಿಯಲು
ಚಾರಣ ಮೂಲಕ ಸಾಗಬೇಕು...
ಅದಾಗ ಸೃಷ್ಟಿ ಸೌಂದರ್ಯದ ಪ್ರತೀಕವಾದ ಪ್ರಕೃತಿಯ ಅನಾವರಣ. ತುಂತುರು ಹನಿಗಳ ಸಿಂಚನ... ಮೈ ಮನ ಪುಳಕ. ಜಲರಾಶಿಯ ಸೌಂದರ್ಯ ಎಂತಹವರನ್ನೂ ಮೋಡಿ ಮಾಡದಿರದು.


ಮಳೆಗಾಳ ಬಂತೆಂದರೆ ಜಲಧಾರೆಗೆ ಯೌವನದ ಸ್ಪೂರ್ತಿ...! ಬಚ್ಚಿಟ್ಟುಕೊಂಡಿದ್ದ ಜಲಧಾರೆಗೆ ಯೌವನದ ಸೊಕ್ಕು...!
ಜುಳು ಜುಳು ಸದ್ದು ಅಟ್ಟಹಾಸದ ಭೋರ್ಗರೆತ...! ಇದಕ್ಕೆ ಹಕ್ಕಿಗಳ ಇಂಚರ ನಾದಗಳ ಸಾಥ್.. ಹೀಗೆ ಜಲಪಾತದ ನೈಜ ಸೌಂದರ್ಯ ಎಂತಹವರ ಮನವನ್ನೂ ಮೋಡಿಮಾಡದಿರದು...

ಕೆಲವೊಂದು ಜಲಪಾತಗಳಿಗೆ ಅತ್ಯಲ್ಪ ಆಯಸ್ಸು
ಪ್ರಕೃತಿ ಇದೇ ಒಂದು ಸೃಷ್ಟಿ ಕ್ರಿಯೆಯ ಅದ್ಭುತ. ಇದರೊಳಗೆ ಇನ್ನೇನೇನೂ ವಿಶೇಷಗಳು!... ಜುಳು ಜುಳು ಸದ್ದುಮಾಡುತ್ತಾ ಸಾಗುವ ಜಲಪಾತಗಳು, ತೊರೆಗಳು, ನದಿಗಳು ಹೀಗೆ ಇನ್ನನೇಕ.
ಇವು ಮಿನಿ ಜಲಪಾತಗಳು. ಇವುಗಳ ಆಯಸ್ಸು ಬಹಳ ಕಡಿಮೆ. ಮಿನಿ ಜಲಪಾತಗಳ ಆಯಸ್ಸು ಅತ್ಯಲ್ಪ. ಮಳೆಗಾಲ ಬಂತೆಂದರೆ ಈ ಜಲಪಾತಗಳು ಹುಟ್ಟುತ್ತವೆ. ತಮ್ಮ ವೈಭವವನ್ನು ಸೃಷ್ಟಿಸುತ್ತವೆ. ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಈ ಜಲಪಾತ ಒಂದು ಸಂತಸವನ್ನು ಮೂಡಿಸುತ್ತವೆ. ಮನಕ್ಕೆ ಉಲ್ಲಾಸ ನೀಡುತ್ತವೆ. ನಮ್ಮ ನಿಮ್ಮೆಲ್ಲರ ಮನೆಗಳ ಹಿಂದೆಯಿರುವ ಗುಡ್ಡದಿಂದ ಬೀಳುವ ಜಲಧಾರೆಗಳೋ... ಅಥವಾ ರಸ್ತೆ ಬದಿಗಳಲ್ಲಿರುವ ಗುಡ್ಡಗಳಿಂದ ಹರಿಯವ ನೀರ ಧಾರೆಯೋ ಇವೆಲ್ಲವೂ ಮಳೆಗಾಲದಲ್ಲಷ್ಟೇ ನಮಗೆ ಗೋಚರಿಸಲು ಸಾಧ್ಯ. ಅಂತೂ ಇವೂ ಒಂದು ಸುಂದರ ಭಾವನೆಗಳ ಸೃಷ್ಟಿಗೆ ಕಾರಣವಾಗುತ್ತವೆ.


ದಿಡುಪೆ ಜಲಪಾತ
ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತಾವಳಿಗಳು... ನಿಸಗರ್ಾರಾಧಕರು ಹಾಗೂ ಚಾರಣ ಪ್ರಿಯರಿಗೆ ಮುದ ನೀಡುವ ತಾಣಗಳು. ಸುಂದರ ಕರಾವಳಿ. ಪ್ರಕೃತಿ ರಮ್ಯ ವನಸಿರಿ. ತುಂಬಿ ಹರಿಯುವ ನದಿ, ಧುಮ್ಮಿಕ್ಕಿ ಹರಿಯುವ ಝರಿ... ಜಲಪಾತಗಳು. ಅಬ್ಬರಿಸುವ ಅರಬ್ಬಿ ಸಮುದ್ರ. ಬೆಟ್ಟ ಗುಡ್ಡ ಬಂಡೆ ಐತಿಹಾಸಿಕ ತಾಣಗಳು. ಹೀಗೆ ಪ್ರವಾಸಿಗರ ಆಕರ್ಷಣೆಯ ವಸ್ತು ವೈವಿಧ್ಯಗಳು ನೂರಾರು. ನಿಸರ್ಗ ನಿರ್ಮಿತ ಝರಿಗಳು ತಮ್ಮ ಹರಿಯುವ ಗತಿಯಲ್ಲಿ ಪ್ರಪಾತಗಳನ್ನು ಸೃಷ್ಟಿಸಿ ಜಲಪಾತಗಳಾಗಿ ಧುಮುಕಿ ನದಿಗಳಾಗಿ ಹರಿದು ಸಮುದ್ರ ಸೇರುತ್ತವೆ. ಬೆಟ್ಟ ಗುಡ್ಡ ದಟ್ಟಕಾಡು ಭಾರಿ ಬಂಡೆಗಳೆಡೆಯಲ್ಲಿ ಮೈದಳೆಯುವ ಜಲಪಾತಗಳು ನಿಸರ್ಗ ಪ್ರಿಯರನ್ನು ತನ್ನೆಡೆಗೆ ಆಕರ್ಷಿಸಿ ಅವರ ಮನೋಲ್ಲಾಸಕ್ಕೆ ಕಾರಣವಾಗುತ್ತಿವೆ.

ಜಿಲ್ಲೆಯಲ್ಲಿ ಇಂತಹ ನೂರಾರು ಸಣ್ಣ ಪುಟ್ಟ ದೊಡ್ಡ ಜಲಪಾತಗಳು ಪ್ರವಾಸಿಗರ ತನು ಮನಗಳನ್ನು ಹಸನಾಗಿ ಉಲ್ಲಸಿತರನ್ನಾಗಿಸುತ್ತದೆ. ಎಲ್ಲೋ ಹುಟ್ಟಿ ಅಂಕು ಡೊಂಕಾಗಿ ಮುಂದುವರಿದು ಬಂಡೆಯಿಂದ ಪ್ರಪಾತಕ್ಕೆ ಧುಮುಕಿ ರಮ್ಯಾದ್ಭುತ ನೋಟ ಸೃಷ್ಟಿಸುತ್ತವೆ. ಕ್ಷಣ ಕ್ಷಣಕ್ಕೂ ವೈವಿಧ್ಯತೆಯಿಂದ ನೂರಾರು ಅಡಿಗಳಷ್ಟು ಪಾತಾಳಕ್ಕೆ ಧುಮ್ಮಿಕ್ಕುವ ನಿಸರ್ಗ ವೈಭವವನ್ನು ಕಣ್ಣಾರೆ ಕಂಡು ಆಸ್ವಾದಿಸಬೇಕು. ನೀರು ಧಾರೆಯಾಗಿ ಹರಿಯುವ ಆಹ್ಲಾದಕರ ಸಂತೋಷವನ್ನು ಕಣ್ತುಂಬ ನೋಡಿಯೇ ಅನುಭವಿಸಬೇಕು. ಜಲಪಾತ ಸೃಷ್ಟಿಸಿದ ಅದ್ಭುತ ಸೌಂದರ್ಯಕ್ಕೆ ಮನದಣಿಯೆ ಸುಖಾನುಭವ ಸವಿಯಬೇಕು. ಮಳೆಗಾಲದ ದಿನಗಳಲ್ಲಿ ತನ್ನ ಸಹಜ ವೈಭವ. ಗಾಂಭೀರ್ಯದಿಂದ ನಿತ್ಯ ನಿರಂತರವಾಗಿ ಹರಿಯುವ ಜಲಪಾತದ ಸೊಬಗು. ಉರುಳುರುಳುವ ಬೆಳ್ನೊರೆಗಳ ಪ್ರವಾಹ ನಿಸರ್ಗಾರಾಧಕರು, ಪ್ರಕೃತಿ ಪ್ರಿಯರಿಗೆ ಕಾವ್ಯಾಸಕ್ತರಿಗೆ ಸ್ಪೂರ್ತಿಯ ಚಿಲುಮೆಯಾಗಿ ನವಕಾವ್ಯ ಸೃಷ್ಟಿ ಪ್ರೇರಣೆಯಾಗಬಲ್ಲುದು.

ಬೆಳ್ತಂಗಡಿ ತಾಲೂಕಿನಲ್ಲಿ ಇಂತಹ ಹತ್ತಾರು ಝರಿಗಳಿವೆ. ಜಲಪಾತಗಳು ಮಳೆಗಾಲದಲ್ಲಿ ನೋಡುಗರ ಆಕರ್ಷಣೆಯ ಕೇಂದ್ರಗಳಾಗಿ ಜನ ಮನ ಸೂರೆಗೊಳ್ಳುತ್ತವೆ. ಬೆಟ್ಟ ಗುಡ್ಡಗಳ ಚಾರಣ. ಕಾಲ್ನಡಿಗೆಯ ಎಲ್ಲ ಪ್ರಯಾಸವನ್ನು ಮರೆಯಾಗಿಸುವ ದಿವ್ಯ ಶಕ್ತಿ ಜಲಪಾತದ ಸೃಷ್ಟಿ ವೈವಿಧ್ಯತೆಗಿದೆ. ಕುಗ್ರಾಮವೆಂದೇ ಗುರುತಿಸಲ್ಪಟ್ಟ ದಿಡುಪೆಯ ದಟ್ಟಗಾಡು. ವನ ಸಿರಿಯ ಮಧ್ಯೆ ಅಂತಹ ಒಂದು ಜಲಪಾತ ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ಸಹಜ ಸೌಂದರ್ಯ ಸೃಷ್ಟಿಯ ಅದ್ಭುತ ಲೀಲೆಯೇ ಸರಿ. ವಿವಿಧ ಕೋನಗಳಲ್ಲಿ ಜಲಪಾತದ ವಯ್ಯಾರ ಲಾಸ್ಯ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಹರಿಯುವ ಜಲಧಾರೆಗೆ ತಲೆ ಮೈಯೊಡ್ಡಿ ಪನ್ನೀರ ಸಿಂಚನದಿಂದ ದಿನವಿಡೀ ನೆನೆದರೂ ಮೈ ಮನಗಳಿಗೆ ದಣಿವಾಗದು. ನಿಸರ್ಗ ಸೃಷ್ಟಿಸಿದ ಮಾಯಾಲೋಕ ಛಾಯಾಗ್ರಾಹಕರಿಗೆ ಕ್ಷಣ ಕ್ಷಣಕ್ಕೂ ಅದ್ಭುತ ದೃಶ್ಯ ರಾಶಿಯನ್ನೊದಗಿಸುತ್ತದೆ. ಎಲ್ಲ ಮಾನಸಿಕ, ದೈಹಿಕ ನೋವು ದಣಿವನ್ನು ಮರೆಸಿ ಸೃಷ್ಟಿ ವೈಚಿತ್ರ್ಯದ ಸ್ವರ್ಗ ಸುಖವನ್ನು ಸವಿದು ಆಸ್ವಾದಿಸುವ ಅಪೂರ್ವ ಸುಯೋಗ ಸೌಭಾಗ್ಯ ವರ್ಷವಿಡೀ ದೊರೆಯದು. ದಿಡುಪೆಯಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿ ಪಚ್ಚನೆ ಹಸುರಿನ ದಟ್ಟ ಕಾಡಿನಲ್ಲಿ ಪ್ರಕೃತಿಯ ಅಪೂರ್ವ ಸಿರಿಯಾಗಿ ಜಲಪಾತ ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತದೆ. ಆಸಕ್ತರು ದಿಡುಪೆ ಜಲಪಾತಕ್ಕೊಮ್ಮೆ ಬಂದು ಸೃಷ್ಟಿಯ ಸೊಬಗನ್ನು ಮನಸೇಚ್ಚ ಆಸ್ವಾದಿಸಿ ಉಲ್ಲಸಿತರಾಗಬಹುದು.


ಭಾಗಿಮಲೆ
ಇಲ್ಲೊಂದು ಅದ್ಭುತ ಜಲಪಾತವಿದೆ!
ಭಾಗಿಮಲೆ ಈ ಹೆಸರೇ ಒಂದು ರೋಚಕ. ಇಲ್ಲಿರುವ ಜಲಪಾತವೂ ಅಷ್ಟೇ ಸುಂದರ. ಇದು ಚಾರಣಿಗರ ಪಾಲಿಕೆ ಒಂದು ಸವಾಲಿನ ಕೆಲಸವೇ. ಈ ಜಲಪಾತ ಒಂದು ರೋಚಕ ಅನುಭವ ನೀಡುತ್ತದೆ. ನೂರೈವತ್ತು ಅಡಿ ಎತ್ತರದಿಂದ ನೀರು ಧುಮ್ಮಿಕ್ಕಿ ಹರಿಯುತ್ತದೆ. ಅದ್ಭುತ ಸೌಂದರ್ಯವನ್ನು ಸೃಷ್ಠಿಸುತ್ತವೆ. ಭಾಗಿ ಮಲೆ ರಕ್ಷಿತಾರಣ್ಯದಲ್ಲಿರುವ ಎರ್ಮಾಯಿಲ್ ಹೊಳೆಯೇ ಹಲವು ಹಂತಗಳಲ್ಲಿ ಈ ಜಲಲ ಜಲಧಾರೆಯ ಸೊಬಗನ್ನು ನೋಡುಗರಿಗುಣಿಸುತ್ತದೆ. ಗುಂಡ್ಯ ನಾಗರ ಕಟ್ಟೆ ಮಾರ್ಗದಲ್ಲಿ 12ಕಿ.ಮೀ ಮೈಲಿಕಲ್ಲಿನ ಸಮೀಪ ಕಾಣಸಿಗುತ್ತದೆ ಇದು. ಭಾಗೆ ಹೊಳೆಯಿಂದು ಮುಂದೆ ಕೈಕಂಬ (ನಾಗರಕಟ್ಟೆ)ತನಕದ ಹಾದಿಯ ಎಡ ಭಾಗವೇ ಭಾಗಿಮಲೆ ಕಾಡು. ಇಲ್ಲಿ ಸಾಗಿದರೆ ಸಾಕಷ್ಟು ಜಲಪಾತಗಳ ಸವಿ ಸವಿಯಬಹುದು.

ಬಾಳೆಬರೆ ಘಾಟಿಯಲ್ಲೂ ಜಲಪಾತ
ಬಾಳೆಬರೆ ಘಾಟಿ. ಇದು ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಒಂದು ಘಾಟಿ. ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಎಂಬ ಗ್ರಾಮದಿಂದ ಮೂರು ಕಿಲೋಮೀಟರ್ ಕ್ರಮಿಸಿದಾಗ ಹುಲಿಕಲ್ ಸಿಗುತ್ತದೆ. ಇದು ಘಾಟಿಯ ಆರಂಭದ ಹಾದಿ. ಈ ಕಾರಣಕ್ಕೆ ಹುಲಿಕಲ್ ಘಾಟಿ ಎಂದು ಪ್ರಸಿದ್ಧಿ ಪಡೆದಿದೆ.
ಅನಘ್ರ್ಯ ವನ್ಯ ಸಂಪತ್ತು, ಪ್ರಾಣಿ ಪ್ರಬೇಧಗಳು ಇಲ್ಲಿವೆ. ಘಾಟಿಯ ಆರಂಭದಲ್ಲೇ ಸುಮಾರು ಮೂರು ಕಿಲೋಮೀಟರ್ ಕ್ರಮಿಸಿದಾಗ ರಸ್ತೆಯ ಪಕ್ಕದಲ್ಲೇ ಪುಟ್ಟ ಜಲಪಾತವೊಂದು ಸಿಗುತ್ತದೆ. 200 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತ ಮುಂದೆ ದಟ್ಟ ಅರಣ್ಯಗಳೊಳು ಸಾಗಿ ಸಾಗರ ಸೇರುತ್ತಾಳೆ. ಈ ಮಧ್ಯೆ ಅನೇಕ ದೃಶ್ಯ ಕಾವ್ಯಗಳ ಸೃಷ್ಠಿಗೆ ಕಾರಣಳಾಗುತ್ತಾಳೆ. ಇದೊಂದು ಸೌಂದರ್ಯಪೂರ್ಣ ಜಲಪಾತ. ಮಳೆಗಾಲದಲ್ಲಿ ಅಬ್ಬರದಿಂದ ಧಾರೆ ಧುಮುಕಿ ನೋಡುಗರನ್ನು ಮೋಡಿಮಾಡುತ್ತದೆ.


ಇದು ಕೊಡಗಿನ ಮಲ್ಲಳ್ಳಿ!
ಕೊಡಗು ಇದೊಂದು ದಕ್ಷಿಣದ ಕಾಶ್ಮೀರ. ಇಲ್ಲಿ ಕಾಫಿ, ಕಿತ್ತಳೆಗಳಿಗೆ ಪ್ರಸಿದ್ಧಿ. ಇಲ್ಲಿನ ಹವಾಮಾನ ಅತ್ಯಂತ ವೈಶಿಷ್ಟ್ಯಪೂರ್ಣ. ಕೊಡಗಿನಲ್ಲಿ ಸಾಕಷ್ಟು ಸಂಖ್ಯೆಯ ಜಲಪಾತಗಳಿವೆ. ಅಬ್ಬಿ, ಲಕ್ಷ್ಮಣ ತೀರ್ಥ, ತೋಮಾರ, ಮಲ್ಲಳ್ಳಿ ಹೀಗೆ ಹತ್ತು ಹಲವು ಜಲಪಾತಗಳು ಈ ಕೊಡಗಿನಲ್ಲಿವೆ. ಇದು ಕೊಡಗಿಗೆ ಸೇರಿದ ಪುಷ್ಪಗಿರಿ ಬೆಟ್ಟದ ತಳಭಾಗದಲ್ಲಿದೆ. 200 ಅಡಿ ಎತ್ತರದಿಂದ ಧುಮುಕುತ್ತದೆ. ಮಲ್ಲಳ್ಳಿ ಜಲಪಾತ ಬೆಳ್ನೊರೆಗಳ ಸೂಸುತ್ತಾ ಸುಂದರ ಸೊಬಗಿನಿಂದ ಕಂಗೊಳಿಸುತ್ತದೆ. ಹಸಿರ ಹಾದಿಯಲ್ಲಿ ಕ್ಷೀರಧಾರೆಯಂತೆ ಇದು ಭಾಸವಾಗುತ್ತದೆ. ಅಂತೂ ಈ ಜಲಪಾತ ಒಂದು ಸುಂದರವಾದ ಅನುಭವ ನೀಡುತ್ತದೆ. ಸೋಮವಾರ ಪೇಟೆ ಶಾಂತಳ್ಳಿ ಹಾದಿಯಲ್ಲಿ ಸಾಗುವಾಗ ಕುಂದಳ್ಳಿಗೆ ತಲುಪಬೇಕಾದರೆ ದೂರದಿಂದಲೇ ಮಲ್ಲಳ್ಳಿ ಕೈ ಬೀಸಿ ಕರೆಯುತ್ತದೆ. ಕುಂದಳ್ಳಿಯಿಂದ ಮೂರು ಕಿ.ಮೀ ದೂರದ ಕುಮಾರಹಳ್ಳಿಗೆ ಹೋಗಿ ಅಲ್ಲಿಂದ ಜಲಪಾತದೆಡೆಗೆ ನಡೆದು ಹೋಗಲು ಸಾಧ್ಯ. ಕುಮಾರ ಹಳ್ಳಿಯಿಂದ ಎರಡೂವರೆ ಕಿ.ಮೀ ಸಾಗಿದಾಗ ಇದರ ದರ್ಶನ ಭಾಗ್ಯ ದೊರಕುತ್ತದೆ.


ಕಲ್ಯಾಳ ಜಲಪಾತ
ಕೊಡಗಿನ ಇನ್ನೊಂದು ಜಲಪಾತ. ಮಡಿಕೇರಿಯಿಂದ ಮಂಗಳೂರಿಗೆ ಸಾಗುವ ಹೆದ್ದಾರಿಯಲ್ಲಿ ಸಾಗುವುದೇ ಒಂದು ರೋಚಕ ಅನುಭವ. ಸುಮಾರು 23ಕಿ.ಮೀ ಸಾಗುವಷ್ಟರಲ್ಲಿ ದೂರದಲ್ಲಿ ಕಲ್ಯಾಳ ಜಲಪಾತ ಕಾಣಸಿಗುತ್ತದೆ. ಕಲ್ಯಾಳ ಜಲಪಾತಕ್ಕೆ ಸಾಗಲು ಕೊಯನಾಡು ಎಂಬ ಸಣ್ಣ ಹಳ್ಳಿಯಿಂದ ಬೆಟ್ಟದ ಹಾದಿ ಹಿಡಿಯಬೇಕು. ಈ ಹಾದಿಯಲ್ಲಿ ಮೇಲೇರಿ, ಮುಂದೆ ಹೋದಾಗ ಈ ಜಲಪಾತ ಎದುರಾಗುತ್ತದೆ. ಅಷ್ಟೊತ್ತಿಗಾಗಲೇ ನೀವು ಸುಮಾರು 5ಕಿ.ಮೀಟರ್ಗಳಿಗೂ ಅಧಿಕ ದೂರ ಕ್ರಮಿಸಿ ಆಗಿರುತ್ತದೆ. ಸಮರ್ಪಕ ಕಾಲು ಹಾದಿಯೂ ಇಲ್ಲ. ದುರ್ಗಮ ರಸ್ತೆಯಲ್ಲಿ ಸಾಗಬೇಕು. ಕಡಿದಾದ ಹಾದಿಯಲ್ಲಿ ಕೆಳಗಿಳಿಯಬೇಕು. ಒಂದೆಡೆ ಬೆಟ್ಟ ಏರಿದರೆ ಮತ್ತೆ ಕೆಲವೆಡೆಗಳಲ್ಲಿ ದುರ್ಗಮ ಹಾದಿಯಲ್ಲಿ ಕೆಳಗಿಳಿಯಬೇಕು. ಹೀಗೆ ಸಾಗಿದಾಗ ಸುಂದರ ಜಲಪಾತ ನಮ್ಮೆದುರು ತೆರೆದುಕೊಳ್ಳುತ್ತದೆ. 250 ಅಡಿಗಳಷ್ಟು ಮೇಲಿಂದ ಹಂತ ಹಂತವಾಗಿ ಧುಮುಕುವ ಈ ಜಲಧಾರೆ ಒಂದು ಹೊಸ ಅನುಭವ ನೀಡುತ್ತದೆ. ಮಳೆಗಾಲದಲ್ಲಿ ಜಲಪಾತ ವೀಕ್ಷಣೆಗೆ ಕೊಂಚ ಕಷ್ಟ. ಸೆಪ್ಟಂಬರ್ ನಂತರ ಈ ಜಲಪಾತ ವೀಕ್ಷಣೆಗೆ ಹಾದಿ ತುಸು ಸುಗಮವಾಗುತ್ತದೆ. ಅಂತೂ ಒಮ್ಮೆಯಾದರೂ ಈ ಜಲಪಾತ ನೋಡಲೇಬೇಕು.

0 comments:

Post a Comment