ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ


ಕ್ಷಣ ಕ್ಷಣದಲ್ಲಿಯೂ ಕುತೂಹಲಕಾರಿ ಪರೀಕ್ಷೆಗಳು. ಸ್ವಲ್ಪ ಎಡವಿದರೂ ಅನೇಕ ಕನಸುಗಳು ನುಚ್ಚುನೂರು. ಪ್ರತಿಯೊಂದು ತಿರುವನ್ನೂ ಸವಾಲೆಂದು ಸ್ವೀಕರಿಸುವ ಧೀಶಕ್ತಿ ಇದು ಚಾಲಕ ವೃತ್ತಿ. ಒರಟು ಮಾತು, ಗಂಟು ಹಾಕಿದ ಮುಖ, ಕೊಳಕು ಖಾಕಿ ಎಂದು ತೆಗಳುವ ನಾವು ಅವರ ಪ್ರತಿಭೆಯನ್ನು ಎಂದಾದರೂ ಕಾಣಲು ಪ್ರಯತ್ನಿಸಿದ್ದೇವಾ? ಇಲ್ಲವಾದರೆ ಅಂತವರಿಗೊಂದು ಇಲ್ಲಿದೆ ಉತ್ತರ. ಅವರ ಹೆಸರು ಬಾಲಕೃಷ್ಣ ಸಹಸ್ರಬುದ್ದೆ. ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದವರು. ವೃತ್ತಿಯಲ್ಲಿ ಚಾಲಕ, ಪ್ರವೃತ್ತಿಯಲ್ಲಿ ಸಾಹಿತ್ಯಾರಾಧಕ. ಪ್ರಪ್ರಥಮ ಬಾರಿಗೆ ತಮ್ಮ ಆಡು ಭಾಷೆ ಚಿತ್ಪಾವನಿಯಲ್ಲಿ ಗೀತೆಗಳನ್ನು ರಚಿಸಿ ಪ್ರಕಟಿಸಿದ ಇವರು ಈಗ ಭಗವದ್ಗೀತೆಯ ಶ್ಲೋಕಗಳ ಒಳಾರ್ಥವನ್ನು ಪದ್ಯರೂಪದಲ್ಲಿ ಬರೆದು, ರಾಗ ಸಂಯೋಜಿಸಿ, ಅದನ್ನು ಸಿ.ಡಿ ಮೂಲಕ ಲೋಕಾರ್ಪಣೆ ಮಾಡಿದ ಪ್ರಪ್ರಥಮ ಕನ್ನಡಿಗನೆನಿಸಿದ್ದಾರೆ. ಇದೇ ಇವರ "ಒಳಗಣ್ಣ ನೋಟ" .

ಓದಿದ್ದು ಹತ್ತನೇ ತರಗತಿಯಾದರೂ ಜೀವನದ ಪ್ರತಿಯೊಂದು ಕ್ಷಣವೂ ಶಿಕ್ಷಣವೇ. ಮೊದಲು ಕೃಷಿಯಲ್ಲಿ ತೊಡಗಿದ್ದ ಇವರಿಗೆ ಚಾಲಕ ವೃತ್ತಿಯಲ್ಲಿ ಆಸಕ್ತಿ ಕೆರಳಿತು. ನಂತರ ಇವರು ಪುತ್ತಿಗೆ ಮಠದ ಸ್ವಾಮೀಜಿಯವರ ವಾಹನಕ್ಕೆ ಸಾರಥಿಯಾದರು. ಪ್ರಯಾಣದ ವೇಳೆಯಲ್ಲಿ ಸ್ವಾಮೀಜಿ ಮತ್ತು ವಿದ್ವಾಂಸರ ನಡುವೆ ನಡೆಯುತ್ತಿದ್ದ ಅಮೂಲ್ಯ ಸಂಭಾಷಣೆಯೇ ಇವರ ಬರವಣಿಗೆಯ ಬದುಕಿಗೆ ನಾಂದಿ ಹಾಡಿತು.ಜೀವನಕ್ಕೆ ಚಾಲಕ ವೃತ್ತಿ, ಜೊತೆಗೆ ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಅಡುಗೆಯ ಕೆಲಸ. ಬಿಡುವಿನ ಸಂದರ್ಭದಲ್ಲಿ ಸಾಹಿತ್ಯಾರಾಧನೆ. ತಮ್ಮ ಸಾಹಿತ್ಯ, ಸಂಗೀತಮಯ ಬದುಕಿಗೆ ರಾಗ, ತಾಳ, ಲಯವಾಗಿರುವವರು ಅವರ ಪತ್ನಿ ಮಹಾಲಕ್ಷ್ಮಿ ಹಾಗೂ ಮಕ್ಕಳಾದ ನವಮಿ ಮತ್ತು ಶಾರ್ವರಿ. ತಂದೆಯ ಗುಣಗಳು ಈ ಎರಡು ಮಕ್ಕಳಲ್ಲೂ ಹಂಚಿಹೋಗಿವೆ. ಹಾಡುವ ಜೊತೆಗೆ ಒಬ್ಬರಿಗೆ ಓದುವ ಹವ್ಯಾಸವಾದರೆ ಇನ್ನೊಬ್ಬರಿಗೆ ಬರೆಯುವ ಹವ್ಯಾಸ."ಒಳಗಣ್ಣ ನೋಟದಲ್ಲಿ" ಏನಿದೆ

ಭಗವದ್ಗೀತೆಯ ಹದಿನೈದನೇ ಅಧ್ಯಾಯದ ಇಪ್ಪತ್ತು ಶ್ಲೋಕಗಳ ಕನ್ನಡ ರೂಪಾಂತರದ ಪದ್ಯರೂಪ. ಜೊತೆಗೆ ಶಂಕರಾಚಾರ್ಯ ವಿರಚಿತ ಭಜಗೋವಿಂದಂ ನ ಕನ್ನಡ ರೂಪಾಂತರದ ಹಾಡುಗಳು. ಇದು ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ಸರಳ ಸುಂದರವಾಗಿ ನೀಡಲಾಗಿದೆ. ಗೀತರಚನೆ ಮತ್ತು ಸಂಗೀತ ಬಾಲಕೃಷ್ಣ ಸಹಸ್ರಬುದ್ದೆ, ಸಂಗೀತ ಸಂಯೋಜನೆ ವಸಂತಕುಮಾರ್ ಕುಂಬ್ಳೆ, ಜೊತೆಗೆ ನವಮಿ ಮತ್ತು ಶಾರ್ವರಿಯವರ ಸುಶ್ರಾವ್ಯ ಕಂಠವಿದೆ.

ವಿಶ್ವವಿದು ಮೇಲ್ಬುಡದ ಅರಳಿ ಮರದಂತೆ, ಆಸೆಯೆಂಬ ಬಿಳಲುಗಳು ಇಳಿದಿಹವು ಭೂಮಿಗೆ, ದೇಹದ ಪ್ರಾಣವು ಗತಿಸಿದ ಬಳಿಕ ಬಾರಳು ಸತಿಯು ಕೊಡಲು ಸುಖ. ಹೀಗೆ ಇನ್ನೂ ಹಲವಾರು ಅಮೋಘ ಶಬ್ಧ ಹಾಗೂ ಜ್ಞಾನಗಳ ಭಂಡಾರವು ಪ್ರಾಸ ಬದ್ದವಾಗಿ ಇದರೊಳಗೆ ಅವಿತಿವೆ.

" ಒಳಗಣ್ಣ ನೋಟ ಒಂದು ಸುಂದರ, ಪರಿಮಳಯುಕ್ತ ಭಕ್ತಿಕುಸುಮ. ಇಂದಿನ ಜನತೆಗೆ ಅಗತ್ಯವಾಗಿ ಬೇಕಾದ ಭಕ್ತಿಯ ಸಾಧನವಿದು. ಆದಷ್ಟು ಬೇಗ ಇನ್ನುಳಿದ ಅಧ್ಯಾಯಗಳ ಮಾಲಿಕೆಗಳೂ ಬರಲಿ" ಎನ್ನುತ್ತಾರೆ ಬೆಂಗಳೂರಿನ ಖ್ಯಾತ ಜ್ಯೋತಿಷಿ ತಿರುಮಲಾಚಾರ್ಯ. ಇದೇ ರೀತಿ ಅನೇಕರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹ ದೊರೆಯುತ್ತಿದೆಯಂತೆ.

ಈ ನನ್ನ ಪ್ರಯತ್ನ ಇಲ್ಲಿಗೇ ಕೊನೆಯಾಗಬಾರದು. ಇದು ಇನ್ನೂ ಉತ್ತಮ ರಾಗಸಂಯೋಜನೆಯೊಂದಿಗೆ ಹಾಡಲು ಸಾಧ್ಯ . ಖ್ಯಾತ ರಾಗಸಂಯೋಜಕರು, ಹಾಡುಗಾರರು ಮುಂದೆ ಬಂದರೆ ಇದನ್ನು ಇನ್ನೂ ಸುಂದರವಾಗಿಸಬಹುದು ಎನ್ನುತ್ತಾರೆ ಸಹಸ್ರಬುದ್ದೆ.

ವೃತ್ತಿ ಯಾವುದೇ ಇರಲಿ, ಮನಸ್ಸು ಮತ್ತು ಆಸಕ್ತಿ ಇದ್ದರೆ ಏನನ್ನಾದರೂ ಕಲಿತು ಸಾಧಿಸಬಹುದು ಎನ್ನುವುದಕ್ಕೆ ಸಹಸ್ರಬುದ್ದೆಯವರೇ ಸಾಕ್ಷಿ. ಶಿಕ್ಷಣದಿಂದ ವಂಚಿತರಾದ ಎಷ್ಟೋ ಮಂದಿ ಸಾಮಾನ್ಯ ಜನರಿಗೂ, ಟೈಮ್ ಬರುತ್ತೆ ಎಂದು ಕಾಯುತ್ತಾ ಕುಳಿತಿರುವ ವಿದ್ಯಾವಂತರಿಗೂ ಇವರು ಮಾರ್ಗದರ್ಶಿಯಾಗಬಲ್ಲರು.

ಬೊರ್ಗಲ್ಗುಡ್ಡೆ ಮಂಜುನಾಥ್

0 comments:

Post a Comment