ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಕೆನರಾ ಬ್ಯಾಂಕ್ ಎಳೆಯುತ್ತಿರುವ ಸಂಸ್ಕೃತಿಯ ತೇರು

ಅದೊಂದು ಯಾರೋ ಕೆತ್ತಿದ ಶಿಲ್ಪ. ಇಂದು ಕಾರಣಿಕದ ಶಕ್ತಿಯಾಗಿ ಭಕ್ತರ ಮನಸ್ಸನ್ನು ಆಳುತ್ತಿದೆ. ಲಕ್ಷಾಂತರ ಜನ ಆ ವಿಗ್ರಹಕ್ಕೆ ಶರಣೆಂದು ತಲೆಬಾಗಿದಾಗ ಕೆತ್ತಿದ ಶಿಲ್ಪಿಯ ಆನಂದ ಅಳೆಯಲು ಸಾಧ್ಯವೇ? ಶಿಲ್ಪ ಯಾವ ಕಾಲದದ್ದಾದರೂ ಸರಿ ಅದರಲ್ಲಿ ಶಿಲ್ಪಿಯ ಮನಸ್ಸು, ಭಾವನೆಗಳು ಅಚ್ಚಳಿಯದಂತೆ ಮೂಡಿರುತ್ತದೆ. ಆದರೆ ಇಂದು ಅಂತಹಾ ಮಹಾನ್ ಕರ್ಮವೀರರಾದರೂ ಯಾರಿದ್ದಾರೆ ಎನ್ನುವ ಪ್ರಶ್ನೆಯೇ? ಹಾಗಾದರೆ ಬನ್ನಿ ಕಾರ್ಕಳ ತಾಲೂಕಿನ ಮಿಯಾರಿಗೆ. ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ. ಇ. ಕಾಮತ್ ಕರಕುಶಲಕರ್ಮಿಗಳ ತರಬೇತಿ ಕೇಂದ್ರಕ್ಕೆ.




ಅದು ನಾಲ್ಕು ಎಕರೆ ಜಾಗವಿರುವ ಅಷ್ಟೊಂದು ಸಮತಟ್ಟಲ್ಲದ ಭೂಮಿ. ನಾಲ್ಕು ಕಟ್ಟಡ ಬಿಟ್ಟು ಉಳಿದಂತೆ ಹಸುರಿನಲ್ಲಿ ಮುಳುಗಿರುವ, ಅಂತೆಯೇ ಸೌಂದರ್ಯದಲ್ಲಿ ನಾನೇನು ಕಮ್ಮಿ ಎಂದು ತಲೆ ಬಾಗಿ ಅರಳಿರುವ ಹಳದಿ ಹೂಗಳು ಕಲಾರಸಿಕರನ್ನು ಮನಸಾರೆ ಸ್ವಾಗತಿಸುತ್ತ್ತವೆ. ಇನ್ನೂ ನಾವು ಹೊರಗೇ ಇದ್ದೇವೆ. ಈಗಾಗಲೇ ಮೈಮರೆತರೆ ಹೇಗೆ? ಇನ್ನು ಒಳಗಿನ ಸೌಂದರ್ಯವನ್ನು ಬಣ್ಣಿಸಲು ಸ್ವಲ್ಪ ಕಷ್ಟವೆ. ದೇಶದ ಪ್ರಮುಖಾತಿ ಪ್ರಮುಖ ವ್ಯಕ್ತಿಗಳೇ ಸೋತು ಶರಣಾಗಿ ನಿಜವಾದ ವಿದ್ಯೆ ಎಂದರೆ ಇದು. ಪ್ರಾಚೀನ ಕಲೆ, ಭಾರತೀಯ ಸಂಸ್ಕೃತಿಯ ಉಳಿವು ಆಗುತ್ತಿದೆ ಎಂದರೆ ಅದು ಮಿಯಾರಿನ ಈ ತರಭೇತಿ ಕೇಂದ್ರದಲ್ಲಿ ಎಂದು ಹಾಡಿ ಹೊಗಳಿದ್ದಾರೆ.

ಇಲ್ಲಿ ಮರ ಮತ್ತು ಶಿಲೆಯ ಕೆತ್ತನೆಗಳ ತರಬೇತಿ, ಲೋಹ ಶಿಲ್ಪ ಹಾಗೂ ಕುಂಭ ಕಲೆಯ ತರಬೇತಿಯನ್ನು ನೀಡಲಾಗುತ್ತದೆ. ಆಧುನಿಕ ಸೌಕರ್ಯವುಳ್ಳ ವಿದ್ಯಾರ್ಥಿನಿಲಯ, ಸಮಯಕ್ಕೆ ಸರಿಯಾಗಿ ಬಿಸಿ ಬಿಸಿಯಾದ ರುಚಿಕರ ಆಹಾರ, ಆಟದ ಸೌಲಭ್ಯ ಅಷ್ಟೇ ಅಲ್ಲ ಸ್ಪೋಕನ್ ಇಂಗ್ಲಿಷ್ ತರಗತಿ ಕೂಡ. ಅವರಿಗೆ ಕೆತ್ತನೆ ಕಾರ್ಯಕ್ಕೆ ಬೇಕಾದ ಪರಿಕರಗಳನ್ನೂ, ಸಮವಸ್ತ್ರವನ್ನೂ ಕರೀದಿಸುವ ಖರ್ಚೊಂದು ಬಿಟ್ಟರೆ ಇತರ ಎಲ್ಲವೂ ಸಂಪೂರ್ಣ ಉಚಿತ.


ಇದೊಂದು ರೀತಿಯಲ್ಲಿ ಗುರುಕುಲವಿದ್ದಂತೆ. ಒಂದೆಡೆ ಧೃಡವಾದ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳು. ಮತ್ತೊಂದೆಡೆ ವಿಶ್ವಾಸಕ್ಕೆ ಕಿಂಚಿತ್ತೂ ಅಡ್ಡಿಯಾಗದಂತೆ ಜ್ಞಾನವನ್ನೂ ಕೌಶಲ್ಯವನ್ನೂ ಧಾರೆಎರೆಯುವ ಗುರುಗಳು. ಇವರಿಬ್ಬರಿಗೂ ಸರಿಯಾದ ಸಂದರ್ಭಕ್ಕನುಗುಣವಾಗಿ ದಾರಿಯನ್ನು ತೋರಿಸುವ ನಿರ್ದೇಶಕರು. ಜೊತೆಗೆ ಇದಕ್ಕೆಲ್ಲಾ ಬೆನ್ನೆಲುಬಾಗಿರುವ, ಸಾಮಾಜಿಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿರುವ ಸಂಸ್ಥೆ ಕೆನರಾ ಬ್ಯಾಂಕ್. ಇವರುಗಳೆಲ್ಲರ ಸಮ್ಮಿಲನದಿಂದಾಗಿ ಮಿಯಾರಿನಲ್ಲಿ ಮಣ್ಣು, ಕಲ್ಲು, ಮರ ಹಾಗೂ ಲೋಹಗಳೂ ಮಾತನಾಡುವ ಶಕ್ತಿಯನ್ನು ಪಡೆದಿವೆ.

ಸುಮಾರು ಹದಿಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ಇದುವರೆಗೆ 250 ವಿದ್ಯಾಥಿಗಳು ಶಿಲ್ಪಿಗಳಾಗಿ, ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ 74 ವಿದ್ಯಾರ್ಥಿಗಳು ಶೃದ್ದೆಯಿಂದ ಕಲೆಯನ್ನು ಅರಗಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಕಲಿಯುವ ಅವಕಾಶಕ್ಕೆ ಯಾವುದೇ ಬೇಧ ಭಾವವಾಗಲೀ, ಶೈಕ್ಷಣಿಕ ಅರ್ಹತೆಯಾಗಲೀ ಬೇಕಾಗಿಲ್ಲ. ಇಲ್ಲಿ ಆಸಕ್ತಿಯೇ ಅರ್ಹತೆ. ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸುವ ರೀತಿ ಭವಿಷ್ಯವೆಂಬ ಹೆದ್ದಾರಿಯನ್ನು ನಿರ್ಮಿಸುತ್ತದೆ. ಇದು ಮನಸ್ಸಿನಲ್ಲಿರುವ ಭಾವನೆಳು ಕೈಗೆ ಬಂದು ಮರವೋ, ಕಲ್ಲೋ, ಲೋಹದ ಮೇಲೆ ಜೀವವನ್ನು ತುಂಬುವ ಕ್ರಿಯೆ. ತಾಳ್ಮೆ ಹಾಗೂ ಏಕಾಗ್ರತೆಯಲ್ಲಿ ಸ್ವಲ್ಪ ಏರು ಪೇರಾದರೂ ಕೈಗೆ ಬಂದ ಜೀವ ಮಣ್ಣಿಗೆ ಬಾರದೆ ಹಾರಿಹೋಗಬಹುದು.

ಶಿಸ್ತು, ಸ್ವಚ್ಚತೆ, ವ್ಯಕ್ತಿತ್ವ ವಿಕಸನಗಳಿಗೂ ಇಲ್ಲಿ ಪ್ರಾಮುಖ್ಯತೆ ಇದೆ. ನಾಲ್ಕು ಎಕರೆ ಜಾಗದಲ್ಲಿ ಹರಡಿರುವ ಹಸಿರು ಚಪ್ಪರದ ಕರ್ತರು ಇಲ್ಲಿನ ವಿದ್ಯಾರ್ಥಿಗಳೆ. ಅದರ ನಿರ್ವಹಣೆ, ಸ್ವಚ್ಚತೆ ಅವರದೇ ಹೊಣೆ. ಪ್ರಾರ್ಥನೆ, ಭಜನೆ, ಟಿ.ವಿ ವೀಕ್ಷಣೆ, ಪ್ರತಿಭಾಪ್ರದರ್ಶನಕ್ಕೆ ಸೂಕ್ತ ವೇದಿಕೆಯ ಲಭ್ಯತೆ. ಬೇಲೂರು, ಹಳೆಬೀಡು, ಬಾದಾಮಿ, ಐಹೊಳೆ, ಹೊಸಹೊಳಲು ಇನ್ನಿತರ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ. ನೋಡಿದನ್ನು ಮಸ್ತಕದಲ್ಲೂ ಪುಸ್ತಕದಲ್ಲೂ ತುಂಬಿಸಿಕೊಂಡು ಕೊನೆಗೊಂದು ರೂಪ ಕೊಡುವ ಉದ್ದೇಶ ಈ ಪ್ರವಾಸದ್ದು.



ಕಲೆಯರಳುವ ಕೈ ನಿಮ್ಮದಾಗಬೇಕೆಂಬ ಬಯಕೆ ಹುಟ್ಟಿದೆಯೇ? ನಿಮ್ಮ ವಯಸ್ಸು 17ರಿಂದ 30ವರ್ಷವಾಗಿದ್ದರೆ ಇಂದೇ ಮಿಯಾರಿಗೊಮ್ಮೆ ಭೇಟಿ ನೀಡಿ. ಅಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳೇ ರಚಿಸಿದ ಪ್ರಭುದ್ದ ಕಲಾಕೃತಿಗಳಿವೆ. ಎಲ್ಲವೂ ಏಕಶಿಲಾ ಆಕೃತಿಗಳೇ. ಒರಟು ಕಲ್ಲುಗಳೂ ಸಾವಿರೂಪಾಯಿಯ ಮೌಲ್ಯವನ್ನು ಪಡೆದಿವೆ. ನೂರಾರು ನಿರ್ಜೀವ ಭಾವನೆಗಳು ನಿಮ್ಮ ಆಗಮನವನ್ನೇ ನಿರೀಕ್ಷಿಸುತ್ತಿವೆ. ನಿಮ್ಮ ಮನಸ್ಸಿಗೆ ಹೊಂದಾಣಿಕೆಯಾಗುವ, ಸ್ನೇಹಿತರಾಗುವ ಕಲಾಕೃತಿಗಳು ಇದ್ದರೆ ನಿಗದಿತ ಬೆಲೆ ತೆತ್ತು ಅದನ್ನು ನಿಮ್ಮದಾಗಿಸಿಕೊಳ್ಳಲು ಅವಕಾಶವೂ ಕಲ್ಪಿಸಲಾಗಿದೆ.

ಬೊರ್ಗಲ್ಗುಡ್ಡೆ ಮಂಜುನಾಥ್


0 comments:

Post a Comment