ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಉಡುಪಿ :ಸಣ್ಣದೊಂದು `ಇನ್ಸಿಡೆಂಟ್' ಅಷ್ಟೇ.ಯುವಕನ ಯೌವನದ ಕನಸುಗಳು ಮಣ್ಣುಪಾಲು. ವ್ಯಕ್ತಿಯ ಬದುಕು ಹಾಸಿಗೆಗೆ ಸೀಮಿತ.ಬರೋಬ್ಬರಿ ಹದಿನೆಂಟು ವರ್ಷದಿಂದ ನಿಶ್ಛಲಗೊಂಡ ದೇಹ ಹಾಸಿಗೆಗೆ ಆತುಕೊಂಡು ಮಲಗಿದೆ. ಕತ್ತಿನ ಕೆಳಭಾಗ ಇರುವೆ ಕಚ್ಚಿದರೂ ತಿಳಿಯೋದಿಲ್ಲ. ಬುದ್ದಿ ಮಾತ್ರ ಸ್ಪಟಿಕ. ಬದುಕಬೇಕು ಎಂಬ ಹುಮ್ಮಸ್ಸು ಮಾತ್ರ ಮುಖದಲ್ಲಿ ನಳನಳಿಸುತ್ತಿದೆ.

ಕತೆಯಿದು : ಕುಂದಾಪುರ ತಾಲೂಕು ಕಂಡ್ಲೂರು ಸಾರ್ಕಲ್ ಹೊಸಮನೆ ಜಯರಾಮ ಶೆಟ್ಟ (37) ಕಳೆದ 18 ವರ್ಷದಿಂದ ವಿಧಿಯ ಅಟ್ಟಹಾಸಕ್ಕೆ ಹಾಸಿಗೆ ಹಿಡಿದ ವ್ಯಕ್ತಿ. ಮತ್ತೊಬ್ಬರ ಸಹಕಾರವಿಲ್ಲದೆ ಹಾಸಿಗೆಯಿಂದ ಒಂದು ಇಂಚೂ ಕದಲಲೂ ಆಗೋಲ್ಲ. ಕತ್ತಿನ ಕೆಳಭಗ ಸ್ಪರ್ಶ ಜ್ಞಾನ ಕಳೆದುಕೊಂಡಿದೆ. ಹೃದಯ, ಕಿಡ್ನಿ ಎಲ್ಲವೂ ಹಳಿತಪ್ಪಿದ ರೈಲು. ಇವೆಲ್ಲಕ್ಕೂ ಆಘಾತಗೊಂಡ ಬೆನ್ನುಹುರಿಯೇ ಕಾರಣ ಎಂದು ವೈದ್ಯಲೋಕ ಹೇಳುತ್ತಿದೆ. ಮೆದಳು ಮಾತ್ರ ಅತೀ ಚುರುಕು. ಅರಳು ಹುರಿದಂತೆ ಮಾತನಾಡುತ್ತಾರೆ. ಒಟ್ಟಾರೆ ಹಾಸಿಗೆಯಲ್ಲಿ ದಿನ ಕಳೆ ಯುತ್ತಿರುವ ಜಯರಾಮ ಶೆಟ್ಟಿ ಅಂಗಾಂಗ ಹಿಡತ ತಪ್ಪುತ್ತಿದೆ.


ಸಾರ್ಕಲ್ ಹೊಸಮನೆ ದಿ. ಶೀನಪ್ಪ ಶೆಟ್ಟಿ ಮತ್ತು ಮಾಧಮ್ಮ ಶೆಡ್ತಿ ನಾಲ್ವರು ಮಕ್ಕಳಲ್ಲಿ ಜಯರಾಮ ಶೆಟ್ಟಿ ಕಿರಿಯ. ಇಬ್ಬರು ಸಹೋದರಿಯರಿಗೆ ಅಂತೂ ಇಂತೂ ಮದುವೆಯಾಗಿದೆ.ಮಗನ ವ್ಯವಸ್ಥೆ ಕಂಡು ತಂದೆ ಕೊರಗಿ ಕಣ್ಣು ಮುಚ್ಚಿದ್ದಾರೆ. ಮಗನ ಆರೈಕೆಗೆ ನಿಂತ ತಾಯಿ ಹಣ್ಣಾಗಿದ್ದಾರೆ. ಅಕ್ಕನ ಮಗಳು ಮಾವನ ಆರೈಕೆಯಲ್ಲಿ ಪಾಲ್ಗೊಳ್ಳುತ್ತಾಳೆ.

ಏನಾಯಿತು : ಅಂದು ಕೊಂಕಣ ರೈಲ್ವೆ ಕಾಮಗಾರಿಯ ಅಡಾವುಡಿಯ ಕಾಲ. ಜಯರಾಮ ಶೆಟ್ಟಿ ಆಗತಾನೇ ಎಸ್ಸೆಸ್ಎಲ್ಸಿ ಮುಗಿಸಿದ್ದರು. ಮುಂದೆ ಓದೋ ಆಸೆಗೆ ಬಡತನ ತಣ್ಣೀರು ಎರಚಿತು. ಹಾಗಾಗಿ ಜಯರಾಮ ಶೆಟ್ಟಿ ಕೆಲಸ ಹುಡುಕಲು ಮುಂದಾದರು. ಹೀಗೆ ಕೆಲಸ ಹುಡುಕುತ್ತಾ ಬಂದು ನಿಂತಿದ್ದೇ ಕೊಂಕಣ ರೈಲ್ವೆ ಕಾಮಗಾರಿ ತೆಕ್ಕೆಗೆ.

ಕೆಲಸ ಅರಸಿ ಬಂದ ಜಯರಾಮ ಶೆಟ್ಟರಿಗೆ ಬೆಳಗಾಂ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಅದೂ ಕೊಂಕಣ ರೈಲ್ವೆ ಸುರಂಗ ಕಾಮಗಾರಿ ಉಸ್ತುವಾರಿ.

ಬೆಳಗಾವಿಯ ಕಂಪನಿ ಕೊಂಕಣ ರೈಲ್ವೆ ಸುರಂಗ ಮಾರ್ಗ ಕಾಮಗಾರಿ ಗುತ್ತಿಗೆ ಪಡೆದಿತ್ತು. ಸುರಂಗ ಮಾರ್ಗವನ್ನು ಸ್ಪೋಟ ಬಳಸಿ ರಚನೆ ಮಾಡಲಾಗುತ್ತಿತ್ತು. ಮಾರ್ಗದಲ್ಲಿ ಸ್ಪೋಟ ನಡೆದ ಬಳಿಕ ಬಿಡಿಯಾದ ಕಲ್ಲುಗಳನ್ನು ತೆರವುಗೊಳಸಿ ಕಾರ್ಮಿಕರನ್ನು ಒಳಕ್ಕೆ ಬಿಡಲಾಗುತ್ತಿತ್ತು.

ಹೀಗೆ ಸ್ಪೋಟ ನಡೆದ ನಂತರ ಸುರಂಗದೊಳಗೆ ಕಾರ್ಮಿಕರನ್ನು ಬಿಡಲಾಗಿದೆ. ಕಾರ್ಮಿಕರ ಜೊತೆಗೆ ಜಯರಾಮ ಶೆಟ್ಟಿ ಕೂಡಾ ಸುರಂಗದೊಳಗೆ ಬಂದಿದ್ದಾರೆ. ಅದೆಲ್ಲಿತ್ತೋ ಗೊತ್ತಿಲ್ಲ. ಸಡಿಲಗೊಂಡು ಮೂಲೆಯಲ್ಲಿದ್ದ ಕಲ್ಲು ನೇರವಾಗಿ ಜಯರಾಮ ಶೆಟ್ಟಿ ತೆಲೆಯ ಮೇಲೆ ಅಪ್ಪಳಿಸಿದೆ. ಅಂದಿನಿಂದ ಇಂದಿನವರೆಗೆ ಜಯರಾಮ ಶೆಟ್ಟಿ ಹಾಸಿಗೆ ಬಿಟ್ಟು ಕದಲಲಾಗದ ಸ್ಥಿತಿಗೆ ಬಂದಿದ್ದಾರೆ. ದುಡಿಮೆಗೂ ಕಲ್ಲು ಬಿತ್ತು. ಯೌವನದ ಕನಸುಗಳನ್ನು ಹೊತ್ತು ಹೊಸ ಉಮೇದಿನಲ್ಲಿ ಕೆಲಸಕ್ಕೆ ಹೊರಟ ಜಯರಾಮ ಶೆಟ್ಟಿ ಬದುಕು ಹಾಸಿಗೆಗೆ ಬಂದು ಮುಟ್ಟಿತು.ಕಲ್ಲು ತೆಲೆಯ ಮೇಲೆ ಬಿದ್ದ ನಂತರ ಜಯರಾಮ ಶೆಟ್ಟಿ ಬದುಕುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ವಾರಗಟ್ಟಲೆ ಪ್ರಜ್ಞಾ ಶೂನ್ಯರಾಗಿದ್ದರೂ ನಂತರ ಪ್ರಜ್ಞೆಯೇನೋ ಬಂತು ಬದುಕು ಭರವಾಗಿತ್ತು.
ಪ್ರಜ್ಞೆ ಕಳೆದುಕೊಂಡ ಜಯರಾಮ ಶೆಟ್ಟಿ ಅವರಿಗೆ ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಜಯರಾಮ ಶೆಟ್ಟಿ ಆರೋಗ್ಯದಲ್ಲಿ ಬದಲಾವಣೆ ಕಾಣಲಿಲ್ಲ. ಮಣಿಪಾಲ ಆಸ್ಪತ್ರೆ ವೈದ್ಯರು ಕಲ್ಲು ಬಿದ್ದ ಆಘಾತಕ್ಕೆ ಜಯರಾಮ ಶೆಟ್ಟರ ಬೆನ್ನು ಹುರಿ ಘಾಸಿಗೊಂಡಿದೆ. ಕಾಲಕ್ರಮೇಣ ಸರಿಯಾಗುತ್ತದೆ. ಮನೆಯಲ್ಲೇ ಆರೈಕೆ ಮಾಡಿ ಎಂದು ಸಲಹೆ ಮಾಡಿದರು.

ನಂತರ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಆರು ತಿಂಗಳು ಆರೈಕೆ ಮಾಡಲಾಯಿತು. ಆದರೂ ಜಯರಾಮ ಶೆಟ್ಟಿ ಎದ್ದು ಓಡಾಡುವಂತೆ ಆಗಲೇ ಇಲ್ಲ. ಆದರೂ ಜಯರಾಮ ಶೆಟ್ಟಿ ಬದುಕುವ ಛಲ ಕಳೆದುಕೊಳ್ಳಲಿಲ್ಲ. ಇದೆಲ್ಲಾ ನಾಳೆ ಗುಣವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ. ಹಾಗಾಗಿ ತಿಂಗಳಿಗೆ 10 ಸಾವಿರ ವೈದ್ಯಕೀಯ ವೆಚ್ಚಕ್ಕಾಗಿ ಹಣ ಕಾದಿರಿಸಬೇಕಾಗಿದೆ.ಜಯರಾಮ ಶೆಟ್ಟಿ ಸಹೋದರ ಹಾಗೂ ಸಹೋದರಿಯರು ಅಷ್ಟೇನು ಸ್ಥಿತಿವಂತರಲ್ಲ. ಆದರೂ ಕೈಲಾದಷ್ಟು ಸಹಕಾರ ಮಾಡುತ್ತಿದ್ದಾರೆ. ಅದೂ ಅರೆಪಾವು ಮಜ್ಜಿಗೆಯಂತಾಗಿದೆ.ಜಯರಾಮ ಶೆಟ್ಟಿ ಅವರ ನೆರವಿಗೆ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಂದಿದ್ದಾರೆ. ಅವರು ತಮ್ಮ ಕೈಲಾದಷ್ಟು ನೆರವು ನೀಡಿದ್ದಾರೆ. ಜಯರಾಮ ಶೆಟ್ಟಿ ಆರೋಗ್ಯ ಯಥಾಸ್ಥತಿಯಲ್ಲಿದೆ.

ಮಲಗಿರೋದು ಅಂದ್ರೆ ಸುಮ್ಮನೇನಾ : ಅರೆ ಕ್ಷಣ ಕಂತಲ್ಲೇ ಕುಂತಿರೋದು ಅಂದ್ರೆ ಮಹಾ ಬೋರು ಅಂತಾದ್ದರಲ್ಲಿ 18 ವರ್ಷ ಹಾಸಿಗೆಯಲ್ಲಿ ಮಲಗಿರೋದು ಅಂದ್ರೆ ಸುಮ್ಮನೇನಾ? ಮೈಮೇಲೆ ನೂಲಿನ ಕರೆ ಬಿದ್ದರೂ ತೆಗೆಯಲು ಮತ್ತೊಬ್ಬರು ಬರಬೇಕು. ಸ್ನಾನ, ನಿತ್ಯಕಾಯಕ ಎಲ್ಲವೂ ಪರಾಧೀನ. ಇಂಥಹಾ ಸ್ಥಿತಿಯಲ್ಲಿ ಕತ್ತಲು ಕೋಣೆಯಲ್ಲಿ ಏಕಾಂಗಿಯಾಗಿ ಕಳೆಯೋದು ಅಂದ್ರೆ ಹುಡುಗಾಟವಾ? ಕೋಣೆಯಲ್ಲಿ ಅಂಗಾತ ಮಲಗಿದ ಜಯರಾಮ ಶೆಟ್ಟಿ ಅವರನ್ನು ಕಂಡರೆ ಹೊಟ್ಟೆ ಚುರುಗುಟ್ಟುತ್ತದೆ. ಸದ್ಯ ತಾಯಿ ಜಯರಾಮ ಶೆಟ್ಟಿ ನೆರವಿಗಿದ್ದಾರೆ. ಅವರಿಗೂ ವಯಸ್ಸಾಗಿದೆ. ಅಕ್ಕನ ಮಗಳು ಮದುವೆಯಾಗಿ ಹೋದರೆ ಜಯರಾಮ ಶೆಟ್ಟಿ ನೋಡಿಕೊಳ್ಳೋರು ಯಾರು ಎಂಬುದು ಯಕ್ಷ ಪ್ರಶ್ನೆ .

ಬೆನ್ನುಹುರಿ ಘಾಸಿ : ಜಯರಾಮ ಶೆಟ್ಟಿ ಅವರಿಗೆ ಬೆನ್ನು ಹುರಿಯದ್ದೇ ಮುಖ್ಯ ಪ್ರಾಬ್ಲಮ್. ಅದು ಸರಿಯಾದರೆ ಜಯರಾಮ ಶೆಟ್ಟಿ ಸರಿಯಾಗುತ್ತಾರೆ ಎನ್ನುತ್ತಾರೆ ವೈದ್ಯರು. ಚಿಕಿತ್ಸೆ ಕೂಡಾ ಧೀರ್ಘಾವಧಿ. ಹಾಗಾಗಿ ಚಿಕಿತ್ಸಾ ವೆಚ್ಚಿ ಭರಿಸುವಷ್ಟು ಸಬಲರಾಗಿಲ್ಲ ಜಯರಾಮ ಶೆಟ್ಟಿ. ಪ್ರತೀ ತಿಂಗಳು ಜಯರಾಮ ಶೆಟ್ಟಿ ಮಣಿಪಾಲಕ್ಕೆ ಹೋಗಬೇಕು. ಹಾಗಾಗಿ ಹೃದಯವಂತರ ಸ್ಪಂಧನ ಜಯರಾಮ ಶೆಟ್ಟಿ ಅವರಿಗೆ ಬೇಕಾಗಿದೆ.

ಸ್ಪಂಧಿಸಿವವರಿಗಾಗಿ ಜಯರಾಮ ಶೆಟ್ಟಿ, ಸಾರ್ಕಲ್ ಹೊಸಮನೆ ಖಾತೆ ಸಂಖ್ಯೆ 110801010006616, ವಿಜಯಾ ಬ್ಯಾಂಕ್ ಕಂಡ್ಲೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ 576211 ಇಲ್ಲಿಗೆ ಕಳುಹಿಸಬಹುದು. ಜಯರಾಮ ಶೆಟ್ಟಿ ಕಷ್ಟಸುಖ ವಿಚಾರಿಸೋದಾದ್ರೆ 9481179305 ಈ ನಂಬರಿಗೆ ಡೈಯಲ್ ಮಾಡಿ ನಾಲ್ಕು ಸಾಂತ್ವನದ ನುಡಿ ಹೇಳಿದರೆ ಕಷ್ಟಕ್ಕೆ ಬಿದ್ದ ಜೀವಕ್ಕೆ ಖುಷಿ ಕೊಡುತ್ತದೆ.


ಶ್ರೀಪತಿ ಹೆಗಡೆ ಹಕ್ಲಾಡಿ

1 comments:

Vidya said...

ei kanasu nondavarigu spandisuthiruvudu nijakku hemme tharuva vichara... mundeyu nondavara balige asha kirana thoriso bellakagali.. avra badukallu kannasu chigurisal..

vidya irvathur

Post a Comment