ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಚಿಕ್ಕಮಗಳೂರು : ಮಲೆನಾಡಿನ ಪ್ರಮುಖ ಉಪ ಬೆಳೆ ಕಾಳು ಮೆಣಸಿಗೆ ಮಾರುಕಟ್ಟೆಯಲ್ಲಿ ರಾಜಯೋಗ ಬಂದಿದೆ. ಕಳೆದ ಬಾರಿ ಒಂದು ಕೇಜಿ ಕಾಳು ಮೆಣಸು 100ರಿಂದ 130ರೂ.ಗೆ ಮಾರಾಟವಾಗುತ್ತಿತ್ತು. ಈ ಬಾರಿ 150 ರಿಂದ 160ರೂ. ಗಳಿಗೆ ವ್ಯಾಪಾರ ಕುದುರಿಸಿಕೊಂಡಿದೆ.

ಕಳೆದ ಕೆಲವು ವರ್ಷಗಳಿಂದ ನಾನಾ ಸಮಸ್ಯೆಗಳಿಂದ ಬೇಸತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಕಾಳು ಮೆಣಸು ಬೆಳೆಗಾರರಲ್ಲಿ ಬೆಲೆ ಏರಿಕೆ ಹರ್ಷ ತಂದಿದೆ. ಆದರೆ ಜಿಲ್ಲೆಯಲ್ಲಿ ತಲೆದೋರಿರುವ ಮಾರುಕಟ್ಟೆ ಸಮಸ್ಯೆ ಬೆಳೆಗಾರರನ್ನು ಮತ್ತೆ ಸಂಕಷ್ಟಕ್ಕೆ ತಳ್ಳಿದೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಾಫಿಯನ್ನು ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದೆ. ಕಾಳು ಮೆಣಸು ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಸಾಮಾನ್ಯವಾಗಿ ಕಾಫಿ ತೋಟದ ನಡುವಿನಲ್ಲಿ ಬೆಳೆಯಲಾಗುವ ಕಾಳು ಮೆಣಸು ಕಡಿಮೆ ಶ್ರಮದಲ್ಲಿ ಹೆಚ್ಚು ಆದಾಯಗಳಿಸಬಹುದಾದ ಉಪಬೆಳೆಯಾಗಿದೆ. ಆದರೆ ಕಾಳು ಮೆಳಣಸು ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ಬೆಳೆಗಾರರಿಗೆ ಲಾಭ ತಂದಿದ್ದಕ್ಕಿಂತ ನಷ್ಟ ಮಾಡಿದ್ದೇ ಹೆಚ್ಚು. ಪ್ರಸಕ್ತ ಏಕಾಏಕಿಯಾಗಿ ಹೆಚ್ಚಿನ ಬೆಲೆಗೆ ಕಾಳು ಮೆಣಸು ಮಾರಾಟವಾಗುತ್ತಿರುವುದು ಕೃಷಿಕರ ಮೊಗದಲ್ಲಿ ನಗು ಅರಳಿಸಿದೆ.

ಒಂದು ತಿಂಗಳ ಹಿಂದೆ 110 ರಿಂದ 120ರೂ.ಗಳಿಗೆ ಮಾರಾಟವಾಗುತ್ತಿದ್ದ, ಕಾಳು ಮೆಣಸು ಇದೀಗ ಏಕಾಏಕಿಯಾಗಿ 150ರಿಂದ 160 ರೂ. ಏರಿಕೆಯ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಇದರಿಂದಾಗಿ ಸಂತಸಗೊಂಡಿದ್ದ ಬೆಳೆಗಾರರಿಗೆ ಮಾರುಕಟ್ಟೆಯ ಸಮಸ್ಯೆ ನಿರಾಸೆ ಮೂಡಿಸಿದೆ. ಸಾಂಬಾರು ಮಂಡಳಿ ಜಿಲ್ಲೆಯಲ್ಲಿ ಕಾಳು ಮೆಣಸು ಖರೀದಿ ಕೇಂದ್ರವನ್ನು ಆರಂಭಿಸಬೇಕು ಎನ್ನುವುದು ಬೆಳೆಗಾರರ ಆಶಯ.

ಜಿಲ್ಲೆಯಾದ್ಯಂತ ಬೆಳೆಯಲಾಗುವ ಕಾಳು ಮೆಣಸನ್ನು ಜಿಲ್ಲೆಯಲ್ಲಿನ ಸಣ್ಣ ವ್ಯಾಪಾರಸ್ಥರಿಗೆ ಮಾರಾಟ ಮಾಡಬೇಕಾಗಿದೆ. ಇದರಿಂದಾಗಿ ಬೆಳೆಗಾರರಿಗೆ ಸೂಕ್ತ ಬೆಲೆ ಲಭಿಸುತ್ತಿಲ್ಲ. ವ್ಯಾಪಾರಸ್ಥರು ಬೇಕಾಬಿಟ್ಟಿ ಬೆಲೆ ನಿಗದಿಪಡಿಸುತ್ತಿ ರುವುದು ಬೆಳೆಗಾರರಿಗೆ ಸಮಸ್ಯೆ ತಂದೊಡ್ಡಿದೆ. ಮಾರುಕಟ್ಟೆಯ ಸಮಸ್ಯೆಯ ಜೊತೆಗೆ ಕಾಳು ಮೆಣಸಿಗೆ ವಿವಿಧ ರೋಗಗಳು ಎದುರಾಗಿದ್ದು, ಸಾಂಬಾರು ಮಂಡಳಿಯವರು ಉನ್ನತ ದರ್ಜೆಯ ಔಷದವನ್ನು ವಿತರಿಸಬೇಕು ಎನ್ನುವುದು ಕಾಳು ಮೆಣಸು ಬೆಳೆಗಾರರ ಆಶಯ.

ಕಳೆದ ಕೆಲವು ವರ್ಷಗಳಿಂದ ವಿವಿಧ ರೋಗ ಬಾಧೆಯಿಂದ ತತ್ತರಿಸಿದ್ದ ಕಾಳು ಮೆಣಸಿನ ಬೆಳೆಗಾರರಿಗೆ ಏಕಾಏಕಿಯಾಗಿ ಹೆಚ್ಚಿದ ಬೆಲೆ ಕೊಂಚ ನೆಮ್ಮದಿ ತಂದಿದೆ. ಆದರೆ ಮಾರುಕಟ್ಟೆಯ ಸಮಸ್ಯೆ ಜಿಲ್ಲೆಯ ಬೆಳೆಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಸಾಂಬಾರ ಮಂಡಳಿ ಜಿಲ್ಲೆಯಲ್ಲಿ ಕಾಳು ಮೆಣಸು ಖರೀದಿ ಕೇಂದ್ರವನ್ನು ಆರಂಭಿಸಬೇಕು ಎನ್ನುವುದು ಜಿಲ್ಲೆಯ ಬೆಳೆಗಾರರ ಒತ್ತಾಯವಾಗಿದೆ.
ಶ್ರೀಪತಿ ಹೆಗಡೆ ಹಕ್ಲಾಡಿ.

0 comments:

Post a Comment