ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಕಿಂಡಿ ಆಣೆಕಟ್ಟಿನ ಅವಾಂತರ : ಕುರು ದ್ವೀಪ ಸೇಲಾಯ್ತು..!

ಉಡುಪಿ : ಕುರು ದ್ವೀಪ ಸೇಲಾಯ್ತು! ಇನ್ನು ಮುಂದೆ ಕುರು ದ್ವೀಪದಲ್ಲಿ ರೈತರ ಬೇಸಾಯದ ಓ ಬೇಲೆ ಪದದ ಬದಲು ರೆಸಾರ್ಟ್ ಗೌಜು ಗದ್ದಲಕ್ಕೆ ಕುರು ದ್ವೀಪ ತೆರೆದುಕೊಳ್ಳಲಿದೆ.ರೈತರ ಬದುಕನ್ನು ಹಸನು ಮಾಡುವ ಸಲುವಾಗಿ ನಿರ್ಮಿಸಿದ ಕಿಂಡಿ ಆಣೆಕಟ್ಟು ರೈತರ ಬದುಕನ್ನೇ ಹೊಸಕಿಹಾಕಿದರ ಪರಿಣಾಮ ಕುರು ದ್ವೀಪ ಸೇಲ್ ಲೇಬಲ್ ಅಂಟಿಸಿ ಕೊಂಡಿದೆ. ಮುಕ್ಕಾಲು ಪಾಲು ಕುರು ನಿವಾಸಿಗಳು ತಮ್ಮ ಜಾಗ ಪರಬಾರೆ ಮಾಡಿ, ಬೇರೆ ಸ್ಥಳಕ್ಕೆ ಗಂಟು ಮೂಟೆಕಟ್ಟಿದ್ದಾರೆ. ವ್ಯವಹಾರ ಕುದುರಿದರೆ ಇನ್ನುಳಿದವರೂ ಜಾಗ ಖಾಲಿ ಮಾಡಲಿದ್ದಾರೆ. ರೈತರ ಬೇಸಾಯ ಭೂಮಿಗೆ ನೀರೊದಗಿಸಬೇಕಿದ್ದ ಕಿಂಡಿ ಆಣೆಕಟ್ಟು ರೈತರ ಬುಡಕ್ಕೆ ನೀರು ತಂದಿದೆ!

ಇಲ್ಲಿದೆ ಕುರು ದ್ವೀಪ
ಬೈಂದೂರು ವಿಧಾನ ಸಭಾ ವ್ಯಾಪ್ತಿಯಲ್ಲಿ ಕುರು ದ್ವೀಪ ಬರುತ್ತದೆ. ಒಂದೆಡೆ ಕರಾವಳಿಯ ಕಾವಲು ಕಾಯುತ್ತಿರುವ ಪಶ್ಚಿಮ ಘಟ್ಟಗಳ ಸಾಲು. ಮತ್ತೊಂದಡೆ ಭೋರ್ಗರೆವ ಅರಬ್ಬಿ ಸಮುದ್ರ ಕುರು ದ್ವೀಪದ ಅಂದ ಹೆಚ್ಚಿಸಿದೆ. ಸೌರ್ಪಣಿಕಾ ನದಿಯ ಹಿನ್ನೀರು ಕುರು ದ್ವೀಪಕ್ಕೆ ಮತ್ತಷ್ಟು ಮೆರಗು ನೀಡಿದೆ. ಕಾಂಡ್ಲಾ, ಬಾಳೆ, ತೆಂಗು, ಅಡಿಕೆ, ಭತ್ತ ಮತ್ತು ಕಬ್ಬು ಕುರು ದ್ವೀಪದ ಆಸ್ತಿ. ಇವೆಲ್ಲದರೊಟ್ಟಿಗೆ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನ ಕುರು ದ್ವೀಪದ ಮತ್ತೊಂದು ತುದಿಯಲ್ಲಿದೆ. ಒಟ್ಟಾರೆ ಪ್ರಕೃತಿ ಮಾನವರಿಗಾಗಿ ಕೊಟ್ಟ ಗಿಪ್ಟ್ ಕುರುದ್ವೀಪ.

ಸುಮಾರು ನಲವತ್ತು ಎಕರೆಯಷ್ಟು ವಿಶಾಲ ಕುರು ದ್ವೀಪದಲ್ಲಿ ಇಪ್ಪತ್ತಕ್ಕೂ ಮಿಕ್ಕ ಕುಟುಂಬಗಳ ಆವಾಸ ಸ್ಥಾನವಾಗಿತ್ತು. ಮಕ್ಕಳು, ಮರಿ ಹೆಂಗಸರು, ಗಂಡಸರು ಎಲ್ಲಾ ಸೇರಿದರೆ ಇನ್ನೂರಕ್ಕೂ ಮಿಕ್ಕ ಕ್ರೌಡ್ ಕುರು ದ್ವೀಪದಲ್ಲಿತ್ತು. ಭತ್ತ, ತೆಂಗು ಮತ್ತು ದ್ವಿದಳ ಧಾನ್ಯ ಇಲ್ಲಿನ ಪ್ರಮುಖ ಬೆಳೆ. ಬ್ರಾಹ್ಮಣ ಪ್ರಾಭಲ್ಯ ಜಾಸ್ತಿಯಿದ್ದರೂ ಬಿಲ್ಲವ, ಕ್ರೈಸ್ತ ಮತ್ತು ಹಿಂದುಳಿದ ವರ್ಗದವರೂ ಇಲ್ಲಿ ವಾಸಮಾಡುತ್ತಿದ್ದಾರೆ. ಶಾಂತಿ, ಸೌಹಾರ್ಧತೆಗೆ ಮತ್ತೊಂದು ಹೆಸರು ಕುರು ದ್ವೀಪ.

ಕುರು ಯಾಕೆ ಸೇಲಾಯ್ತು

ಕುರು ದ್ವೀಪ ಜನ ವಸತಿಯ ಕೇಂದ್ರವಾಗಿರಲಿಲ್ಲ. ಸೇನಾಪುರವನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯಭಾರ ಮಾಡುತ್ತಿದ್ದ ಸೇನೆಯ ಅರಸರ ಕಾಲದಲ್ಲಿ ಕುರು ಅಪರಾಧಿಗಳಿಗೆ ಕರಿ ನೀರಿನ ಶಿಕ್ಷೆ ವಿಧಿಸುವ ತಾಣವಾಗಿತ್ತು. ಇಂದಿಗೂ ಸೇನೆಯ ಅರಸರು ಕುರುವಿನಲ್ಲಿ ದರ್ಬಾರ್ ನಡೆಸಿದ ಬಗ್ಗೆ ಸಾಕ್ಷಾಧಾರಗಳು ಸಿಗುತ್ತೆವೆ. ಕುರು ದ್ವೀಪದ ಮೂಲ ಹೆಸರು ಕುರುಹು ಎಂದಾಗಿತ್ತು. ಜನರ ಬಾಯಿಗೆ ಸಿಕ್ಕ ಕುರುಹು ಸಂಕುಚಿತಗೊಂಡು ಕುರುವಾಗಿ ಬದಲಾಗಿದೆ.

ಸೇನೆಯರಸರ ನಂತರ ಕುರು ದ್ವೀಪಕ್ಕೆ ಕುಂದಾಪುರ ಸಮೀಪದ ಆನಗಳ್ಳಿಯಿಂದ ಬ್ರಾಹ್ಮಣ ಕುಟುಂಬ ಬಂದು ನೆಲೆಸಿತೆಂದು ಇತಿಹಾಸ ತಿಳಿಸುತ್ತದೆ. ನಂತರ ಇತರರು ಬಂದು ಇಲ್ಲಿ ನೆಲೆಸಿದ ಬಗ್ಗೆ ಸಾಕ್ಷಾಧಾರಗಳಿವೆ. ಅಂತೂ ಜೀವನೋಪಾಯಕ್ಕಾಗಿ ವಲಸೆ ಬಂದು ಕುರು ದ್ವೀಪದಲ್ಲಿ ನೆಲೆ ನಿಂತವರು ಜೀವನ ದಾರಿ ಸಾಗಿಸುವ ದಾರಿ ಬಂದ್ ಆಗಿದ್ದರಿಂದ ಕುರು ದ್ವೀಪ ತೆರೆಯಬೇಕಾಗಿರುವುದು ವಿಪರ್ಯಾಸ.
ಬಂಟ್ವಾಡಿ ಮತ್ತು ತೊಪ್ಲು ಸಮೀಪ ನಿರ್ಮಿಸಿದ ಕಿಂಡಿ ಆಣೆಕಟ್ಟು ಕುರು ದ್ವೀಪ ವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಮಾಡಿದೆ. ಹಾಗಂತ ಕುರು ದ್ವೀಪದಲ್ಲಿ ಸಮಸ್ಯೆಯಿರಲಿಲ್ಲವೆಂದಲ್ಲ. ಕುರು ನಿವಾಸಿಗಳು ಸಮಸ್ಯೆಯೊಟ್ಟಿಗೆ ಬದುಕುವುದನ್ನು ರೂಢಿ ಮಾಡಿಕೊಂಡಿದ್ದರು. ಒಂದು ಹಿಡಿ ಉಪ್ಪು ಬೇಕಾದರೂ ಎರೆಡೆರೆಡು ಹೊಳೆ ದಾಟಿ ಪೇಟೆಗೆ ಬರಬೇಕಾಗಿತ್ತು. ಶಾಲಾ ಮಕ್ಕಳಿಗಂತೂ ಕುರು ದ್ವೀಪದಿಂದ ಬರೋದೇ ದೊಡ್ಡ ಸಾಹಸ. ಬೇಸಿಗೆಯಲ್ಲಿ ಕುಡಿಯುವ ನೀರನ್ನು ಬೇರೆ ಕಡೆಯಿಂದ ದೋಣಿಯಲ್ಲಿ ತರುವ ಅನಿವಾರ್ಯತೆಯಿತ್ತು. ದೂರವಾಣಿ, ವಿದ್ಯುತ್ ಇತ್ತೀಚಿನ ಬದಲಾವಣೆ. ಕರಿ ಹಲಗೆ ಯೋಜನೆಯಡಿ ಕಿರಿಯ ಪ್ರಾಥಮಿಕ ಶಾಲೆ ಕೇಂದ್ರ ಸರಕಾರದ ಕೊಡುಗೆ. ಇಲ್ಲಿನ ನಿವಾಸಗಳು ಹಲವು ವರ್ಷದಿಂದ ಸಂಪರ್ಕ ಸೇತುವೆ ಬೇಡಿಕೆಯಿಟ್ಟಿದ್ದರು. ಕೊನೆಗೆ ತೂಗು ಸೇತುವೆಯನ್ನಾದರೂ ಮಾಡಿಕೊಡಿ ಎಂಬ ಹಳಹಳಿಸಿದ್ದರು. ಇಲ್ಲಿನವರ ಬೇಡಿಕೆಯನ್ನು ಜನಪ್ರತಿನಿಧಿಗಳು ಕೇಳಿಸಿಕೊಂಡರು ಅಷ್ಟೇ! ಬೇಡಿಕೆ ಮಾತ್ರ ಠುಸ್! ಆದರೂ ಇಲ್ಲಿನ ವಾಸಿಗಳು ಕುರು ತೊರೆಯುವ ಮನಸ್ಸು ಮಾಡಿರಲಿಲ್ಲ. ಕಿಂಡಿ ಆಣೆಕಟ್ಟಿನ ಹಿನ್ನೀರು ಕುರು ದ್ವೀಪದಲ್ಲಿ ಎಬ್ಬಿಸಿದ ಕಿರಿಕಿರಿಗೆ ಕುರು ಸಹವಾಸವೇ ಬೇಡಾ ಎನ್ನುವ ತೀರ್ಮಾನಕ್ಕೆ ನಾಗರಿಕರು ಬಂದಿದ್ದಾರೆ. ಹಾಗಾಗಿ ಕುರು ನಿವಾಸಿಗಳು ತಮ್ಮ ಜಾಗ ಮಾರಾಟಕ್ಕಿಟ್ಟಿದ್ದಾರೆ. ಸುಮಾರು 15ಕ್ಕೂ ಅಧಿಕ ಕುಟುಂಬ ಕುರು ದ್ವೀಪಕ್ಕೆ ಟಾ..ಟಾ... ಹೇಳಿಯಾಗಿದೆ. ಇನ್ನುಳಿದವರು ಕೊನೆ ನಮಸ್ಕಾರಕ್ಕೆ ದಿನ ಎಣಿಸುತ್ತಿದ್ದಾರೆ.

ಕಿಂಡಿ ಆಣೆಕಟ್ಟು ಏನ್ಮಾಡ್ತು

ಬಂಟ್ವಾಡಿ ಮತ್ತು ತೊಪ್ಲು ಪ್ರದೇಶದಲ್ಲಿ ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಎರಡು ಕಿಂಡಿ ಆಣೆಕಟ್ಟು ನಿರ್ಮಿಸಲಾಗಿದೆ. ಜನಪ್ರತಿನಿಧಿಗಳು ತಮ್ಮ ಹಿಂಬಾಲಕರ ತೃಪ್ತ್ತಿಗಾಗಿ ಅವೈಜ್ಞಾನಿಕವಾಗಿ ಕಿಂಡಿ ಆಣೆಕಟ್ಟು ನಿರ್ಮಿಸಿರುವುದರಿಂದ ತಗ್ಗು ಪ್ರದೇಶಗಳಿಗೆ ಕಿಂಡಿ ಆಣೆಕಟ್ಟಿನ ಹಿನ್ನೀರು ನುಗ್ಗುತ್ತಿದ್ದೆ. ಸದಾ ಕಿಂಡಿ ಆಣೆಕಟ್ಟಿನ ಹಿನ್ನೀರು ಕರು ದ್ವೀಪದಲ್ಲಿ ನಿಲ್ಲುತ್ತಿರುವುದರಿಂದ ಕೃಷಿ ಅಸಾಧ್ಯವಾಗಿದೆ. ಬೆಳೆದ ಅಡಿಕೆ, ತೆಂಗು ಮತ್ತು ಬಾಳೆ ಬುಡದಲ್ಲಿ ಸದಾ ನೀರಿನ ಗಿಜಿಗಿಜಿಯಿರೋದರಿಂದ ಅವುಗಳು ಆತ್ಮ ಹತ್ಯೆ ಮಾಡಿಕೊಳ್ಳುತ್ತಿವೆ. ಮೂಲಾಧಾರ ಕೃಷಿ ಕೈ ಕೊಡುವುತ್ತಿರುವುದರಿಂದ ನೊಂದ ಕುರು ನಾಗರಿಕರು ತಮ್ಮ ಜಾಗ ಮಾರುತ್ತಿದ್ದಾರೆ.

ವೆಂಟೆಡ್ ಡ್ಯಾಂಮ್ ಕುರು ದ್ವೀಪಕ್ಕೆ ಮಾತ್ರ ಗಂಟಲುಗಾಣವಾಗಿಲ್ಲ. ಹಡವು, ಪಡುಕೊಣೆ, ತೊಪ್ಲು, ಯಳೂರು, ಕುದ್ರೆಜಡ್ಡು, ಬಟ್ಟೆಕುದ್ರು, ಮೋವಾಡಿ, ಆನಗೋಡು ಮುಂತಾದ ಪ್ರದೇಶಕ್ಕೂ ಕಿಂಡಿ ಆಣೆಕಟ್ಟಿ ನ ಕಬಂಧಬಾಹು ಚಾಚಿಕೊಂಡಿದೆ. ಸದ್ಯ ಕುರು ದ್ವೀಪವಾಸಿಗಳು ಜಾಗಖಾಲಿ ಮಾಡಿದ ಹಾಗೆ ಮುಂದಿನ ದಿನಗಳಲ್ಲಿ ಉಳಿದ ಪ್ರದೇಶದ ಜನರು ನಾವೂ ಸೇಲ್ ಮಾಡುತ್ತೇವೆ ಎಂದರೆ ಅಚ್ಚರಿಯಿಲ್ಲ. ವೆಂಟೆಡ್ ಡ್ಯಾಂಮ್ ಅಪಸೌವ್ಯಗಳಿಗೆ ಪರಿಹಾರ ಕಂಡಕೊಳ್ಳದಿದ್ದರೆ ಜನ ಶಾಪಹಾಕಿಯಾರು?


ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment