ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅನಿಸಿಕೆ
ದಿನಾಂಕ 24ರಂದು ಶನಿವಾರ ಮಧ್ಯಾಹ್ನ ನಾನು ಮಂಡ್ಯದ ಸರಕಾರಿ ಬಸ್ ನಿಲ್ದಾಣಕ್ಕೆ ಬಂದಾಗ ಅಲ್ಲಿ ವಧುವಿನಂತೆ ಸಿಂಗರಿಸಿಕೊಂಡ ವೋಲ್ವೊ ಬಸ್ಸುಗಳು ಸಾಲಾಗಿ ನಿಂತಿದ್ದವು. ಮಂಡ್ಯ-ಮೈಸೂರು ಮಾರ್ಗಕ್ಕೆ ವೋಲ್ವೊ ಸೇವೆಯನ್ನು ಅರ್ಪಿಸುವ ಸಮಾರಂಭಕ್ಕಾಗಿ ಬಸ್ ನಿಲ್ದಾಣದಲ್ಲಿ ಪೆಂಡಾಲ್, ವೇದಿಕೆ ಸಹಿತ ಭರ್ಜರಿ ಏರ್ಪಾಡಾಗಿತ್ತು. ನಗರದ ಹೆದ್ದಾರಿಯುದ್ದಕ್ಕೂ ಸಾರಿಗೆ ಸಚಿವರ ಫೋಟೊ ಸಮೇತ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ಸಾಲಾಗಿ ನಿಂತು ಸಚಿವರನ್ನು ಸ್ವಾಗತಿಸಲು ಕಾಯುತ್ತಿದ್ದರು. ಒಂದಷ್ಟು ಕಾರುಗಳ ಮೆರವಣಿಗೆ ಜೊತೆಗೆ ಮಹಾರಾಜರ ಗತ್ತಿನಲ್ಲಿ ಸಾರಿಗೆ ಸಚಿವರು ಆಗಮಿಸಿದರು.
ಅಪರಾಹ್ನ ನಾನು ಸಸರಕಾರಿ ಬಸ್ ಹತ್ತಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ. ಜೀರ್ಣವಾಗಿಹೋಗಿದ್ದ ಲಟಾರಿ ಬಸ್ ಆದರೂ ಅದು ವೇಗವಾಗಿ ಓಡುತ್ತಿತ್ತು. ಮಾರ್ಗಮಧ್ಯೆ ಬಸ್ಸಿನ ಚಕ್ರ ಸ್ಫೋಟಗೊಂಡು ಚಕ್ರದೊಡನಿದ್ದ ರಿಂಗ್, ಪ್ಲೇಟ್ ಸಮೇತ ಎಲ್ಲ ಉಪಕರಣಗಳೂ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದವು. ಬಸ್ಸು ಅಡ್ಡಾದಿಡ್ಡಿ ಓಡತೊಡಗಿತು. ವೇಗದಲ್ಲಿದ್ದ ಬಸ್ಸನ್ನು ಚಾಲಕನು ತಕ್ಷಣ ನಿಯಂತ್ರಣಕ್ಕೆ ತಂದಿರದಿದ್ದರೆ ಹಿಂದೆ ಬರುತ್ತಿದ್ದ ಖಾಸಗಿ ಬಸ್ ನಮ್ಮ ಬಸ್ಸಿಗೆ ಡಿಕ್ಕಿ ಹೊಡೆದು ಭಾರಿ ಅನಾಹುತ ಸಂಭವಿಸುತ್ತಿತ್ತು.

ಮಂತ್ರಿಗಳ ಕಾರಿನ ಚಕ್ರ ಸ್ಫೋಟಗೊಳ್ಳುವುದಿಲ್ಲ. ಏಕೆಂದರೆ ಅದು ಹಳೆಯ ಲಟಾರಿ ಕಾರ್ ಆಗಿರುವುದಿಲ್ಲ. ಮೇಲಾಗಿ ಒಳ್ಳೆಯ ಕಂಡೀಷನ್ನಲ್ಲಿರುತ್ತದೆ. ನಮ್ಮ ಬಸ್ಸು ಹೀಗೆ ಅವಘಡಕ್ಕೆ ತುತ್ತಾದಾಗ ಅತ್ತ ಮಂಡ್ಯದಲ್ಲಿ ಸಾರಿಗೆ ಮಂತ್ರಿಗಳು ಸಾರಿಗೆ ಸೇವೆಯ ಬಗ್ಗೆ ಸಮಾರಂಭದಲ್ಲಿ ಭಾಷಣ ಬಿಗಿಯುತ್ತಿದ್ದಿರಬಹುದು. ಮಾನ್ಯ ಮಂತ್ರಿಗಳು ನಮಗೆ ವೋಲ್ವೊ ಸೇವೆ ನೀಡದಿದ್ದರೆ ಚಿಂತೆಯಿಲ್ಲ, ಇರುವ ಬಸ್ಸುಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಿ. ಜನರ ಜೀವಗಳೊಡನೆ ಚಕ್ಕಂದ ಆಡದಿರಲಿ. ಬಸ್ಗಳ ದೋಷಗಳಿಂದ ಸಾಕಷ್ಟು ಅಪಘಾತವಾಗುತ್ತಿವೆಯೆಂಬ ವಾಸ್ತವವನ್ನು ಸುಭದ್ರ ಐಷಾರಾಮಿ ಕಾರುಗಳಲ್ಲಿ ಸಂಚರಿಸುವ ಸಚಿವರು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಲಿ.

ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment