ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ವಿಧಾನಮಂಡಲದ ಮತ್ತು ಸಂಸತ್ತಿನ ಕಲಾಪಗಳನ್ನು ಖರ್ಚಿನ ಹಿನ್ನೆಲೆಯಲ್ಲಿ ವಿಶ್ಲೇಷಿಸುವದನ್ನು ನಾನು ಒಪ್ಪುವುದಿಲ್ಲ. 'ಕಲಾಪಗಳಿಗೆ ತೆರಿಗೆದಾರರ ಕೋಟ್ಯಂತರ ರೂಪಾಯಿ ಹಣ ವ್ಯಯವಾಗುತ್ತದೆ, ಜನಪ್ರತಿನಿಧಿಗಳ ಸಂಬಳ-ಭತ್ಯೆಗಳು ಹಲವು ಕೋಟಿ ರೂಪಾಯಿಗಳಾಗುತ್ತವೆ' ಎಂಬಿತ್ಯಾದಿ ಟೀಕೆ ಸರಿಯಲ್ಲ. ಇಡೀ ದೇಶವನ್ನಾಳುವ ಒಂದು ವ್ಯವಸ್ಥೆಯ ಮೇಲೆ ಇಷ್ಟು ಖರ್ಚಾಗುವುದು ಸಹಜವೇ. ಜನಪ್ರತಿನಿಧಿಗಳ ಸಂಬಳ-ಭತ್ಯೆಗಳು ನಿಯಮಬದ್ಧವೂ ನ್ಯಾಯಯುತವೂ ಅವಶ್ಯವೂ ಆಗಿರುವುದರಿಂದ ಅವು ಆಕ್ಷೇಪಾರ್ಹವೇನಲ್ಲ. ಮೇಲಾಗಿ, ಭಾರತದಂತಹ ಬೃಹತ್ ರಾಷ್ಟ್ರದ ಬೃಹತ್ತಾದ ತೆರಿಗೆ ಆದಾಯದಲ್ಲಿ ಶಾಸನಸಭೆಗಳ ಕಲಾಪಕ್ಕಾಗಿ ಮತ್ತು ಜನಪ್ರತಿನಿಧಿಗಳ ಸಂಬಳ-ಭತ್ಯೆಗಳಿಗಾಗಿ ಮಾಡಲಾಗುತ್ತಿರುವ ಖರ್ಚು ಭಾರಿಯೇನಲ್ಲ. ಖರ್ಚಿಗಿಂತ ಮಿಗಿಲಾದ ನಷ್ಟವೊಂದು ಬೇಜವಾಬ್ದಾರಿಯ ಜನಪ್ರತಿನಿಧಿಗಳಿಂದಾಗಿ ಈ ದೇಶದ ಪ್ರಜೆಗಳಿಗೆ ಉಂಟಾಗುತ್ತಿರುವುದು ಮಾತ್ರ ಕಳವಳದ ವಿಷಯ.
ಪ್ರಜೆಗಳಾದ ನಾವು ಕೇವಲ ತೆರಿಗೆ ಕಟ್ಟುತ್ತಿರುವುದು ಮಾತ್ರವಲ್ಲ, ದೇಶವನ್ನೇ ಈ ಜನಪ್ರತಿನಿಧಿಗಳಿಗೆ ಒಪ್ಪಿಸಿದ್ದೇವೆ. ನಮ್ಮ ಭವಿಷ್ಯವನ್ನು ಇವರ ಕೈಗಿತ್ತಿದ್ದೇವೆ. ಸದನದಲ್ಲಿ ಒಣಜಗಳ ಮತ್ತು ವೃಥಾ ಕಾಲಹರಣ ಮಾಡುವ ಮೂಲಕ ಈ ಜನಪ್ರತಿನಿಧಿಗಳು ನಮ್ಮ ಭವಿಷ್ಯದೊಡನೆ ಆಟವಾಡುತ್ತಿದ್ದಾರೆ. ದೇಶದ ಭವಿಷ್ಯದೊಡನೆ ಚೆಲ್ಲಾಟವಾಡುತ್ತಿದ್ದಾರೆ. ದೇಶದ ಸಮಸ್ಯೆಗಳನ್ನು ಪರಿಹರಿಸಿ ದೇಶವನ್ನು ಪ್ರಗತಿಪಥದತ್ತ ಮುನ್ನಡೆಸುತ್ತಾರೆಂಬ ವಿಶ್ವಾಸದಿಂದ ನಾವು ಇವರನ್ನು ಆರಿಸಿ ಕಳಿಸಿದರೆ ಇವರು ದೇಶವನ್ನು ಮರೆತು ಸದನದಲ್ಲಿ ಸ್ವಹಿತಾಸಕ್ತಿ ಮತ್ತು ಸ್ವಪ್ರತಿಷ್ಠೆಗಳಿಗಾಗಿ ಕಾದಾಡುತ್ತಿದ್ದಾರೆ. ಇಷ್ಟು ದೊಡ್ಡ ದೇಶವನ್ನು ಮುನ್ನಡೆಸಬೇಕಾದ ಹೊಣೆ ತಮ್ಮದಾಗಿರುವಾಗ ಮತ್ತು ದೇಶವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳನ್ನು ಪರಿಹರಿಸುವ ಜವಾಬ್ದಾರಿ ತಮ್ಮಮೇಲಿರುವಾಗ ಸದನದಲ್ಲಿ ತಮ್ಮ ಒಂದೊಂದು ಕ್ಷಣವೂ ಅಮೂಲ್ಯ ಎಂಬ ಕಲ್ಪನೆಯೇ ಈ ನಮ್ಮ ಜನಪ್ರತಿನಿಧಿಗಳಿಗೆ ಇದ್ದಂತಿಲ್ಲ.


ಕ್ಷುಲ್ಲಕ ವಿಷಯಗಳಿಗೆ ಹಾಗೂ ಒಣ ಪ್ರತಿಷ್ಠೆಗೆ ಸದನದ ಅರ್ಥಾತ್ ಆಡಳಿತದ ಅಮೂಲ್ಯ ಸಮಯವನ್ನು ಬಲಿಕೊಡುವ ಮೂಲಕ ಈ ತಥಾಕಥಿತ ಜನಸೇವಕರು ಈ ದೇಶದ ಕೋಟ್ಯಂತರ ಪ್ರಜೆಗಳಿಗೆ ವಂಚನೆಗೈಯುತ್ತಿದ್ದಾರೆ. ಈ ವಂಚನೆಯು ನನ್ನ ಅಭಿಪ್ರಾಯದಲ್ಲಿ ದೇಶದ್ರೋಹಕ್ಕೆ ಸಮಾನ. ಗಣಿ ಹಗರಣವೇನೋ ದೊಡ್ಡ ವಿಷಯವೇ. ಆದರೆ ಅದಕ್ಕೊಂದು ಅಂತ್ಯ ಕಾಣಿಸಲು ಕ್ರಮಬದ್ಧ ವಿಧಾನಗಳಿವೆ. ಆದರೆ, ಸಮಸ್ಯೆಯ ಅಂತ್ಯ ಯಾವ ರಾಜಕಾರಣಿಗೂ ಬೇಕಿಲ್ಲ. ಸಮಸ್ಯೆಗಳನ್ನು ನೆಪವಾಗಿಟ್ಟುಕೊಂಡು ಸ್ವಾರ್ಥಸಾಧನೆಗಿಳಿಯುವ ಈ ರಾಜಕಾರಣಿಗಳಿಗೆ ಸಮಸ್ಯೆಗಳು ಜ್ವಲಂತವಾಗಿದ್ದಷ್ಟೂ ಸಂತೋಷ! ಪರನಿಂದನೆಗಿದೊಂದು ಸದವಕಾಶ! ಈ ಅವಕಾಶವನ್ನುಪಯೋಗಿಸಿಕೊಂಡು ಇವರು ಸ್ವಹಿತ ಸಾಧನೆ ಮತ್ತು ಪರನಿಂದನೆಗಿಳಿದಾಗ ಸದನದಲ್ಲಿ ಮುಖ್ಯ ವಿಷಯ ಮೂಲೆಗುಂಪಾಗಿ, '...ಮಗನೇ,....ನೋಡ್ಕೋತೀನಿ....' ಮುಂತಾದ ಬಯ್ಗುಳಗಳೇ ರಾರಾಜಿಸುತ್ತವೆ. ಕಾದಾಟದಲ್ಲೇ ಕಾಲಹರಣವಾಗುತ್ತದೆ. ದೇಶ ಹಾಗೂ ದೇಶದ ಸಮಸ್ಯೆಗಳು ನಿಂತಲ್ಲೇ ನಿಂತಿರುತ್ತವೆ. ಈ ಪುಢಾರಿಗಳನ್ನು ನಂಬಿದ ಅಮಾಯಕ ಪ್ರಜೆ ಮೋಸಹೋಗಿರುತ್ತಾನೆ. ಈಗ ಆಗುತ್ತಿರುವುದು ಇದೇ.

ಈ ನಮ್ಮ ಪುಢಾರಿಗಳನ್ನು ಸರಿದಾರಿಗೆ ತರುವುದು ಹೇಗೆಂಬುದು ಪ್ರಶ್ನೆ. ಯಾವ ಕಾನೂನಿನಿಂದಲೂ ಈ ಕೆಲಸ ಸಾಧ್ಯವಿಲ್ಲ. ಏಕೆಂದರೆ, ಸದನದೊಳಗಿನ ನಡಾವಳಿಗೆ ಸಂಬಂಧಿಸಿದಂತೆ, ಕಾನೂನು ಕ್ರಮವೆಂಬ ಶಸ್ತ್ರದೆದುರು ಗುರಾಣಿಯಾಗಿ ಹಲವು ಬಗೆಯ ರಕ್ಷಣೆಯನ್ನೂ ಮತ್ತು ವಿನಾಯ್ತಿಗಳನ್ನೂ ಹೊಂದಿರುವವರು ಈ ಜನಪ್ರತಿನಿಧಿಗಳು. ನಾಡಿನ ಆಡಳಿತದ ಚುಕ್ಕಾಣಿ ಹಿಡಿದಿರುವ ಇವರಿಗೆ ಈ ರಕ್ಷಣೆ ಮತ್ತು ವಿನಾಯ್ತಿಗಳು ದೊರೆಯಬೇಕಾದ್ದೇ. ಇಲ್ಲದಿದ್ದರೆ ಆಡಳಿತ ನಡೆಸುವುದೇ ಇವರಿಗೆ ದುಸ್ತರವಾದೀತು. ಆದರೆ, ಈ ರಕ್ಷಣೆ ಮತ್ತು ವಿನಾಯ್ತಿಗಳನ್ನು ದುರುಪಯೋಗಪಡಿಸಿಕೊಂಡು, ಶಿಸ್ತೆಂಬುದನ್ನೇ ಮರೆತು, ಸದನದ ಅಮೂಲ್ಯ ಸಮಯವನ್ನು ಇವರು ಕಾದಾಟಗಳಲ್ಲಿ ಹಾಳುಮಾಡುತ್ತಿದ್ದಾರಲ್ಲಾ, ಇವರನ್ನು ಹಾಗಾದರೆ ಸರಿದಾರಿಗೆ ತರುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ನಾವು ಈ ಜನಪ್ರತಿನಿಧಿಗಳ ದುರ್ವರ್ತನೆಯ ಹಿಂದಿನ ಪ್ರೇರಕ ಶಕ್ತಿ ಏನೆಂಬುದನ್ನು ಮೊದಲು ಅರಿಯಬೇಕಾಗಿದೆ.

ಅರಿತು, ಆ ಪ್ರೇರಕ ಶಕ್ತಿಯು ಸದನದಲ್ಲಿ ಹೆಡೆಯಾಡಿಸದಂತೆ ನಾವು ನೋಡಿಕೊಳ್ಳಬೇಕಾಗಿದೆ. ಅಧಿಕಾರ ದಾಹ, ಧನ ದಾಹ, ಅಧಿಕಾರ ಮದ, ಧನ ಮದ ಈ ನಾಲ್ಕು ಅಂಶಗಳೇ ಜನಪ್ರತಿನಿಧಿಗಳ ದುರ್ವರ್ತನೆಗೆ ಪ್ರಮುಖ ಪ್ರೇರಕ ಶಕ್ತಿಗಳಾಗಿವೆ. ಅಧಿಕಾರ ಬೇಕೆಂದು, ಐಶ್ವರ್ಯ ಬೇಕೆಂದು, ಅಧಿಕಾರ ಇದೆಯೆಂದು ಮತ್ತು ಐಶ್ವರ್ಯ ಇದೆಯೆಂದು ಈ ಪುಢಾರಿಗಳು ಸದನದಲ್ಲಿ ಸೊಕ್ಕಿನ ದುರ್ವರ್ತನೆ ಮೆರೆಯುತ್ತಾರೆ. ಗಣಿ ಹಗರಣದ ವಿಷಯದಲ್ಲಿ ಆದದ್ದು ಇದೇ. ಮತದಾರರಾದ ನಾವು ಈ ಸೂಕ್ಷ್ಮವನ್ನು ಗಮನಿಸಬೇಕು ಹಾಗೂ ಮನದಲ್ಲಿ ನೋಟ್ ಮಾಡಿಕೊಳ್ಳಬೇಕು. ಚುನಾವಣೆಯ ಸಂದರ್ಭದಲ್ಲಿ ಇದಕ್ಕೆ ತಕ್ಕ ಮದ್ದು ಅರೆಯಬೇಕು. ದುಡ್ಡು ಚೆಲ್ಲುವವರಿಗೆ ಮತ್ತು ದುಡ್ಡಿಗಾಗಿ ಹಾಗೂ ಅಧಿಕಾರಕ್ಕಾಗಿ ಹಾತೊರೆಯುವವರಿಗೆ ಮತ ನೀಡಬಾರದು. ಅಕ್ರಮವಾಗಿ ಸಂಪಾದಿಸಿದ ಹಣದಿಂದ ಗೆಲ್ಲಲೆತ್ನಿಸುವವರಿಗಂತೂ ಮತ ನೀಡಲೇಬಾರದು. ಯೋಗ್ಯರು ಚುನಾವಣೆಗೆ ನಿಲ್ಲಬೇಕು, ಯೋಗ್ಯರಿಗೆ ನಾವು ಮತ ನೀಡಬೇಕು. ಸದನದ ಕಾರುಬಾರನ್ನು ಸರಿದಾರಿಗೆ ಹಚ್ಚಲು ಇದೊಂದೇ ಮಾರ್ಗ. ಸದನದೊಳಗೆ ಯೋಗ್ಯರಿದ್ದಲ್ಲಿ ನಡಾವಳಿಗಳು ತಂತಾನೇ ಯೋಗ್ಯವಾಗಿರುತ್ತವೆ. ಆದ್ದರಿಂದ, ಎಂದೂ ಸರಿಹೋಗದ, ಆತ್ಮಸಾಕ್ಷಿಯೆಂಬುದೇ ಇರದ, ದುಃಸ್ವಾರ್ಥವೇ ಮೈವೆತ್ತಂತಿರುವ ಮತ್ತು ಐಶ್ವರ್ಯಾಧಿಕಾರಿಗಳೇ ಮುಖ್ಯವಾಗಿರುವ ವ್ಯಕ್ತಿಗಳನ್ನು ಆರಿಸಿ ಅನಂತರ ಅವರನ್ನು ಬರಿದೆ ಬಯ್ದಾಡುವ ಬದಲು ನಾವು ಯೋಗ್ಯರನ್ನು ಆರಿಸಿ ಸದನಕ್ಕೆ ಕಳಿಸಬೇಕಾಗಿದೆ. ಮುಂದಿನ ಚುನಾವಣೆಯಲ್ಲಾದರೂ ಈ ಕೆಲಸ ಮಾಡೋಣ.

ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment