ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಷ್ಟ್ರ - ಅಂತಾರಾಷ್ಟ್ರ

ನನ್ನ ಬಾಲ್ಯದಿಂದ ಹಿಡಿದು ಈಗಿನ ವರೆಗೆ ಅಂದರೆ ಸುಮಾರು ಮೂವತ್ತಾರು ವರುಷಗಳ ಅವಧಿಯಲ್ಲಿ ಹಲವಾರು ಗಣ್ಯರೊಂದಿಗೆ ಬೆರೆತು ,ಒಡನಾಡಿದ್ದೇನೆ.ನಮ್ಮ ತಂದೆಯವರ ಸಾಹಿತ್ಯ ಕೃಷಿ ಮತ್ತು ನನ್ನ ವೈಯಕ್ತಿಕ ಆಸಕ್ತಿ ಇದಕ್ಕೆಲ್ಲ ಕಾರಣ ವೆಂದು ಹೇಳಬಹುದು.ಕೆಲವರು ನಾಡಿನ ಹೆಸರಾಂತ ಕಲಾವಿದರು,ಮತ್ತೆ ಕೆಲವರು ಸಾಹಿತಿಗಳು, ವಿಜ್ಞಾನಿಗಳು, ವೈದ್ಯರು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳು.ಇವರಲ್ಲಿ ಕೆಲವಷ್ಟು ಗಣ್ಯರು ನನ್ನಮೇಲೆ ಪರಿಣಾಮ ಬೀರಿದ್ದಾರೆ.ಹಲವಾರು ವರುಷಗಳಿಂದ ಇಬ್ಬರ ಬಗ್ಗೆ ಕೇಳಿ ತಿಳಿದಿದ್ದೆ, ಓದಿ ತಿಳಿದಿದ್ದೆ.ದಕ್ಷ ಆಡಳಿತ ,ಕನ್ನಡ ಸಂಸ್ಕೃತಿ ಯಲ್ಲಿನ ಪ್ರೇಮ ಮತ್ತು ಕನ್ನಡ ನಾಡಿನ ಮೇಲಿನ ಪ್ರೇಮ ಕ್ಕೆ ಹೆಸರಾದವರು.ಎಲ್ಲೇ ಇದ್ದರು ಸುಗಂಧವನ್ನು ಪಸರಿಸುವ ಕುಸುಮದ ಹಾಗೆ ತಮ್ಮ ವ್ಯಕ್ತಿತ್ವ ದಿಂದ ಬೇರೆಯವರಿಗೆ ಮಾದರಿಯಾಗಬಲ್ಲ ಸಹೋದರರು ಮನು ಬಳಿಗಾರ್ ಮತ್ತು ವಿ ಪಿ ಬಳಿಗಾರ್.
ಇತ್ತೀಚಿಗೆ ಕರ್ನಾಟಕ ಸರಕಾರದ ಜಾಗತಿಕ ಭಂಡ ವಾಳ ಹೂಡಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ ವಿ ಪಿ ಬಳಿಗಾರ್ ಬಗ್ಗೆ ನನ್ನ ಮಿತ್ರರಾದ ಡಾ.ಬಿ .ಆರ್ .ಶೆಟ್ಟಿ ಯವರು ಅಬುಧಾಬಿಯಲ್ಲಿ ಹೇಳಿದ ಮಾತು ಅಕ್ಷರಶಃ ಸತ್ಯ. "ನನ್ನ ಅನುಭವದಲ್ಲಿ ಇಲ್ಲಿಯವರೆಗೆ ಇಂತಹ ಒಬ್ಬ ಸಮರ್ಥ ಅಧಿಕಾರಿಯನ್ನು ನೋಡಿಲ್ಲ.ಉದ್ಯಮಿಗಳಿಗೆ ಸಂಪೂರ್ಣ ಮಾಹಿತಿ ನೀಡಬಲ್ಲ ,ಸರ್ಕಾರದ ನಿರ್ಧಾರಗಳನ್ನು ಬಹು ಶೀಘ್ರವಾಗಿ ಪ್ರಕಟಿಸ ಬಲ್ಲ ವಿ ಪಿ ಬಳಿಗಾರ್ ಉತ್ತಮ ಕಾರ್ಪರೆಟ್ ಸಿ ಇ ಓ ನಂತೆ ಕೆಲಸ ಮಾಡಿದ್ದಾರೆ.ಹಾಗಾಗಿ ನಾನು ಕೂಡ ಕರ್ನಾಟಕದಲ್ಲಿ ಭಂಡವಾಳ ಹೂಡಲು ಮುಂದೆ ಬಂದಿದ್ದೇನೆ " ಎಂದು.ದೂರ ದರ್ಶನದಲ್ಲಿ ನಾನು ಕೂಡ ಅವರ ಕಾರ್ಯ ವೈಖರಿಯನ್ನು ನೋಡಿ ಮೆಚ್ಚಿದ್ದೇನೆ.

ನನ್ನ ಇನ್ನೊಬ್ಬ ಆಪ್ತ ಮಿತ್ರರಾದ ಮೇಯರ್ ಡಾ ನೀರಜ್ ಪಾಟೀಲ್ ರವರು ಮನು ಬಳಿಗಾರ್ ರವರನ್ನು ಅತಿಥಿಯಾಗಿ ಲಂಡನ್ನಿಗೆ ಕರೆಸಿ ಕೊಂಡಿದ್ದರು.ಆ ಪ್ರಯುಕ್ತ ಅಮೆರಿಕ ದಲ್ಲಿ ನಾವಿಕ ಕನ್ನಡ ಸಮ್ಮೇಳನ ಮುಗಿಸಿ ಹಿಂತಿರುಗುತ್ತಿದ್ದ ಮನು ಬಳಿಗಾರ್ ರವರನ್ನು ಹೀತ್ರೌ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಭಾಗ್ಯ ನನ್ನದಾಯಿತು.ಅವರನ್ನು ನೋಡುವ ಮೊದಲು ಯಾವುದೊ ರೀತಿಯ ಆತಂಕ ನನ್ನದಾಗಿತ್ತು.ಯಾಕೆಂದರೆ ಹತ್ತು ವರುಷದ ಅವಧಿಯಲ್ಲಿ ಹೀತ್ರೌ ವಿಮಾನ ನಿಲ್ದಾಣದಲ್ಲಿ ಅದೆಷ್ಟೋ ಗಣ್ಯರನ್ನು ನಾನು ಬರಮಾಡಿಕೊಂಡಿದ್ದೆ.ಅವರಲ್ಲಿ ಹೆಚ್ಚಿನವರು ದೊಡ್ಡತನವನ್ನು ತೋರಿಸುವ ದೊಡ್ಡ ಮಂಡೆಯವರು.(ನನ್ನದು ಕೂಡ ದೊಡ್ಡ ಮಂಡೆ-ಬೊಕ್ಕ ತಲೆ ).ಹಾಗಾಗಿ ಇವರು ಕೂಡ ಹೆಸರು ಮಾಡಿದ , ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರು ,ಭಾರಿ ದೊಡ್ಡ ಮಂಡೆ ಎಂದು ತಿಳಿದಿದ್ದೆ.ವಿಮಾನ ನಿಲ್ದಾಣದಲ್ಲಿ ನೋಡಿದ ತಕ್ಷಣ ಇವರಿಗೆ ಪುಷ್ಪ ಗುಚ್ಚವನ್ನು ನೀಡಿ ಇಡಿರುಗೊಂಡೆ ಮತ್ತು ಅವರ ಚೀಲವನ್ನು ಹಿಡಿದು ಕೊಂಡೆ ಪಾಪ ಅವರಿಗೆ ಮುಜುಗರವಾಯಿತು. ತಮ್ಮ ಚೀಲವನ್ನು ನನಗೆ ತೆಗೆದು ಕೊಳ್ಳಲು ಬಿಡಲೇ ಇಲ್ಲ.ನನ್ನ ಕಾರಿನಲ್ಲಿ ಕೂರಿಸಿ ಫಾರ್ನ್ಬರ ದಲ್ಲಿರುವ ನನ್ನ ಗೂಡಿಗೆ ಇವರನ್ನು ಕರೆದು ಕೊಂಡು ಹೊರಟೆ.

ಕಾರಿನಲ್ಲಿ ನಿಧಾನವಾಗಿ ಮಾತಿಗಿಳಿದೆ.ಅವರು ಕೂಡ ನನ್ನೊಂದಿಗೆ ಮಾತನಾಡಲು ಆರಂಭಿಸಿದರು. ನನ್ನ ಸಾಹಿತ್ಯದ ಆಸಕ್ತಿಯನ್ನು ಅವರ ಮುಂದಿಟ್ಟೆ. ಅಷ್ಟು ಹೇಳಿದ್ದ ತಡ ಅವರಿಗೆ ಸಂತಸ ವಾಯಿತು.ಪರವಾಗಿಲ್ಲ ನೀವು ಇಂಗ್ಲೆಂಡಿನಲ್ಲಿ ದ್ದರೂ ಕನ್ನಡ ಕಾರ್ಯಕ್ರಮ ಗಳನ್ನು ಆಯೋಜಿಸುವುದು ,ಯಕ್ಷಗಾನ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಚಾರ ಎಂದರು.

ಅಲ್ಲಿಗೆ ಮನೆ ಬಂತು .ಮನೆಯಲ್ಲಿ ಅವರು ಕೇವಲ ಎರಡು ತಾಸು ಇದ್ದರು ಅಷ್ಟರೊಳಗೆ ನನ್ನ ತಂದೆಯವರ ಸಾಹಿತ್ಯ ಕೃಷಿಯ ಬಗ್ಗೆ ತಿಳಿದು ಕೊಂಡರು. ಗೋಡೆಯಲ್ಲಿ ತಗುಲು ಹಾಕಿದ್ದ ನನ್ನ ಯಕ್ಷಗಾನದ ಫೋಟೋ ಗಳನ್ನು ನೋಡಿದರು.ಆಮೇಲೆ ಮನೆಯಿಂದ ಹೊರಡುವಾಗ ತಮ್ಮ ಚೀಲದಿಂದ ಅಮೆರಿಕದಿಂದ ಒಂದು ಸುಂದರವಾದ ಅಂಗಿಯನ್ನು ತೆಗೆದು ನನ್ನ ಧರ್ಮ ಪತ್ನಿಗೆ ಇತ್ತರು. ಇದು ನನ್ನ ಹೆಂಡತಿಯ ಮನದಲ್ಲಿ ಆನಂದ ತಂದಿತು.

ಆಗ ನೆನಪಾದದ್ದು ಬಾಲ್ಯದಲ್ಲಿ ಓದಿದ ಇಳೆ ಯಾಂಡ ಗುಡಿಮಾರರ ರಗಳೆ.ಇಳೆ ಯಾಂಡ ಗುಡಿಮಾರ ಒಬ್ಬ ದೊಡ್ಡ ದಾನಿ ,ತ್ಯಾಗಿ .ತನ್ನೆಲ್ಲ ಸುಖ ವನ್ನು ಇನ್ನೊಬ್ಬರ ಜೀವನಕ್ಕೆ ಮುಡಿಪಾಗಿಟ್ಟ ಒಬ್ಬ ಆದರ್ಶ ಜೀವಿ.ಕೊನೆಗೊಂದು ದಿನ ಮನೆಯಲ್ಲಿರುವುದೆಲ್ಲ ಖಾಲಿಯಾಗಿ ಎರಡು ಅಗುಳು ಅನ್ನ ಮಾತ್ರ ಉಳಿದಿತ್ತು.ಅದನ್ನು ತಾನು ,ತನ್ನ ಕುಟುಂಬವು ಸೇರಿ ಊಟ ಮಾಡುವ ಎಂದು ನಿರ್ಧರಿಸಿದಾಗ ಒಬ್ಬ ಭಿಕ್ಷುಕ ಬಂದು ಊಟ ಕೇಳಿದಾಗ ಉಳಿದೆರಡು ಅಗುಳನ್ನು ಆತ ಆ ಭಿಕ್ಷು ಕನಿಗೆ ನೀಡುತ್ತಾನೆ.ಆ ಭಿಕ್ಷುಕ ನೆ ಶಿವ ನಾಗಿ ಪ್ರತ್ಯಕ್ಷನಾಗುತ್ತಾನೆ.

ಇಲ್ಲಿ ಯಾಕೆ ಈ ಕಥೆಯನ್ನು ಹೇಳಿದೆ ಎಂದರೆ ಮನು ಬಳಿಗಾರ್ ತಮ್ಮ ಕುಟುಂಬದ ಸದಸ್ಯರಿಗೆ ಎಂದು ಅಮೇರಿಕಾದಲ್ಲಿ ತೆಗೆದು ಕೊಂಡಿದ್ದ ಅಂಗಿಯನ್ನು ನನ್ನ ಧರ್ಮ ಪತ್ನಿಗೆ ಕೊಟ್ಟದ್ದು.ನನ್ನ ಧರ್ಮ ಪತ್ನಿಯಲ್ಲಿ ಬಳಿಗಾರ್ ತಮ್ಮ ಮಗಳ ನ್ನು ಕಂಡದ್ದು.ನನ್ನ ಕಣ್ಣಂಚಿನಲ್ಲಿ ನೀರು ತಂದಿತು .ಇದು ಅವರ ವ್ಯಕ್ತಿತ್ವವನ್ನು ಪ್ರಕಟಿಸುವ ಒಂದು ಸಣ್ಣ ಉದಾಹರಣೆ.ಹತ್ತು ಹಲವಾರು ಗಣ್ಯರು ಇಂಗ್ಲೆಂಡಿಗೆ ಬರುತ್ತಾರೆ.ನಮ್ಮೊಂದಿಗಿರುತ್ತಾರೆ.ಕೊನೆಯಲ್ಲಿ ಹೊರಡುವಾಗ ನಮಗೊಂದು ಥಾಂಕ್ಸ್ ಕೂಡ ಹೇಳಲು ನೆನಪಾಗದವರಿದ್ದಾರೆ.

ಆಮೇಲೆ ಮನೆಯಿಂದ ಹೊರಟು ನನ್ನ ಸ್ನೇಹಿತ ಸಂಪತ್ ರವರ ಮನೆಗೆ ಐದು ನಿಮಿಷ ಭೇಟಿಯಿತ್ತು ನೀರಜ್ ರವರ ಮನೆಯ ಕಡೆ ಹೊರಟೆವು.ಕಾರಿನಲ್ಲಿ ಸುಮಾರು ಒಂದು ಘಂಟೆ ಪ್ರಯಾಣ. ಆಗ ಹಲವಾರು ವಿಷಯಗಳ ಬಗ್ಗೆ ಮಾತನಾಡಿದೆವು. ಭಕ್ತಿ ಭಂಡಾರಿ ಬಸವಣ್ಣ ನ ವಚನ ,ಕುಮಾರ ವ್ಯಾಸನ ಷಟ್ಪದಿ ,ಸರ್ವಜ್ಞನ ತ್ರಿಪದಿ ಮೊದಲಾದವುಗಳು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿ ಇರುವುದು ನಿಜವಾಗಿಯೂ ಸಾರ್ಥಕ ಎಂದೆನಿಸಿತು.ಯಾಕೆಂದರೆ ನಾನು ಇಂಗ್ಲೆಂಡಿಗೆ ಬರುವ ಪೂರ್ವದಲ್ಲಿ ಹಲವಾರು ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳೊಂದಿಗೆ ವ್ಯವಹರಿಸಿದ್ದೇನೆ.ಅವರಿಗೆಲ್ಲ ಕುಮಾರ ವ್ಯಾಸ ,ಷಟ್ಪದಿ ,ಕಾವ್ಯ ಎಂಬುದು ಹೊಸ ಶಬ್ದ ದಂತೆ ತೋರುತ್ತಿತ್ತು.

ಅಲ್ಲಿಂದ ನೇರವಾಗಿ ಲಾಂಬೆತ ನಗರದಲ್ಲಿ ಮೇಯರ್ ಡಾ .ನೀರಜ್ ಪಾಟಿಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಿಸಿದರು.ಆ ಶಾಲೆ ಇಂಗ್ಲೆಂಡಿನ ರಾಜ ಕುಟುಂಬದ ಆಡಳಿತಕ್ಕೆ ಒಳಪಟ್ಟ ಶಾಲೆ .ಅಲ್ಲಿ ಶಾಲಾ ಅಧ್ಯಾಪಕರೊಂದಿಗೆ ,ಮಕ್ಕಳೊಂದಿಗೆ ಬೆರೆತು ಶಾಲೆಯ ಬಗ್ಗೆ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿದರು.ಶಾಲೆಯು ಸಣ್ಣ ಮಾಹಿತಿ ತಂತ್ರಜ್ಞಾನ ಸಂಸ್ಥೆಯಂತಿದೆ ಎಂದು ಬಣ್ಣಿ ಸಿದರು.ಇದೆ ರೀತಿಯ ಶಾಲೆಗಳು ನಮ್ಮ ದೇಶದ ಹಳ್ಳಿಗಳಲ್ಲಿರ ಬೇಕೆಂದು ಆಶಯಿಸಿದರು.

ನೀರಜ್ ಮನೆಯ ಹಿತ್ತಿಲ ತೋಟದಲ್ಲಿ ಕುಳಿತು ಊಟ ಮಾಡುತ್ತಿರುವಾಗ ಇಂಗ್ಲೆಂಡಿನ ಇತಿಹಾಸದ ಬಗ್ಗೆ ಹಲವಾರು ಮಾಹಿತಿಗಳನ್ನು ನಮಗೆ ತಿಳಿಸಿದರು.ನಾವು ಇಂಗ್ಲೆಂಡಿನಲ್ಲಿ ಇದ್ದು ನಮಗೆ ತಿಳಿಯದ ವಿಚಾರಗಳು.ಇದು ಅವರಿಗಿರುವ ಜ್ಞಾನ ದಾಹದ ಕಿರು ಪರಿಚಯ.

ನೀರಜ್ ರವರು ಮಾತನಾಡುತ್ತ ಕುಮಾರ್ ಕನ್ನಡ ಪ್ರೇಮಿ ,ಯಕ್ಷಗಾನ ಕಲಾವಿದ ,ಸಾಹಿತ್ಯ ಪ್ರೇಮಿ ತುಂಬಾ ವರುಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಬೇಕೆಂದು ಉತ್ಸುಕರಾಗಿದ್ದಾರೆ ಎಂದ ಕ್ಷಣವೇ ಬಳಿಗಾರ್ ರವರು ಖಂಡಿತವಾಗಿಯೂ ಮಾಡಿ ನಾನು ಕರ್ನಾಟಕ ಸರಕಾರದಿಂದ ಎಲ್ಲ ರೀತಿಯ ಸಹಾಯವನ್ನು ಕೊಡಿಸುತ್ತೇನೆ. ಸರಕಾರ ನೂರ ಎಪ್ಪತ್ತೈದು ಕೋಟಿ ಹಣವನ್ನು ನಮ್ಮ ಇಲಾಖೆಗೆ ಕೊಟ್ಟಿದೆ ಅದನ್ನು ಸದ್ವಿನಿಯೋಗಿಸುವುದು ನನ್ನ ಕರ್ತವ್ಯ ಎಂದು.ಈ ಮಾತು ಅವರ ಪಾರದರ್ಶಕತೆಗೆ ಸಾಕ್ಷಿ.ನಮ್ಮ ದೇಶದಲ್ಲಿ ಎಷ್ಟು ಜನ ಅಧಿಕಾರಿಗಳು ತಮ್ಮ ಸಂಸ್ಥೆಯಲ್ಲಿ ಇಷ್ಟು ಹಣ ವಿದೆ ಎಂದು ಹೇಳಿಕೊಳ್ಳುತ್ತಾರೆ?

ಆಮೇಲೆ ಅವರನ್ನು ಬಿಟ್ಟು ನಾನು ಮನೆಯ ಕಡೆಗೆ ಹೋದೆ.ಮರುದಿನ ಪುನಃ ಬ್ರಿಟನಿನ ಸಂಸದೀಯ ಭವನ ,ರಾಣಿಯ ಅರಮನೆ ಮೊದಲಾದ ಸ್ಥಳಗಳನ್ನು ವೀಕ್ಷಿಸಿದೆವು.

ಮರುದಿನ ಬೆಳಿಗ್ಗೆ ಅವರು ವಿಮಾನವೇರಿ ಬೆಂಗಳೂರನ್ನು ತಲುಪಿ ನಮಗೆ ದೂರವಾಣಿಯಲ್ಲಿ ಕೃತಜ್ಞತೆಯನ್ನು ಸಲ್ಲಿಸಿ ಎರಡೆ ದಿನದಲ್ಲಿ ತಮ್ಮ ಪ್ರವಾಸ ಕಥನವನ್ನು ಪತ್ರಿಕೆಯಲ್ಲಿ ಪ್ರಕಟಿಸಿರುವುದು ನಿಜವಾಗಿಯೂ ಅವರ ಕರ್ತವ್ಯ ಪ್ರಜ್ಞೆಯನ್ನು ಮೆರೆಸುತ್ತದೆ.ಇಂತಹ ಅಧಿಕಾರಿಗಳು ನಮ್ಮ ದೇಶದಲ್ಲಿರುವುದು ಬಹು ಅಪರೂಪ.ಕಾಯಕವೇ ಕೈಲಾಸವೆಂದ ಬಸವಣ್ಣ ನವರ ತತ್ವ ವನ್ನು ಸಂಪೂರ್ಣವಾಗಿ ಆಚರಿಸುವ ಶ್ರಮ ಜೀವಿ.ನುಡಿದಂತೆ ನಡೆಯುವ ಅಧಿಕಾರವನ್ನು ಕಾಯಕವೆಂದು ಮಾಡುವ ಸ್ನೇಹ ಜೀವಿ, ಇವರಿಂದ ಇನ್ನೂ ಹೆಚ್ಚಿನ ಉತ್ತಮ ಕಾರ್ಯ ನಮ್ಮ ದೇಶಕ್ಕೆ,ನಮ್ಮ ಸಂಸ್ಕೃತಿಗೆ ,ನಮ್ಮ ಭಾಷೆಗೆ ಸಿಗಲಿ ಎಂದು ಹಾರೈಸುತ್ತೇನೆ.ಇವರ ಉತ್ತಮ ಕಾರ್ಯಕ್ರಮಗಳಲ್ಲಿ ಭಾಗಿ ಯಾಗಲು ನನಗಂತೂ ಪ್ರೇರೇಪಣೆ ಯಾಗಿದೆ,ಖಂಡಿತವಾಗಿಯೂ ಉತ್ಸುಕನಾಗಿದ್ದೇನೆ.

-ಕುಮಾರ ಕುಂಟಿಕಾನಮಠ , ಲಂಡನ್

0 comments:

Post a Comment