ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಉಡುಪಿ : `ಕೂರಿಗೆ' ಹೆದರಿ ಸೀರೆ ಉಡೋದು ಬಿಡೋಕೆ ಆಗುತ್ತಾ..? ಆದರೆ ಉಡುಪಿಯಲ್ಲಿ ಬುಸ್ಸಪ್ಪನಿಗೆ ಹೆದರಿ ಟೆಂಟ್ ಶಾಲೆಯೇ ಎತ್ತಂಗಡಿಯಾಗಿದ್ದಂತೂ ಸತ್ಯ! ಶಾಲೆ ಆಜು,ಬಾಜು ಹತ್ತಾರು ಮನೆಗಳಿವೆ. ಅದರಲ್ಲಿ ನೂರಾರು ಮಂದಿ ವಾಸವಾಗಿದ್ದಾರೆ. ಅವರ್ಯಾರಿಗೂ ತೊಂದರೆ ಕೊಡದ ನಾಗರ ಹಾವು ಟೆಂಟ್ ಶಾಲೆಗೆ ಬಂದು ಪಾಠ ಕೇಳುತ್ತೆ ನಮಸ್ತೆ ಸಾರ್..ಎನ್ನುತ್ತೆ ಅಂದರೆ ನಂಬೋದು ಹೇಗೆ?
ಕುಣಿಲಾರದೋಳು ನೆಲ ಡೊಂಕು ಅಂದಿದ್ಲಂತೆ. ಹಾಗೆ ಶಾಲೆ ಎತ್ತಂಗಡಿಗೆ ನಾಗರ ಹಾವು ನೆವ ಅಂತಾರೆ ಅಲೆಮಾರಿ ಕಾರ್ಮಿಕರು. ಒಟ್ಟಾರೆ ಮಕ್ಕಳು ಕಲಿಯಬೇಕು ಎಂಬ ಅಲೆಮಾರಿಕಾರ್ಮಿಕರ ಆಸೆಯೂ ಟೆಂಟ್ ಶಾಲೆ ಎತ್ತಂಗಡಿಯಿಂದ ಸುಟ್ಟುಬೂದಿಯಾಗಿದೆ.ಮಕ್ಕಳನ್ನು ದುಡಿಸಿಕೊಳ್ಳಬಾರದು ಅನ್ನುತ್ತೆ ಕಾನೂನು. ಹದಿನಾಲ್ಕು ವರ್ಷದ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಎನ್ನುತ್ತದೆ ಸರಕಾರ. ಆದರೆ ಟೆಂಟ್ ಶಾಲೆಯಲ್ಲಿ ಕಲಿತ ಮಕ್ಕಳ ಮೂಲಕವೇ ಶಿಕ್ಷಕರು ಮುಂದೆ ನಿಂತು ಶಾಲೆ ತರವುಗೊಳಿಸಿದ್ದು ಮತ್ತೊಂದು ದುರಂತ!
ಎಲ್ಲಿತ್ತು ಟೆಂಟ್ ಶಾಲೆ : ಉಡುಪಿ ಮತ್ತು ಸಂತೆಕಟ್ಟೆಯ ನಡುವಿನ ನಿಟ್ಟೂರಿನಲ್ಲಿ ಟೆಂಟ್ ಶಾಲೆ ಸರಿ ಸುಮಾರು ದಶಕದಿಂದ ಕಾರ್ಯನಿರ್ವಹಿಸುತ್ತಿದೆ. ಅಲೆಮಾರಿ ಜನಾಂಗದ ಮಕ್ಕಳೂ ವಿದ್ಯಾವಂತರಾಗಬೇಕು ಎನ್ನುವ ನಿಟ್ಟಿನಲ್ಲಿ ಟೆಂಟ್ ಶಾಲೆ ತೆರೆಯಲಾಗಿದೆ. ಅದೂ ಕೋಳಿಗೋಡಿನಂತ ಕಟ್ಟಡದಲ್ಲಿ ತಗಡು ಮಾಡುಮಾಡಿ ಶಾಲೆ ತೆರೆಯಲಾಗಿದೆ.ಅಲೆಮಾರಿ ಜನಾಂಗದ ಚಳ್ಳೆಪಿಳ್ಳೆ ಎಲ್ಲಾ ಸೇರಿ ವಿವಿಧ ತರಗತಿಯಲ್ಲಿ ಸುಮಾರು 60 ಕ್ಕೂ ಮಿಕ್ಕ ಮಕ್ಕಳಿದ್ದರು. ಏಕಾಏಕಿ ನಾಗರ ಹಾವು ಶಾಲೆಗೆ ಬರುತ್ತದೆ ಎಂಬ ನೆವದಲ್ಲಿ ಶಾಲೆ ಕುಂದಾಪುರಕ್ಕೆ ಸ್ಥಳಾಂತರ. ಅಲೆಮಾರಿ ಜನಾಂಗದ ಕೆಲ ಮಕ್ಕಳು ಸಂತೆಕಟ್ಟೆ ಶಾಲೆ ಕಡೆ ಮುಖ ಮಾಡಿದ್ದಾರೆ. ಉಳಿದವರು ಟೆಂಟ್ ಮನೆಯಲ್ಲಿ ಸೂರು ನೋಡುತ್ತಿವೆ.

ಯಾಕಾಗಿ ಸ್ಥಳಾಂತರ : ಈಗಾಗಲೇ ಜಿಲ್ಲೆಯಲ್ಲಿ ಮಕ್ಕಳ ಕೊರತೆಯಿಂದ ಕೆಲ ಸರಕಾರಿ ಶಾಲೆಗಳು ದಿನಗಳ ಎಣಿಕೆಯಲ್ಲಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 97 ಸರಕಾರಿ ಶಾಲೆಗಳು ಹರೋಹರ. ಇದೆಲ್ಲಕ್ಕೂ ಕಾರಣ ವಿದ್ಯಾರ್ಥಿಗಳ ಕೊರತೆ. ಆದರೆ ಉಡುಪಿ ಟೆಂಟ್ ಶಾಲೆಗೆ ಮಕ್ಕಳ ಬರಬರಲಿಲ್ಲ. ಶಾಲೆ ಸ್ಥಳದಲ್ಲಿ ನಾಗನ ನಡೆಯಿದೆ. ಶಾಲೆಗೆ ಹಾವು ಬಂದು ಕೂರುತ್ತದೆ. ಮಕ್ಕಳು ನಾಗರಹಾವೇ.. ಹಾವಳ ಹೂವೇ.. ಎಂದರೆ ತಲೆಯಾಡುಸುತ್ತಾ ಕುಳಿತು ಬಿಡುತ್ತದೆ. ಹಾವನ್ನು ಕುಂತಲ್ಲಿಂದ ಸಾಗಹಾಕುವುದು ಕಷ್ಟ. ಹಾವೆಲ್ಲಾದರೂ ಮಕ್ಕಳಿಗೆ ಕಚ್ಚಿದರೆ ಕಷ್ಟ. ಎಂಬಲ್ಲಾ ಸಂಗತಿಗಳು ಶಾಲೆ ಎತ್ತಂಗಡಿಗೆ ಕಾರಣ.

ಹಾಗಂತ ಹಾವು ಇದೂವರಗೆ ಯಾರನ್ನೂ ಕಚ್ಚಿದ ಬಗ್ಗೆ ಉಲ್ಲೇಖವಿಲ್ಲ. ಬಟ್ಟಂಬಯಲಲ್ಲಿ ಟೆಂಟ್ ಹಾಕಿ ಹಗಲು ರಾತ್ರಿ ಕೂತ ಕಾರ್ಮಿಕರ ಗುಡಿಸಲು ನುಗ್ಗಿ ಬುಸ್ಸಪ್ಪ ತೊಂದರೆ ಕೊಟ್ಟಿಲ್ಲ. ಅದೂ ಹೊತ್ತಲ್ಲದ ಹೊತ್ತಿಗೆ ಶಾಲೆಗೆ ಬಂದು ಹಾವು ಸ್ಥಾಪನೆಯಾಗುತ್ತದೆ. ಅದರಿಂದ ತೊಂದರೆಯಾಗುತ್ತದೆ ಎಂದು ಶಾಲೆ ತೆರವು ಮಾಡಿದ್ದು ನ್ಯಾಯವಾ ಅಂತಾರೆ ಅಲೆಮಾರಿ ಜನಾಂಗ.

ದಕ್ಷಿಣ ಕನ್ನಡದಲ್ಲಿ ನಾಗರ ಹಾವಿಗೆ ವಿಷೇಶ ಸ್ಥಾನ ಮಾನವಿದೆ. ಅದಕ್ಕಾಗಿ ಲಕ್ಷಾಂತರ ಸುರಿದು ನಾಗ ಮಂಡಲ ಮಾಡಲಾಗುತ್ತದೆ. ಸತ್ತ ಹಾವು ಸಿಕ್ಕರೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡೋದು ಸುಳ್ಳಲ್ಲ. ಬೇಕಾದಷ್ಟು ಹಣ ಸುರಿದು ನಾಗನಿಗೆ ಗುಡಿ, ಗೋಪುರ ಕಟ್ಟೋರು ಇದ್ದಾರೆ. ನಾಗನ ಬಗ್ಗೆ ದಕ್ಷಿಣ ಕನ್ನಡ ಜನರಿಗೆ ವಿಶೇಷ ಭಯಭಕ್ತಿಯಿದೆ. ಹಾಗೆ ನಾಗನನ್ನು ಕೊಲ್ಲುವವರೂ ಇದ್ದಾರೆ. ಜೊತೆಗೆ ನಾಗರ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡೋರೂ ಇದ್ದಾರೆ. ನಾಗನನ್ನು ಕೊಂದರೆ ಪಾಪ ಅಂತ ಹೊಳಲಾಗಿದೆಯೇ ಹೊರತು ಹಿಡಿದು ಬೇರೆ ಸಾಗಿಸಿದರೆ ಪಾಪ ಅಂತ ಎಲ್ಲೂ ಯಾರೂ ಹೇಳಿಲ್ಲ. ನಾಗನ ಹಿಡಿದು ಹೆಡೆ ಮುಡಿಕಟ್ಟಿ ಬೇರೆಡೆ ಬಿಡೋ ಬದಲು ಶಾಲೆಯೇ ಸ್ಥಳಾಂತರ ವಾಗೋದು ಎಲ್ಲಾದರೂ ಉಂಟಾ! ಮನೆಗೆ ನಾಗರ ಹಾವು ಬಂತು ಅಂತ , ಮನೆ ಬಿಡೋಕೆ ಆಗುತ್ತಾ. ಈ ಸಣ್ಣ `ಲಾಜಿಕ್' ಶಿಕ್ಷಣ ಇಲಾಖೆ ಗಮನಕ್ಕೆ ಬಂದಿಲ್ವಾ?

ನಷ್ಟ ಮಕ್ಕಳಿಗೆ : ಟೆಂಟ್ ಶಾಲೆ `ರಿಮೂ' ಕೆಲಸ ನಡೆಸುತ್ತಿದ್ದ ಅಧ್ಯಾಪಕರು ಈ ಕನಸು ಜೊತೆಗೆ ಮಾತನಾಡಿ, ಶಾಲೆಗೆ ನಾಗರ ಹಾವುಬರುತ್ತದೆ. ಇದರಿಂದ ಶಾಲೆ ಮಕ್ಕಳಿಗೆ ತೊಂದರೆಯಾಗಬಹುದೆಂದು ಟೆಂಟ್ ಶಾಲೆ ಕುಂದಾಪುರಕ್ಕೆ ಸ್ಥಳಾಂತರ ಮಾಡುತ್ತಿದ್ದೇವೆ.

ಹಾವು ಪದೇ ಪದೇ ಬಂದು ತೊಂದರೆ ಕೊಡುತ್ತದೆ. ಶಾಲೆಯಿರುವ ಜಾಗದಲ್ಲಿ ನಾಗನ ನಡೆಯಿರಬೇಕು ಅನ್ಸುತ್ತೆ. ನಾಗನ ಉಸಾಬರಿಯಾಕೆ ಎಂಬ ಹಿನ್ನೆಲೆಯಲ್ಲಿ ಶಾಲೆ ತೆರವು ಮಾಡುತ್ತಿದ್ದೇವೆ ಎಂದು ನಿರ್ಲಿಪ್ತರಾಗಿ ಹೇಳುತ್ತಾರೆ. ಶಾಲೆ ತೆರೆವು ಮಾಡಿದರೆ ವಲಸೆ ಕಾರ್ಮಿಕರ ಮಕ್ಕಳ ಗತಿಯಂತೂ ಅಂದರೆ ಇಲ್ಲೇ ಹತ್ತಿರದಲ್ಲಿ ಶಾಲೆಯಿದೆ ಎಂದು ಸಮಜಾಯಿಸಿ ನೀಡುತ್ತಾರೆ.

ಸರಕಾರ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಹತ್ತು ಹಲವು ಯೋಜನೆ ಹಾಕಿಕೊಂಡಿದೆ. ಈ ಬಾರಿಯಂತೂ ಚಿಕ್ಕಪುಟ್ಟ ನೂನ್ಯತೆ ಹೊರತುಪಡಿಸಿದರೆ ಪಠ್ಯ ಪುಸ್ತಕ,ಸಮವಸ್ತ್ರ ಮತ್ತು ಬಿಸಿ ಊಟ ಯಶಸ್ವಿಯಾಗಿ ಆರಂಭಿಸಿದೆ. ಇದರೊಟ್ಟಿಗೆ ಇಂಥಹಾ ಅಪಸೌವ್ಯಗಳು ನಡೆಯುತ್ತಿದೆ. ಇದಕ್ಕೆ ಹೊಣೆಯಾರು? ಶಿಕ್ಷಣ ಸಚಿವರು ಇತ್ತ ಗಮನಹರಿಸಬೇಕಾಗಿದೆ. ಮಾಹಾ ತಂತ್ರಗಾರ ಕಡಗೋಲ ಕೃಷ್ಣನ ನಾಡಲ್ಲಿ ಹಾವಿಗೆ ಮದ್ದರೆಯಾಲಾಗದೆ ಟೆಂಟ್ ಶಾಲೆಯನ್ನೇ ಎತ್ತಂಗಡಿ ಮಾಡುತ್ತಾರೆ ಅಂತಾದ್ರೆ ಅದಕ್ಕಿಂತ ಶೇಮ್ ಮತ್ತೊಂದಿಲ್ಲ.

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment