ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮೂರ್ಖರಾಗಲು ಸಿದ್ಧವಾಗಿರುವವರು ಇರುವವರೆಗೂ ಈ ಜಗತ್ತಿನಲ್ಲಿ ಅಂಥವರನ್ನು ಮೂರ್ಖರನ್ನಾಗಿಸಿ ಕಾಸುಮಾಡಿಕೊಳ್ಳುವ ಜಾಣರೂ ಇದ್ದೇಇರುತ್ತಾರೆ. ಅಂಥ ಕೆಲವು ಜಾಣರು ಇಂದು ಟಿವಿ ಪೆಟ್ಟಿಗೆಗಳೊಳಗೆ ತೂರಿಕೊಂಡಿದ್ದಾರೆ. ತಮ್ಮ ಸ್ವಂತ ಭವಿಷ್ಯವನ್ನೇ ಅರಿಯದ ಇವರು ಜಗತ್ತಿನ ಭವಿಷ್ಯವನ್ನು ತಿಳಿಸುವ ಪೋಸು ಕೊಡುತ್ತಿದ್ದಾರೆ! ಕಣ್ಣು ಕೋರೈಸುವ ಉಡುಗೆ, ಗಮನ ಸೆಳೆಯುವ ಗ್ರಹ-ದೇವತೆಗಳ ಚಿತ್ರಗಳು, ಎಲ್ಲೆಲ್ಲಿಂದಲೋ ಹೆಕ್ಕಿ ತಂದ ಒಂದಷ್ಟು ಸಂಸ್ಕೃತ ಸಾಲುಗಳನ್ನು ಒಳಗೊಂಡ ವಿಚಿತ್ರ ಮಾತುಗಳು ಮತ್ತು ವಿಪರೀತ ಗತ್ತು ಇವೇ ಈ ಜ್ಯೋತಿಷಿಗಳ ಬಂಡವಾಳ. ಈ ಸಾಧನಗಳಿಂದ ವೀಕ್ಷಕರನ್ನು ವಶೀಕರಿಸಿಕೊಂಡು ಈ ಜಾಣರು ತಮ್ಮ ಅಬದ್ಧನುಡಿಗಳನ್ನೆಲ್ಲ ಅಮಾಯಕ ವೀಕ್ಷಕರು ನಂಬುವಂಥ ವಾತಾವರಣ ಸೃಷ್ಟಿಸಿಬಿಡುತ್ತಾರೆ. ವೀಕ್ಷಕರನ್ನು ಇನ್ನಷ್ಟು ಮೆತ್ತಗೆಮಾಡಲು ಕಾರ್ಯಕ್ರಮದ ಮಧ್ಯೆಮಧ್ಯೆ ವಿವಿಧ ದೇವಸ್ಥಾನಗಳ ದೃಶ್ಯಾವಳಿಗಳು ಇಂಬಾಗಿ ನಿಲ್ಲುತ್ತವೆ. ಇನ್ನೇನು ಬೇಕು? 'ಗ್ರಹಫಲ', 'ತಾರಾಫಲ', 'ದಿವ್ಯ ಜ್ಯೋತಿ', 'ಬ್ರಹ್ಮಾಂಡ', 'ಭವ್ಯ ಬ್ರಹ್ಮಾಂಡ', 'ಬೃಹತ್ ಬ್ರಹ್ಮಾಂಡ', 'ಕೂಷ್ಮಾಂಡ' (ಕುಂಬಳಕಾಯಿ) ಮುಂತಾದ ದಿಗಿಲುಹುಟ್ಟಿಸುವ ಹೆಸರುಗಳನ್ನು ಹೊತ್ತ ಈ ಕಾರ್ಯಕ್ರಮಗಳಲ್ಲಿ ಈ ಜಾಣರು ವೀಕ್ಷಕರ ಪ್ರಶ್ನೆಗಳಿಗೆ ಭಯಂಕರ ಉತ್ತರಗಳನ್ನು ನೀಡುತ್ತ ದಿಗಿಲು ಇನ್ನಷ್ಟು ಹೆಚ್ಚಿಸುತ್ತಾರೆ! ಕಟ್ಟುಕಥೆಗಳನ್ನು ಹೇಳುತ್ತ, ಅರ್ಥರಹಿತ ಆಚರಣೆಗಳನ್ನು ಬೋಧಿಸುತ್ತ ವೀಕ್ಷಕರನ್ನು ಮೌಢ್ಯದ ಪರಾಕಾಷ್ಠೆಗೆ ಕೊಂಡೊಯ್ಯುತ್ತಾರೆ. ವೀಕ್ಷಕರಾದ ನಾವಿಂದು ಒಂದು ಸತ್ಯವನ್ನು ಅರಿಯಬೇಕಾಗಿದೆ. ಅದೆಂದರೆ, 'ನಮ್ಮ ಭವಿಷ್ಯ ಇವರ ಬಾಯಲ್ಲಿಲ್ಲ, ನಮ್ಮ ಕೈಲೇ ಇದೆ' ಎಂಬ ಪರಮಸತ್ಯ.

ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment