ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಚಿಕ್ಕಮಗಳೂರು : ಪ್ರತಿಭಟನೆಗೆ ತರಹೇವಾರಿ ಮುಖ! ವಂಚಿತರು ಹಕ್ಕಿಗಾಗಿ, ಮೂಲಭೂತ ಸೌಕರ್ಯಕ್ಕಾಗಿ, ಅನ್ಯಾಯದ ವಿರುದ್ಧ ಮತ್ತು ಹೊಟ್ಟೆ ,ಬಟ್ಟೆಗಾಗಿ ಹತ್ತು-ಹಲವು ರೀತಿಯಲ್ಲಿ ಪ್ರತಿಭಟನೆ ನಡೆಯೋದು ಇದ್ದೇಯಿದೆ. ಪೂಜೆ ಮಾಡಿದರೂ ಪ್ರತಿಭಟನೆ ಮಾಡ್ತಾರೆ! ನಂಬಿಕೆ ಬರ್ತಾಯಿಲ್ಲ ಅಲ್ವಾ? ನಂಬದೆ ವಿಧಿಯಿಲ್ಲ. ಪೂಜೆಗಾಗಿ ಪ್ರತಿಭಟನೆ ನಡೆದಿದ್ದಂತೂ ಬೆಳಕಿನಷ್ಟೇ ಸತ್ಯ! ಇಂಥಹದ್ದೊಂದು ಪ್ರತಿಭಟನೆ ಮೂಲಕ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರು. ಭಟ್ಟರ ಮಂತ್ರೋಚ್ಛಾರದ ನಡುವೆ ಧಿಕ್ಕಾರದ ಕೂಗು. ಊದುಬತ್ತಿ ಬೆಳಗಿ, ತಂಗಿನಕಾಯಿ ಒಡೆದು ಆರತಿಯೆತ್ತಿದರೂ ಪ್ರತಿಭಟನೆ! ವಿರೋಧಿಸುವ ಮಟ್ಟದ ಮೌಲ್ಯ ಎಲ್ಲಿಂದ ಎಲ್ಲಿಗೆ ಬಂತು!
ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿರುದ್ದ ಪ್ರತಿಭಟನೆ ನಡೆಸಿದ್ದುಂಟು. ದತ್ತಪೀಠ ಸಂಗತಿಯಲ್ಲಿ ವಿರೋಧದ ಕೂಗೂ ಇನ್ನೂ ಜೀವಂತ. ಅದರೆ ಪೂಜೆ ಮಾಡೋದು ಏಕೆ ಅಂತ ಪ್ರಶ್ನಿಸಿ ಪ್ರತಿಭಟನೆ ನಡೆದ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಪೂಜೆ ಮಾಡೂದು ಎಂತಾದ್ದಕ್ಕೆ ಅಂತ ಪ್ರತಿಭಟನೆ ನಡೆಸುವ ಮೂಲಕ ಚಿಕ್ಕಮಗಳೂರು ಪ್ರತಿಭಟನೆಯ ಹೊಸ ಮಜಲು ಮುಟ್ಟಿದೆ. ಕಾಫಿ ನಾಡು ದಿ ಗ್ರೇಟ್!

ಏನ್ಕತೆ ಪೂಜೇದು ಅಂತ
ಚಿಕ್ಕಮಗಳೂರು ನಗರ ಸಭೆ ನಾಗರಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಇರಾದೆಯಿಂದ ಆಂಬುಲೆನ್ಸ್ ಮತ್ತು ಜೆಸಿಬಿ ವಿಕ್ರಯಿಸಿದೆ. ನಗರ ಸಭೆ ಆಂಬುಲೆನ್ಸ್ ಮತ್ತು ಜೆಸಿಬಿಗೆ ಪೂಜೆ ಸಲ್ಲಿಸಿದ್ದೇ ಪ್ರತಿಭಟನೆಯ ರದ್ದಾಂತಕ್ಕೆ ಕಾರಣ. ಪ್ರತಿಭಟನೆ ಕೂಗೆಬ್ಬಿಸಿದಕೀರ್ತಿ ಕಾಂಗ್ರೆಸ್ ಸದಸ್ಯರಿಗೆ ಸಂದಾಯ.

ನಗರ ಸಭೆ ಆಡಳಿತ ಮಂಡಳಿ ಆ್ಯಂಬುಲೆನ್ಸ್ ಹಾಗೂ ಜೆಸಿಬಿ ಯಂತ್ರಕ್ಕೆ ಎರಡನೇ ಬಾರಿಗೆ ಪೂಜೆ ಸಲ್ಲಿಸುತ್ತಿರುವಾಗ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ನಗರ ಸಭೆ ಆಡಳಿತ ಮಂಡಳಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯ ನಡುವೆಯೇ ಪುರೋಹಿತರು ಗಣಾನಾತ್ವಾಂ ಗಣಪತೀ ಗುಹಾಮಹೇ ಎಂದು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.

ಯಂತ್ರ ಯಾವಾಗ ಬಂತು

ಚಿಕ್ಕಮಗಳೂರು ನಗರಸಭೆಯ ಕಾರ್ಯಕ್ಕೆಂದು ಕಳೆದ ಎಂಟತ್ತು ದಿನದ ಹಿಂದೆ ಎಸ್ಎಫ್ಸಿ ಅನುದಾನದಲ್ಲಿ ಒಂದು ಆಂಬುಲೆನ್ಸ್ ಹಾಗೂ ಜೆಸಿಬಿ ಯಂತ್ರ ತಂದಿದೆ. ತಂದ ಎರಡು ಮೂರು ದಿನದ ನಂತರ ಎರಡೂ ಯಂತ್ರಕ್ಕೆ ಪೂಜೆ ಸಲ್ಲಿಸಲಾಗಿತ್ತು. ಆದರೆ ನಗರಸಭೆ ಆಡಳಿತ ಪಕ್ಷದ ಕೆಲ ಬಿಜೆಪಿ ಸದಸ್ಯರು ಪೂಜೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಪೂಜೆಗೆ ಬಾರದೆ ಉಳಿದ ಸದಸ್ಯರು ನಮಗೆ ತಿಳಿಸದೇ ಪೂಜೆ ಮಾಡಿದ್ದೀರಿ. ಹಾಗಾಗಿ ಮತ್ತೊಮ್ಮೆ ಪೂಜೆ ಮಾಡಬೇಕೆಂದು ಒತ್ತಾಯಿಸಿದರು ಎಂದು ಹೇಳಲಾಗುತ್ತಿದೆ. ಹಾಗಾಗಿ ನಗರಸಭೆ ಆಡಳಿತ ಮಂಡಳಿ ಮರು ಪೂಜೆಗೆ ವ್ಯವಸ್ಥೆ ಮಾಡಿತ್ತು ಎನ್ನೋದು ಕಾಂಗ್ರೆಸ್ ಸದಸ್ಯರ ಸಮರ್ಥನೆ..

ಎರಡನೇ ಬಾರಿ ಪೂಜೆ ನಡೆಯುತ್ತಿದೆ ಎಂದು ತಿಳಿಯುತ್ತಲೇ ಕಾಂಗ್ರೆಸ್ ತಗಾದೆ ತೆಗೆಯಿತು. ನಗರಸಭೆಯ ಬಿಜೆಪಿ ಸದಸ್ಯರಲ್ಲಿ ಒಮ್ಮತವಿಲ್ಲ. ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದಾಗಿ ಎರಡನೇ ಬಾರಿಗೆ ಪೂಜೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಎರಡನೇ ಬಾರಿ ಪೂಜೆ ಕೂಡದು ಎಂಬುದು ಕಾಂಗ್ರೆಸ್ ಸದಸ್ಯರ ಪಟ್ಟಾಗಿತ್ತು. ಕಾಂಗ್ರೆಸ್ ಸದಸ್ಯರ ಮಾತಿಗೆ ಕಿಲುಬುಕಲಾಸಿನ ಕಿಮ್ಮತ್ತು ಸಿಗಲಿಲ್ಲ. ಇದರಿಂದ ಸಿಟ್ಟುಗೊಂಡ ಕಾಂಗ್ರೆಸ್ ಸದಸ್ಯರು ಜೆಸಿಬಿ ಯಂತ್ರದ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಬಿಜೆಪಿ ಒಳಗಿನ ಭಿನ್ನಾಭಿಪ್ರಾಯವೇ ಎರೆಡೆರೆಡು ಪೂಜೆಗೆ ಕಾರಣ ಎಂದು ಕಾಂಗ್ರೆಸ್ ಸದಸ್ಯರು ಕಿಚಾಯಿಸಿದರು.

ನಗರಸಭಾ ಅಧ್ಯಕ್ಷರು ಹೀಗೆನ್ನುತ್ತಾರೆ
ನಗರಸಭಾ ಅಧ್ಯಕ್ಷರು ಕಾಂಗ್ರೆಸ್ ಆರೋಪ ನಿರಾಕರಿಸಿದ್ದಾರೆ. ಯಂತ್ರಗಳನ್ನು ಕಳೆದ ಕೆಲ ದಿನಗಳ ಹಿಂದೆ ತರಲಾಗಿತ್ತು. ತಂದ ಕೂಡಲೇ ಜೆಸಿಬಿ ಹಾಗೂ ಆಂಬುಲೆನ್ಸ್ಗೆ ಪೂಜೆ ಸಲ್ಲಿಸಿ ಕೆಲಸ ಆರಂಭಿಸಲು ತಿಳಿಸಿದೆ. ಆದರೆ ಮೊನ್ನೆ ಕಂಪೆನಿಯರು ಬಂದಿದ್ದರಿಂದ ಕೀಲಿ ಕೈ ಹಸ್ತಾಂತರಕ್ಕಾಗಿ ಪೂಜೆ ಸಲ್ಲಿಸಲಾಗಿದೆ. ಪೂಜೆ ವಿಷಯ ಕೆಲ ಸದಸ್ಯರಿಗೆ ತಿಳಿಸಲಾಗದಿದ್ದರಿಂದ ಅವರು ಬಂದಿರಲಿಲ್ಲ. ಕಾಂಗ್ರೆಸಿಗರು ಹೇಳುವಂತೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷದೊಳಗಿನ ಭಿನ್ನಾಭಿಪ್ರಾಯವೇ ಪೂಜೆ ರಾದ್ದಾಂತಕ್ಕೆ ಕಾರಣ ಎನ್ನುವುದು ಪ್ರತಿಪಕ್ಷ ಕಾಂಗ್ರೆಸ್ ವಾದ. ಆದರೆ ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲಾ ಎನ್ನುತ್ತಿದೆ ಆಡಳಿತ ಪಕ್ಷ. ಒಟ್ಟಿನಲ್ಲಿ ಇಬ್ಬರ ನಡುವಿನ ಜಗಳದಲ್ಲಿ ವಾಹನಗಳಿಗೆ ಮಾತ್ರ ಎರಡನೇ ಬಾರಿಗೆ ಪೂಜೆಯ ಭಾಗ್ಯಲಭಿಸಿದೆ. ಪೂಜೆ ಏಕೆ ಎಂಬ ಹೊಸ ಪ್ರತಿಭಟನೆಯ ಹಾದಿ ಹುಟ್ಟಿಕೊಂಡಿದೆ.


ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment