ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:59 PM

ಜೀವಕ್ಕಾಗಿ ಜಲ

Posted by ekanasu

ವಿಶೇಷ ವರದಿ
ವಿಶ್ವದ ಎಲ್ಲಾ ಜೀವರಾಶಿಗಳಿಗೆ ಜೀವನಾಡಿಯಾಗಿರುವ ಜಲ ಬದುಕಿಗೆ ಅತ್ಯವಶ್ಯಕ. ಸಧ್ಯದ ಪರಿಸ್ಥಿತಿಯಲ್ಲಿ ಜಲದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಆದರೆ ನೀರಿನ ಸಮಸ್ಯೆ ಎದುರಾಗುತ್ತಲೇ ಇದೆ. ಇದಕ್ಕೆ ಕಾರಣ ಪ್ರಕೃತಿದತ್ತವಾದ ಮಳೆ ಹಾಗೂ ಭೌಗೋಳಿಕ ಸ್ಥಿತಿಗಳ ವೈವಿದ್ಯತೆಯಿಂದಾಗಿ ನೀರು ದೊರಕುವಿಕೆ ಸಹ ಬಹಳ ಕಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಸರಕಾರ ದೇಶದಲ್ಲಿ ಜಲನಿರ್ವಹಣೆಯನ್ನು ಒಂದು ಮುಖ್ಯ ಕಾರ್ಯಕ್ರಮವನ್ನಾಗಿ ರೂಪಿಸಿದೆ. ಈ ಯೋಜನೆ ದೇಶಾದ್ಯಂತ ಅನುಷ್ಠಾನಗೊಳಿಸಲು ಕೇಂದ್ರಿಯ ಅಂತರ್ಜಲ ಮಂಡಳಿ ಮತ್ತು ಪ್ರಾಧಿಕಾರವನ್ನು ರಚನೆ ಮಾಡಿದೆ. ಇವುಗಳ ಉದ್ದೇಶ ನೀರಿನ ಅಭಾವ ತಪ್ಪಿಸಲು ಗ್ರಾಮೀಣ ಭಾಗಗಳಲ್ಲಿನ ಜನ ಸಮುದಾಯಕ್ಕೆ ಮಳೆ ನೀರು ಸಂಗ್ರಹಣೆ ಹಾಗೂ ಭೂಮಿಯಲ್ಲಿ ನೀರು ಹಿಂಗಿಸಿ ಅಂತರ್ಜಲ ಹೆಚ್ಚು ಮಾಡುವುದರ ಬಗ್ಗೆ ಅರಿವು ಮೂಡಿಸುವುದಾಗಿರುತ್ತದೆ.ತುಮಕೂರು ಸೇರಿದಂತೆ ಕರ್ನಾಟಕದ ಎಲ್ಲಾ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಈ ಪ್ರಾಧಿಕಾರ ನಾನಾ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದೆ. ಅವುಗಳಲ್ಲಿ ಮಳೆ ನೀರು ಸಂಗ್ರಹ ಮೂಲಕ ಅಂತರ್ಜಲ ಹೆಚ್ಚುವರಿ ಯೋಜನೆ ಸಹ ಒಂದಾಗಿದೆ. ಹರಿದು ಹೋಗುವ ಮಳೆ ನೀರನ್ನು ಸಂಗ್ರಹಿಸಿ ಭೂಮಿಯ ಮೇಲೆ ಅಥವಾ ಒಳಭಾಗದಲ್ಲಿ ಶೇಖರಿಸುವ ವಿಧಾನವೇ ಮಳೆ ನೀರು ಸಂಗ್ರಹಣೆ. ಈ ರೀತಿ ಸಂಗ್ರಹಿಸಿದ ನೀರನ್ನು ಅಂತರ್ಜಲ ಹೆಚ್ಚಿಸಲು ಹಾಗೂ ನೀರನ್ನು ನಿರಂತರವಾಗಿ ಬಳಸಲು, ಮುಚ್ಚಿ ಹೋಗಿರುವ ಖಾಲಿ ನಿವೇಶನ ಪ್ರದೇಶಗಳ ಮಣ್ಣಿನ ಒಳ ಪದರಗಳಿಗೆ ಮಳೆ ನೀರಿನ ಜಿನುಗುವಿಕೆ ಹೆಚ್ಚಿಸಲು, ಬೇಸಾಯದಲ್ಲಿ ಪ್ರಗತಿ ಸಾಧಿಸಲು ಸಸ್ಯರಾಶಿ ಬೆಳವಣಿಗೆಯಿಂದ ಪರಿಸರವನ್ನು ಸುಧಾರಿಸಲು ಇತ್ಯಾದಿ ಅವಶ್ಯ ಸಮಯದಲ್ಲಿ ಬಳಸಬಹುದಾಗಿರುತ್ತದೆ.

ನೀರು ಶೇಖರಣೆಯಿಂದ ಜಮೀನು ನಷ್ಟವಾಗುವುದಿಲ್ಲ. ಅಂತರ್ಜಲವು ಭಾಷ್ಪೀಕರಣ ಹಾಗೂ ಮಾಲಿನ್ಯಉಂಟು ಮಾಡುವುದಿಲ್ಲ. ನೆಲದಾಳದಲ್ಲಿ ಸಂಗ್ರಹವಾದ ನೀರು ಪರಿಸರ ಸ್ನೇಹಿಯಾಗಿರುವುದು, ಜಲಧರ ಶಕ್ತಿ ಹೆಚ್ಚಿಸಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಉಂಟು ಮಾಡುತ್ತದೆ. ಬರಪರಿಸ್ಥಿತಿಯನ್ನು ಶಮನಗೊಳಿಸುತ್ತಿದೆ ಹಾಗೂ ಮಣ್ಣಿನ ಸವೆತ ತಗ್ಗಿಸುತ್ತದೆ. ಇವು ಇದರಿಂದಾಗುವ ಅನುಕೂಲಗಳು.
ನಗರ ಪ್ರದೇಶಗಳಲ್ಲಿ ಮನೆ ಮೇಲೆಬಿದ್ದ ಹಾಗೂ ಭೂಮಿ ಮೇಲೆ ರಭಸವಾಗಿ ಹರಿದು ಹೋಗುವ ಮಳೆ ನೀರನ್ನು ಮರುಪೂರಿಕ ಹಳ್ಳ, ಹೊಂಡ, ತೂಬು ಬಾವಿ ಹಾಗೂ ಬಾವಿಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೊರಕಲು, ಕಾಂಟೂರ್ ಬದುಗಳು, ಜಿನುಗು ಕೆರೆಗಳು, ತಡೆಗಟ್ಟೆ, ಸೀಮೆಂಟು ಕಟ್ಟೆ, ನಾಲಬದುಗಳು, ಮರುಪೂರಿಕ ಕಂದಕಗಳು, ಅಂತರ್ಜಲ ಸೇತುವೆ ಮತ್ತು ನೆಲದಾಳದ ಒಡ್ಡುಗಳಲ್ಲಿ ಸಂಗ್ರಹಣೆ ಮಾಡುವುದರಿಂದ ಅಂತರ್ಜಲ ಪುನಃಶ್ಚೇತನಗೊಳ್ಳಲು ಸಾಧ್ಯವಾಗುತ್ತದೆ.

ಜಿಲ್ಲೆಯ 320 ಗ್ರಾಮಪಂಚಾಯತಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿನ ನಾಗರೀಕರು ಮತ್ತು ರೈತರು ಜೀವಕ್ಕಾಗಿ ಜಲ ಇದರ ಬಳಕೆ ಅಗತ್ಯ ಎಂಬುವುದನ್ನು ಅರಿತು ತಮ್ಮ ಜಮೀನು ಹಾಗೂ ಮನೆ ಚಾವಣಿಗಳ ಮೇಲೆ ಬಿದ್ದ ಮಳೆ ನೀರು ಪೋಲಾಗದಂತೆ ಮೇಲ್ಕಂಡ ಅಂತರ್ಜಲ ಪುನಃಶ್ಚೇತನ ಮಾಡುವ ವಿಧಾನಗಳ ಮೂಲಕ ಕಾರ್ಯಚಟುವಟಿಕೆಗಳನ್ನು ಕೈಗೊಂಡು ನೀರನ್ನು ಸಂಗ್ರಹಿಸಿ, ಅಂತರ್ಜಲ ಮರು ಭರ್ತಿಗೆ ಆದ್ಯತೆ ನೀಡಬೇಕಿದೆ.
ರೈತರು ತಮ್ಮ ಹೊಲಗಳಲ್ಲಿ ಹೊಂಡಗಳನ್ನು ನಿರ್ಮಾಣ ಮಾಡಿ ಮಳೆನೀರನ್ನು ಸಂಗ್ರಹಿಸಿ ಕೃಷಿ ಚಟುವಟಿಕೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಗ್ರಾಮಗಳ ಪಕ್ಕದಲ್ಲಿ ಸಣ್ಣ, ಸಣ್ಣ ಕೆರೆ, ಕುಂಟೆ, ಹೊಂಡ, ಕೊರಕಲುಗಳಿಗೆ ಮನೆ ಚಾವಣಿ ಹಾಗೂ ರಸ್ತೆ ಮೇಲೆ ಬಿದ್ದ ಮಳೆ ನೀರು ಮತ್ತು ಚರಂಡಿಯಲ್ಲಿ ರಭಸವಾಗಿ ಹರಿಯುವ ಮಳೆ ನೀರನ್ನು ಹಾಯಿಸಿ, ಶೇಖರಣೆ ಮಾಡುವುದರ ಮೂಲಕ ಅಂತರ್ಜಲ ಮರು ಭರ್ತಿಗೆ ಕಾಳಜಿ ವಹಿಸಬೇಕಿದೆ. ಅಲ್ಲದೆ ಜಮೀನುಗಳ ಆಯಾ ಭಾಗಗಳಲ್ಲಿ ಬದುಗಳನ್ನು ನಿರ್ಮಾಣ ಮಾಡುವುದರ ಮೂಲಕ ಭೂಮಿಯಲ್ಲಿ ನೀರು ಹಿಂಗುವಂತೆ ಮಾಡಬೇಕಿದೆ.

ಈ ನಿಟ್ಟಿನಲ್ಲಿ ಗ್ರಾಮಸ್ಥರು ಅಂತರ್ಜಲ ಹೆಚ್ಚಳ ಹಾಗೂ ಮಳೆ ನೀರು ಸಂಗ್ರಹಣೆಗೆ ಹೆಚ್ಚಿನ ಒಲವು ತೋರಿ ಬಿದ್ದ ಮಳೆ ನೀರನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಈ ಯೋಜನೆಯ ಉದ್ದೇಶ ಸಫಲತೆ ಕಾಣಲು ಸಾಧ್ಯವಾಗುತ್ತದೆ ಎಂದು ಕೇಂದ್ರಿಯ ಅಂತರ್ಜಲ ಮಂಡಳಿ ತಿಳಿಸಿದೆ.

ವಿಶೇಷ ವರದಿ - ಹೆಚ್.ಡಿ.ಶಾಂತರಾಜು.

0 comments:

Post a Comment