ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಉಡುಪಿ : ನಿಶ್ಚಿತ! ಟ್ರೈನಿಂಗ್ ಕೊಟ್ಟರೆ ಮಂದಬುದ್ದಿಯ ಮಕ್ಕಳೂ ಹುಷಾರಾಗುತ್ತಾರೆ ಎನ್ನೋದಕ್ಕೆ ಅನುಮಾನವಿಲ್ಲ. ಇದಕ್ಕೆ ಚಟಾಕು ತಾಳ್ಮೆ, ಮುಷ್ಠಿಯಷ್ಟು ಏಕಾಗ್ರತೆ, ಅರೆಪಾವಿನಷ್ಟು ಗುರಿಮುಟ್ಟುವ ಛಲ ಬೇಕು ಅಷ್ಟೇ.ಎಲ್ಲರಿಂದ ಮಂದಬುದ್ದಿಯವರೆಂದು ತಿರಸ್ಕೃತಗೊಂಡ ಮಕ್ಕಳಿಗೆ ಮಣಿಪಾಲದ `ಆಸರೆ' ಹೊಸರೂಪ ಕೊಡಲು ಹೊರಟಿದೆ. ಬುದ್ದಿಮಾಂದ್ಯರನ್ನು ತಿಕ್ಕಿತೀಡಿ ಸ್ವಂತಕಾಲಮೇಲೆ ನಿಲ್ಲಿಸುವ ಪ್ರಯತ್ನದಲ್ಲಿ ಆಸರೆ ಯಶಸ್ಸಿನ ಪುಟ್ಟಪುಟ್ಟ ಹೆಜ್ಜೆಯಿಡುತ್ತಿದೆ. ರಾಜ್ಯದ ನಾನಾ ಭಗಗಳಿಂದ ಬಂದ ಬುದ್ದಿಮಾಂದ್ಯ ಮಕ್ಕಳನ್ನು ಒಪ್ಪ ಓರಣ ಮಾಡುವ ಕನಸು ಆಸರೆಯ ಒಳ ತುಡಿತ. ಆಸರೆ ತೆಕ್ಕೆಗೆ ಬಂದ ಬುದ್ದಿಮಾಂದ್ಯ ಮಕ್ಕಳು ಬರೇ `ಎಜುಕೇಟೆಡ್` ಆದರೆ ಸಾಲದು ಹಂಗಿಲ್ಲದ ಬದುಕು ಅವರದ್ದಾಗಬೇಕು ಎನ್ನುವದು ಆಸರೆಯ ಒಟ್ಟಾರೆ ತುಡಿತ. ಆಸರೆ ಹುಟ್ಟಿ ವರ್ಷ ಪೂರೈಸಿದೆ. ಮಣಿಪಾಲ ಯುನಿವರ್ಸಿಟಿ ಮತ್ತು ಅರ್ಚನಾ ಟ್ರಸ್ಟ್ ಇದರ ಮತ್ತೊಂದು ಕೂಸು ಆಸರೆ. ಕಳೆದ ವರ್ಷ ಜೂನ್ ತಿಂಗಳು 15 ಅಸರೆ ಹುಟ್ಟಿದ ದಿನ. ಮಣಿಪಾಲ ಯೂನಿವರ್ಸಿಟಿಯ ಎಸ್ಟೇಟ್ ಆಫೀಸರ್ ಜೈವಿಠ್ಠಲ್ ಆಸರೆಯ ಜನ್ಮಕ್ಕೆ ಕಾರಣ.ಬುದ್ದಿಮಾಂದ್ಯ ಮಕ್ಕಳು ಮತ್ತು ನಿಧಾನಕಲಿಕೆ ಮಕ್ಕಳು ಹಾಗೂ ಅವ್ಟಿಸಮ್ ಮಕ್ಕಳಿಗೆ ಆಸರೆ ಹೊಸ ಆಶಾಕಿರಣ. ಆಸರೆ ವಸತಿಯೊಟ್ಟಿಗೆ ಮಂದಬುದ್ದಿಯ ಮಕ್ಕಳಿಗೆ ಆಸರೆ ನೀಡುತ್ತಿದೆ. ಜೊತೆಗೆ ಎಲ್ಲರೊಟ್ಟಿಗೆ ಮಕ್ಕಳನ್ನು ಬೆರೆಸುವ ಮೂಲಕ ಹೊಸ ಸಾಧ್ಯತೆ ಕಂಡುಕೊಳ್ಳುತ್ತಿದೆ.


ಮಕ್ಕಳು ಏನೆಲ್ಲಾ ಕಲಿಯಬಹುದು : ಆಸರೆಯಲ್ಲಿ ಮಕ್ಕಳಿಗೆ ಶಿಕ್ಷಣದ ಶಿಕ್ಷೆಯಿಲ್ಲ. ಶಿವರಾಮ ಕಾರಂತರ ಆಸೆಯದಂತೆ ಮಕ್ಕಳು ಮಣ್ಣು ನೀರಲ್ಲಿ ಆಡುತ್ತಾ ಪ್ರಕೃತಿಯೊಟ್ಟಿಗೆ ಬೆರೆಯುತ್ತ್ತಾ ಕಲಿಯಬೇಕು ಎನ್ನ್ನೊ ತತ್ವ ಅಕ್ಷರಶಹ ಪಾಲನೆಯಲ್ಲಿದೆ. ವೊದಲೇ ಬುದ್ದಿಮಾಂದ್ಯರಾಗಿದ್ದ ಮಕ್ಕಳ ಪ್ರತಿಯೊಂದು ಸಂಗತಿ ಬದಲಾಯಿಸುವುದು ಅಂದರೆ ಸುಲಭದ ಮಾತಲ್ಲ. ಕೆಲ ಮಕ್ಕಳಿಗೆ ದೇಹದ ಬಾಷೆ ತಿಳಿಯೋಲ್ಲ. ಬಟ್ಟೆ ಹಾಕಿಕೊಳ್ಳಬೇಕು ಎನ್ನುವಷ್ಟು ಬುದ್ದಿ ಪ್ರಬುದ್ಧರಾಗಿಲ್ಲ. ನಿದ್ದೆ ಎಷ್ಟು ಹೊತ್ತಿಗೆ ತಿಂಡಿ ಯಾವ ಕಾಲಕ್ಕೆ ಎನ್ನುವ ಅರಿವೆಯೂಯಿರೋದಿಲ್ಲ. ಇಂತಾ ಮಕ್ಕಳಿಗೆ ವೊದಲು ದೇಹದ ಭಷೆ ಕಲಿಸಲಾಗುತ್ತದೆ. ದೇಹಭಷೆ ನಂತರ ಉಳಿದ ಸಂಗತಿ.

ಆಸರೆಯಲ್ಲಿ ದಾಖಲಾದ ಮಕ್ಕಳಿಗೆ ಓಂಪ್ರಥಮ ಕಾಗುಣಿತ ತಿದ್ದಲು ಕೂರಿಸೋದಿಲ್ಲ. ಹಲ್ಲು ಉಜ್ಜುವುದರಿಂದ ಹಿಡಿದು ಹಾಸಿಗೆ ಹಾಸಿ ಮಲಗೋವರೆಗಿನ ಪಾಠಕ್ಕೆ ವೊದಲು ಆಧ್ಯತೆ ನೀಡಲಾಗುತ್ತದೆ. ಮಕ್ಕಳು ತಮ್ಮ ದಿನನಿತ್ಯದ ಕೆಲಸ ಮಾಡಲು ತಯಾರಾದ್ರೂ ಅಂತಾದ್ರೆ ಉಳಿದ ವಿಷಯ `ಈಜಿ'ಯಾಗಿ ಕಲಿಸಬಹುದು ಎಂಬುದು ಶಿಕ್ಷಕಿ ವಿಜಯಲಕ್ಷ್ಮೀ ಅಭಿಮತ.

ಪ್ರಸಕ್ತ ಆಸರೆಯಲ್ಲಿರುವ ಮಕ್ಕಳು ತಮ್ಮ ಕೆಲಸ ತಾವು ಮಾಡಿಕೊಳ್ಳುವ ಜೊತೆಗೆ ತಾವೇ ತಯಾರಿಸಿದ ಪರಿಕರ ಮಾರುವಷ್ಟು ಬುದ್ದಿವಂತರಾಗಿದ್ದಾರೆ. ಆಸರೆಯಲ್ಲಿ 20 ಜನ ವಸತಿಸಹಿತ ಬುದ್ದಿಮಾಂದ ಮಕ್ಕಳೊಟ್ಟಿಗೆ 5ಜನ ಮನೆಯಿಂದ ಆಸರೆಗೆ ಬರುತ್ತಾರೆ. ಗಡಿಕೈಗಾರಿಕೆ, ಟೈಲರಿಂಗ್ ವಿವೇಕ ಶಿಕ್ಷಣ ಹೆಚ್ಚಿನ ಒತ್ತು ಕೊಡಲಾಗುತ್ತದೆ.

ಮಕ್ಕಳು ಬೆರೆಯುವಿಕೆ ಮುಖ್ಯ :ಸಮಾಜದೊಟ್ಟಿಗೆ ಬೆರೆಯಬೇಕು ಎನ್ನೋದೃಷ್ಟಿಯಲ್ಲಿ ಆಸರೆ ವಿವಿಧ ಸಂಘಟನೆಗಳ ಸನಿಹಕ್ಕೆ ಬುದ್ದಿಮಂದ ಮಕ್ಕಳನ್ನು ಕರೆತರುತ್ತದೆ. ಸಭೆ ಸಾಮಾರಂಭಗಳ ಅಂಗಳದಲ್ಲಿ ಬುದ್ದಿ ಮಾಂದ್ಯಮಕ್ಕಳ ಚಿಕ್ಕ ಶಾಪ್ ಇರುತ್ತದೆ. ಅದರಲ್ಲಿ ಮಕ್ಕಳೇ ತಯಾರಿಸದ ಪರಿಕರ ಮಕ್ಕಳೇ ವ್ಯಾಪಾರಸ್ತರು!

ವಿವಿಧ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತಂದು ಸಮಾಜದ ಗಣ್ಯರೊಟ್ಟಿಗೆ ಮತ್ತು ಅವರದ್ದೇ ಆದ ವಯಸ್ಸಿನ ಮಕ್ಕಳೊಟ್ಟಿಗೆ ಮಂದಬುದ್ದಿಯ ಮಕ್ಕಳು ಬೆರೆತು ಮಾತನಾಡುವ ಪ್ರಯತ್ನ ನಡೆಯುತ್ತದೆ. ಹೊರ ಪ್ರಪಂಚಕ್ಕೆ ಮಕ್ಕಳು ಬರೋದ್ರಿಂದ ಪ್ರಕೃತಿ ನೋಡಿ ಕೆಲವನ್ನು ಮಕ್ಕಳು ಕಲಿಯುತ್ತಾರೆ ಎನ್ನುವದು ಆಸರೆಯ ಆಸೆಯಾಗಿದೆ.

ಬುದ್ದಿ ಮಾಂದ್ಯಮಕ್ಕಳು ಕಲಿಕೆಯಲ್ಲಿ ಅಷ್ಟೇನು ಚುರುಕಿಲ್ಲದಿದ್ದರೂ ಕಲಿಯುವ ತಾಕತ್ತಿದೆ ಎಂದು ಆಸರೆಯ ಶಿಕ್ಷಕ ಮೋಹನ ನಾಯ್ಕ್ ಹೇಳುತ್ತಾರೆ. ನಿಧಾನ ಕಲಿಕೆಯ ಮಕ್ಕಳನ್ನು ಪಳಗಿಸೋಕೆ ಬೆಟ್ಟದಷ್ಟು ತಾಳ್ಮೆ ಬೇಕು.ಸಾಧಾರಣ ಮಕ್ಕಳು ನಾಲ್ಕು ಕೆಲಸವನ್ನು ಒಟ್ಟಾಗಿ ಹೇಳಿದರೂ ನಿಭಯಿಸುತ್ತಾರೆ. ಆದರೆ ಈ ಮಕ್ಕಳು ಹಾಗಲ್ಲ ಒಂದೊಂದೇ ಕೆಲಸವನ್ನು ಇವರು ನಿರ್ವಹಿಸಲು ಸಮರ್ಥರಾಗಿದ್ದಾರೆ ಎಂದು ಅವರು ಹೇಳುತ್ತಾರೆ. ಒಟ್ಟಾರೆ ಸಮಾಜದ ಮತ್ತು ಹೆತ್ತವರ ಅವಜ್ಞೆಗೆ ಈಡಾದ ಮಕ್ಕಳಿಗೆ ಆಸರೆ ಹೊಸ ಭರವಸೆ ಹುಟ್ಟಿಸಿದೆ.

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment