ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಬೈಂದೂರು ಮತ್ತು ಕುಂದಾಪುರ ಕ್ರೇತ್ರ ವ್ಯಾಪ್ತಿಯ ಸ್ವಾಭಾವಿಕ ಕಾಡು, ಗೊಮಾಳ, ಕುದ್ರು, ಪರಂಬೋಕ, ರಕ್ಷಿತಾರಣ್ಯ ಮದಗ, ಹಾಗೂ ಲೋಕೊಪಯೋಗಿ ಇಲಾಖೆ ವಿಂಗಡಿಸಿದ ರಸ್ತೆ ಪ್ರದೇಶ ಕೂಡಾ ಒತ್ತುವರಿ ಹೆಸರಲ್ಲಿ ಧೂಳಿಪಟ. ಅಕ್ರಮ-ಸಕ್ರಮ ಹೆಸರಲ್ಲಿ ಒತ್ತುವರಿ ಪ್ರದೇಶ ಸಕ್ರಮವಾಗುತ್ತಿದೆ. ಮತ್ತೆ ಕೆಲ ಅತಿಕ್ರಮ ಸ್ಥಳ ಸಕ್ರಮದ ಸರ್ಟಿಫಿಕೇಟಿಗಾಗಿ ಕಾದು ಕುಳಿತಿದೆ. ಅಕ್ರಮ-ಸಕ್ರಮ ಸಮಿತಿ ರಚನೆ ವಿಳಂಬದ ಕಾರಣ ಅವುಗಳಿಗೆ ಸಕ್ರಮದ ಯೋಗ ಕೂಡಿಬಂದಿಲ್ಲ. ಓಟಿಗಾಗಿ ಒತ್ತುವರಿ ಪ್ರದೇಶಕ್ಕೆ ಸಕ್ರಮದ ಸರ್ಟಿಫಿಕೇಟು ನೀಡಲಾಗುತ್ತಿದೆ. ಒತ್ತುವರಿಮಾಡಿಕೊಂಡವರಲ್ಲಿ ಹೆಚ್ಚಿನವರು ರಾಜಕೀಯ ಹಿನ್ನೆಲೆಯಿರುವವರು ಮತ್ತು ಉಳ್ಳವರು!
ಎಲ್ಲೆಲ್ಲಿ ಎಷ್ಟೆಷ್ಟು?!!!

ಕುಂದಾಪುರ ಮತ್ತು ಬೈಂದೂರು ಕ್ಷೆತ್ರದಲ್ಲಿ ಕಂದಾಯ ಇಲಾಖೆಗೆ ಸೇರಿದ 101 ಗ್ರಾಮ ವ್ಯಾಪ್ತಿಯ ಸುಮಾರು 61.650 ಹೆಕ್ಟೇರ್ ಪ್ರದೇಶ ಒತ್ತುವರಿಗೆ ಒಳಗಾಗಿದೆ. 94.633 ಹೆಕ್ಟೇರ್ ಅರಣ್ಯ ಮತ್ತು ಬಫರ್ ಪ್ರದೇಶ ಅತಿಕ್ರಮದ ದಾಂಗುಡಿಗೆ ಸಿಕ್ಕಿದೆ. ಇದರಲ್ಲಿ ಐದು ಸ್ಥಳ ಅತಿಕ್ರಮಿಗಳಿಂದ ಮುಕ್ತವಾಗಿದೆ. ಮತ್ತೆ ಉಳಿದ ಪ್ರದೇಶದ ಒತ್ತುವರಿ ಮಾಡಿದವರಿಗೆ ಸಿಂಧುವಾಗಿದೆ.ಕೊಲ್ಲೂರು, ಬೆಳ್ಳಾಲ, ಹಳ್ಳಿಹೊಳೆ, ಆಜ್ರಿ, ಮದೂರು, ಜಡ್ಕಲ್, ಕೊಡ್ಲಾಡಿ, ಚಿತ್ತೂರು, ನಾಡಾ, ಹಾಲ್ಕಲ್, ಕಡ್ಕೆ ಸಾಂತಾವಗುಡ್ಡೆ, ಉದೂರು, ಶಿರೂರು, ತೂದಳ್ಳಿ ಮುಂತಾದ ಪ್ರದೇಶ ಅತಿ ಹೆಚ್ಚು ಒತ್ತುವರಿಗೆ ಒಳಗಾಗಿವೆ. ಅದರಲ್ಲಿ ಹೆಚ್ಚಿನ ಪ್ರದೇಶ ಅರಣ್ಯ ವ್ಯಾಪ್ತಿಗೆ ಬರುತ್ತದೆ. ಮತ್ತೆ ಕೆಲ ಸ್ಥಳಗಳು ಕಂದಾಯ ಇಲಾಖೆ ತೆಕ್ಕೆಯಲ್ಲಿದೆ.


ಶಾಲಾ ಕಾಲೇಜು ಸ್ಥಳವೂ ಒತ್ತುವರಿ


ಒತ್ತುವರಿಯ ಬಿಸಿ ಶಾಲಾ ಕಾಲೇಜು ಸ್ಥಳವನ್ನೂ ಬಿಟ್ಟಿಲ್ಲ. ಉದೂರು ಸರಕಾರಿ ಸ್ಥಳಕ್ಕೆ ಅಕ್ರಮ ಸಕ್ರಮದಲ್ಲಿ ಸಾಗುವಳಿ ಚೀಟಿ ಪಡೆದು ಹತ್ತಾರು ಎಕ್ರೆ ಜಾಗಕ್ಕೆ ಗೋಮಯ ಹಾಕಲಾಗಿದೆ. ಗಣಿಗಾಗಿಕೆಗಾಗಯೇ ಸರಕಾರಿ ಸ್ಥಳ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗಿದೆ. ಒತ್ತುವರಿಗಾಗಿ ಬೈಂದೂರು ಸಮೀಪದ ಸಹಸ್ರಾರು ರು. ಮೌಲ್ಯದ ನಿತ್ಯಹರಿದ್ವರ್ಣದ ಕಾಡಿಗೆ ಕಿಚ್ಚು ಹಚ್ಚಲಾಗಿದೆ. ಕಡ್ಕೆ ಸಾಂತಾವರ ಗುಡ್ಡೆಯ ಕಾಡನ್ನು ಒತ್ತುವರಿ ಮಾಡಿಕೊಳ್ಳುವ ಸ್ಥಳೀಯ ರಾಜಕೀಯ ಮುಖಂಡರ ಪ್ರಯತ್ನಕ್ಕೆ ಜಿಲ್ಲಾಧಿಕಾರಿ ತಡೆಹಾಕಿದರೂ, ಒತ್ತುವರಿಯ ಪ್ರಯತ್ನ ನಿರಂತರ ಚಾಲ್ತಿಯಲ್ಲಿದೆ. ಕೆಂಚನೂರು ಸಮೀಪದ ಬಾಳೆಕೆರೆಯಲ್ಲಿ ಬೆಳ್ಳಿಬೆಳಕು ಯೋಜನೆಗಾಗಿ ಗೋಮಾಳವನ್ನು ನುಂಗಿ ನೀರು ಬಿಡಲಾಗಿದೆ. ಗುಜ್ಜಾಡಿ ಪ್ರೌಢಶಾಲೆ, ತ್ರಾಸಿ ಸಮೀಪದ ಗೋಮಾಳ ಇತಿಶ್ರೀ ಹಂತಕ್ಕೆ ಬಂದಿದೆ.
ಬಿಜೂರು ರಕ್ಷಿತಾರಣ್ಯ ಅಂಚಿನಲ್ಲಿದ್ದ ಗೇರು ಪ್ಲಾಂಟೇಶನ್ನಿನಲ್ಲಿ ನಾಟಿ ಮಾಡಿದ ಗೇರು ಸಸಿಗಳನ್ನು ಕಿತ್ತಾಕಿ ಒತ್ತುವರಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ಬೈಂದೂರು ಸರಕಾರಿ ಪದವಿ ಕಾಲೇಜಿನ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲು ಹೊರಟಿದ್ದನ್ನು ಸ್ಥಳೀಯರು ನ್ಯಾಯಾಲಯದಲ್ಲಿ ಪ್ರಶ್ನಿಸುವ ಮೂಲಕ ಸ್ಥಳವನ್ನು ಕಾಲೇಜಿಗೆ ಉಳಿಯುವಂತೆ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆ ರಸ್ತೆಗಾಗಿ ತ್ರಾಸಿಯಲ್ಲಿ ಮೀಸಲಿಟ್ಟ ಸ್ಥಳವನ್ನು ಸ್ಥಳೀಯ ಮುಖಂಡರು ಒತ್ತುವರಿಮಾಡಿಕೊಂಡು ಬಂಗೆಲೆ ಕಟ್ಟಿ ಕುಳಿತಿದ್ದಾರೆ. ಈ ಕಟ್ಟಡಕ್ಕೆ ಪಂಚಾಯ್ತಿಯಿಂದ ಪರವಾನಿಗೆ ಕೂಡಾ ಇಲ್ಲ. ಸಿಆರ್ಝಡ್ ಕಾಯಿದೆ ವ್ಯಾಪ್ತಿಗೆ ಈ ಪ್ರದೇಶ ಬರುತ್ತಿದ್ದರೂ ಕಟ್ಟಡ ಮಾತ್ರ ಅಭಾದಿತವಾಗಿದೆ. ಉಪ್ಪುಂದ ರಾಷ್ಟ್ರೀಯ ಹೆದ್ದಾರಿ ಮಗ್ಗಲು ಕೂಡಾ ಒತ್ತುವರಿಗೆ ಸಿಕ್ಕಿ ಕಂಪ್ಲೆಕ್ಸ್ ನಿರ್ಮಿಸಲಾಗಿದೆ. ಬೈಂದೂರು ಸಮೀಪದ ಒತ್ತನೆಣಿಯ ಪರಂಬೋಕ ಸ್ಥಳ ಕೂಡಾ ಒತ್ತುವರಿಯ ಬಿಸಿಯಲ್ಲಿ ಬೇಯುತ್ತಿದೆ.

ಅಕ್ರಮ ಸಕ್ರಮಕ್ಕಾಗಿ ಒತ್ತುವರಿ

ಅಕ್ರಮ ಸಕ್ರಮದಲ್ಲಿ ಒತ್ತುವರಿ ಸ್ಥಳ ಮಂಜೂರಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಒತ್ತುವರಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಕುಮ್ಕಿ ಸ್ಥಳಕ್ಕೂ ಅಕ್ರಮ ಸಕ್ರಮದಲ್ಲಿ ಮಂಜೂರಾತಿ ಸಿಗೋದ್ರಿಂದ ಹಾಡಿ, ಹಕ್ಲು ಹಳ್ಳಹತ್ತಿದೆ. ಲಾವಂಚ ಮತ್ತು ಹುಲ್ಲೆಣ್ಣೆಗಾಗಿ ಅರಣ್ಯದ ಅಂಚು ನಿರ್ನಾಮವಾಗುತ್ತಿದೆ. ಹೆಚ್ಚಿನ ಒತ್ತುವರಿ ಅರಣ್ಯ ಪ್ರದೇಶದಲ್ಲೇ ನಡೆಯುತ್ತದೆ. ಈ ಎಲ್ಲ ಪ್ರದೇಶದ ಒತ್ತುವರಿಯನ್ನು ಸಕ್ರಮ ಮಾಡಿಕೊಳ್ಳುವ ಸಲುವಾಗಿ ಅರ್ಜಿ ನಮೂನೆ 50-53ರಲ್ಲಿ ಅರ್ಜಿ ಹಾಕಲಾಗುತ್ತಿದೆ. ಒತ್ತುವರಿಯ ಪಟ್ಟಿಯಲ್ಲಿ ಕೇರಳೀಯರು ಮುಂದಿದ್ದಾರೆ. ಕುಂದಾಪುರದಲ್ಲಿ ಅರಣ್ಯಾಧಿಕಾರಿಯಾಗಿದ್ದ ಕೆ.ಎನ್. ಮೂರ್ತಿ ಅರಣ್ಯ ಒತ್ತುವರಿಯ ಹೊಡೆತಕ್ಕೆ ಕಡಿವಾಣ ಹಾಕಲು ಅರಣ್ಯದ ಅಂಚಿನಲ್ಲಿ ಧರೆಯೆತ್ತಿ ಒತ್ತುವರಿಗೆ ಬ್ರೇಕ್ ಹಾಕಿದ್ದರಿಂದ ಅಂಗೈಅಗಲದಷ್ಟು ಅರಣ್ಯ ಉಳಿದಿದೆ.

ತಾಹಶೀಲ್ದಾರ್ ಹೀಗೆ ಹೇಳುತ್ತಾರೆಸರಕಾರಿ ಜಾಗ ಒತ್ತುವರಿ ಆಗಿರುವುದನ್ನು ಕುಂದಾಪುರ ತಹಶೀಲ್ದಾರ್ ರಾಜು ಮೊಗವೀರ ಕೋಣೆ ಒಪ್ಪಿಕೊಳ್ಳುತ್ತಾರೆ. ಒತ್ತುವರಿ ಸ್ಥಳ ಮಜೂರಾತಿಗಾಗಿ ಅಕ್ರಮ ಸಕ್ರದಲ್ಲಿ ಅರ್ಜಿಗಳು ಬಂದಿದೆ. ಒತ್ತುವರಿ ಮಾಡಿಕೊಂಡ ಸ್ಥಳದಲ್ಲಿ ಕೃಷಿ ಚಟುವಟಿಕೆ ಮಾಡದಿದ್ದರೆ ಸುಮ್ಮನೆ ಬೇಲಿ ಹಾಕೊಂಡ ಸ್ಥಳವನ್ನು ಹಿಂದಕ್ಕೆ ಪಡೆಯಲಾಗುತ್ತದೆ. ನಿಯಮ ನೀರಿ ಒತ್ತುವರಿ ಜಾಗವನ್ನು ಮಂಜೂರು ಮಾಡೋಕೆ ಬರೋದಿಲ್ಲ. ರಕ್ಷಿತಾರಣ್ಯ, ಹಸಿರು ಪ್ರದೇಶ, ಗೋಮಾಳ ಮುಂತಾದ ಪ್ರದೇಶ ಒತ್ತುವರಿಯಾಗಿದ್ದರೆ ಅದನ್ನು ಸಕ್ರಮ ಮಾಡಲು ಸಾಧ್ಯವಿಲ್ಲ. ಒತ್ತುವರಿ ಮಾಡಿಕೊಂಡವರ ಸಾಧ್ಯತೆ ಗಮನದಲ್ಲಿಟ್ಟುಕೊಂಡು ಒತ್ತುವರಿಗೆ ಮಂಜೂರಾತಿ ನೀಡಲಾಗುತ್ತದೆ. ಸರಕಾರಿ ಸ್ವತ್ತನ್ನು ಸುಕಾಸುಮ್ಮನೆ ಪರಭಾರೆ ಮಾಡಲು ಬಿಡೋದಿಲ್ಲ ಎಂದಿದ್ದಾರೆ.

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment