ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್
ಇವತ್ತಿನ ದಿನಗಳಲ್ಲಿ "ಫಾಸ್ಟ್" ಎಂಬುವುದು ಎಲ್ಲರ ಸ್ಲೋಗನ್ ಆಗುತ್ತಿದೆ. ಫಾಸ್ಟ್ ಫುಡ್, ಫಾಸ್ಟ್ ಟ್ರಾನ್ಸ್ ಪೋರ್ಟ್, ಫಾಸ್ಟ್ ಎಂಟರ್ ಟೈನ್ ಮೆಂಟ್... ಹೀಗೆ ಎಲ್ಲವೂ ಫಾಸ್ಟ್ ಮಯ. ಎಷ್ಟೆಂದರೆ ನಮ್ಮ ಪ್ರೀತಿಯ ಕ್ರೀಡೆಯಾಗಿರುವ ಕ್ರಿಕೆಟ್ಗೂ ಕೂಡಾ ಫಾಸ್ಟ್ ಟಚ್ ಸಿಕ್ಕಿದೆ. 50 ಓವರುಗಳ ಕ್ರಿಕೆಟ್ ಗೆ ಈಗ 20 ಓವರುಗಳ ಟಚ್ ಸಿಕ್ಕಿದೆ. ಈ ವೇಗವು ಸಾಂಸ್ಕೃತಿಕ ಚಟುವಟಿಕೆಗಳ ಮೇಲೂ ತನ್ನ ಪ್ರಭಾವ ಬೀರಿದೆ. ಆದರೆ ಈ ಕ್ಷೇತ್ರದಲ್ಲಿ ವೇಗದ ಪ್ರಭಾವದಿಂದಾಗಿ ಸಂಸ್ಕೃತಿಯು ಪ್ರಕಾಶಿಸುವುದರ ಬದಲು ನಶಿಸುವುದರತ್ತ ಹೋಗುತ್ತಿದೆ.

ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನಕ್ಕೂ ಈ ವೇಗದ ಪರಿಣಾಮವು ಮೆಲ್ಲನೆ ತಾಗುತ್ತಿದೆ. ಒಂದು ಕಾಲದಲ್ಲಿ
ರಾತ್ರಿಯಿಡೀ ಅಥವಾ 6 ರಿಂದ 8 ಗಂಟೆಗಳವರೆಗೆ ನಡೆಯುತ್ತಿದ್ದ ಈ ಯಕ್ಷಗಾನ ಕಲೆಯು ಇತ್ತೀಚಿನ ದಿನಗಳಲ್ಲಿ 2 ರಿಂದ 3 ಗಂಟೆಗಳ ಸೀಮಿತ ಅವಧಿಗೆ ಇಳಿದುಬಿಟ್ಟಿವೆ. ಅಲ್ಲದೆ ಈ ಪ್ರಯೋಗಕ್ಕೆ ಜನರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವುದು ಕೂಡಾ ಇಂತಹ ಬದಲಾವಣೆಗೆ ಕಾರಣವಾಗಿದೆ.

ಯಕ್ಷಗಾನ ಕಲೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅನಾಸಕ್ತಿ ಹೆಚ್ಚುತ್ತಿದೆ. ಯಕ್ಷಗಾನ ಎಂದ ಕೂಡಲೆ ಮುಖ ತಿರುಗಿಸುವವರೇ ಜಾಸ್ತಿ. ದೃಶ್ಯ ಮಾಧ್ಯಮದ ಮುಂದೆ ಯಕ್ಷಗಾನ ಎಂಬ ಕಲೆಯು ಇವತ್ತೋ ನಾಳೆಯೋ ಅನ್ನುವ ರೀತಿಯಲ್ಲಿದ್ದರೂ ಕೂಡಾ, ಇಲ್ಲೊಬ್ಬರು ಈ ಕಲೆಯಲ್ಲೇ ಸುಖವನ್ನು, ಸಾಕ್ಷಾತ್ಕಾರವನ್ನು ಪಡೆಯುತ್ತಿದ್ದಾರೆ. ಅವರೇ ಉಜಿರೆಯ ಎಸ್.ಡಿ.ಎಮ್. ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಓದುತ್ತಿರುವ ಸುಚಿತ್ರಾ ಕೆ. ಮೊದಲಿಗೆ ಸಣ್ಣ ಪುಟ್ಟ ಪಾತ್ರಗಳನ್ನು ನಿಭಾಯಿಸುತ್ತಿದ್ದ ಸುಚಿತ್ರಾ ಅವುಗಳಲ್ಲಿ ಕ್ರಮೇಣವಾಗಿ ಪಕ್ವಗೊಂಡಂತೆ, ರಾಜವೇಷ, ಸ್ತ್ರೀವೇಷ, ರಾಕ್ಷಸವೇಷ ಮುಂತಾದ ದೊಡ್ಡ ಮಟ್ಟದ ಪಾತ್ರಗಳನ್ನು ನಿರ್ವಹಿಸತೊಡಗಿದರು. ಅದರಲ್ಲಿ ಸಫಲತೆಯನ್ನೂ ಕೂಡಾ ಪಡೆದರು.

ಸುಚಿತ್ರಾ ಇಂದು ಸವಾಲಿನ ಪ್ರಸಂಗಗಳಾಗಿರುವ ದೇವೀ ಮಹಾತ್ಮೆ, ಬಭ್ರುವಾಹನ ಕಾಳಗ, ದಕ್ಷಯಜ್ಞ, ಶ್ರೀ ಕೃಷ್ಣ ಪಾರಿಜಾತ ಮುಂತಾದುವುಗಳಲ್ಲಿ ಯಶಸ್ವಿಯಾಗಿ ಉತ್ತಮ ಕಲಾಸೇವಕಿಯಾಗಿ ಹೊರಹೊಮ್ಮಿದ್ದಾಳೆ. " ತಾನು ಯಕ್ಷಗಾನವನ್ನು ತನ್ನ 9 ನೇ ವರ್ಷದಿಂದ ಕಲಿಯುತ್ತಿದ್ದೇನೆ, ಅಲ್ಲದೆ ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕ್ರತಿಕ ಕಾರ್ಯಕ್ರಮದ ಸಂದರ್ಭಗಳಲ್ಲಿಯೇ ತಾನು ಯಕ್ಷಗಾನದಲ್ಲಿ ತೊಡಗಿಕೊಂಡಿದ್ದೇನೆ. ನನ್ನ ಮನೆಯವರ ಸಹಕಾರ ಹಾಗೂ ಪ್ರೋತ್ಸಾಹದಿಂದಾಗಿ ತಾನು ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯ್ತು "ಎನ್ನುವುದು ಈ ಕಲಾಸಾಧಕಿಯ ಮನದಾಳದ ಮಾತುಗಳು
ಪ್ರಾರಂಭದಲ್ಲಿ ವೆಂಕಟೇಶ್ ಬಾಳ್ತಿಲ್ಲಾಯ ಅವರು ಈಕೆಯ ಮೊದಲ ಪ್ರಯತ್ನಕ್ಕೆ ಬೆಂಬಲ ನೀಡಿದ ಗುರುಗಳು. ನಂತರ ಸುಬ್ರಹ್ಮಣ್ಯ ಶಗ್ರಿತ್ತಾಯ, ಪ್ರಕಾಶ್ ಬಾಳ್ತಿಲ್ಲಾಯ ಮತ್ತು ಯೋಗೀಶ್ ಆಚಾರ್ಯ ಅಳದಂಗಡಿ ಇವರ ಗರಡಿಯಲ್ಲಿ ಮತ್ತಷ್ಟು ಪಕ್ವ ವೇಷಧಾರಿಯಾಗಿ ಹೊರಹೊಮ್ಮಿದಳು. ಈಕೆ ಕೇವಲ ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲದೆ ಧರ್ಮಸ್ಥಳ, ಮಂಗಳೂರು, ಪುತ್ತೂರು, ಉಡುಪಿ ಮುಂತಾದ ಬಹಳಷ್ಟು ಕಡೆ ಯಶಸ್ವಿಪ್ರದರ್ಶನವನ್ನು ನೀಡಿದ್ದಾಳೆ. ಅನೇಕ ಪ್ರತಿಷ್ಠಿತ, ಮಹಾನ್ ಯಕ್ಷಗಾನ ಕಲಾವಿದರಿಂದ "ಶಹಬ್ಬಾಸ್"ಗಿರಿಯನ್ನೂ ಗಿಟ್ಟಿಸಿಕೊಂಡಿರುತ್ತಾಳೆ. ಇತ್ತೀಚೆಗೆ ಮಂಗಳೂರಲ್ಲಿ ನಡೆದ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು ಗಳಿಸಿದ್ದಾಳೆ.

ಹಲವಾರು ಬಹುಮಾನ , ಪ್ರಶಸ್ತಿಗಳು ಇವಳನ್ನರಸಿಕೊಂಡು ಬಂದಿವೆ. ಪ್ರಾರಂಭದಲ್ಲಿ, ಯಕ್ಷಗಾನದ ವೇಷ ಭೂಷಣ, ಅದರ ನಾಟ್ಯವನ್ನು ನೋಡಿ ಯಕ್ಷಗಾನದತ್ತ ಪುಟ್ಟ ಹೆಜ್ಜೆಗಳೊಂದಿಗೆ ಪ್ರಾರಂಭವಾದ ಸುಚಿತ್ರಾಳ ಪಯಣವು, ಇಂದು ಒಬ್ಬ ಯಶಸ್ವಿ ಯಕ್ಷಗಾನ ಕಲಾವಿದೆಯಾಗಿ ಹೊರಹೊಮ್ಮುವ ತನಕ ಬೆಳೆದುಬಿಟ್ಟಿರುವುದು ಒಂದು ಹೆಮ್ಮೆಯ ವಿಷಯವೇ ಸರಿ. ಇಂದು ವಿಶ್ವವು ದೃಶ್ಯ ಮಾಧ್ಯಮ ಎಂಬ ಮಾಯಾಲೋಕದೊಡನೆ
ಸಾಗುತ್ತಿರುವ ಇಂತಹ ಸಂದರ್ಭ ದಲ್ಲಿ, ಸುಚಿತ್ರಾ ಎಂಬ ಬಾಲೆಯು ಯಕ್ಷಗಾನ ಎಂಬ ಸಾಂಸ್ಕೃತಿಕ ಕಲೆಯೊಂದಿಗೆ ಸಂತೋಷವನ್ನು ಕಂಡುಕೊಳ್ಳುತ್ತಿರುವುದು ನಿಜವಾಗಿಯೂ ಹೆಮ್ಮೆಯ ಸಂಗತಿಯಲ್ಲವೆ ...

ಪುಷ್ಪಾ ಬಿ.ಎಂ.
ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಮ್. ಕಾಲೇಜು, ಉಜಿರೆ.

2 comments:

Anonymous said...

ನಮಸ್ಕಾರ

ಅನೆಮರಿಯೊಂದಿಗಿನ ಚಿತ್ರ ತುಂಬ ಸುಂದರವಾಗಿದೆ. ಆಟಿ ಕಲಂಜದ ಮಾಹಿತಿ, ಟೆಂಟ್ ಶಾಲೆಯ ಸ್ವರೂಪ ದರ್ಶನ, ಹುತಾತ್ಮರಾದ ಕಾರ್ಗಿಲ್ ಯೋಧರ ಸ್ಮರಣೆ ಮತ್ತು ಎಲ್ಲ ಉಪಯುಕ್ತ ಲೇಖನಗಳು ಸುಂದರ, ಚಿತ್ರಗಳು ಮನೋಹರ ...

ಜಲಜ ರಾವ್

Padyana Ramachandra said...

ಸೊಗಸಾದ ಪ್ರಾಸ್ತಾವಿಕ ವಿಶ್ಲೇಷಣಾತ್ಮಕ ಲೇಖನ.

ಹವ್ಯಾಸಿ ಯಕ್ಷಗಾನ ಕಲಾವಿದೆ ಸುಚಿತ್ರಾ ಅವರನ್ನು ನಾಡಿನ ಹಾಗೂ ವಿದೇಶದ ಜನತೆಗೆ ಪರಿಚಯಿಸಿದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಪುಷ್ಪಾ ಬಿ.ಎಂ.ಅವರಿಗೆ ವಂದನೆಗಳು.

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್

Post a Comment