ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್

ಹಾಯ್ ಹೇಗಿದ್ದಿಯಾ...? ನನ್ನನ್ನು ಮರೆತು ಬಿಟ್ಟಿಯೋ...? ಯಾರೋ ಮಾತಾಡಿದಂತಾಯಿತು... ತಿರುಗಿ ನೋಡಿದೆ. ನೋಡಿದರೆ ಅಂಚಿನಲ್ಲಿ ತೂಗುಹಾಕಿದ್ದ `ಅಜ್ಜನ ಕೊಡೆ' ಮಾತನಾಡಿದಂತೆ ಭಾಸವಾಯಿತು. ಅದನ್ನು ನೋಡಿದ್ದೇ ಕ್ಷಣ... ಬಾಲ್ಯದ ನೆನಪುಗಳು ಮರುಕಳಿಸಿದವು. ಆಗಿನ ಬದುಕಿಗೂ ಈಗಿನ ವಾಸ್ತವ ಬದುಕಿಗೂ ಎಷ್ಟೊಂದು ವ್ಯತ್ಯಾಸ ಎಂದನಿಸಿತು.

ಆದರೆ ಯಾವ ಕೊಡೆ ಅಜ್ಜನ ಕೊಡೆ ಎಂದು ಹೇಳಿ ಶಾಲೆಗೆ ಕೊಂಡೊಯ್ಯಲು ಹಿಂಜರಿಯುತ್ತಿದ್ದೆವೋ ಅದೇಕೊಡೆ ಇಂದು ಒಂದಷ್ಟು ಮಾರ್ಪಾಟುಗೊಂಡು `ಫ್ಯಾಶನ್" ಆಗಿ ಬದಲಾಗಿದೆ. ಅದು ಬೇರೆ ಮಾತು ಬಿಡಿ. ಬಾಲ್ಯದ ಬಗ್ಗೆ ಯೋಚಿಸಿದಾಗ ಆ ದಿನಗಳು ಮಳೆಗಾಲದಲ್ಲಿ ಒಬ್ಬರ ಕೊಡೆಯನ್ನು ಇನ್ನೊಬ್ಬರ ಕೊಡೆಗೆ ತಾಗಿಸಿ ಪರಾರಿಯಾಗುತ್ತಿದ್ದುದು , ಕೊಡೆ ತಿರುಗಿಸುತ್ತಾ ಶಾಲೆಗೆ ಹೋಗುತ್ತಿದ್ದುದು ಇವೆಲ್ಲವೂ ಕಣ್ಣ ಮುಂದೆ ಹಾದು ಹೋಯಿತು.

ಅದು ಬಾಲ್ಯದ ನೆನಪುಗಳು. ಚಿಕ್ಕವರಿದ್ದಾಗ ಸ್ನೇಹಿತರೊಂದಿಗೆ ಕೆಸರುಗದ್ದೆಯಲ್ಲಿ ಕೆಸರು ನೀರಲ್ಲಿ ಆಡುತ್ತಾ, ಶಾಲೆಗೆ ತಲುಪುವಾಗ ಪೂರ್ತಿ ಒದ್ದೆ. ಅವೆಲ್ಲವೂ ಇಂದು ಸಿಹಿನೆನಪುಗಳಷ್ಟೆ. ಅಟೊ ರಿಕ್ಷಾ, ಸ್ಕೂಲ್ ವ್ಯಾನ್ ಗಳಲ್ಲಿ ಶಾಲೆಗೆ ತೆರಳುವ ಇಂದಿನ ಮಕ್ಕಳಿಗೆ ಈ ಮೋಜು ತಿಳಿಯದು.
ಇನ್ನೂ ಒಂದು ಸಂಗತಿಯಿದೆ. ಹಿಂದೆಲ್ಲಾ ತೆಳುಬಟ್ಟೆ ಹಿಡಿದು ತೋಡಿನ ನೀರಲ್ಲಿ ಮೀನು ಹಿಡಿಯಲು ಹೋಗುತ್ತಿದ್ದ ಆ ಸಂತಸ ಅನುಭವಿಸಿಯೇ ತಿಳಿಯಬೇಕು... ಆದರೆ ಇಂದಿನ ಮಕ್ಕಳು ಕಂಪ್ಯೂಟರ್ ಮುಂದೆ ಕೂತಲ್ಲಿಯೇ ಬೈಕ್, ಕಾರು ಓಡಿಸುತ್ತಾರೆ. ನಮ್ಮ ಬಾಯಲ್ಲಿ "ಕಣ್ಣಾ ಮುಚ್ಚೇ ಕಾಡೇ ಗೂಡೆ" ಹಾಡು ಬರುತ್ತಿತ್ತು... ಆದರೆ ಇಂದಿನ ನರ್ಸರಿ ಮಕ್ಕಳು... ಜಿಂಕೆ ಮರೀನಾ ಜಿಂಕೆ ಮರೀನಾ... ಎಂಬ ಹಾಡು ಗುನುಗುತ್ತಿರುತ್ತಾರೆ.

ಇವೆಲ್ಲಾ ತಪ್ಪೆಂದು ಹೇಳಲಾಗದು. ಆದರೆ ಆಧುನಿಕತೆಯ ಜೊತೆಗೆ ಪರಿಸರ ಪ್ರಜ್ಞೆ, ಮುಗ್ಧತೆಯೂ ಇರಬೇಕು. ದೊಡ್ಡವರು ಒಂದು ಮಾತು ಹೇಳಿದ್ದಾರರೆ. " ದೇಹಕ್ಕೆ ವಯಸ್ಸಾದರೂ ಮನಸ್ಸು ಮಗುವಿನಂತೆ ಇರಬೇಕು". ಆದರೆ ಈಗ ಮಕ್ಕಳಲ್ಲಿಯೂ ಮುಗ್ಧತೆ ಕಡಿಮೆಯಾಗುತ್ತಿದೆ.
ಇದನ್ನು ಸರಿಪಡಿಸುವುದು ಹೆತ್ತವರ ಕರ್ತವ್ಯವೂ ಹೌದು. ಬೇಸಿಗೆ ರಜೆಯಲ್ಲಾದರೂ ಮಕ್ಕಳನ್ನು ಪಟ್ಟಣದಿಂದ ಹಳ್ಳಿಗಳಿಗೆ ಕರೆದೊಯ್ದು ಅಲ್ಲಿನ ಪರಿಸರದ ಕುರಿತಾದ ಪರಿಚಯ ಮಾಡಿಸಬೇಕಾಗಿದೆ. ಹಳ್ಳಿ ಬದುಕಿನ ಅದರ ಸೊಗಡಿನ ಅನುಭವ ಅವರಿಗೆ ಆಗುವಂತಾಗಬೇಕಾಗಿದೆ.

ಜೊಸ್ವಿತ
ಪ್ರಥಮ ಬಿ.ಎ. ಪತ್ರಿಕೋದ್ಯಮ,
ಆಳ್ವಾಸ್ ಕಾಲೇಜು , ಮೂಡಬಿದಿರೆ.

0 comments:

Post a Comment