ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:40 PM

ಆಟಿ ಕಳಂಜ...

Posted by ekanasu

ವೈವಿಧ್ಯ

ಆಷಾಡ ಮಾಸವನ್ನು ಕರಾವಳಿ ಜಿಲ್ಲೆಯಲ್ಲಿ ಆಟಿ ತಿಂಗಳು ಎಂದು ಕರೆಯುತ್ತಾರೆ. ಅಂತಹ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ.ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು.ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಕರಾವಳಿ ಜಿಲ್ಲೆಯಲ್ಲಿ ಆಟಿ ತಿಂಗಳಲ್ಲಿ ವಿವಿದ ಆಚರಣೆಗಳು ನಡೆಯುತ್ತದೆ.ಅದರಲ್ಲಿ ಆಟಿ ಕಳೆಂಜ ಪ್ರಮುಖವಾಗಿದೆ.ಈ ಆಚರಣೆಯ ಮೂಲಕ ಜನ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ಆಟಿ ತಿಂಗಳಲ್ಲಿ ಯಾವುದೇ ಶುಭ ಕಾರ್ಯಗಳು ಕರಾವಳಿ ಜಿಲ್ಲೆಯಲ್ಲಿ ನಡೆಯುವುದಿಲ್ಲ. ಆಟಿ ತಿಂಗಳೆಂದರೆ ತುಂಬಾ ಕಷ್ಟದ ಸಮಯ ಎಂದೂ ನಂಬಲಾಗುತ್ತದೆ. ಈ ಆಟಿಯ ಸಮಯದಲ್ಲಿ ಒಮ್ಮೆ ದೋ.... ಸುರಿಯುವ ಮಳೆ .. ಇನ್ನೊಂದು ಕ್ಷಣದಲ್ಲಿ ಸುಡು ಬಿಸಿಲು. ... ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ಊರಿನಲ್ಲಿ ರೋಗಗಳು ಆರಂಭಗೊಳ್ಳುತ್ತಿದ್ದವು. ಹೀಗಾಗಿ ಆಟಿ ತಿಂಗಳು ಆರಂಭವಾಯಿತೆಂದರೆ ಜನ ಹೆದರುವ ಕಾಲವಿತ್ತು. ಇಂತಹ ಸಮಯದಲ್ಲಿ ಆರೋಗ್ಯ ಕಾಪಾಡಲು ಕೆಲ ಆಚರಣೆಗಳನ್ನು ಮಾಡಿದರೆ ಮಾನಸಿಕವಾಗಿ ಸಮಾಜವನ್ನು ಗಟ್ಟಿಗೊಳಿಸಲು ಇನ್ನೂ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿತ್ತು. ಅಂತಹ ಆಚರಣೆಗಳಲ್ಲಿ ಆಟಿ ಕಳೆಂಜ ಮುಖ್ಯವಾದ್ದು.ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆಯೊಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ.ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ.ಹೀಗೇ ಬೆಳೆದು ಬಂದ ಒಂದು ಆಚರಣೆ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ.ಆದ್ರೆ ಆಧುನಿಕವಾದ ಈ ಕಾಲದಲ್ಲಿ ಅದೆಲ್ಲಾ ಮೂಲೆಗುಂಪಾಗುತ್ತಿರುವುದು ಒಪ್ಪಲೇ ಬೇಕಾದ ಸತ್ಯ.


- ಮಹೇಶ್ ಪುಚ್ಚಪ್ಪಾಡಿ

1 comments:

BIDIRE said...

EDDE LEKHANA BARETINA MAHESHG SOLMELU

Post a Comment