ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ


ಸಮಸ್ಯೆ ಯಾವುದೂ ಇರಬಹುದು, ಯಾರಿಗೂ ಬರಬಹುದು. ಒಂದು ಮಾಧ್ಯವಾಗಿ ಸಮಸ್ಯೆಗೆ ಎರಡು ರೀತಿಯಲ್ಲಿ ಸ್ಪಂದಿಸಲು ಸಾಧ್ಯ. ಒಂದು: ಆ ಸಮಸ್ಯೆಯಿಂದ ಬಾಧಿತರಾಗಿರುವವರ ನೋವಿಗೆ ದನಿಯಾಗಿ, ಅವರ ಬಗ್ಗೆ ಒಂದಿಷ್ಟು ಅನುಕಂಪ ತೋರಿಸಿ ನಂತರ ಸುಮ್ಮನಾಗುವುದು. ಇನ್ನೊಂದು : ನೋವಿಗೆ ದನಿಯಾಗುವುದು ಮತ್ತು ಅನುಕಂಪತೋರುವುದಕ್ಕಿಂತ ಮಿಗಿಲಾಗಿ, ಸಮಸ್ಯೆಗೆ ಸ್ಪಷ್ಟ ಪರಿಹಾರ ಸೂಚಿಸುವುದು.
ಎರಡನೆಯ ಮಾದರಿಗೆ ಒಂದು ಅನನ್ಯ ಉದಾಹರಣೆ ಎಂದರೆ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್‌ನ ಅಡಿಕೆ ಪತ್ರಿಕೆ ಮತ್ತು ಅದರ ಕೃಷಿಕರ ಕೈಗೆ ಲೇಖನಿ ಕಾರ್ಯಕ್ರಮ.
ಪತ್ರಿಕೆ ಆರಂಭವಾದದ್ದು ಹೀಗೆ:

ಅದು ಎಂಭತ್ತರ ದಶಕದ ಮಧ್ಯಭಾಗ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯ ಮಾರುಕಟ್ಟ ಧಾರಣೆ ತೀವ್ರವಾಗಿ ಕುಸಿದಿತ್ತು. ಅಸಂಖ್ಯ ಅಡಿಕೆ ಬೆಳೆಗಾರರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾಲ ಅದು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಪುತ್ತೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಅಡಿಕೆ ಕೃಷಿಕರನ್ನು ಸಂಕಷ್ಟದಿಂದ ಪಾರುಮಾಡಲು ಮತ್ತು ಅಡಿಕೆ ಕೃಷಿಯಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಯೋಚಿಸಲಾರಂಭಿಸಿತು. ಇದೇ ಸಂದರ್ಭದಲ್ಲಿ (ಅಂದರೆ ೧೯೮೫-೮೬ರಲ್ಲಿ) ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಸ್ಥಾನವನ್ನು ವಾರಣಾಶಿ ಸುಬ್ರಾಯ ಭಟ್ಟರಿಂದ ಡಾ. ಪಿ ಕೆ ಎಸ್ ಭಟ್ ಪಾಣಾಜೆ ಇವರು ವಹಿಸಿಕೊಂಡರು.

ಸಂಘದ ಅಧ್ಯಕ್ಷತೆ ವಹಿಸಿಕೊಂಡ ತಕ್ಷಣವೇ ಒಂದಿಷ್ಟು ಸಮಾನ ಮನಸ್ಕ ಅಡಿಕೆ ಬೆಳೆಗಾರರನ್ನು ಸಂಘಕ್ಕೆ ಆಹ್ವಾನಿಸಿದ ಡಾ. ಭಟ್ ಅಡಿಕೆ ಕೃಷಿಯಲ್ಲಿ ತರಬಹುದಾದ ಸುಧಾರಣೆಗಳ ಕುರಿತು ಚರ್ಚಿಸಲು ಒಂದಷ್ಟು ಮಂದಿ ಸಮಾನ ಮನಸ್ಕರ ಸಭೆ ಸೇರಿಸಿದರು. ಇದೇ ಸಭೆಯಲ್ಲಿ ಅಡಿಕೆ ಬೆಳೆಗಾರರ ಆಶೋತ್ತರಗಳಿಗೆ ಸ್ಪಂದಿಸಲೆಂದೇ ಮತ್ತು ಅಡಿಕೆ ಕೃಷಿಯಲ್ಲಿ ಹೊಸ ಸಾಧ್ಯತೆಗಳ ಕುರಿತು ಮಾತುಕತೆ ನಡೆಸಲು ವೇದಿಕೆಯಾಗಿ ಒಂದು ಪತ್ರಿಕೆಯನ್ನು ಪ್ರಕಟಿಸುವ ಕುರಿತೂ ಚರ್ಚೆಯಾಯಿತು. ಸಂಘದ ವತಿಯಿಂದ ಹೊರತರಲು ಉದ್ದೇಶಿಸಿದ ಪತ್ರಿಕೆಯ ಜವಾಬ್ದಾರಿ ಆ ಸಮಯಕ್ಕಾಗಲೇ ಹವ್ಯಾಸಿ ಪತ್ರಕರ್ತರಾಗಿ ಹೆಸರು ಮಾಡಿದ್ದ ಶ್ರೀ ಪಡ್ರೆಯವರ ಹೆಗಲೇರಿತು.

ಅನಂತರ ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಘಟಿಸಿದ್ದು ಒಂದು ಇತಿಹಾಸವೇ ಸರಿ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರಕಾಶನದಡಿಯಲ್ಲಿ ಹೊರಬಂದರೂ ಸಂಘದ ಮುಖವಾಣಿಯಾಗಲೊಲ್ಲದ, ಇಡೀ ರೈತಸಮುದಾಯದ ಮುಖವಾಣಿಯಾಗುವ ಉದ್ದೇಶದೊಂದಿಗೆ ಶ್ರೀ ಪಡ್ರೆಯವರ ಸಂಪಾದಕತ್ವದಲ್ಲಿ ’ಅರೆಕಾ ನ್ಯೂಸ್’ ಎಂಬ ದ್ವೈಮಾಸಿಕ ಪತ್ರಿಕೆ ೧೯೮೭ರ ನವೆಂಬರ್ ತಿಂಗಳಿನಲ್ಲಿ ಜನ್ಮತಾಳಿತು. ಅರೆಕಾ ನ್ಯೂಸ್ ಎಂಬ ಇಂಗ್ಲಿಷ್ ನಾಮ ಹೊಂದಿದ್ದ ಕನ್ನಡ ಪತ್ರಿಕೆಗೆ ಸಿಕ್ಕ ಧನಾತ್ಮಕ ಪ್ರತಿಕ್ರಿಯೆ ಕಂಡ ಅಡಿಕೆ ಬೆಳೆಗಾರರ ಸಂಘ ಪತ್ರಿಕೆಯನ್ನು ಮಾಸಿಕವನ್ನಾಗಿಸುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರದೊಂದಿಗೆ ಹೊರಬಂದ ಪತ್ರಿಕೆಯೇ ಅಡಿಕೆ ಪತ್ರಿಕೆ. ಬಹುಷಃ ಅಡಿಕೆ ಪತ್ರಿಕೆ ಕನ್ನಡದ ಮೊಟ್ಟಮೊದಲ ’ಕೃಷಿಕರೇ ರೂಪಿಸಿದ ಕೃಷಿಕಪರ ಮಾಧ್ಯಮ.’

ಅಡಿಕೆ ಪತ್ರಿಕೆ ಎಂಬ ೧೯೮೮ರಲ್ಲಿ ಜನ್ಮತಳೆದ, ಈಗ ತನ್ನ ೨೨ರ ಹರೆಯದಲ್ಲಿರುವ, ಪುತ್ತೂರಿನಂತಹ ತಾಲೂಕು ಕೇಂದ್ರವೊಂದರಿಂದ ಹೊರಬರುತ್ತಿರುವ ಪತ್ರಿಕೆ ನಾಡಿನ ಸಮಸ್ತ ಮಾಧ್ಯಮಾಸಕ್ತರಿಗೆ ಅಧ್ಯಯನಯೋಗ್ಯ ವಿಷಯ. ಇದಕ್ಕೆ ಕಾರಣಗಳು ಹಲವಾರು.

ಅಡಿಕೆ ಪತ್ರಿಕೆಯ ಜನನದ ವರೆಗೆ ಕನ್ನಡದಲ್ಲಿ ಕೃಷಿ ಸಂಬಂಧಿ ಸಂವಹನ ಇರಲೇ ಇಲ್ಲ ಎಂದಲ್ಲ. ಆದರೆ ಅಲ್ಲಿಯವರೆಗೆ ಕೃಷಿ ಸಂಬಂಧಿ ಲೇಖನಗಳನ್ನು ಹೆಚ್ಚಾಗಿ ವಿಜ್ಞಾನಿಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳ ಉಪನ್ಯಾಸಕರೇ ಬರೆಯುತ್ತಿದ್ದರು. ದಿನವಿಡೀ ಜಮೀನಿನಲ್ಲಿ ದುಡಿಯುವ, ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ರೈತ ಕೃಷಿ ಪತ್ರಿಕೆಗಳಿಗೆ ಬರೆಯುವುದು ತೀರಾ ನಗಣ್ಯವಾಗಿತ್ತು. ಅದಲ್ಲದೆ, ಅಂದಿನ ಸಂದರ್ಭದಲ್ಲಿ ಕೃಷಿ ಪತ್ರಿಕೆಯೊಂದು ಸರಕಾರ ಅಥವಾ ವಿಶ್ವವಿದ್ಯಾಲಯಗಳ ಧನಸಹಾಯವಿಲ್ಲದೆ, ಕೇವಲ ಓದುಗ ಮತ್ತು ಜಾಹೀರಾತುದಾರ ನೀಡುವ ಹಣವನ್ನು ನೆಚ್ಚಿಕೊಂದು ನಡೆಯುವುದು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇತ್ತು. ಸರಕಾರದ ಸಹಾಯದ ಕೃಷಿ ಪತ್ರಿಕೆಗಳಿದ್ದರೂ ಅವುಗಳಲ್ಲಿ ರೈತ ಬರೆದ ಯಾವ ಲೇಖನಗಳೂ ಇರುತ್ತಿರಲಿಲ್ಲ. ಏಕೆಂದರೆ ರೈತ ತನಗಾಗಿ ತಾನು ಬರೆಯುತ್ತಲೇ ಇರಲಿಲ್ಲ.

ಇಂಥದ್ದೊಂದು ಅಲಿಖಿತ ನಿಯಮವನ್ನು ಮುರಿದು, ’ರೈತರಿಂದ ರೈತರೆಡೆಗೆ’, ’ರೈತರಿಂದ ವಿಜ್ಞಾನಿಗಳೆಡೆಗೆ’ ಮಾದರಿಯ ಸಂವಹನಕ್ಕೆ ಚಾಲನೆ ನೀಡಿದ್ದು ಅಡಿಕೆ ಪತ್ರಿಕೆ ಬಳಗ. ಅಡಿಕೆ ಪತ್ರಿಕೆಯ ಆಡಳಿತ ಮಂಡಳಿಯಲ್ಲಿರುವವರಿಂದ ಹಿಡಿದು ಸಂಪಾದಕರವರೆಗೆ ಎಲ್ಲರೂ ಕೃಷಿಕರೇ ಆಗಿರುವುದು ಇನ್ನೊಂದು ವಿಶೇಷ.

ಕೃಷಿಕರ ಕೈಗೆ ಲೇಖನಿ ಎಂಬ ಮೌನಕ್ರಾಂತಿ:

ಕೃಷಿಕರ ಅನುಭವಗಳು, ಆ ಅನುಭವದಿಂದ ದಕ್ಕುವ ಜ್ಞಾನವನ್ನೇ ಪತ್ರಿಕೆಯಲ್ಲಿ ಪ್ರಧಾನವಾಗಿ ಪ್ರಕಟಿಸಬೇಕು ಎಂಬ ಮೂಲೋದ್ದೇಶದಿಂದ ಜನ್ಮತಾಳಿದ ಅಡಿಕೆ ಪತ್ರಿಕೆಗೆ ರೈತರ ಕಡೆಯಿಂದ ಲೇಖನಗಳೆನೂ ಹರಿದುಬರಲಿಲ್ಲ. ಮೊದಮೊದಲು ಒಂದಷ್ಟು ಮಂದಿ ಉತ್ಸಾಹದಿಂದ ಬರೆದರೂ ಕೊನೆಗೆ ಅವರ ಲೇಖನ ಹರಿವಿನ ತೀವ್ರತೆ ಕುಗ್ಗಲಾರಂಭಿಸಿತು. ಪತ್ರಿಕೆಯ ಓದುಗರಿಗೆ ಹೆಚ್ಚಿನ ಮಾಹಿತಿ ನೀಡಲು ಮತ್ತು ಮಾಹಿತಿಗಳು ಹೆಚ್ಚು ಉಪಯುಕ್ತವಾಗಲು ವಿಸ್ತಾರವಾದ ಲೇಖಕರ ವರ್ಗದ ಅವಶ್ಯಕತೆ ಆ ಹೊತ್ತಿಗಾಗಲೇ ಅಡಿಕೆ ಪತ್ರಿಕೆ ಬಳಗಕ್ಕೆ ಅರಿವಾಗಿತ್ತು. ಆದರೇನು ಮಾಡುವುದು? ಕೃಷಿಕರೇನೂ ಮುಗಿಬಿದ್ದು ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಿರಲಿಲ್ಲ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಆರಂಭವಾಗಿದ್ದೇ ಕೃಷಿಕರ ಕೈಗೆ ಲೇಖನಿ ಎಂಬ ವಿನೂತನ ಕಾರ್ಯಕ್ರಮ.

ನೇಗಿಲು ಹಿಡಿದವನ ಕೈಗೆ ಲೇಖನಿ ಕೊಟ್ಟು ಬರೆಸುವ ಈ ಸಾಹಸದ ಬಗ್ಗೆ ಡಾ. ನಿರಂಜನ ವಾನಳ್ಳಿ ಹೇಳಿರುವ ಒಂದು ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. ಡಾ. ವಾನಳ್ಳಿ ಅಡಿಕೆ ಪತ್ರಿಕೆಯ ಬೆಳವಣಿಗೆಯನ್ನು ತುಂಬ ಹತ್ತಿರದಿಂದ ಗಮನಿಸಿದವರು. ಕಳೆದೆರಡು ದಶಕಗಳಿಂದ ಕರ್ನಾಟಕದಲ್ಲಿ ಕೃಷಿಕರ ಕೈಗೆ ಲೇಖನಿ ಎಂಬ ಮೌನಕ್ರಾಂತಿ ನಡೆಯುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ತಿರುವು ಕೊಟ್ಟ ಚಳವಳಿ ಇದು. ನಮ್ಮ ರೈತರ ಬಳಿ ಅಪಾರ ಅನುಭವ, ಜ್ಞಾನ ಇರುವುದು ಹೌದಾದರೂ ಅವರಲ್ಲಿ ಅನೇಕರು ಅನಕ್ಷರಸ್ಥರು. ಅಕ್ಷರಸ್ಥ ರೈತರಲ್ಲಿ ಬರೆಯುವ ಕೌಶಲ್ಯ ಸಾಕಷ್ಟು ಇಲ್ಲದ ಕಾರಣ ಕೃಷಿಯ ಬಗ್ಗೆ ಯಾರೂ ಬರೆಯಬಹುದು ಎಂಬ ವಾತಾವರಣ ಸೃಷ್ಟಿಯಾಗಿತ್ತು. ಯಾವತ್ತೂ ಕೃಷಿ ಮಾಡದವರು ಕೃಷಿಕ ಸಮೂಹದ ಏಕೈಕ ಧ್ವನಿಯೋ ಎಂಬಂತೆ ಬರೆಯುತ್ತಿದ್ದರು. ಇಂಥ ಒಂದು ಪರಿಸ್ಥಿತಿಯನ್ನು ನೋಡಿಯೇ ಶ್ರೀ ಪಡ್ರೆ ಮತ್ತು ಅವರ ಸ್ನೇಹಿತರು ಕೃಷಿಕರ ಕೈಗೆ ಲೇಖನಿ ಆಂದೋಲನವನ್ನು ಆರಂಭಿಸಿದರು ಎನ್ನುತ್ತಾರೆ ಡಾ. ವಾನಳ್ಳಿ.

ಅಡಿಕೆ ಪತ್ರಿಕೆಯ ಪುಟದಲ್ಲಿ ಒಂದು ಪುಟ್ಟ ಪ್ರಕಟಣೆಯ ಮೂಲಕ ’ಕೃಷಿಕರ ಕೈಗೆ ಲೇಖನಿ’ ತರಬೇತಿ ಶಿಬಿರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಯಿತು. ರೈತರು ತಮ್ಮ ಅರ್ಜಿಗಳ ಜೊತೆಗೆ ಅವರ ಬರಹದ ಒಂದು ಪ್ರತಿಯನ್ನೂ ಇಡುವಂತೆ ಕೇಳಿಕೊಳ್ಳಲಾಯಿತು. ಹಾಗೆ ಪಡೆದುಕೊಂಡ ಅರ್ಜಿ ಮತ್ತು ಬರಹದ ಮಾದರಿಯ ಆಧಾರದ ಮೇಲೆ ೨೫-೩೦ ಮಂದಿ ಶಿಬಿರಾರ್ಥಿ ಕೃಷಿಕರನ್ನು ಆಯ್ಕೆ ಮಾಡಲಾಯಿತು. ಶಿಬಿರ ನಡೆಯುವ ಊರಿನ ರೈತರ ಜೊತೆ ಮಾತನಾಡಿ ಅವರಿಗೆ ಈ ಶಿಬಿರದ ಬಗ್ಗೆ ವಿಶ್ವಾಸ ಮೂಡುವಂತೆ ಮಾಡುವ ಕೆಲಸವೂ ಆಯಿತು. ಆ ಊರಿನ ರೈತರ ಬಳಿ ತರಬೇತುದಾರರಾಗಿ ಬರುವ ಸಂಪನ್ಮೂಲ ವ್ಯಕ್ತಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಬಗ್ಗೆಯೂ ಮಾತುಕತೆ ನಡೆಸಲಾಯಿತು. ನಾಲ್ಕು ದಿನಗಳ ಕಾಲ ನಡೆಯುವ ಪ್ರತಿ ಶಿಬಿರದಲ್ಲಿಯೂ ಉಪನ್ಯಾಸ ಕಾರ್ಯಕ್ರಮ ಹೊರತುಪಡಿಸಿ ಅನೇಕ ಪ್ರಾಯೋಗಿಕ ತರಗತಿಗಳೂ ಇದ್ದವು. ಬರಹಕ್ಕೆ ವಿಷಯವನ್ನು ಗುರುತಿಸುವ ಮತ್ತು ಆಯ್ದುಕೊಳ್ಳುವ ಬಗ್ಗೆ, ಬರಹದ ವಿಧಾನಗಳ ಬಗ್ಗೆ ಮತ್ತು ಅದನ್ನು ಪ್ರಸ್ತುತಪಡಿಸುವ ವಿಧಾನಗಳ ಕುರಿತು, ಅಭ್ಯುದಯ ಸಂವಹನ, ಕೃಷಿ ಪತ್ರಿಕೋದ್ಯಮ ಮತ್ತು ಪರಿಸರ ಹೀಗೆ ಅನೇಕ ವಿಚಾರಗಳ ಕುರಿತು ಸರಣಿ ಉಪನ್ಯಾಸ ಮತ್ತು ಪ್ರಾಯೋಗಿಕ ತರಗತಿಗಳನ್ನು ತೆಗೆದುಕೊಳ್ಳಲಾಯಿತು.

ಪ್ರತಿ ಶಿಬಿರದಲ್ಲಿಯೂ ಮೂರು ಪ್ರಾಯೋಗಿಕ ಬರಹದ ತರಗತಿಗಳು ಇದ್ದವು. ಮೂರನೆಯ ಬಾರಿ ಶಿಬಿರಾರ್ಥಿಗಳು ತಮ್ಮ ಹತ್ತಿರದ ಹೊಲಕ್ಕೋ ತೋಟಕ್ಕೋ ಹೋಗಿ ಅಲ್ಲಿ ತಮ್ಮ ಬರಹಕ್ಕೆ ವಸ್ತುವಾಗಬಲ್ಲ ವಿಷಯವೊಂದನ್ನು ಹುಡುಕಿ ನುಡಿಚಿತ್ರವೊಂದನ್ನು ಬರೆಯಬೇಕಿತ್ತು. ತಾವು ಶಿಬಿರದಲ್ಲಿ ಕಲಿತ ಎಲ್ಲ ಬಗೆಯ ಪ್ರಾಯೋಗಿಕ ವಿಚಾರಗಳು ಆಗ ಬಳಕೆಗೆ ಬರುತ್ತಿದ್ದವು. ಹಾಗೆ ಶಿಬಿರಾರ್ಥಿಗಳು ಬರೆದ ನುಡಿಚಿತ್ರವನ್ನು ಅಡಿಕೆ ಪತ್ರಿಕೆಯ ಸಂಪನ್ಮೂಲ ವ್ಯಕ್ತಿಗಳು ಮೌಲ್ಯಮಾಪನ ಮಾಡುತ್ತಿದ್ದರು. ಶಿಬಿರಾರ್ಥಿಗಳ ಪೈಕಿ ಆಯ್ದ ಹತ್ತು ಮಂದಿಗೆ ತಮ್ಮ ಬರಹವನ್ನು ಓದಿ ಹೇಳುವಂತೆ ತಿಳಿಸಲಾಗುತ್ತಿತ್ತು. ಪ್ರತಿಯೊಬ್ಬ ಶಿಬಿರಾರ್ಥಿ ತನ್ನ ಬರಹವನ್ನು ಓದಿದ ನಂತರ ಸಂಪನ್ಮೂಲ ವ್ಯಕ್ತಿಗಳು ಆತನ ಬರವಣಿಗೆ, ಪ್ರಸ್ತುತಪಡಿಸುವ ಶೈಲಿಯ ಕುರಿತು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಇದರಿಂದ ಎಲ್ಲ ಶಿಬಿರಾರ್ಥಿಗಳಿಗೂ ತಮ್ಮ ಬರಹವನ್ನು ಸುಂದರವಾಗಿಸುವ ಕುರಿತು ಸ್ಪಷ್ಟ ಕಲ್ಪನೆ ಮೂಡುತ್ತಿತ್ತು.

ಅಡಿಕೆ ಪತ್ರಿಕೆಯ ಮೂಲಕ ನಾವು ನಮ್ಮ ಕೃಷಿಕ ಓದುಗರಿಗೆ ಬರೆಯುವಂತೆ ಆಹ್ವಾನ ನೀಡಿದ್ದೆವು. ನಾವು ಕೃಷಿಕರಿಂದ ದೊಡ್ಡ ಮಟ್ಟದ ಲೇಖನಗಳನ್ನು ನಿರೀಕ್ಷಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಕೆಲವೇ ದಿನಗಳಲ್ಲಿ ಸುಳ್ಳಾಯಿತು. ನಮ್ಮ ಆಹ್ವಾನಕ್ಕೆ ಬಂದ ಸಣ್ಣ ಮಟ್ಟದ ಪ್ರತಿಕ್ರಿಯೆ ನೋಡಿ ಈ ಬಗ್ಗೆ ಏನಾದರೂ ಮಾಡಬೇಕು, ಕೃಷಿಕರು ತಮ್ಮ ಸಮಸ್ಯೆ, ಸಾಧನೆಗಳ ಬಗ್ಗೆ ತಾವೇ ಬರೆಯುವಂತಾಗಬೇಕು ಎಂಬ ಉದ್ದೇಶದಿಂದ ಕೃಷಿಕರ ಕೈಗೆ ಲೇಖನಿ ಕಾರ್ಯಕ್ರಮ ಆರಂಭವಾಯಿತು ಎನ್ನುತ್ತಾರೆ ಶ್ರೀ ಪಡ್ರೆ. ಅಂದಹಾಗೆ ಇದುವರೆಗೆ ಶಿರಸಿ ತಾಲೂಕಿನ ಭೈರುಂಬೆ ಮತ್ತು ಯಡಳ್ಳಿ, ಕಾಸರಗೋಡು ತಾಲೂಕಿನ ನೀರ್ಚಾಲು, ಕೊಪ್ಪ, ಚಿತ್ರದುರ್ಗದ ಭೀಮಸಮುದ್ರ ಸೇರಿದಂತೆ ವಿವಿಧೆಡೆ ಇಂಥ ಆರು ಕಾರ್ಯಕ್ರಮಗಳು ನಡೆದಿವೆ. ಅದಲ್ಲದೆ ಮೊಟ್ಟಮೊದಲ ಕೃಷಿಕರ ಕೈಗೆ ಲೇಖನಿ ಶಿಬಿರ ನಡೆದ ಎರಡು ದಶಕಗಳೇ ಕಳೆದಿವೆ.

ನಾಡಿನ ವಿವಿಧೆಡೆ ನಡೆದ ಈ ಕಾರ್ಯಕ್ರಮಗಳಲ್ಲಿ ಬರವಣಿಗೆಯ ಪ್ರಾಥಮಿಕ ಜ್ಞಾನ ಪಡೆದ ಅನೇಕ ಮಂದಿ ಇವತ್ತು ಅಡಿಕೆ ಪತ್ರಿಕೆಯ ಬರಹಗಾರರ ಪಡೆಯಲ್ಲಿ ಸೇರಿದ್ದಾರೆ. ಇನ್ನೂ ಅನೇಕ ಮಂದಿ ನಾಡಿನ ವಿವಿಧ ಪತ್ರಿಕೆಗಳಿಗೆ ಕೃಷಿ ಸಂಬಂಧಿ ವಿಚಾರಗಳ ಬಗ್ಗೆ ಬರೆಯುತ್ತಿದ್ದಾರೆ. ಅವರ್ಯಾರೂ ರೈತರ ನೋವಿಗೆ ಕೇವಲ ಧ್ವನಿಯಾಗಿ, ತಮ್ಮ ಆಕ್ರೋಶವನ್ನು ಅಕ್ಷರ ರೂಪಕ್ಕಿಳಿಸಿ ನಂತರ ಸುಮ್ಮನೆ ಕೂರುವುದಿಲ್ಲ. ಬದಲಿಗೆ, ರೈತನ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ. ತಮ್ಮದೇ ಒಂದು ಸಮಸ್ಯೆಗೆ ತಾವೇ ಕಂಡುಕೊಂಡ ಪರಿಹಾರವನ್ನೂ ಬರಹರೂಪಕ್ಕಿಳಿಸುತ್ತಾರೆ. ತನ್ಮೂಲಕ ಅದೇ ರೀತಿಯ ಸಮಸ್ಯೆ ಎದುರಿಸುತ್ತಿರುವ ಇನ್ನೊಬ್ಬ ರೈತನಿಗೆ ಪರಿಹಾರ ಸೂಚಿಸುವ ಕೆಲಸ ಮಾಡುತ್ತಾರೆ. ನಾಡಿನೆಲ್ಲೆಡೆ ರೈತಾಪಿ ಎಂದರೆ ನಷ್ಟದ ಕಾಯಕ ಎಂಬ ನಂಬಿಕೆಯೇ ಗಟ್ಟಿಯಾಗಿರುವಾಗಲೂ, ಕೃಷಿಯನ್ನು ಲಾಭದಾಯಕವಾಗಿಸಬಹುದು ಎಂದೂ ವಿಶ್ವಾಸದಿಂದ ಹೇಳುತ್ತಾರೆ. ಅಭ್ಯುದಯ ಮಾಧ್ಯಮವೊಂದು ನಾಡಿನ ಸಮಸ್ಯೆಗೆ ಸ್ಪಂದಿಸುವ ವಿಧಾನಕ್ಕೆ ಮಾದರಿ ಎಂಬಂತೆ ಈ ಆಂದೋಲನ ಬೆಳೆದುನಿಂತಿದೆ.


ವಿಜಯ್ ಜೋಶಿ

0 comments:

Post a Comment