ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಜಲ ಕಣಗಳೆಲ್ಲಾ ಇಲ್ಲಿ ಕ್ಷಣ ಕಾಲ ಹಾಲಿನ ಕಣಗಳಂತೆ ಕಾಣಿಸುತ್ತದೆ.ಆ ಬಳಿಕ ಮತ್ತೆ ನೀರ ಧಾರೆಯಾಗಿ ಓಡೋಡುತ್ತಾ ಕಡಲ ಒಡಲು ಸೇರಲು ತವಕದಿಂದ ಧಾವಿಸಿ ಬರುತ್ತದೆ.ಈ ನಡುವಿನ ಸಮಯದಲ್ಲಿ ಅಲ್ಲಿ ಸೃಷ್ಠಿಯಾಗುವ ದೃಶ್ಯವು ಜಲಕಾವ್ಯವನ್ನೇ ಸೃಷ್ಠಿಸಿ ಬಿಡುತ್ತದೆ.ಅಂದ ಹಾಗೆ ಈ ದೃಶ್ಯ ಕಾವ್ಯವನ್ನು ನೋಡಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕಲ್ಲಾಜೆ ಜಲಪಾತಕ್ಕೆ ಬರಲೇ ಬೇಕು. ನಿಜಕ್ಕೂ ಅದೊಂದು ಪಿಕ್ನಿಕ್ ಸ್ಪಾಟ್.ಆದರೆ ಕಾಡಿನ ಪರದೆ ಅದಕ್ಕೊಂದು ಅಡ್ಡದಾಗಿರುವ ಕಾರಣದಿಂದಾಗಿ ಈ ಸ್ಪಾಟಿಗೆ ಬೆಳಕೇ ಹರಿದಿಲ್ಲ.ಅಷ್ಟಕ್ಕೂ ಈ ಫಾಲ್ಸ್ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು 13 ಕಿಲೋ ಮೀಟರ್ ದೂರದ ನಡುಗಲ್ಲು ಬಳಿಯಲ್ಲಿ. ನಡುಗಲ್ಲಿನಿಂದ ಒಂದೆರಡು ಕಿಲೋ ಮೀಟರ್ ದೂರ ಕಾಡಿನ ಒಳಗೆ ಸಾಗಿದಾಗ ಸಿಗುವ ಸ್ಪಾಟ್ ಕಲ್ಲಾಜೆ.ಇಲ್ಲೇ ಇರುವ ಜಲಪಾತವೇ ಕಲ್ಲಾಜೆ ಫಾಲ್ಸ್.ನೋಡುವುದಕ್ಕೆ ಸುಂದರವಾಗಿರುವ ಈ ಜಲಪಾತ ಮನಸ್ಸನು ತಣಿಸುತ್ತದೆ.ಇದೇ ಸ್ಪಾಟಲ್ಲಿ ಒಂದು ಪ್ರಮುಖ ಜಲಪಾತ ಹಾಗೂ ಇನ್ನೊಂದು ಕಿರು ಜಲಪಾತ ಧುಮುಕುತ್ತದೆ. ನೋಡುತ್ತಾ ನಿಂತರೆ ಜೋಗವನ್ನು ನೆನಪಿಸುತ್ತದೆ.ರಾಜ ಮತ್ತು ರಾಣಿ ಎಂಬೆರಡು ಪ್ರತ್ಯೇಕ ಫಾಲ್ಸ್ ಇಲ್ಲಿ ಕಾಣುವುದು. ಸಿನಿಮಾ ಶೂಟಿಂಗ್ ಮಾಡಲೂ ಇದೊಳ್ಳೆಯ ಸ್ಪಾಟ್.ಇಲ್ಲಿ ಸುಮಾರು 70 ಅಡಿ ಎತ್ತರದಿಂದ ಇಲ್ಲಿ ನೀರು ಬೀಳುತ್ತದೆ.ಅದೂ ಎರಡು ಅಂತಸ್ತಿನಲ್ಲಿ.ಜಲಪಾತದ ಸುತ್ತಲೂ ಹಸಿರು ಕಾಡು. ಉದ್ದುದ್ದದ ಬಳ್ಳಿಗಳು , ಚಾರುಲತೆಗಳು.ಕಣ್ಣು ಹಾಯಿಸಿದ ಉದ್ದಕ್ಕೂ ಹಸಿರು ಹಸಿರು. ಕಿವಿಗೆ ಜಲಪಾತದ ಸದ್ದಿನೊಂದಿಗೆ ಜೀರುಂಡೆಗಳ ಝೇಂಕಾರದ ಮ್ಯೂಸಿಕ್. ಕಾಡಿನೊಳಗೆ ಹೊಕ್ಕರೆ ಜಿಗಣೆಗಳ ಸ್ವಾಗತ.ಸ್ವಲ್ಪ ಕಾಲ ಕಾಡಿನಲ್ಲಿ ನಡಿಯೋಕೆ ಸಿದ್ದವಾದರೆ ರಕ್ತದಾನಕ್ಕೆ ಸಿದ್ದವಾಗಲೆ ಬೇಕು.ಅಷ್ಟೂ ಜಿಗಣೆಗಳು ನಿಮ್ಮನ್ನು ಸ್ವಾಗತಿಸುತ್ತವೆ.ಇಷ್ಡಲ್ಲಾ ಇದ್ರೂ ಈ ಜಲಪಾತ ಇಲ್ಲೊಂದು ದೃಶ್ಯ ವೈಭವವನ್ನು ಸೃಷ್ಠಿಸುತ್ತಲೇ ಇರುತ್ತದೆ.ಆದರೆ ಜೂನ್ ತಿಂಗಳಿಂದ ನವೆಂಬರ್ ತನಕ ಮಾತ್ರಾ.ಕಾಡಿನ ಒಡಲಿನಿಂದ ಸಂಗ್ರಹವಾಗಿ ಬರುವ ಜಲ ಬಳುಕುತ್ತಾ ಮುಂದೆ ಬಂದು ಕಲ್ಲಾಜೆಯ ಬಳಿಯಲ್ಲಿ ಹಾಲಿನ ಹೊಳೆಯಂತೆ ಕಾಣಿಸಿಕೊಂಡು ಮುಂದೆ ತೆವಳಿಕೊಂಡು ಹೋಗುತ್ತದೆ.ಈ ಎಲ್ಲಾ ದೃಶ್ಯವನ್ನು ಮಾತ್ರಾ ಕಣ್ಣಾರೆ ಸವಿಯಲೇ ಬೇಕು. ಕಾನನದ ನಡುವೆ ಹೀಗೆ ಇರುವ ಜಲಪಾತಗಳು ಅದೆಷ್ಟೋ.ಆದರೆ ಅಲ್ಲಿನ ಪರದೆಗಳು ಸರಿಯದೇ ಇರುವ ಕಾರಣದಿಂದಾಗಿ ಹೊರಜಗತ್ತಿಗೆ ಅದರ ಇರುವಿಕೆ ಗೊತ್ತಾದೇ ಗುಪ್ತಗಾಮಿನಿಯಗಿ ಸೌಂದರ್ಯವನ್ನು ತನ್ನೊಳಗೇ ಇಟ್ಟುಕೊಂಡಿದೆ.

0 comments:

Post a Comment