ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಉಡುಪಿ: ಇವರ ಬದುಕು ನೆನೆಸಿಕೊಂಡರೆ ನಿದ್ದೆಯಲ್ಲೂ ಬೆಚ್ಚಿ ಬೀಳಬೇಕಾಗುತ್ತದೆ! ಹೀಗೂ ಬದುಕುತ್ತಾರಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮೂಲಭೂತ ಸೌಲಭ್ಯವಿಲ್ಲದೆ ಪ್ರಾಣಿಗಿಂತಲೂ ಹೀನ ಬದುಕು ಇವರದ್ದು. ಅದೂ ರಸ್ತೆ ಬದಿಯಲ್ಲಿ ವಾಸಮಾಡೋ ಈ ಮಂದಿಗೆ ಟೆಂಟೇ ದಿಕ್ಕುದಿಶೆ. ಹೊಟ್ಟೆ ಪಾಡಿಗಾಗಿ ಎಲ್ಲಿಂದಲೋ ಬಂದು ಉಡುಪಿ ಕಲ್ಯಾಣಪುರ ಮಧ್ಯದ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 17ರ ಮಗ್ಗಲೇ ಇವರಿಗೆ ಅರಮನೆ. ಟೆಂಟ್ ಹೌಸ್ನಲ್ಲಿ ವಾಸಾಮಾಡೋ ವಲಸೆ ಕಾರ್ಮಿಕರ ಬದುಕು ಪಕ್ಕಾ ನರಕ. ಧವಾಖಾನೆ, ಪಾಯಿಖಾನೆ ಸ್ನಾನ, ಊಟ, ನಿದ್ದೆ, ಮಿಲನ
ಎಲ್ಲವೂ ಟೆಂಟ್ ಹೌಸ್ ಒಳಗೆ!

ಎಲ್ಲಿಂದಲೋ ಬಂದವರು : ಚಿಕ್ಕಚಿಕ್ಕ ಗುಬ್ಬಚ್ಚಿಗೂಡಿನಷ್ಟು ಅಗಲದ ಟೆಂಟ್ ಮನೆಯಲ್ಲಿ ತಲೆಯೆತ್ತಿ ನಿಲ್ಲೋದಾಗಲೀ, ಕಾಲುಚೆಲ್ಲಿ ಮಲಗಲೂ
ಸಾಧ್ಯವಿಲ್ಲ. ನಾಲ್ಕು ಜನ ಒಟ್ಟಾಗಿ ಪಟ್ಟಾಂಗ ಹೊಡೆಯಲೂ ಬರೋದಿಲ್ಲ. ಮನೆಯ ಒಳಗೆ ಇಬ್ಬರಿದ್ದರೆ ಮತ್ತುಳಿದವರು ಹೊರಗೆ ಇರಬೇಕಾದ ಸ್ಥಿತಿ. ಅಂಗೈ ಅಗಲದ ಟೆಂಟ್ ಮನೆಯೇ ಇವರಿಗೆ ಅರಮನೆ. ಗಾಳಿ, ಬೆಳಕು, ನೀರು, ವಿದ್ಯುತ್, ಶಿಕ್ಷಣ ಮುಂತಾದ ಮೂಲಭೂತ ಸೌಲಭ್ಯಗಳು ಟೆಂಟ್ ಹೌಸಿನಲ್ಲಿ ಅರ್ಥ ಕಳೆದುಕೊಂಡಿದೆ. ಇಂಥಹಾ ಹೀನ ಸ್ಥಿತಿಯಲ್ಲಿ ಮನುಷ್ಯರು ಬದುಕುತ್ತಾರಾ ಅಂದರೆ ಜೀರ್ಣಿಸಿಕೊಳ್ಳುವುದು ಕಷ್ಟ. ಪ್ರಾಣಿಗಿಂತಲೂ ಹೀನ ಸ್ಥಿತಿಯಲ್ಲಿ ಅಲೆಮಾರಿ ಕಾರ್ಮಿಕರು ಬದುಕುತ್ತಿದ್ದಾರೆ ಅಂದರೆ ಅದು ಅವರಿಗೆ ಅನಿವಾರ್ಯ. ಸಂಪೂರ್ಣ ಸಾಕ್ಷರತೆ, ಬುದ್ದಿವಂತರ ಜಿಲ್ಲೆ ಪಿಳ್ಳಂಗೋವಿ ಕೃಷ್ಣನ ನಾಡೆಂದೇ ಪ್ರಖ್ಯಾತಿ ಪಡೆದ ಉಡುಪಿ ಜಿಲ್ಲೆಯಲ್ಲಿ ಇಂಥಹದ್ದೊಂದು ಅಪಸೌವ್ಯ ಎಂದರೆ ನಂಬಲಾಗದಿದ್ದರೂ ಕಠೋರ ಸತ್ಯ. ವಿಚಿತ್ರ ಆಚರಣೆಯ, ವಿಭಿನ್ನ ನಂಬಿಕೆಯ ಅಂಧಶ್ರದ್ಧೆಯ ನಂಬಿಕೆ ಮಂದಿ ಉಡುಪಿಯವರಲ್ಲಿ ಹೊಟ್ಟೆ ಹೊರೆದುಕೊಳ್ಳಲು ಎಲ್ಲಿಂದಲೋ ಬಂದವರು.

ಯಾರೂ ಇಲ್ಲಿಯವರಲ್ಲ : ಉಡುಪಿ ರಾಷ್ಟ್ರೀಯ ಹೆದ್ದಾರಿ ಮಗ್ಗಲಿನ ನಿಟ್ಟೂರಿನಲ್ಲಿ ಟೆಂಟ್ ಹೂಡಿ ಬದುಕು ಕಟ್ಟಿಕೊಳ್ಳಲು ಬಂದವರಾರು ಇಲ್ಲಿಯವರಲ್ಲ. 30ಕ್ಕೂ ಮಿಕ್ಕ ಮನೆಯಲ್ಲಿ ಮಕ್ಕಳು ಮರಿಗಳು ಸೇರಿ 300ಕ್ಕೂ ಮಿಕ್ಕ ಕ್ರೌಡ್ ಇದೆ.ರಾಜ್ಯದ ವಿವಿಧ ಜಿಲ್ಲೆಗಳಿಂದ ಕೆಲಸ ಹುಡುಕಿ ಉಡುಪಿಗೆ ಬಂದಿದ್ದಾರೆ. ಕುಷ್ಟಗಿ, ಲಕ್ಷ್ಮೀಪುರ, ಧಾರವಾಡ, ಹುಬ್ಬಳ್ಳಿ, ಬೆಳಗಾಂ ಕಡೆಯಿಂದ ಇಲ್ಲಿ ಬಂದು ಕುಳಿತಿದ್ದಾರೆ. ಕಳೆದ 15 ವರ್ಷದಿಂದ ನಿಟ್ಟೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ವಿಚಿತ್ರ ನಂಬಿಕೆಯ ಬುಡಕಟ್ಟು ಜಂಗಮ ಜನಾಂಗದವರಾದ ಇವರು ಹೆಮ್ಮಕ್ಕಳಿಗೂ ವೆಂಕಟರಮಣಾ ಅಂತ ನಾಮಕರಣ ಮಾಡುತ್ತಾರೆ! ಹಸನಪ್ಪ, ಹಸನಮ್ಮ, ಚಂದ್ರಮ್ಮ, ಮಲ್ಲಮ್ಮ,ಮಲ್ಲಪ್ಪ, ಯಲ್ಲಮ್ಮ, ಯಲ್ಲಪ್ಪ ಮುಂತಾದ ಹೆಸರು ಸವಕಲು ನಾಣ್ಯ. ಹಿಂದೂ ಹೆಸರಿನ ಮುಸ್ಲಿಂ ಇದ್ದಾರೆ. ಮುಸ್ಲಿಂ ಹೆಸರಿಟ್ಟುಕೊಂಡ ಹಿಂದುಗಳಿದ್ದಾರೆ. ಒಟ್ಟಿನಲ್ಲಿ ಇಲ್ಲಿ ಜಾತಿಯ ಸಾಮರಸ್ಯವಿದೆ. ನಿಟ್ಟೂರು ಮಗ್ಗಲಲ್ಲಿ ವಾಸಮಾಡುವ ಅಲೆಮಾರಿ ಜನಾಂಗದ ಪಕ್ಕದಲ್ಲಿ ಉಡುಪಿ ನಗರಸಭೆ ಕೊಚ್ಚೆನೀರು ಶುದ್ಧಿಕರಣ ಘಟಕವಿದೆ. ಬೇಸಿಗೆಯಲ್ಲಂತೂ ಇವರ
ಬದುಕು ದೇವರಿಗೆ ಪ್ರೀತಿ. ಸೊಳ್ಳೆ ರಾತ್ರಿ ಸಂಗಾತಿ. ಮಲೇರಿಯಾ ಕೂಡಾ ಇವರೊಟ್ಟಿಗಿದೆ. ದುಡಿಯ ಬೇಕು ಹೊಟ್ಟೆ ತುಂಬಿಸಿಕೊಳ್ಳಬೇಕು. ಇವರ ಬದುಕು ಒಂಥರ ಅಂಗಡಿ ಅಕ್ಕಿ ಬಂಗಡೆ ಮೀನು!

ತರಾವರಿ ಮಂದಿ ಇದ್ದಾರೆ : ಟೆಂಟ್ ಮನೆಯಲ್ಲಿ ವಾಸಮಾಡೋ ಈ ಜನರಲ್ಲಿ ತರಾವರಿ ವೃತ್ತಿಯ ಮಂದಿಯಿದ್ದಾರೆ. ಕೆಲವರು ಮಲ್ಪೆ ಬಂದರಿನಲ್ಲಿ ಮೀನು ಗೋರಲು ಹೋಗುತ್ತಾರೆ. ಮತ್ತೆ ಕೆಲವರು ಕೂಲಿಗಿಳಿಯುತ್ತಾರೆ. ತಬಲ, ಹಾರ್ಮೋನಿಯಂ, ಬಕೇಟ್ ಸ್ಟವ್, ಕೊಡೆ ರಿಪೇರಿ ಕಾಯಕ ಮಾಡುತ್ತಾರೆ. ಮಹಿಳೆಯರೂ ಕೂಲಿ ಮಾಡುತ್ತಾರೆ. ಮತ್ತೆ ಕೆಲವರು ವೇಷ ಹಾಕಿ ದುಡಿಯುತ್ತಾರೆ. ಸಂಜೆ ಟೆಂಟ್ ಗೂಡು ಹೊಕ್ಕರೆ ಮತ್ತದೇ ಸೂರ್ಯೋದಯಕ್ಕೆ ಟೆಂಟ್ ಕಾಲಿಯಾಗುತ್ತದೆ. ಟೆಂಟ್ ಕಾವಲಿಗೆ ಒಂದಿಬ್ಬರು ಉಳಿಯುತ್ತಾರೆ. ದೇವರ ತಲೆಯ ಮೇಲೆ ಹೂವು ತಪ್ಪಿದರೂ ಈ ಪದ್ದತಿ ಮಾತ್ರ ತಪ್ಪೊಲ್ಲ. ಮಲ್ಪೆ ಬಂದರಿಗೆ ಕೆಲಸಕ್ಕೆ ಹೋಗುವವರಿಗೆ ದೋಣಿಗಳಿಗೆ ಹೆಚ್ಚು ಮೀನು ಸಿಕ್ಕರೆ ಪಾಯಿದೆ ಬರುತ್ತದೆ. ಮೀನಿಲ್ಲದಿದ್ದರೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯೇ ಗತಿ. ಮಳೆಗಾಲದಲ್ಲಿ ಮೀನುಗಾರಿಕೆಗೆ ರಜಾ ಇರೋದ್ರಿಂದ ಇವರ ಪಾಡು ಹೇಳತೀರ.
ಇವರೆಲ್ಲಾ ಹುಟ್ಟಿದಾರಭ್ಯ ಊರು ಬಿಟ್ಟವರಲ್ಲ. ಇವರಿಗೆ ಊರಲ್ಲಿ ಮನೆಯಿದೆ ಹಿರಿಯರು ತಂದೆ, ತಾಯಿಯರಿದ್ದಾರೆ. ಅಲ್ಲಿ ದುಡಿದು ಬದುಕಲಾಗದಿದ್ದರಿಂದ ವಲಸೆ ಬಂದಿದ್ದಾರೆ. ಇಲ್ಲಿ ದುಡಿದಿದ್ದನ್ನು ಊರಲ್ಲಿರುವವರಿಗೆ ಕಳುಹಿಸುತ್ತಾರೆ.
ವಿಚಿತ್ರ ನಂಬಿಕೆ : ಟೆಂಟ್ನಲ್ಲಿರೋರು ವಿಚಿತ್ರ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಅದಕ್ಕೆ ಕಾರಣ ಇವರು ನಂಬಿಕೊಂಡು ಬಂದ ದೇವರು.
ಅಲ್ಲಾನಿಗೆ ಹರಸಿಕೊಂಡರೆ ಹಸನಪ್ಪ ಅಂತಲೋ, ಹಸನಮ್ಮ ಅಂತಲೋ ಇಟ್ಟು ಕೊಳ್ಳುತ್ತಾರೆ. ಇವರಿಗೆ ಯಲ್ಲಮ್ಮ ಹ್ಯಾಗೆ ದೇವರೋ ಹಾಗೆ ಕೊಪ್ಪಳ ಜಿಲ್ಲೆ ಕುದ್ರೆಮೂತಿ ಅಲ್ಲಾಸಾಬ್ ಕೂಡಾ ದೇವರು. ಕೊಪ್ಪಳದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಅಲ್ಲಾಸಾಬ್ ಜಾತ್ರೆಗೆ ಇವರು ಹೋಗುತ್ತಾರೆ. ಅಲ್ಲೇ ವಯಸ್ಸಿಗೆ ಬಂದವರನ್ನು ಹಿಂದೂ ಸಂಪ್ರದಾಯದಂತೆ ಮೂರು ದಿನದ ಮದುವೆ ನಡೆಯುತ್ತದೆ. ಸಂಭಂದದಲ್ಲೇ ಸಂಭಂದ ಕೂಡಿಬರುತ್ತದೆ. ಎಲ್ಲಾದರೂ ಪ್ರೀತಿ, ಪ್ರೇಮ ಅಂತಹೋದ್ರೆ ಅಷ್ಟೇ. ಜಾತಿಯಿಂದಲೇ ಅಂಥವರು ಔಟ್! ಇವರಿಗೆ ಹಿತ ಸಂತಾನ ಮಿತ ಸಂತಾನ ಅರ್ಥವಾಗಿಲ್ಲ. ಹಾಗಾಗಿ ಮನೆ ತುಂಬೆಲ್ಲಾ ಮಕ್ಕಳು ಮರಿಗಳು. ಎಲ್ಲರ ಕಟುಂಬವೂ ದೊಡ್ಡದಿದೆ.
ಇವರ ಭವಿಷ್ಯ ಏನು : ನಾವಂತೂ ಹಾಳಾಗಿ ಆಯ್ತು ನಮ್ಮ ಮಕ್ಕಳಾದರೂ ವಿಧ್ಯೆ ಕಲಿಯಲಿ ಎಂಬುದು ಚಂದ್ರಮ್ಮ ಅವರ ಆಸೆ. ಹಾಗಂತ ಇವರಿಗೆ ಅಕ್ಷರ ಜ್ಞಾನಿವಿದೆಯಾ ಅಂದರೆ ಅದೂ ಇಲ್ಲ. ಇರೋ ಒಂದು ಟೆಂಟ್ ಶಾಲೆಯೂ ಎತ್ತಂಗಡಿಯಾಗುತ್ತಿದೆ. ರಾಮಾಪುರದ ಯಲ್ಲಮ್ಮ,
ಕುಷ್ಟಗಿಯ ಚಂದ್ರಮ್ಮ, ಲಕ್ಷ್ಮೀಶ್ವರದ ಯಲ್ಲಮ್ಮ, ಅಗ್ಲಗುಂಡಿಯ ಹಸನಮ್ಮ ಇವರಿಗೆ ಮಕ್ಕಳು ವಿದ್ಯಾವಂತರಾಗಬೇಕು. ಅದಕ್ಕಾಗಿ ಈ ಎಲ್ಲಾ ಕಷ್ಟದೊಟ್ಟಿಗೆ ಬದುಕುತ್ತಿದ್ದೇವೆ. ಕಷ್ಟ ಕೋಟಲೆ ನಮ್ಮ ತಲೆಮಾರಿಗೆ ಮುಗಿಯಲಿ ಅಂತಾರೆ ಮಹಿಳೆಯರು.
ರಾಷ್ಟ್ರೀಯ ಹೆದ್ದಾರಿ 17ರ ವಿಸ್ತರಣೆ ಕೂಡಾ ಇವರ ನಿದ್ದೆಗೆಡಿಸಿದೆ. ಯಾವತ್ತ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇವರ ಟೆಂಟ್ ಮನೆಗೆ ಜೆಸಿಬಿ
ನುಗ್ಗಿಸುತ್ತಾರೋ ಗೊತ್ತಿಲ್ಲ. ಒಟ್ಟಾರೆ ಇವರ ಬದುಕು ಅತ್ತ ಧರೆ ಇತ್ತ ಹುಲಿ ಎಂಬ ಹಾಗಾಗಿದೆ. ಸರಕಾರ ಅಲೆಮಾರಿ ಕಾರ್ಮಿಕರಿಗೆ ಮತ್ತು ಅವರ ಮಕ್ಕಳ ಭವಿಷ್ಯ ರೂಪಿಸಲು ಮನಸ್ಸು ಮಾಡುತ್ತಾ?

ಶ್ರೀಪತಿ ಹೆಗಡೆ ಹಕ್ಲಾಡಿ

1 comments:

Anonymous said...

idkinta hecchu tentgalu manglurallive avugala baggenu swalpa gamana harisi.

Post a Comment