ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:57 PM

ಕಾಡುತಾವ ನೆನಪೂ...

Posted by ekanasu

ಸಾಹಿತ್ಯ
ಹಾಗೆ ಕಿಟಕಿ ಬಾಗಿಲನ್ನು ಕೈಯ್ಯಲ್ಲಿ ತಳ್ಳಿದೆ ಕಿರ್ರೆಂದು ಸದ್ದು ಮಾಡಿತು. ಹಳೇ ಕಾಲದ ಮರದ ಕಿಟಕಿ ಅದೆಷ್ಟು ವರ್ಷವಾಯ್ತೋ ಆ ಕಿಟಕಿ ತೆರೆಯದೆ. ನನ್ನ ಮುತ್ತಜ್ಜ ಕಟ್ಟಿಸಿದ ಮನೆ ಅದು ಸುಮಾರು ಆರು ವರ್ಷ ಆಯ್ತು ನಾನು ಆ ಮನೆಗೆ ಹೋಗದೆ. ತೊಂಭತ್ತೊಂದು ವರ್ಷ ಹಿಂದಿನ ಮೂರು ಮಹಡಿಯ ಮನೆಯದು. ಒಟ್ಟು ಇಪ್ಪತ್ನಾಲ್ಕು ಕೋಣೆಗಳಿವೆ. ನನಗಿನ್ನೂ ಸರಿಯಾಗಿ ನೆನಪಿದೆ ಇಲ್ಲಿಗೆ ಬಂದ್ರೆ ಅಮ್ಮ, ಅಪ್ಪ ಇದೇ ಕೋಣೆಯಲ್ಲಿ ಮಲಗ್ತಾ ಇದ್ದಿದ್ದು,ಅಷ್ಟೇ ಅಲ್ಲಾ ನಾನು ಕಣ್ಣು ಬಿಟ್ಟಿದ್ದು ಅದೇ ಕೋಣೆಯಲ್ಲಿ. ರಜಾ ಸಿಕ್ರೆ ಸಾಕು ನಾನು ಅಕ್ಕ ಓಡಿ ಬರ್ತಾ ಇದ್ವಿ ಇಲ್ಲಿಗೆ, ಅಪ್ಪಂಗೆ ಅಮ್ಮಂಗೆ ನಾವಿಲ್ಲಾಂದ್ರೆ ಹೊತ್ತೇ ಹೋಗ್ತಿರ್ಲಿಲ್ಲನ್ಸುತ್ತೆ ಅದ್ಕೆ ಐದೇ ದಿನದಲ್ಲಿ ಇಬ್ರು ಹಾಜರ್ ಆಗ್ತಿದ್ರು .
ಆ ದಿನಗಳು ಎಷ್ಟು ಮಜಾ ಇತ್ತು..! ಬರೀ ನಮ್ಮಜ್ಜನ ಮನೆಯಲ್ಲೇ ಹನ್ನೆರಡು ಮಕ್ಕಳು. ಇನ್ನು ನಾವು ಅಂಗಳಕ್ಕಿಳಿದರೆ ಏನಿಲ್ಲಂದ್ರು ಆ ಕಡೆ ಕುಂಡೆಚ್ಚಜ್ಜನ ಮೊಮ್ಮೊಕ್ಕಳು ಆರು ಜನ , ಕೆಳಗಿನ ಮನೆಯ ಎಂಟು , ಮೂಲೆಮನೆಯ ಏಳು ಮಕ್ಕಳು ಹಾಜರ್. ಒಟ್ಟು ಮೂವತ್ತಮೂರು ಮಕ್ಕಳು. ನನ್ನ ದೊಡ್ಡ ಮಾಮಂದೆ ಉಸ್ತುವಾರಿ ಮಕ್ಕಳ ತಂಟೆ ತಕರಾರುಗಳಿಗೆಲ್ಲ ಅವನದ್ದೇ ತೀರ್ಪು. ಒಂತರಾ ಶಾಲೆಯಲ್ಲಿ ಸ್ಪೋರ್ಟ್ಸ್ ಟೀಚರ್ ಇದ್ದಂಗೆ. ನಾವು ಹುಡುಗರು ಹದಿನಾಲ್ಕು ಜನ ಎಲ್ಲಾ ಒಂದೇ ಮಾಡೆಲ್, ಅಂದ್ರೆ ಹೆಚ್ಚು ವಯಸ್ಸಿನ ಅಂತರವಿಲ್ಲ. ಒಂಭತ್ತು ಹುಡುಗಿಯರು ಅವರದ್ದು ಬೇರೆಯೇ ಸಾಮ್ರಾಜ್ಯ ಮತ್ತುಳಿದವೆಲ್ಲ ನಮ್ಮ ಪಾಲಿಗೆ ಪಿಟ್ಟೆಗಳು. ಆಟಕ್ಕುಂಟು ಲೆಕ್ಕಕ್ಕಿಲ್ಲ. ಪುಟ್ಟು ಮಾಮ ಬಂದ್ರೆ ಲಗೋರಿ ಆಟ ಅಂಗಳದ ತುಂಬೆಲ್ಲ ನಮ್ಮ ಓಟ. ಅವನಿಲ್ಲಂದ್ರೆ, ಹುಡುಗಿಯರದ್ದು ಟೊಂಕ, ಜುಬಿಲಿ,ಕಣ್ಣಾಮುಚ್ಚಾಲೆ, ಅಂತ್ಯಾಕ್ಷರಿ. ಇನ್ನು ನಮ್ದು ಕ್ರಿಕೆಟ್ ಬಿಟ್ಟು ಬೇರೇನಿಲ್ಲ. ಕೆಲ ಪಿಟ್ಟೆಗಳು ನಮ್ಮ ಸಹಾಯಕ್ಕೆ ನಿಂತರೆ ಮತ್ತೆ ಕೆಲವಕ್ಕೆ ಅವುಗಳದ್ದೇ ಲೋಕ. ನಮ್ಮ ಆಟಕ್ಕಿದ್ದ ಒಂದೇ ಒಂದು ರಸಭಂಗವೆಂದರೆ ನನ್ನ ಮೂವರು ಮಾಮಂದಿರು. ಅವರಿಗೂ ನಮ್ಮ ಜೊತೆ ಬ್ಯಾಟ್ ಹಿಡಿವ ಹುಚ್ಚು. ನಮಗೋ….. ಹೇಳಿ ಪ್ರಯೋಜನವಿಲ್ಲ ಆ ಸಿಟ್ಟಿನ ಬಗ್ಗೆ. ಕತ್ತಲಾದರೂ ಮುಗಿಯದು ಆಟ. ಮತ್ತೆ ಅಜ್ಜಿ ಕೈಯ್ಯಲ್ಲಿ ಅತ್ತೆಯಂದಿರ ಕೈಯ್ಯಲ್ಲಿ ಬೈಸಿಕೊಂಡರೇನೇ ಆ ದಿನದ ಆಟಕ್ಕೆ ಮಂಗಳ ಹಾಡುವುದು.
ಜಗಲಿಯುದ್ದಕ್ಕು ಬಿದ್ದುಕೊಂಡು ಮತ್ತೆ ಹೆಂಗಸರ ಧ್ವನಿ “ಸ್ನಾನ ಮಾಡಿ ಬನ್ನಿ ಮಕ್ಕಳೇ” ಎಂದು ಗದರುವವರೆಗೂ ಒಬ್ಬರಿಗೊಬ್ಬರು ಆ ದಿನದ ಆಟದ್ದೇ ಪರಾಮರ್ಶೆ ನಮ್ಮೊಳಗೇ. ಅಷ್ಟೊತ್ತಿಗೆಲ್ಲ ಪಿಟ್ಟೆಗಳು ಸ್ನಾನ ಮುಗಿಸಿ ಊಟ ಮಾಡಿಯೋ ಮಾಡದೆಯೂ ಅತ್ತು ಅತ್ತು ಸುಸ್ತಾಗಿ ಮಲಗಿರುತ್ತವೆ. ಇನ್ನು ಹುಡುಗಿಯರೆಲ್ಲ ಮಿಂದು ಸುಬ್ಬಕ್ಕಗಳಂತೆ ದೇವರ ಕೋಣೆ ಸೇರಿ ಅಜ್ಜಿ ಸುತ್ತ ಕೂತಾಗಿರುತ್ತೆ. ಮತ್ತೆ ನಮ್ಮ ಸಾಮೂಹಿಕ ಜಳಕ ಕಾರ್ಯಕ್ರಮ, ಅಲ್ಲಿಗೆ ಡುಮ್ಮ ಮಾಮನ ಆಗಮನ ಆಗುತ್ತಿದ್ದಂತೆ ನಮ್ಮ ಕಾರ್ಯಕ್ರಮಕ್ಕೆ ಹೊಸ ಮೆರಗು ಸಿಗುತ್ತೆ. ಅಷ್ಟು ದೊಡ್ಡ ಅಬ್ಬಿ (ಬಚ್ಚಲು ಮನೆ) ನಮ್ಮ ಗೌಜಿ ಕಂಡು ಖುಷಿ ಪಡುತ್ತದೆ. ಡುಮ್ಮ ಮಾಮನ ಪುಂಖಾನು ಪುಂಖ ಡೈಲಾಗ್ ನಮ್ಮ ಜಳಕ ಕಾರ್ಯಕ್ರಮಕ್ಕೆ ಅನಿವಾರ್ಯವೇ ಆಗಿತ್ತು. ಅಲ್ಲಿಗೆ ದೊಡ್ಡ ಮಾಮ ಮತ್ತು ಸಣ್ಣ ಮಾಮನ ಎಂಟ್ರಿ ಆಗುತ್ತಿದ್ದಂತೆ ನಮ್ಮ ಜಳಕ ಕಾರ್ಯಕ್ರಮ ಮುಗಿಸಲೇಬೇಕು ಎನ್ನುವ ಸೂಚನೆ ನಮಗೆ, ಇಲ್ಲದಿದ್ರೆ ಮತ್ತೆ ಹೆಂಗಸರ ಬಾಯಿ ಒಳಗೆ ಮಾಮಂದಿರೆಲ್ಲ ಸಿಕ್ಕೋದು ಗ್ಯಾರೆಂಟಿ. ಅಲ್ಲಿಂದ ಸೀದ ದೇವರ ಕೋಣೆಗೆ, ಅಜ್ಜಿ ನೇತೃತ್ವದಲ್ಲಿ ಭಜನೆ. ನಾವೆಲ್ಲ ಹೋಗ್ತಿದ್ದದ್ದು ಭಜನೆಗೆ ಅಂತಲ್ಲ ಅದಕ್ಕೆ ಬೇರೆ ಇನ್ನೆರಡು ಕಾರಣ ಇತ್ತು ೧.ಭಜನೆ ಆದ ತಕ್ಷಣ ರುಚಿಯಾದ ಪ್ರಸಾದ ೨.ರಾತ್ರಿ ಚಪ್ಪರಿಸಿ ಚಪ್ಪರಿಸಿ ಕೇಳುವಂತ ಜೀವನದ ಕೋಣೆ ಉಸಿರಿನ ವರೆಗೂ ಮರೆಯಲಾಗದಂತ ರಸವತ್ತಾದ ನಮ್ಮಜ್ಜಿ ಹೇಳೋ ಕಥೆಗಳು. ಭಜನೆಗೆ ಹೋಗಿಲ್ಲ ಎಂದರೆ ಇದೆರಡು ಇಲ್ಲ… ರಾತ್ರಿ ಪೂರಾ ನಾನು ಅಜ್ಜಿ ಹೇಳಿದ ಕಥೆಯ ಬಗ್ಗೆಯೇ ತಲೆಕೆಡಿಸಿಕೊಳ್ಳುತ್ತಿದ್ದೆ ಒಂದೋ ಅಜ್ಜಿಗೆ ಬೇಗ ನಿದ್ದೆ ಬಂದು ಇಲ್ಲ ಈ ಸುಬ್ಬಕ್ಕಗಳು ನಮ್ಮ ಕೆಲ ಮಾಣಿಗಳು ನಿದ್ದೆ ಮಾಡಿ . ರಾಕ್ಷಸ ಹೊತ್ತೊಯ್ದ ರಾಜ ಕುಮಾರಿಯದ್ದೋ, ಚಾತುರ್ಯದಿಂದ ಪಂಡಿತರನ್ನು ಗೆದ್ದ ಮಾಳವಿಕಳದ್ದೋ, ಇಲ್ಲ ಚಕ್ರ ವ್ಯೋಹವನು ಹೊಕ್ಕ ಅಭಿಮನ್ಯುವಿನದ್ದೋ ಹೀಗೆ ಒದೊಂದು ರಾತ್ರಿಯೂ ಕಥೆ ಅರ್ಧದಲ್ಲಿ ನಿಂತು ನನ್ನ ಕಲ್ಪನೆಗಳಿಗೆ ರೆಕ್ಕೆ ಹುಟ್ಟಿಸಿ ನಿದ್ದೆ ಓಡಿಸಿ ನನ್ನ ಬೆಳಗಿನವರೆಗೂ ಕಾಡುತ್ತಿದ್ದವು.
ಇನ್ನು ಹಗಲಲ್ಲಿ ತೋಟದ ತುಂಬೆಲ್ಲ ನಮ್ಮ ಕಾರುಬಾರು ಹೇಳಿ ಪ್ರಯೋಜನವಿಲ್ಲ. ಮಾಮಂದಿರಿಗೆ ಉಪಕಾರ ಆಗದಿದ್ದರು ನಮಗೆಲ್ಲ ಮನೋರಂಜನೆ ಅಂತು ಖಂಡಿತ ಇತ್ತು. ಕೊಕ್ಕೋ ಕೊಯ್ಯಲು ಹೊರಟರೆ ಸಾಕು ನಾವು ಮಕ್ಕಳೇ ಮರ ಹತ್ತುವುದು, ಅದರಲ್ಲೂ ನಮ್ಮೊಳಗೇ ಸ್ಪರ್ಧೆ.ನಾವು ಹತ್ತಿದ ಮರಕ್ಕೆ ಮತ್ತೆ ಮಾಮಂದಿರು ಹತ್ತಿಲ್ಲವೆಂದರೆ ನಾಲ್ಕೈದು ಕೊಕ್ಕೋ ಹಣ್ಣು ಮರದಲ್ಲೇ ಬಾಕಿ. ಇನ್ನು ಅಡಿಕೆ ಹೆಕ್ಕಿದರು ಅಷ್ಟೇ ನಾವು ಅಡಿಕೆ ಹೆಕ್ಕಿದಲ್ಲಿ ಮತ್ತೆ ಹುಡುಕಿದರೆ ಪ್ರತಿ ಮರದ ಬುಡದಲ್ಲೂ ಕನಿಷ್ಠ ಮೂರ್ನಾಲ್ಕು ಅಡಿಕೆ ಸಿಕ್ಕೆ ಸಿಗುತ್ತಿತ್ತು ಮಾಮಂದಿರಿಗೆ…ಅಯ್ಯೋ ಅತ್ತೆಯಂದ್ರನ್ನ ಗೋಳು ಹೊಯ್ಕೊಳ್ತಿದ್ದ ಮಜಾನೆ ಬೇರೆ. ಅದು ಏನಾಗ್ತಿತ್ತು ಅಂದ್ರೆ, ನಾವೆಲ್ಲಾ….
ಅಷ್ಟರಲ್ಲಿ “ಭಾವಾ …”…
ಹಿಂತಿರುಗಿ ನೋಡಿದೆ ಜನಕ ನಿಂತಿದ್ದ ಬೆನ್ನ ಮೇಲೆ ಸ್ಕೂಲ್ ಬ್ಯಾಗ್ ಹಾಗೇ ಇತ್ತು. ಹೋಗಿ ಹಾಗೇ ತಬ್ಬಿಕೊಂಡೆ ಮೂರು ವರ್ಷ ಆಯ್ತು ಅವನ ಪ್ರತ್ಯಕ್ಷ ನೋಡದೆ. ಬರೀ ಫೋಟೋದಲ್ಲೇ… ಜನಕ ಆ ಪಿಟ್ಟೆಗಳಿಗಿಂತಾನು ನಂತರ ಹುಟ್ಟಿದವನು ನನ್ನ ಸಣ್ಣ ಮಾಮನ ಮಗ ಈಗಿನ್ನೂ ೨ನೆ ತರಗತಿ. ಆದರೆ ನಮ್ಮೆಲ್ಲರಿಗಿಂತಲೂ ಭಯಂಕರ ತುಂಟ, ಭಾರೀ ದೊಡ್ಡ ಪೋಕರಿ ಅಷ್ಟೇ ಬುದ್ಧಿವಂತ ಈ ಎಲ್ಲಾ ಚಿತ್ರಣ ನನ್ನ ಸಣ್ಣತ್ತೆ, ಮಾಮ ನನ್ನಲ್ಲಿ ಹೇಳಿದ ಇವನ ಕುರಿತಾದ ಕಥೆಗಳಿಂದ ನನಗೆ ಧೃಡಪಟ್ಟಿತ್ತು. ಹಾಗೇ ಅವನ ಕೈ ಹಿಡಿದು, ನನ್ನ ಬಾಲ್ಯದ ಮಧುರ ನೆನಪಿನ ಖಜಾನೆಯೆನ್ನಲಡ್ಡಿಯಿಲ್ಲದ ಎರಡನೆ ಮಹಡಿಯ ಆ ಕೋಣೆಯಿಂದ ಹೊರಬಂದೆ. ಹಾಗೇ ಹರಟುತ್ತಾ ಕೆಳಗಿಳಿದು ಬಡಗ ಜಗುಲಿತಲುಪಿದೆವು
ಜನಕನ ಗೆಳೆಯ ಮೆಚ್ಚಿನ ನಾಯಿ “ಸಿಂಗ” ಬಾಲ ಅಲ್ಲಾಡಿಸುತ್ತ ಹಾಗೇ ಬಳಿಬಂತು. ಹೋಗೋ ಅನ್ನುವಂತೆ ಅದಕ್ಕೊಂದು ಒದೆ ಬಿತ್ತು ಅವನಿಂದ. ಅದು ತಲೆ ಅಲ್ಲಾಡಿಸುತ್ತ ಹಾಗೇ ಅಲ್ಲೇ ನೆಲದಲ್ಲಿ ಉರುಳಾಡಿ ಒಮ್ಮೆ ಆಟಕ್ಕೆ ಬಾ ಎಂಬಂತೆ ಅತ್ತಿತ್ತ ಕುಣಿಯಿತು. “ಹೇ ಹೋಗು ಸಿಂಗ ಯಾವಾಗಲು ನಿಂಗೆ ಒಂದೇ ರಾಗ ..ಆಟ ಅಡ್ತ ಕೂತರೆ ಹೋಂ ವರ್ಕ್ ನೀನು ಮಾಡ್ತಿಯ?”
ಒಂದು ಡೈಲಾಗ್ ಬಂತು. ಆಶ್ಚರ್ಯದಿಂದ ನೋಡಿದೆ ಏನಪ್ಪಾ ಇವನ ಅಪ್ಪಮ್ಮ ಹೇಳಿರೋ ಕಥೆಗೊ ಈಗಿವನು ಮಾಡೋದಿಕ್ಕೆ ಹೊರಟಿರುವುದಕ್ಕು ವೆತ್ಯಾಸ ಇದೆ, ಹುಂ ಇರ್ಲಿ ಎಲ್ಲೋ ನನ್ನೇ ಬಕ್ರ ಮಾಡೋ ಪ್ಲಾನ್ ಇರ್ಬೇಕು ಹುಶರಾಗಿದ್ರೆ ಆಯ್ತು ಅಂದು ಕೊಂಡೆ. ಹಾಗೇ ಚಾವಡಿ ಚಿಟ್ಟೆ ಮೇಲೆ ಕೂತವನೇ ಬೆನ್ನಿಗಂಟಿದ್ದ ಬ್ಯಾಗ್ ತೆಗೆದು ಅದರೊಳಗೆ ತುಂಬಿದ್ದ ಪುಸ್ತಕವನ್ನೆಲ್ಲ ಎದುರಿಗೆ ಹರಡಿಟ್ಟ. “ಭಾವ ನೀನು ಯಾವತ್ತು ವಾಪಾಸ್ ಹೋಗೋದು?” ಅಂತ ಮುದ್ದಾಗಿ ಕೇಳಿದ. ‘ಹೂಂ.. ಒಂದೈದು ದಿನ ಇದೀನಿ ಮಾರಾಯ’ ಅಂದೆ ಅದ್ಕೆ ಖುಷಿಯಿಂದ “ಹಾಗಾದ್ರೆ ಆದಿತ್ಯವಾರ ಅಲ್ವ ನೀನು ಹೋಗೋದು ಅಪ್ಪನ ಜೊತೆ ನಾನು ನಿನ್ನ ಏರ್ಪೋರ್ಟ್ ಗೆ ಬಿದೊದಿಕ್ಕೆ ಬರಬಹುದು” ಅಂತ ಖುಷಿಯಿಂದ ಕೂಗಿ ಹೇಳಿದ. ಅಷ್ಟೇ ಅವನ ಕೈಲಿದ್ದ ಪುಸ್ತಕ ನನ್ನ ಕಣ್ಸೆಳೆಯಿತು . ಹಾಗೇ ಮುಂದಕ್ಕೆ ಬಾಗಿ ‘ಹೇ ಕೊಡು ಅದನ್ನೊಮ್ಮೆ ಅಂದೆ’. ನನ್ನೇ ದುರುಗುಟ್ಟಿ ‘ನಾನೇ ಇನ್ನೂ ಸರಿಯಾಗಿ ನೋಡಿಲ್ಲ ಈ ಪುಸ್ತಕಾನ, ಬರ್ತಾ ದಾರೀಲಿ ಬಿದ್ದಿತ್ತು ಹಾಗೇ ಎತ್ಕೊಂಡು ಬಂದೆ. ನೋಡು ಪುಸ್ತಕದ ಕವರ್ ಪೇಜ್ ಎಷ್ಟು ನೈಸ್ ಇದೆ ಅಂತ’ ಅಂದು ನನ್ನ ಕೈಗಿತ್ತ . ಅಷ್ಟರಲ್ಲಿ ಸಣ್ಣತ್ತೆ ಬಂದವರೇ ತಿಂಡಿ ,ಕಾಫಿ ರೆಡಿಯಿದೆ ಬನ್ನಿ ಇಬ್ರು ಒಳಗೆ ಅಂತ ಕರೆದರು. ಪುಸ್ತಕವನ್ನೊಮ್ಮೆ ಬಿಡಿಸಿದೆ ಮೊದಲ ಪುಟದ ಮೇಲಿತ್ತು
“ಉನ್ಮೇಷನಾ”
‘ನಾನು ಮತ್ತು ನೀನು’
ಹಾಗೇ ಪುಟ ಬಿಡಿಸಿದೆ ಇದು ಯಾರ ಡೈರಿ ಎಂಬ ಕುತೂಹಲದಿಂದ, ಯಾರದ್ದು? ಹಾಗೇ ಮೇಲಿಂದ ಮೇಲೆ ನೋಡಿದೆ ಮಾಹಿತಿ ಇಲ್ಲ. ಅನಾಥ ಡೈರಿ ಆದರೆ ಇದೇ ವರ್ಷದ್ದು ಇನ್ನು ಅರ್ಧ ವರ್ಷ ಮುಗಿದಿಲ್ಲ ಆಗ್ಲೇ….? ಇವನ ಕೈಗೆ ಹೇಗೆ ಬಂತು? ತಪ್ಪಿ ದಾರೀಲಿ ಬಿದ್ದಿರಬೇಕು ವಿಳಾಸ ಅಲ್ಲಾ ಹೆಸರೆ ಇಲ್ಲ. ಆದರು ಆ ಡೈರಿ ಓದೋ ಕುತೂಹಲ ಹೆಚ್ಚಾಯಿತು. ಅಷ್ಟರಲ್ಲಿ ಸಣ್ಣತ್ತೆ ಧ್ವನಿ ಕೇಳಿ ಡೈರಿಯನ್ನು ಅಲ್ಲೇ ಬಿಟ್ಟು ಜನಕನ ಕೂಡಿ ಒಳಕ್ಕೊಡಿದೆ… ಮನಸ್ಸಿನ ತುಂಬ ಅದೇ ಡೈರಿ ತುಂಬಿತ್ತು ಏನು ತಿಂಡಿ ತಿಂದೆನೋ ಅದೇನು ಕುಡಿದೆನೋ ದೇವರಾಣೆ ಗೊತ್ತಿಲ್ಲ. ಅತ್ತೆ ಅದೇನೋ ಕೇಳಿದ್ರು ನಾನೇನೋ ಹೇಳಿದೆ, ಜನಕ ಏನೋ ಕೇಳಿದ ನಾನೇನೋ ಹೇಳಿದೆ.. ಅತ್ತೆ ಒತ್ತಾಯ ಮಾಡಿ ಬಡಿಸಿದರು ನಾನು ಗಬ ಗಬ ತಿಂದೆ ಹಾಗೇ ಹೊರಕ್ಕೊಡಿ ಬಂದೆ ಡೈರಿಯನ್ನು ಓದುವ ಕುತೂಹಲ ತಾಳದೆ . ಆದ್ರೆ ಡೈರಿ ಮಾತ್ರ ಅಲ್ಲಿರಲಿಲ್ಲ..!!! ಗಾಬರಿಯಾಯ್ತು… ಯಾರು ಯೆತ್ಕೊಂಡಿರ್ಬಹುದು? ಪ್ರಶ್ನೆ ಹಾಗೇ ಬೃಹದಾಕಾರವಾಗಿ ಬೆಳೆಯಿತು. ಎಲ್ಲಾ ಕಡೆ ಹುಡುಕಿದೆ, ಅತ್ತೆ ನನ್ನ ಪೇಚಾಟ, ಹುಡುಕಾಟ ಕಂಡು ಏನೆಂದರು. ನಾನು ಒಂದು ಡೈರಿ ಕಾಣಿಸ್ತಿಲ್ಲ ಅಂದೆ ಅತ್ತೆನೂ ಹುಡುಕಿದರು ಪತ್ತೇನೆ ಇಲ್ಲ. ಜನಕನೂ ಹುಡುಕಿದ.. ಇಲ್ಲ ಡೈರಿ ಮಾತ್ರ ಇಲ್ಲ…! ಆ ರಾತ್ರಿ ಊಟ ಕೂಡ ಮಾಡಕಾಗ್ಲಿಲ್ಲ ಆ ಡೈರಿ ಕೆರಳಿಸಿಟ್ಟ ಕುತೂಹಲಕ್ಕೆ. ರಾತ್ರಿ ಮಲಗಿದೆ ಆದರೂ ಅದೇ ಕುತೂಹಲ ಡೈರಿ ಎಲ್ಲಿ? ಆ ಕುತೂಹಲಕ್ಕೆ ಮುಖ್ಯ ಕಾರಣವಿದೆ ,ಹೇಗೆ ತಾನೆ ಮರೆಯೋದು ಹಾಗೇ ಪುಟ ಸಮೇತ ಅಚ್ಚೊತ್ತಿರುವ ಡೈರಿಯ ಕೊನೆಯಸಾಲುಗಳನ್ನ.

Sorry…ಕೊನೆಯಸಾಲು…???
“ಅವಳಿಗೆ ಮದುವೆಯಂತೆ….!!!” ಮತ್ತೊಂದು ಅಗ್ನಿ ಪರೀಕ್ಷೆ, ಅಲ್ಲಾ ಅವಳಾದರು ಹೇಗೆ ಒಪ್ಪಿದಳು?… ಅವಳ ಮೊಬೈಲ್ ಸ್ವಿಚ್ ಆಫ್ ಇದೆ… ಅವಳನ್ನು ಬಿಟ್ಟಿರೋದು ನನ್ನಿಂದ ಅಸಾಧ್ಯ ಅದಕ್ಕೆ ಶಿವಮೊಗ್ಗೆಗೆ ಹೊರಟಿದ್ದೇನೆ.
ನಾನು ಹೊರಟಿದ್ದೇನೆ, ಒಂದೋ ಅವಳು ಇಲ್ಲಾ ನಾನೇ ಇಲ್ಲಾ ಇದು ಖಂಡಿತ…ಹೇ ವಿಧಿ ಹೇಳು ನೀನು ನನಗೆ ಗುಡ್ ಲಕ್.

ಶ್ರೀನಿಧಿ , ಧರ್ಬೆ

0 comments:

Post a Comment