ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಉಡುಪಿ : ನಂಬೋದು ಬಿಡೋಡು ಓದುಗರಿಗೆ ಬಿಟ್ಟ ವಿಚಾರ. ಆದರೆ ಒಂದಂತೂ ಸತ್ಯ. ವಿಶ್ವವಿಖ್ಯಾತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪಡಸಾಲೆಯಲ್ಲಿ ಅಧಿಕಾರಿಗಳ ಮತ್ತು ಪುರೋಹಿತರದ್ದೇ ಕಾರುಬಾರ್!
ದೇವಸ್ಥಾನದ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥಾಪನಾ ಸಮಿತಿಯಿಲ್ಲದೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಒಂದು ವರ್ಷ ಪೂರೈಸಿದ ಸಿಂಹಾವಲೋಕನದ ದಾರಿಯಲ್ಲಿ ಸಿಗೋ ಫಲಿತಾಂಶ ಸೊನ್ನೆ!

ಕೊಲ್ಲೂರಿಗೆ ಬರೋ ಭಕ್ತರನ್ನು ಕೇಳೋರಿಲ್ಲ. ದೇವಸ್ಥಾನದ ವಸತಿಗೃಹಗಳು ರಾಮಕೃಷ್ಣನ ಲೆಕ್ಕದಲ್ಲಿ ದುಡ್ಡು ಕೊಟ್ಟೋರಿಗೆ ಒಲಿಯುತ್ತೆ. ದರ್ಶನ, ಸೇವೆ ಮುಂತಾದ ಸಂಗತಿಗಳು ಭಕ್ತರ ಜೇಬಿಗೆ ಕತ್ತರಿ. ಭಕ್ತರೇ ಆಸ್ತಿಯಾದ ಕೊಲ್ಲೂರಿನಲ್ಲಿ ಎಲ್ಲೆಲ್ಲಿಂದಲೋ ಬಂದ ಭಕ್ತರ ಅಸ್ತಿತ್ವಕ್ಕೆ ಕೊಡಲಿಪೆಟ್ಟು ಬೀಳುತ್ತಿದೆ.

ಕೊಲ್ಲೂರು ವ್ಯವಸ್ಥಾಪನಾ ಸಮಿತಿ ವಿರುದ್ದ ನ್ಯಾಯಾಲಯದಲ್ಲಿರುವ ತಡೆ ತೆರವುಗೊಳಿಸಿ, ವ್ಯವಸ್ಥಾಪನಾ ಮಂಡಳಿ ಪುನರ್ ಸ್ಥಾಪಿಸಲಾಗದಷ್ಟು ದುರ್ಬಲವಾಗಿದೆಯೇ ಸರಕಾರ ಎಂಬ ಭಕ್ತರ ಕೂಗು ಕೊಡಚಾದ್ರಿ ಬೆಟ್ಟಕ್ಕೆ ಅಪ್ಪಳಿಸಿ ಸದ್ದಿಲ್ಲದಂತಾಗುತ್ತಿದೆ. ಸರಕಾರ ದತ್ತಪೀಠಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆ ಕೊಲ್ಲೂರು ವಿಷಯದಲ್ಲಿ ತೋರಿಸುತ್ತಿಲ್ಲ ಎಂಬ ಅಪವಾದದಿಂದಲೂ ಸರಕಾರ ಪಾರಾಗಿಲ್ಲ. ಮುಜರಾಯಿ ಸಚಿವ ಡಾ.ವಿ.ಎಸ್. ಆಚಾರ್ಯ ಅವರ ತವರು ಜಿಲ್ಲೆಯಲ್ಲಿ ಇಂಥಹದೊಂದು ವೈಪರೀತ್ಯ ನಡೆದಿದ್ದು ಖೇದಕರ.

ಕೊಲ್ಲೂರಿಗೆ ಇತಿಹಾಸವಿದೆ : ಕೊಲ್ಲೂರಿಗೆ ಅದರದ್ದೇ ಆದ ಇತಿಹಾಸವಿದೆ. ಮೂಕಾಸುರನನ್ನು ಕೊಂದ ತಾಯಿ ಇಲ್ಲಿ ಮೂಕಾಂಬಿಕೆಯಾಗಿ ನಿಂತಿದ್ದಾಳೆ ಎಂಬುದು ಪುರಾಣ.ಆದಿಗುರು ಶ್ರೀ ಶಂಕರಾಚಾರ್ಯರ ಪಾದಸ್ಪರ್ಶದ ಇತಿಹಾಸವಿದೆ. ಇದಕ್ಕೆ ಶಂಕರರು ಸ್ಥಾಪಿಸಿದ ಶ್ರೀ ಚಕ್ರ ಸಾಕ್ಷಿ.

ಹಚ್ಚ ಹಸಿರಿನ ವನಸಿರಿ ಕೊಲ್ಲೂರಿನ ಅಂದಕ್ಕೆ ಇಟ್ಟ ದೃಷ್ಟಿ ಬೊಟ್ಟು. ಕೊಡಚಾದ್ರಿ ಬೆಟ್ಟವಂತೂ ಕೊಲ್ಲೂರು ರಕ್ಷಣೆಗೆ ಕಟ್ಟಿದ ಕೋಟೆ. ಕೊಡಚಾದ್ರಿ ಕೂಡಾ ಪವಿತ್ರ ಸ್ಥಳವಾಗಿದ್ದು ಚಾರಣಕ್ಕೆ ಹೇಳಿಮಾಡಿಸಿದಂದೆ. ಅಂಭವನ, ಭಸ್ಮತೀರ್ಥ, ಸೌಪರ್ಣಿಕಾ ನದಿ ಕೊಲ್ಲೂರಿನ ಇತರ ಸಂಗತಿಗಳು. ಅರಿಸಿನಗುಂಡಿ, ಬೆಳ್ಕಲ್ ತೀರ್ಥ ಮುಂತಾದ ಪ್ರೇಕ್ಷಣೀಯ ಸ್ಥಳಗಳೂ ಇದೆ.

ಕೊಲ್ಲೂರು ರಾಜ್ಯದ ಶ್ರೀಮಂತ ದೇವಸ್ಥಾನದಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅತೀ ಹೆಚ್ಚು ಭಕ್ತರು ಮತ್ತು ವರಮಾನ ತರುವ ಕೊಲ್ಲೂರು ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ಇಲ್ಲದಿರುವುದು ಕೊರತೆ.

ವ್ಯವಸ್ಥಾಪನಾ ಸಮಿತಿಗೆ ಏನಾಯ್ತು : ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮುಖ್ಯಸ್ಥರಾಗೋದು ಮತ್ತು ಸದಸ್ಯರಾಗೋದು ಪ್ರತಿಷ್ಠೆಯ ಸಂಕೇತ. ಹಾಗಾಗಿ ವ್ಯವಸ್ಥಾಪನಾ ಸಮಿತಿ ಸದಸ್ಯತ್ವಕ್ಕೆ ನೂಕುನುಗ್ಗಲಿರುತ್ತದೆ.

ಹಿಂದೆ ಕೊಲ್ಲೂರಿನಲ್ಲಿ 5 ವರ್ಷ ಅವಧಿಯ ಆಡಳಿತ ಮಂಡಳಿಯಿತ್ತು. ಅದಕ್ಕೆ ಒಬ್ಬರು ಮೊಕ್ತೇಸರರಾಗುತ್ತಿದ್ದರು. ಸದ್ಯ ಅದು ಬದಲಾಗಿದೆ. ವ್ಯವಸ್ಥಾಪನಾ ಸಮಿತಿ ಎಂಬ ಹೆಸರಲ್ಲಿ ಮೂರು ವರ್ಷಕ್ಕೆ ಬದಲಾವಣೆಯ ಕಾಣುವ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಅದಕ್ಕೆ ಮುಖ್ಯಸ್ಥರೂ ಇರುತ್ತಾರೆ.

ಬಿಜೆಪಿ ಮತ್ತ ಜೆಡಿಎಸ್ ಟೊಂಟಿ ಟೊಂಟಿ ಸರಕಾರದ ಸಮಯದಲ್ಲಿ ಕೃಷ್ಣಪ್ರಸಾದ್ ಅಡ್ಯಂತಾಯ ಸಮಿತಿಯ ಮುಖ್ಯಸ್ಥರಾಗಿ ನಿಯಕ್ತಿಗೊಂಡಿದ್ದರು. ಕಳೆದ ಒಂದು ವರ್ಷದ ಹಿಂದೆ ಅವರ ಅಧಿಕಾರ ಅವಧಿ ಮುಗಿದಿದ್ದರಿಂದ ಹೊಸ ಸಮಿತಿ ರಚೆನೆಗೆ ಸರಕಾರ ಮುಂದಾಗಿದೆ.

ವ್ಯವಸ್ಥಾಪನಾ ಸಮಿತಿ ಒಳ ಸೇರಲು ಭರೀ ಪೈಪೋಟಿಯಿದ್ದರೂ, ಕೃಷ್ಣಪ್ರಸಾದ್ ಅಡ್ಯಂತಾಯ ಮುಂದಾಳತ್ವದ ಸಮಿತಿಗೆ ಸರಕಾರ ಅಸ್ತು ಎಂದಿತು. ಅವರೇ ಸಮಿತಿಯ ಮುಖ್ಯಸ್ಥರಾಗಿ ನೇಮಕ ಆಗಿದ್ದರು.

ಬೈಂದೂರು ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರ ರಾಜ್ಯ ಉಚ್ಛನ್ಯಾಯಾಲಯದಲ್ಲಿ ನೇಮಕಾತಿ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿ ಮಾನ್ಯಮಾಡಿದ ನ್ಯಾಯಾಲಯ ಸಮಿತಿ ರಚನೆಯನ್ನು ತಡೆಹಿಡಿಯಿತು. ಅಂದಿನಿಂದ ಇಂದಿನವರಗೆ ಕೊಲ್ಲೂರು ಯಜಮಾನನಿಲ್ಲದ ಮನೆ.

ಹೇಳೋರಿಲ್ಲ ಕೇಳೋರಿಲ್ಲ : ವ್ಯವಸ್ಥಾಪನಾ ಸಮಿತಿ ಇಲ್ಲದಿರುವುದರಿಂದ ಕೊಲ್ಲೂರಿನಲ್ಲಿ ಹೇಳೋರು, ಕೇಳೋರೇ ಇಲ್ಲ. ಎಲ್ಲವೂ ಬೇಕಾಬಿಟ್ಟಿ. ಇದರೊಟ್ಟಿಗೆ ಒಂದು ಸಂತೋಷದ ಸಂಗತಿಯೆಂದರೆ ಮಾತು ಮಾತಿಗೆ ನ್ಯಾಯಾಲಯದ ಮಟ್ಟಲೇರುತ್ತಿದ್ದ, ಪ್ರತಿನಿತ್ಯ ಒಂದೆಲ್ಲಾ ಒಂದು ಸುದ್ದಿ ಮಾಡುತ್ತಿರುವದು ನಿಂತಿದೆ.

ವ್ಯವಸ್ಥಾಪನಾ ಸಮಿತಿಯಿದ್ದಾಗ ಕೊಲ್ಲೂರು ದೇವಸ್ಥಾನದ ವ್ಯವಸ್ಥೆಯ ಮೇಲೆ ಹಿಡಿತವಿರುತ್ತಿತ್ತು. ಇಂದು ಲಂಗುಲಗಾಮಿಲ್ಲದ ಸ್ಥಿತಿ ಮುಟ್ಟಿದೆ. ಪ್ರತಿಯೊಂದಕ್ಕೂ ಭಕ್ತರು ದುಡ್ಡು ಬಿಚ್ಚಬೇಕಾದ ಸ್ಥಿತಿಗೆ ಬಂದಿದ್ದಾರೆ. ಅನ್ನ ಪ್ರಸಾದಿಂದ ಹಿಡಿದು, ಸೇವೆಯವರೆಗೆ, ದರ್ಶನದಿಂದ ವೊದಲ್ಗೊಂಡು ಚಂಡಿಕಾ ಹೋಮದವರೆಗೆ ಭಕ್ತರು ಶೋಷಿತರು. ಒಟ್ಟಾರೆ ಆತ್ಮ ಶಾಂತಿ ಅರಸಿ ಬರುವ ಭಕ್ತರಿಗೆ ಶಾಂತಿ , ಮರೀಚಿಕೆ.

ದೇವಸ್ಥಾನದ ವ್ಯವಸ್ಥೆಗಾಗಿ ಕಾರ್ಯನಿರ್ವಹಣಾಧಿಕಾರಿ ಮುಖ್ಯಾಧಿಕಾರಿ ಮುಂತಾದವರಿದ್ದರೂ ಅವರಿಗೆ ದೇವಸ್ಥಾನದ ಪುರೋಹಿತರ ಮತ್ತು ಸಿಬ್ಬಂಧಿಗಳ ಮೇಲೆ ಹಿಡಿತವಿಲ್ಲ. ಅಧಿಕಾರಿಗಳನ್ನು ಕಂಡರೆ ಅವರಿಗೂ ಭಯವಿಲ್ಲ.

ಇನ್ನೂ ಕೊಲ್ಲೂರು ಸ್ಚಚ್ಛೆತೆ ಬಗ್ಗೆ ಹೇಳದಿರೋದು ಒಳ್ಳೆಯದು. ಒಳಚರಂಡಿ, ಕುಡಿಯುವ ನೀರು, ವಸತಿ ಮತ್ತು ವಾಹನ ನಿಲುಗಡೆ ಸೌಪಣರ್ಿಕಾ ಸ್ನಾನಘಟ್ಟ ಮುಂತಾದ ಸಮಸ್ಯೆಗಳು ಸಮಸ್ಯೆಯಾಗಿಯೇ ಇದೆ. ಒಟ್ಟಾರೆ ಕೊಲ್ಲೂರು ವ್ಯವಸ್ಥಾಪನಾ ಸಮಿತಿಯಿಲ್ಲದೆ ದಿಕ್ಕುತಪ್ಪಿದ ನಾವೆಯಂತಾಗಿದೆ. ಸರಕಾರ ಶಿಘ್ರ ನ್ಯಾಯಾಲಯದಲ್ಲಿರುವ ತಡೆ ತೆರವುಗೊಳಿಸಿ ವ್ಯವಸ್ಥಾಪನಾ ಸಮಿತಿ ರಚಿಸದಿದ್ದರೆ ಭಕ್ತರು ಶಾಪಹಾಕಿಯಾರು.

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment