ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

'ಕೈಗೆ ಬಂದ ತುತ್ತು ಬಾಯಿಗೆ ಇಲ್ಲ' ಅಂತ ಇದಕ್ಕೇ ಹೇಳೋದು. ಇಂದು ಬೆಳಗಿನ ಜಾವ ಮೂರು ಗಂಟೆಯವರೆಗೂ ನಡೆದ, ವಿಶ್ವಕಪ್ ಕಾಲ್ಚೆಂಡಾಟದ ಉಪಾಂತ್ಯಪೂರ್ವ ಪಂದ್ಯದಲ್ಲಿ ಬಲಿಷ್ಠ ಉರುಗ್ವೆ ವಿರುದ್ಧ ಜಯದ ಹೊಸ್ತಿಲವರೆಗೂ ಹೋಗಿದ್ದ ದುರ್ಬಲ ಘಾನಾ ಹೊಸ್ತಿಲಲ್ಲಿ ಎಡವಿ ಬಿದ್ದುಬಿಟ್ಟಿತು!1-1 ಸಮಗೋಲುಗಳಿಂದ 90 ನಿಮಿಷಗಳ ಆಟ ಪೂರೈಸಿದ ಉಭಯ ತಂಡಗಳು ನಷ್ಟಭರ್ತಿ ಸಮಯದಲ್ಲಿ ಮುಂದುವರಿದಿದ್ದಾಗ - ಕೊನೆಯ ನಾಲ್ಕು ಸೆಕೆಂಡುಗಳಿರುವಾಗ - ಘಾನಾಕ್ಕೆ ಪೆನಾಲ್ಟಿ ಒದೆತದ ಸುವರ್ಣಾವಕಾಶ ಸಿಕ್ಕಿತು. ಗೋಲು ಗಳಿಸಿದ್ದಿದ್ದರೆ ಉಪಾಂತ್ಯ ಹಂತ ಪ್ರವೇಶಿಸಿದ ಮಹತ್ಕೀರ್ತಿ ಘಾನಾದ್ದಾಗುತ್ತಿತ್ತು. ಆದರೆ, 'ತಾನೊಂದು ಬಗೆದರೆ ದೈವ ಬೇರೊಂದು ಬಗೆಯಿತು' ಎಂಬಂತೆ, ಘಾನಾದ ಮುನ್ನಡೆ ಆಟಗಾರ ಜ್ಯಾನ್ (ಗ್ಯಾನ್) ಒದೆದ ಚೆಂಡು ಗೋಲ್ ಕಂಬಕ್ಕೆ ಮುತ್ತುಕೊಟ್ಟು ಆಚೆಹೋಯಿತು! ಈ ಆಕಸ್ಮಿಕವೇ ಘಾನಾದ ಅವಸಾನಕ್ಕೆ ಮುನ್ನುಡಿಯಾಯಿತು. ನಂತರ ನಡೆದ ಹೆಚ್ಚುವರಿ ಸಮಯದ ಆಟದಲ್ಲಿ ಉಭಯ ತಂಡಗಳೂ ಗೋಲು ಗಳಿಸದಾದವು. ಅಂತಿಮವಾಗಿ ಪೆನಾಲ್ಟಿ ಷೂಟ್ಔಟ್ನಲ್ಲಿ 4-2 ಗೋಲುಗಳ ಅಂತರದಿಂದ ಘಾನಾದ ವಿರುದ್ಧ ಉರುಗ್ವೆ (ಯುರುಗ್ವೆ) ವಿಜಯದ ನಗೆ ಬೀರಿತು.

45+2ನೇ ನಿಮಿಷದಲ್ಲಿ ಘಾನಾದ ಮುಂಟಾರಿ ಶಕ್ತಿಯುತ ದೂರದೊದೆತದಿಂದ ಗಳಿಸಿದ ಗೋಲಿಗೆ ಪ್ರತಿಯಾಗಿ 55ನೇ ನಿಮಿಷದಲ್ಲಿ ಉರುಗ್ವೆಯ ಫರ್ಲಾನ್ ನಿಖರ ಫ್ರೀಕಿಕ್ನಿಂದ ಗೋಲು ಗಳಿಸಿ ಕೊನೆಯವರೆಗೂ ಸಮಬಲದ ಹೋರಾಟ ತೋರಿದ ಈ ಆಟ ಕೊನೆಯಲ್ಲಿ ಘಾನಾದ ಸ್ವಯಂಕೃತಾಪರಾಧಜನ್ಯ ಸೋಲಿನೊಂದಿಗೆ ಸಮಾಪ್ತಿಯಾಯಿತು. ಈ ಹಿಂದಿನ ಆಟಗಳಲ್ಲಿ ತಂಡಕ್ಕೆ ವಿಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಘಾನಾದ ಗ್ಯಾನ್ ಈ ಆಟದಲ್ಲಿ ಖಳನಾಯಕನಾಗಿಬಿಟ್ಟ! ಆಟ ಮುಗಿದ ನಂತರ ಆತ ಭೋರೆಂದು ಅಳುತ್ತಿದ್ದ ದೃಶ್ಯ ನೋಡುಗರ ಕರುಳು ಕಿವಿಚುವಂತಿತ್ತು.
ಘಾನಾದ ಗೋಲ್ಕೀಪರ್ ಕಿಂಗ್ಸನ್ನ ಹಲವು ಅದ್ಭುತ ತಡೆಗಳು, ಆಟದ 37ನೇ ನಿಮಿಷದಲ್ಲೇ ಉರುಗ್ವೆ ತಂಡದ ನಾಯಕ ಲ್ಯುಗಾನೊ ನಿರ್ಗಮನ, ನಂತರ ಆಟದ ಹರಿವಿನಲ್ಲಿ ಘಾನಾ ಸಾಧಿಸಿದ ಮೇಲುಗೈ ಇವಾವುವೂ ಫಲಿತಾಂಶದಲ್ಲಿ ಘಾನಾದ ನೆರವಿಗೆ ಬರಲಿಲ್ಲ. 'ಎಲ್ಲ ಬಣ್ಣವನ್ನೂ ಮಸಿ ನುಂಗಿತು' ಎಂಬಂತೆ, ಗ್ಯಾನ್ ಮಹಾಶಯನ ಒಂದು ತಪ್ಪು ಒದೆತವೇ ಆಟವನ್ನು ಪೆನಾಲ್ಟಿ ಷೂಟ್ಔಟ್ಗೆ ಕೊಂಡೊಯ್ದು ಘಾನಾವನ್ನು ಗೆಲುವಿನ ಹೊಸ್ತಿಲಿನಿಂದ ಸೋಲಿನ ಕೂಪಕ್ಕೆ ತಳ್ಳಿಬಿಟ್ಟಿತು.

90 ನಿಮಿಷಗಳ ನಂತರದ ನಷ್ಟಭರ್ತಿ ಸಮಯದಲ್ಲಿ ಘಾನಾಕ್ಕೆ ಪೆನಾಲ್ಟಿ ಅವಕಾಶ ದಯಪಾಲಿಸಿದ್ದು ಉರುಗ್ವೆಯ ಮುನ್ನಡೆ ಆಟಗಾರ ಸುಆರೆಜ್ಹ್ . ಗೋಲ್ ಪೆಟ್ಟಿಗೆಯೊಳಕ್ಕೆ ಚಿಮ್ಮಿಬಂದ ಚೆಂಡನ್ನು ಈ ಮಹಾನುಭಾವ ರಾಜಾರೋಷವಾಗಿ ತನ್ನೆರಡೂ ಕೈಗಳಿಂದ ಆಚೆ ತಳ್ಳಿಬಿಡೋದೇ! ಪರಿಣಾಮ, ಆತನಿಗೆ ಕೆಂಪು ಕಾರ್ಡ್, ಘಾನಾಕ್ಕೆ ಪೆನಾಲ್ಟಿ ಷಾಟು. ಆದರೆ ಈ ಪೆನಾಲ್ಟಿ ಷಾಟು ಘಾನಾದ ನೆರವಿಗೆ ಬರಲಿಲ್ಲ. ವಿಧಿ ಉರುಗ್ವೆಯ ಪರವಾಗಿತ್ತು. ಉರುಗ್ವೆಯನ್ನೇ ಗೆಲ್ಲಿಸಿಬಿಟ್ಟಿತು.

ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment