ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:42 PM

ನಯವಂಚಕರು ನಾವು

Posted by ekanasu

ವಿಚಾರ
ಎಸ್.ಎಲ್. ಭೈರಪ್ಪನವರು ಪ್ರಾಣಿವಧೆಯನ್ನು ಸಕಾರಣ ಖಂಡಿಸಿದ್ದಾರಲ್ಲದೆ 'ಗೋಹತ್ಯೆ ನಿಷೇಧ'ವನ್ನು ಸನಾತನ ಧರ್ಮಗ್ರಂಥಾಧಾರಸಹಿತ ಸಮರ್ಥಿಸಿದ್ದಾರೆ. ಪ್ರಾಣಿವಧೆ ಮತ್ತು ಮಾಂಸಾಹಾರದ ವಿಷಯದಲ್ಲಿ ನನ್ನ ಅಭಿಪ್ರಾಯ ಇಂತಿದೆ. ಸದ್ಯಕ್ಕೆ ಧರ್ಮಗ್ರಂಥಗಳನ್ನು ಆಚೆಗಿಡೋಣ. ಆಸ್ತಿಕತೆಯನ್ನೂ ಬದಿಗಿಡೋಣ. ಕೇವಲ ಮಾನವೀಯ ನೆಲೆಯಲ್ಲಷ್ಟೇ ಯೋಚಿಸೋಣ. ಮಾಂಸಾಹಾರಕ್ಕಾಗಿ ನಾವು ಪ್ರಾಣಿ-ಪಕ್ಷಿಗಳನ್ನು ಕೊಲ್ಲಲು ಹೊರಟಾಗ ಬಹುತೇಕ ಪ್ರಾಣಿ-ಪಕ್ಷಿಗಳಿಗೆ ತಮ್ಮನ್ನೀಗ ಹಿಂಸಿಸಲಾಗುತ್ತದೆ/ಕೊಲ್ಲಲಾಗುತ್ತದೆ ಎಂಬ ಸುಳಿವು ಕೊನೆಯ ಗಳಿಗೆಯಲ್ಲಾದರೂ ಉಂಟಾಗಿಯೇ ಆಗುತ್ತದೆ. ಆಗ ಅವುಗಳು ಅನುಭವಿಸುವ ಮನೋಯಾತನೆ ಮತ್ತು ಅಸಹಾಯಕತೆ ಹೇಗಿರಬೇಡ! ಹಾಗೆ ಅವುಗಳನ್ನು ಯಾತನೆಗೊಳಪಡಿಸಿ ಕೊಂದು ತಿನ್ನುತ್ತೇವಲ್ಲಾ, ನಮ್ಮಲ್ಲಿ ಮನುಷ್ಯತ್ವವೆಂಬುದು ಇದೆಯೆ? ನಮ್ಮ ಮಗು ಎಡವಿ ಬಿದ್ದರೆ ಕರುಳು ಚುರ್ರ್ ಎನ್ನುವ ನಮಗೆ ಆ ಪ್ರಾಣಿ-ಪಕ್ಷಿಗಳು ನಮ್ಮ ಬಾಯಿಚಪಲಕ್ಕಾಗಿ ಪ್ರಾಣಬಿಡುವಾಗ ಏನೂ ಅನ್ನಿಸುವುದಿಲ್ಲವೇಕೆ?ಒಂದು ಪ್ರಾಣಿಯನ್ನು/ಪಕ್ಷಿಯನ್ನು ಕೊಂದು ತಿನ್ನುವ ಇನ್ನೊಂದು ಪ್ರಾಣಿಗೆ/ಪಕ್ಷಿಗೆ ವಿವೇಕವಿರುವುದಿಲ್ಲ. ಬುದ್ಧಿ ವಿಕಾಸವಾಗದಿರುವುದರಿಂದ ಪ್ರಾಣಿಗಳಾಗಲೀ ಪಕ್ಷಿಗಳಾಗಲೀ ಪ್ರಕೃತಿದತ್ತ ರೂಢಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಆದಾಗ್ಗ್ಯೂ, ಮೂಲದಲ್ಲಿ ಮಾಂಸಾಹಾರಿ ತೋಳದ ಗುಂಪಿಗೆ ಸೇರಿದ್ದು ಇದೀಗ ಮನೆಗಳಲ್ಲಿ ಸಾಕುಪ್ರಾಣಿಯಾಗಿರುವ ನಾಯಿಯು ನಾವು ನೀಡುವ ಸಸ್ಯಾಹಾರವನ್ನೇ ರೂಢಿಸಿಕೊಂಡಿದೆ. ಹೀಗಿರುವಾಗ, ಬುದ್ಧಿ ವಿಕಾಸಗೊಂಡಿರುವ ವಿವೇಕಿಗಳಾದ ನಾವು ಮಾಂಸಾಹಾರವನ್ನು ತೊರೆದು ಸಂಪೂರ್ಣ ಸಸ್ಯಾಹಾರಿಗಳಾಗಲು ಸಾಧ್ಯವಿಲ್ಲವೆ? ಮಾಂಸ ತಿಂದರೇನೇ ನಮ್ಮ ಜೀವ ಉಳಿಯುವುದೆ? ಸಂಪೂರ್ಣ ಸಸ್ಯಾಹಾರಿಗಳೆಲ್ಲ ಸೊರಗಿ, ಜಡ್ಡು ಹತ್ತಿ ಸಾಯುತ್ತಿದ್ದಾರೆಯೆ? ಪ್ರಪಂಚವು ಸುಧಾರಣೆಗೊಳಗಾಗಿರುವಾಗ, ನಾವೆಲ್ಲ ಪ್ರಗತಿಶೀಲರೂ ಪ್ರಾಜ್ಞರೂ ವಿವೇಕಿಗಳೂ ಆಗಿರುವಾಗ, ಈಗಲಾದರೂ ನಮಗೆ, 'ಮಾಂಸಾಹಾರವೆಂಬುದು ರೂಢಿ ಮತ್ತು ಬಾಯಿಚಪಲ ಅಷ್ಟೇ ಹೊರತು ಅನಿವಾರ್ಯ ಅವಶ್ಯಕತೆಯಲ್ಲ' ಎಂಬ ಅರಿವು ಮೂಡಬೇಡವೆ?

ನಮ್ಮಂತೆಯೇ ಪ್ರಾಣಿ-ಪಕ್ಷಿಗಳಿಗೂ ಜೀವಿಸುವ ಹಕ್ಕಿದೆ ಎಂಬ ಪ್ರಜ್ಞೆಯಾದರೂ ನಮಗೆ ಬೇಡವೆ? ನಮ್ಮ ಮನೆಯೆದುರು ನಗರಸಭೆಯವರು ಬೀದಿನಾಯಿಯೊಂದನ್ನು ಹಿಡಿದಾಗ ಪ್ರಾಣಿದಯೆಯೆಂದು ಬೊಬ್ಬೆಹಾಕುವ ನಾವು ಮನೆಯೊಳಗೆ ಕುರಿ, ಕೋಳಿ, ಹಂದಿ, ದನ ಇತ್ಯಾದಿಗಳ ಮಾಂಸವನ್ನು ಚಪ್ಪರಿಸುತ್ತೇವಲ್ಲಾ, ಎಂತಹ ನಯವಂಚಕರು ನಾವು!
ಇನ್ನು, ಹಕ್ಕಿನ ಪ್ರಶ್ನೆ. 'ಮಾಂಸಾಹಾರ ನಮ್ಮ ಹಕ್ಕು; ಅದನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ' ಎಂದು ಕೆಲ ಹಕ್ಕೊತ್ತಾಯಿಗರು ಆರ್ಭಟಿಸುತ್ತಾರೆ. ಅವರಿಗೆ ನನ್ನ ಸಮಜಾಯಿಷಿ ಇಷ್ಟೆ. 'ತಮ್ಮ ಹಕ್ಕಿನ ಅರಿವಿಲ್ಲದ ಮತ್ತು ನಮ್ಮ ನಡುವೆಯೇ ಬದುಕುವ ಪ್ರಾಣಿ-ಪಕ್ಷಿಗಳ ಪರವಾಗಿ ಸೊಲ್ಲೆತ್ತುವ ಹಕ್ಕು ಅವುಗಳೊಡನೆ ಈ ಭೂಮಿಯಲ್ಲಿ ಬದುಕುತ್ತಿರುವ ವಿವೇಕಿ ಮನುಷ್ಯಪ್ರಾಣಿಯಾದ ನನಗೆ ಇದ್ದೇ ಇದೆ. ಸಂವಿಧಾನದತ್ತ ಅಭಿಪ್ರಾಯಸ್ವಾತಂತ್ತ್ರ್ಯವೂ ನನಗಿದೆ. ಮಾಂಸಾಹಾರಿಗಳನ್ನು ನಿಂದಿಸುವುದು ನನ್ನ ಉದ್ದೇಶವಲ್ಲ. ಸಂಪೂರ್ಣ ಸಸ್ಯಾಹಾರಿಯಾಗಿರುವ ನನಗೆ ಅನೇಕ ಮಂದಿ ಮಾಂಸಾಹಾರಿ ಮಿತ್ರರಿದ್ದಾರೆ. ಮಿತ್ರತ್ವ ಇದ್ದೇ ಇರುತ್ತದೆ. ಅದು ಬೇರೆಯ ವಿಷಯ. ನಮ್ಮ ಮಧ್ಯೆ ಇರುವ ಮತ್ತು ತಮ್ಮ ಹಕ್ಕನ್ನು ಚಲಾಯಿಸಲರಿಯದ ಪ್ರಾಣಿ-ಪಕ್ಷಿಗಳೆಂಬ ಅಮಾಯಕ ಜೀವಿಗಳ ಹಕ್ಕಿನ ಬದುಕಿನ ಬಗ್ಗೆ ನನಗಿರುವ ವಿವೇಕಯುತ ಹಂಬಲದಿಂದಾಗಿ ಮನುಷ್ಯನ ಮಾಂಸಾಹಾರದ ಅನಿವಾರ್ಯತೆಯನ್ನು ಪ್ರಶ್ನಿಸುವುದಷ್ಟೇ ನನ್ನ ಈ ಕಿರುಬರಹದ ಉದ್ದೇಶ.'

ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment