ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಿನೆಮಾ
ನೀವು ಬದುಕಿ...ಇತರರನ್ನು ಬದುಕಲು ಬಿಡಿ...ಬಿಡ್ತೀರಲ್ವಾ? ಚಿತ್ರ ಪ್ರಾರಂಭವಾಗುವ ಮೊದಲೇ ನಿರ್ದೇಶಕರು ಹಾಕಿದ ಪ್ರಶ್ನೆ ವೀಕ್ಷಕನನ್ನು ಯೋಚನೆಗೀಡು ಮಾಡುತ್ತದೆ. ಚಿತ್ರ ಪ್ರಾರಂಭವಾಗುತ್ತದೆ...ಮೊದಲ ಶಾಟ್ ನಲ್ಲೇ ಹಂತಕ ತನ್ನ ಕೋವಿಯಿಂದ ಜಿಂಕೆಯೊಂದನ್ನು ಗುರಿಯಿಟ್ಟು ಕೊಲ್ಲತ್ತಾನೆ..ಹಂತಕನನ್ನು ಹಿಂಬಾಲಿಸಿದ ಮುಗ್ಧ ಗಂಗಾರಾಮ್ ಕೂಡಾ ಆತನ ಗುಂಡಿಗೆ ಬಲಿಯಾಗುತ್ತಾನೆ. ಇದು ಸಿನಿಮಾದ ಕಥೆಯಲ್ಲ. ಪ್ರಕೃತಿಯೇ ದೇವರು..ಅದರ ಸಂರಕ್ಷಣೆಯೇ ನಮ್ಮ ಧರ್ಮ..ಪ್ರಕೃತಿಯ ಮುಂದೆ ಯಾರೂ ಶ್ರೇಷ್ಠರಲ್ಲ ಎಂಬ ಸಿದ್ಧಾಂತವನ್ನಿಟ್ಟುಕೊಂಡು ನೂರಾರು ವರುಷಗಳಿಂದ ಪ್ರಕೃತಿಯ ಮಡಿಲಲ್ಲಿ ಜೀವನ ಸಾಗಿಸುತ್ತಿರುವ ರಾಜಸ್ಥಾನದ ಬಿಶ್ನೋಯಿ ಜನರ ನೈಜ ಜೀವನಗಾಥೆ. 2006ರಲ್ಲಿ ಪಬ್ಲಿಕ್ ಬ್ರಾಡ್ಕಾಸ್ಟಿಂಗ್ ಟ್ರಸ್ಟ್ಸ್ ಸರ್ವೀಸ್ ನೇತೃತ್ವದಲ್ಲಿ ಮಲ್ಗೋರ್ಜಾಟಾ ಸ್ಕೀಬಾ ಎಂಬುವವರು "ಇಕೋ ಧರ್ಮ(ಪರಿಸರ ಧರ್ಮ)" ಎಂಬ ಸಾಕ್ಷಚಿತ್ರವೊಂದನ್ನು ನಿರ್ದೇಶಿಸಿದರು. ಉತ್ತರ ರಾಜಸ್ಥಾನದ ಬಿಶ್ನೋಯಿ ಸಮುದಾಯ, ಅವರ ಜೀವನ ಶೈಲಿ ಹಾಗೂ ಪ್ರಕೃತಿಯೊಂದಿಗಿನ ಅವರ ಒಡನಾಟ ಇವೆಲ್ಲವೂ ಈ ಚಿತ್ರದ ಕಥಾವಸ್ತು. ಪ್ರಸಾರ ಭಾರತಿ ನಿರ್ಮಿಸಿದ ಈ ಸಾಕ್ಷಚಿತ್ರ ಐನ್ನೂರಕ್ಕೂ ಅಧಿಕ ವರುಷಗಳ ಇತಿಹಾಸವಿರುವ ಭಾರತದ ಪುರಾತನ ಪರಿಸರವಾದಿಗಳಾದ ಬಿಶ್ನೋಯಿ ಜನರ ಕಿರು ಚಿತ್ರಣವನ್ನು ನೀಡುವಲ್ಲಿ ಯಶಸ್ವಿಯಾಗಿದೆ.


ಅವರು ಕಾಡಿನ ಮಕ್ಕಳು. ಪ್ರಕೃತಿ ಸಂರಕ್ಷಣೆಯಲ್ಲೇ ಜೀವನದ ಸಾರ್ಥಕತೆಯನ್ನು ಕಾಣುವವರು. ನಾವು ಪ್ರಕೃತಿಯೊಂದಿಗೆ ಸ್ನೇಹದಿಂದಿದ್ದರೆ ಅದು ನಮ್ಮನ್ನು ಸಲಹುತ್ತದೆ. ಅದರ ನಿರ್ನಾಮವೆಂದರೆ ಮನುಕುಲದ ವಿನಾಶ ಎನ್ನುವ ಬಿಶ್ನೋಯಿಗಳ ಪ್ರಕೃತಿ ಪ್ರೇಮ ಚಿತ್ರದೆಲ್ಲೆಡೆ ಬಿಂಬಿತವಾಗಿದೆ. ಪ್ರಕೃತಿ ಹಾಗೂ ಬಿಶ್ನೋಯಿಗಳ ನಡುವಿನ ಭಾವನಾತ್ಮಕ ಬೆಸುಗೆಯನ್ನು ಚಿತ್ರಿಸುವಲ್ಲಿನ ನಿರ್ದೇಶಕರ ಪ್ರಯತ್ನ ಪ್ರಶಂಸನಾರ್ಹ. ರಾಜಸ್ಥಾನದ ಸಾಂಪ್ರದಾಯಿಕ ಜೀವನ ಶೈಲಿ, ಜೀವನ ಮೌಲ್ಯಗಳು ಇಡೀ ಚಿತ್ರದ ಆಕರ್ಷಣೆಯಾಗಿವೆ. ಬಿಶ್ನೋಯಿ ಜನರ ಇತಿಹಾಸದೆಡೆ ಬೆಳಕು ಚೆಲ್ಲುವ ಸಾಕ್ಷಚಿತ್ರ ಕೆಲವು ಕುತೂಹಲಕಾರಿ ಮಾಹಿತಿಯನ್ನೂ ಹೊರಗೆಡಹುತ್ತದೆ.

1421ರಲ್ಲಿ ಪಶ್ಚಿಮ ರಾಜಸ್ಥಾನದಲ್ಲಿ ಜನಿಸಿದ ಗುರು ಜಾನವೇಶ್ವರ ಬಿಶ್ನೋಯಿಗಳ ಪೂಜ್ಯನೀಯ ವ್ಯಕ್ತಿ. ಆತನ 25ನೇ ವಯಸ್ಸಿನಲ್ಲಿ ರಾಜಸ್ಥಾನದಲ್ಲಿ ಎದುರಾದ ಕ್ಷಾಮದಿಂದಾದ ಹಾನಿ ಆತನನ್ನು ತೀವ್ರವಾಗಿ ಕಂಗೆಡಿಸಿತ್ತು. ಹನಿ ನೀರಿಲ್ಲದೆ ಪರದಾಡಿ ಪ್ರಾಣಬಿಟ್ಟ ಅದೆಷ್ಟೋ ಜಾನುವಾರು ಹಾಗೂ ಮನುಷ್ಯರ ಸಾವು ಆತನ ಚಿತ್ತವನ್ನು ಕಲಕಿತ್ತು. ಪ್ರಕೃತಿ ನಾಶಗೊಂಡರೆ ಮನುಕುಲ ಉಳಿಯುವುದಿಲ್ಲವೆಂಬುವುದನ್ನು ಅರಿತ ಜಾನವೇಶ್ವರ ಅಂದಿನಿಂದಲೇ ತನ್ನ ಜೀವನವನ್ನು ಪ್ರಕೃತಿ ಸಂರಕ್ಷಣೆಗಾಗಿ ಮುಡುಪಿಟ್ಟರು. ಅಂದಿನಿಂದ ಮರಗಿಡಗಳು, ಪಶುಪಕ್ಷಿಗಳೇ ಅವರ ಜೀವನವಾಯ್ತು. ಅವರ ಮುಂದಿನ ಪೀಳಿಗೆ ಬಿಶ್ನೋಯಿ ಸಮುದಾಯವಾಗಿ ಇಂದಿಗೂ ಅವರ ಆದರ್ಶಗಳನ್ನು ಪರಿಪಾಲಿಸುತ್ತಾ ಸಮಾಜಕ್ಕೇ ಮಾದರಿಯಾಗಿದೆ.

ಪ್ರಕೃತಿ, ಪಶುಪಕ್ಷಿಗಳೊಂದಿಗಿನ ಬಿಶ್ನೋಯಿಗಳ ಆಪ್ತ ಒಡನಾಟವನ್ನು ಬಿಂಬಿಸುವ 28 ನಿಮಿಷಗಳ ಸಾಕ್ಷಚಿತ್ರವನ್ನು ನೋಡಿ ಮುಗಿಸಿದಾಗ ಹೊಸ ವಿಷಯವೊಂದನ್ನು ತಿಳಿದ ಸಂತೃಪ್ತಿ ವೀಕ್ಷಕನಿಗಾಗುತ್ತದೆ. ಗುರು ಜಾನವೇಶ್ವರ ಪ್ರತಿಪಾದಿಸಿದ 29 ಸಿದ್ಧಾಂತಗಳನ್ನು ಇಂದಿಗೂ ಪರಿಪಾಲಿಸಿ ಅಜ್ಣಾತವಾಗಿ ಜೀವಿಸುತ್ತಿದ್ದರೂ ಸಮಾಜಕ್ಕೆ ಅಪರಿಮಿತ ಕೊಡುಗೆಯನ್ನು ನೀಡುತ್ತಿರುವ ಬಿಶ್ನೋಯಿಗಳನ್ನು ಗುರುತಿಸುವಲ್ಲಿ ಈ ಸಾಕ್ಷಚಿತ್ರ ಅತ್ಯಂತ ಸಹಾಯಕಾರಿ. ಚಿತ್ರದುದ್ದಕ್ಕೂ ಪ್ರಕೃತಿ ಹಾಗೂ ಧರ್ಮಗಳ ನಡುವಿನ ಸಂಬಂಧವನ್ನರಿಯುವ ಪ್ರಯತ್ನದಲ್ಲಿ ವೀಕ್ಷಕ ತೊಡಗುತ್ತಾನೆ. ವನ್ಯ ಮೃಗದ ಚಿತ್ರವನ್ನೊಳಗೊಂಡಿರುವ ಬಿಶ್ನೋಯಿಗಳ ಪೂಜಾಕಲ್ಲು ಸಾಂಕೇತಿಕವಾಗಿ ಪ್ರಕೃತಿಯೇ ಅವರ ದೇವರೆಂಬ ಸತ್ಯವನ್ನು ಅರುಹುವಂತಿದೆ. ಚಿತ್ರದಲ್ಲಿ ರಾಜಸ್ಥಾನೀ ಸಂಸ್ಕೃತಿಯನ್ನು ಬಿಂಬಿಸುವ ನೈಜ ಸಂಗೀತ ಮನಸೆಳೆಯುವಂತಿದೆ. ಬಿಶ್ನೋಯಿ ಸಮುದಾಯದ ಪುಟ್ಟ ಮಕ್ಕಳಲ್ಲೂ ಪ್ರಕೃತಿಯ ಕುರಿತು ಇರುವ ಕಾಳಜಿ ಅಪರಿಮಿತ. ಪ್ರಕೃತಿಯನ್ನು ಕಾಯುವ ಇಂತಹ ಸಮುದಾಯದ ಮೇಲೆ ನಡೆದ ಅಧಿಕಾರಿಶಾಹಿಗಳ ದೌರ್ಜನ್ಯವನ್ನೂ ಚಿತ್ರ ಬಿಂಬಿಸುತ್ತದೆ. ಒಂದು ಮರವನ್ನು ಕಡಿದರೆ ಒಬ್ಬ ವ್ಯಕ್ತಿಯನ್ನು ಕೊಲೆಗೈದಂತೆ ಎಂಬ ಬಿಶ್ನೋಯಿಗಳ ನಂಬಿಕೆಗೆ ನಾವೆಲ್ಲರೂ ತಲೆಬಾಗಬೇಕು. ಗಂಗಾರಾಮ್ ನಮ್ಮೆಲ್ಲರ ಮಾದರಿ...ಪ್ರಕೃತಿಸಂರಕ್ಷಿಸುವಲ್ಲಿ ಅಂತಹ ಸಾವು ಎದುರಾದರೆ ನಾವೂ ಹಿಂಜರಿಯುವುದಿಲ್ಲ ಎಂಬ ಬಿಶ್ನೊಯಿಯೋರ್ವನ ಆವೇಶಭರಿತ ಮಾತುಗಳು ಎಂತಹವರ ಮನವನ್ನೂ ಕಲುಕುವಂತಿದೆ.

2006ರಲ್ಲಿ ವನ್ಯಮೃಗಗಳನ್ನು ಸಂರಕ್ಷಿಸುವಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಪರಮವೀರಚಕ್ರ ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿತು. ಪ್ರಕೃತಿಯನ್ನು ಕಾಯುವಲ್ಲಿ ಬಿಶ್ನೋಯಿಗಳ ಪರಿಶ್ರಮಕ್ಕೆ ಸಂದ ಮೊದಲ ಗೌರವ ಇದಾಯಿತು. ಮೃತ ಗಂಗಾರಾಮ್ ಇದನ್ನು ಪಡೆದ ಮೊದಲ ಹುತಾತ್ಮನಾದ... ಇಕೋ ಧರ್ಮ ಸಾಕ್ಷಚಿತ್ರ ಅಂತರಾಷ್ಟ್ರೀಯ ಸಾಕ್ಷಚಿತ್ರ ಉತ್ಸವಗಳಲ್ಲಿ ಪ್ರದರ್ಶಿಸಲ್ಪಟ್ಟಿತು. ಎಕೋ ಫಿಲ್ಮ ಫೆಸ್ಟ್ 2006ರಲ್ಲಿ ಅತ್ಯುತ್ತಮ ಸಾಕ್ಷಚಿತ್ರಪ್ರಶಸ್ತಿ, ಅಮೆರಿಕಾದ 29ನೇ ಅಂತರಾಷ್ಟ್ರೀಯ ವನ್ಯಮೃಗ ಸಾಕ್ಷಚಿತ್ರ ಉತ್ಸವದಲ್ಲಿ ಉತ್ತಮ ಸಾಕ್ಷಚಿತ್ರ ಪ್ರಶಸ್ತಿ, ಬೆಸ್ಟ್ ಫಿಲ್ಮ ಆನ್ ರಾಜಸ್ಥಾನ್...ಹೀಗೆ ಹಲವಾರು ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿತು. ದೂರದರ್ಶನ ವಾಹಿನಿಯಲ್ಲೂ ಚಿತ್ರ ಪ್ರದರ್ಶನ ಕಂಡಿತು. ಅಶಿಕ್ಷಿತ ಬಿಶ್ನೋಯಿಗಳಲ್ಲಿರುವ ಪರಿಸರ ಕಾಳಜಿಯನ್ನು ಕಂಡು ಸಮಾಜದ ಶಿಕ್ಷಿತ ವರ್ಗ ತಲೆತಗ್ಗಿಸುವಂತಾಯಿತು. ಆದರೆ ಕಮರ್ಶಿಯಲ್ ಹಾಗೂ ಇತರ ಪೊಲಿಟಿಕ್ಸ್ ಬೇಸ್ಡ್ ಸಾಕ್ಷಚಿತ್ರಗಳ ಹಾವಳಿಯಿಂದ ಇದು ತಲುಪಬೇಕಾದ ಜನರನ್ನು ತಲುಪಿಲ್ಲ. ಚಿತ್ರ ಹಳತಾಗಿರಬಹುದು..ಆದರೆ ಅದರ ವಿಷಯವಸ್ತು ಎಂದೆದೂ ಹೊಸತಾಗಿರುವಂತಹದ್ದು. ಸಾಮಾಜಿಕ ಕಳಕಳಿಯುಳ್ಳ ಇಂತಹ ಚಿತ್ರಗಳು ಇನ್ನಷ್ಟು ಮೂಡಿಬರಲಿ.

ಅಕ್ಷತಾ ಭಟ್. ಸಿ. ಎಚ್

2 comments:

Anonymous said...

parisara dharma ellakkintha migilu....antheye manava janma......aadare aatha maduttiruvudenu?.....jeevigala novalli tanna sukha arasuva manava daanavanallave?

Anonymous said...

bishnoi aadivaasigalinda kaliya bekada amshagala saakshya chitrada kiru parichaya chennagide....

Post a Comment