ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಭೂಮಿಯಮೇಲಿನ ಮರಳು, ಶಿಲೆ, ಭೂಮಿಯೊಳಗಿರುವ ಖನಿಜ, ತೈಲ ಈ ಸಂಪತ್ತುಗಳೆಲ್ಲ ಪ್ರಕೃತಿಯ ನಿಯಮದನುಸಾರ ಮತ್ತು ಪ್ರಕೃತಿಸಹಜವಾಗಿ - ಭೂಮಿಯ ಸುಸ್ಥಿತಿಯ ದೃಷ್ಟಿಯಿಂದ - ಯಥಾಸ್ಥಿತಿಯಲ್ಲೇ ಇರಬೇಕಾದಂತಹವು. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಈ ಸಂಪತ್ತುಗಳನ್ನು ಬಗಿದೆತ್ತಿ ಬಳಸುತ್ತ ಈಗಾಗಲೇ ನಾವು ಹಿಂತಿರುಗಿಹೋಗಲಾರದಷ್ಟು ಮುಂದುವರಿದುಬಿಟ್ಟಿರುವುದರಿಂದ ಈ ಸಂಪತ್ತುಗಳ ಬಳಕೆ ನಮಗಿಂದು ಅನಿವಾರ್ಯವಾಗಿದೆ. ಈ ಪರಿಸ್ಥಿತಿಯಲ್ಲಿ ನಾವಿಂದು, ಮುಂದಿನ ಪೀಳಿಗೆಗಳಿಗುಂಟಾಗುವ ಅವಶ್ಯಕತೆಗಳನ್ನು ಮನಗಂಡು, ಮತ್ತು, ನಮಗೆ ಆಶ್ರಯ ನೀಡಿ ನಮ್ಮನ್ನು ಪೊರೆಯುತ್ತಿರುವ ಈ ನಮ್ಮ ಭೂಮಿಯ ಸುಸ್ಥಿತಿಯನ್ನು - ನಮ್ಮ ಒಳ್ಳಿತಿಗಾಗಿಯೇ - ದೃಷ್ಟಿಯಲ್ಲಿಟ್ಟುಕೊಂಡು ಅನಿವಾರ್ಯತೆಯ ಮಿತಿಗೊಳಪಟ್ಟು ಗಣಿಗಾರಿಕೆ ನಡೆಸುವುದು ವಿಹಿತ. ಹೀಗೆ ಅವಶ್ಯವಾದಷ್ಟು ಮಾತ್ರ ಗಣಿಗಾರಿಕೆ ನಡೆಸಬೇಕಾದದ್ದು ಸರಕಾರವೇ ಹೊರತು ಯಾವ ಖಾಸಗಿ ಸಂಸ್ಥೆಯೂ ಅಲ್ಲ. ಸರಕಾರವು ಗಣಿಗಾರಿಕೆಯನ್ನು ಖಾಸಗಿಯವರಿಗೆ ಬಿಟ್ಟುಕೊಡುವುದೆಂದರೆ ಅದು ನಾಡಿನ ಜನತೆಗೆ ಬಗೆಯುವ ಅನ್ಯಾಯ.ಏಕೆಂದರೆ ಖನಿಜ ಸಂಪತ್ತು ನಾಡಿನ ಆಸ್ತಿಯೇ ಹೊರತು ಯಾವೊಬ್ಬ ವ್ಯಕ್ತಿಯ ಸ್ವಂತ ಆಸ್ತಿಯಲ್ಲ. ಸರಕಾರಕ್ಕೆ ಪುಡಿಗಾಸಿನ ರಾಯಧನ ಬಿಸಾಕಿ ಭಾರಿ ಬೆಲೆಬಾಳುವ ಖನಿಜ ಸಂಪತ್ತಿನಮೇಲೆ ವ್ಯಕ್ತಿಯೋರ್ವನು ಹಕ್ಕು ಹೊಂದುವುದು ಅನ್ಯಾಯವಲ್ಲದೆ ಮತ್ತೇನು?
ಮೇಲಾಗಿ, ಖಾಸಗಿ ಗಣಿಗಾರಿಕೆಯು ಪ್ರಜಾಪ್ರಭುತ್ವದ ಆದರ್ಶಕ್ಕೆ ವಿರುದ್ಧವಾಗಿ ಹಾಗೂ ಮಾನವಧರ್ಮಕ್ಕೆ ವ್ಯತಿರಿಕ್ತವಾಗಿ ಅಸಮಾನತೆಯನ್ನು ಪೋಷಿಸುತ್ತದೆ. ಕೆಲವೇ ಜನರು ಅತಿ ಶ್ರೀಮಂತರಾಗಿ, ಅವರು ಇತರರ ಬಾಳನ್ನು ದುರ್ಭರಗೊಳಿಸುವ ಮತ್ತು ಇತರರಮೇಲೆ ಸವಾರಿಮಾಡುವ ಸನ್ನಿವೇಶ ದಟ್ಟವಾಗುತ್ತದೆ. ಕರ್ನಾಟಕದಲ್ಲಿಂದು ರಾಜ್ಯಾಡಳಿತದಂತಹ ಪ್ರಮುಖ ವಿಷಯದಲ್ಲಿ ಆಗುತ್ತಿರುವುದು ಕೋಟ್ಯಂತರ ಪ್ರಜೆಗಳಮೇಲೆ ಬೆರಳೆಣಿಕೆಯ 'ದಣಿ'ಗಳ ಸವಾರಿ ತಾನೆ?

ಗಣಿಗಾರಿಕೆಯನ್ನು ಯಾವ ಕಾರಣಕ್ಕೂ ಖಾಸಗಿಯವರಿಗೆ ಧಾರೆಯೆರೆಯಕೂಡದು. ಚುನಾಯಿತ ಸರಕಾರವೇ ಗಣಿಗಾರಿಕೆ ನಡೆಸಬೇಕು ಮತ್ತು ಸರಕಾರವು ಹಣದ ಆಸೆಯಿಂದ ಬೇಕಾಬಿಟ್ಟಿಯಾಗಿ ಗಣಿಗಾರಿಕೆ ನಡೆಸದೆ ಭವಿಷ್ಯದ ಪೀಳಿಗೆಗಳನ್ನು ಹಾಗೂ ಭೂಮಿಯ ಸುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಒಂದು ಮಿತಿಯೊಳಗೆ ಗಣಿಗಾರಿಕೆ ನಡೆಸಬೇಕು. ನಾಡಿನ ಜನತೆಗಾಗಿ ಬಳಕೆಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಮಾತ್ರ ಗಣಿಗಾರಿಕೆ ನಡೆಯತಕ್ಕದ್ದೇ ಹೊರತು ರಫ್ತಿಗಾಗಿ ಗಣಿಗಾರಿಕೆ ಎಂದೂ ಸಲ್ಲ. (ಬಾರ್ಟರ್ ಪದ್ಧತಿಯ ಅನಿವಾರ್ಯತೆಗಾಗಿ ಮಾತ್ರ ಖನಿಜದ ರಫ್ತು ಸೀಮಿತಗೊಳ್ಳತಕ್ಕದ್ದು.)

ಇದೆಲ್ಲವನ್ನೂ ಕಾರ್ಯರೂಪಕ್ಕೆ ತರುವುದು ಸರಕಾರಗಳಿಗೆ ಸಾಧ್ಯವಾಗದ ಕೆಲಸವೇನಲ್ಲ. ಕೇವಲ ಒಂದು ಕಾನೂನಿನಿಂದ ಗಣಿಗಾರಿಕೆಯನ್ನು ರಾಷ್ಟ್ರೀಕರಣ ಮಾಡಲು ಸಾಧ್ಯ. ಗಣಿಗಾರಿಕೆಯ ಪ್ರಮಾಣದ ನಿಗದಿಗಾಗಿ ತಜ್ಞರ ಸಮಿತಿಯನ್ನು ಮತ್ತು ನಿಗದಿತ ಪ್ರಮಾಣದ ಪರಿಪಾಲನೆಯ ಕಣ್ಗಾವಲಿಗಾಗಿ ವಿವಿಧ ಕ್ಷೇತ್ರಗಳ ಪ್ರಾಜ್ಞ ಸಾಮಾಜಿಕರ ಸಮಿತಿಯನ್ನು ರಚಿಸಿ ಈ ಸಮಿತಿಗಳಿಗೆ ಸೂಕ್ತ ಅಧಿಕಾರ ಮತ್ತು ಸ್ವಾಯತ್ತತೆಗಳನ್ನು ನೀಡುವ ಮೂಲಕ ಸರಕಾರವು ತಾನು ಕೈಗೊಳ್ಳುವ ಗಣಿಗಾರಿಕೆಯನ್ನು ನಿಯಂತ್ರಣಕ್ಕೊಳಪಡಿಸಲು ಸಾಧ್ಯ.
ನನ್ನ ತಲೆಗೆ ಹೊಳೆದಿರುವ ಈ ಐಡಿಯಾಗಳು ಸರಕಾರಗಳ ತಲೆಗಳಿಗೂ ಹೊಳೆದೇ ಇರುತ್ತವೆ. ಆದರೆ ಯಾವ ಸರಕಾರಕ್ಕೂ ಈ ಶುಭ್ರ ನಡೆ ಬೇಡವಾಗಿದೆ. ಏಕೆಂದರೆ, ಸಿಕ್ಕಿದ್ದನ್ನೆಲ್ಲ ದೋಚಿ, ಹೊಟ್ಟೆಬಿರಿಯುವಷ್ಟು ತಿಂದು, ಮೇಲೆ ಕೂಡಿಡುತ್ತ ಸಾಗುವ ರಾಕ್ಷಸಗುಣ ನಮ್ಮ ಸರಕಾರಗಳ ಪ್ರಭೃತಿಗಳದ್ದಾಗಿದೆ.

ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment